ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಅಶ್ವಮೇಧ!

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಥೆ
“ಜಗತ್ತಿನಲ್ಲಿ ಹಿಂಸೆ, ಕ್ರೌರ್ಯ, ಭೀತಿಗಳು ತಾಂಡವವಾಡುತ್ತಿವೆ. ಮನುಕುಲದ ಬದುಕು ಆತಂಕದಲ್ಲಿದೆ. ಇವಕ್ಕಿಂತ ಭಯಾನಕವಾದವು; ಮನುಷ್ಯನ ಇಂದ್ರಿಯಗಳು. ಅವನ್ನು ನಿಗ್ರಹಿಸದಿದ್ದರೆ ಉಳಿಗಾಲವಿಲ್ಲ. ಮನುಷ್ಯನ ಮನೋರಂಗದಲ್ಲಿ ಇವೆಲ್ಲಾ ಮೊದಲು ನಡೆದು ನಂತರ ಪರಿಣಾಮ ಲೋಕದ ಮೇಲಾಗುತ್ತದೆ.

ಮೆಚ್ಚಿನ ಭಕ್ತಗಣವೇ ಮನಸ್ಸಿಟ್ಟು ಕೇಳಿ: ಯಾವ ಮನುಷ್ಯನಲ್ಲಿ ಕಾಮ, ಕ್ರೋಧ, ಮೋಹ, ಮದ-ಮಾತ್ಸರ‌್ಯಗಳೆಂಬ ಮಹಾಮದಗಳು ವಿಜೃಂಭಿಸುವವೋ ಅಲ್ಲಿ ಜೀವಾತ್ಮಗಳು ಹಿಂಸೆಯಿಂದ ಕನಲುತ್ತವೆ. ಜಗತ್ತು ಅಶಾಂತಿಯ ಬೀಡಾಗುತ್ತದೆ. ಈ ಮನಸ್ಸೆಂಬ ಮರುಳಾಶ್ವವನ್ನು ನಿಯಂತ್ರಿಸಿ. ಮಹಾಮದಗಳ ಹುಚ್ಚು ಕುದುರೆಯನ್ನು ಕಟ್ಟಿಹಾಕಿರಿ.

ಒಟ್ಟಿನಲ್ಲಿ ಅಶ್ವಮೇಧಯಾಗ ಆಗ್ಬೇಕು ಅಂತಾ ನಮಗೆ ಭಗವತ್ ಪ್ರೇರಣೆ ಆಗಿದೆ...” -ಹೀಗೆ, ಸ್ವಾಮಿ ಸತ್ಯಾನಂದರ ಪ್ರವಚನವು ಜಗತ್ತಿನ ಸಕಲ ಜೀವಾತ್ಮಗಳ ಅಶಾಂತಿಯ ಮೂಲವನ್ನು ಹುಡುಕಿ ತನ್ನ ಅಪಾರ ಭಕ್ತ ಸಮೂಹಕ್ಕೆ ಪರಿಹಾರಾರ್ಥಗಳನ್ನು ಸೂಚಿಸುತ್ತಿತ್ತು. ಭಕ್ತಗಣದ ನಡುವೆ ಒಂದು ಜೀವಾತ್ಮವು ಸದರಿ ಸಂದೇಶದ ಸಾರವನ್ನು ತನ್ನ ಅಂತರಾತ್ಮಕ್ಕೆ ಮೈಯೆಲ್ಲಾ ಕಿವಿಯಾಗಿ ಬಸಿದುಕೊಳ್ಳುತ್ತಿತ್ತು.

***
ಬೆಳಿಗ್ಗೆ ಕೇಳಿದ ಪ್ರವಚನದ ಪರಿಣಾಮ ಅವಳ ಮೇಲೆ ಜೋರಾಗಿಯೇ ಆಗಿತ್ತು. ಇಡೀ ದಿನ ಮೈಮನಸ್ಸು ಹಗುರಾದಂತೆ ಉಲ್ಲಸಿತಳಾಗಿ ಗೃಹಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಳು. ಹಳೆಯ ಸುಂದರ ಕ್ಷಣಗಳೆಲ್ಲ ನೆನಪಾಗಿ ಮನಸ್ಸು ಮತ್ತೂ ಅರಳುತ್ತಿತ್ತು-

ಸಂಕ್ರಾಂತಿಯ ಸುಗ್ಗಿಕಾಲ. ಹೊಲವೆಲ್ಲಾ ಅವರೆಕಾಯಿಯ ಸೊಗಡಿಗೆ ಘಂ ಅನ್ನುತ್ತಿತ್ತು. ಆ ಗಮಲು ಅವಳ ಮೂಗು-ಮೈಗೂ ಮೆತ್ತಿಕೊಂಡು ವಿಚಿತ್ರ ಉನ್ಮಾದ ಉಂಟುಮಾಡಿತ್ತು.

ಅಜ್ಜಿಯ ಊರಿಗೆ ಬಂದಾಗಲೆಲ್ಲ ಹೊಲ-ಗದ್ದೆ, ಕಾಲುವೆ ನೀರು ಅಂತೆಲ್ಲಾ ಅಡ್ಡಾಡುವುದು ಇವಳಿಗೆ ಬಲು ಇಷ್ಟ! ಹಾಗೆ ಅಲ್ಲೆಲ್ಲಾ ಕಾಲಾಡುವಾಗ ರೊಯ್ಯನೆ ಬೀಸುವ ಗಾಳಿ, ಪಚ್ಚೆ-ಪೈರು, ಹೊಲದ ರಾಗಿ, ಅವರೆಕಾಯಿ, ಮುಂತಾದ ಬೆಳೆಗಳ ಸುವಾಸನೆ-ತಂಪು ಮನಸ್ಸನ್ನು ತುಂಬುತ್ತಿತ್ತು. ತಂಗಾಳಿಯು ಎಂಥದೋ ಉನ್ಮಾದರಾಗವ ಬೀಸಿ ತಂದು ಅವಳೊಳಗೆ ಪುಳಕದ ನದಿ ಹರಿಸುತ್ತಿತ್ತು. ಆ ನಾದವ ಎಲ್ಲೋ ಕೇಳಿದ, ಹಾಡಿದ, ಅನುಭವಿಸಿದ ಹಾಗೆ ಅನ್ನಿಸಿ ಆನಂದ-ತಳಮಳಗಳೆರಡೂ ಒಟ್ಟಿಗೇ ಉಂಟಾಗುತ್ತಿದ್ದವು.

`ನನ್ನೊಳಗೆ ಮಿಡಿಯುವ ನಾದ ಯಾವುದಿದು? ಸೊಲ್ಲು ಸೊಲ್ಲಿಗೂ ಆವರಿಸಿ ಅವುಚಿಬಿಡುವ ಮಾಯಕಾರ ರಾಗವು ಇದ್ಯಾವುದು?~- ಪದೇ ಪದೇ ಚಿಂತಿಸಿ ನಿಡುಸುಯ್ದುರೂ ಸುಳಿವು ಪತ್ತೆಯಾಗಲೊಲ್ಲದು.

ಇವಳಿಗಾಗ ಹದಿನೇಳರ ಹರೆಯ! ಹೆಸರು ಗೀತಾಲಕ್ಷ್ಮಿ.
...ಕೃಷ್ಣನ ಕೊಳಲ ಗಾನವು ಧುತ್ತನೆ ಬಂದು ಬಿರುಸಾಗಿ ಹರಿದು.... ತುಂಡಾಗಿ, ಮತ್ತೆ ಮೊದಲಿಂದ ಶುರುವಾಗಿ ಬಿರುಸಾಗಿ.... ತುಂಡಾಗುವ ಮೊದಲು ಇವಳು ಹಲೋ... ಎಂದಳು. ಮೊಬೈಲು ರಿಂಗಾಗಿತ್ತು! ಆ ಬದಿಯಿಂದ-

`ಹಲೋ... ಗೀತು, ಹಾಫ್‌ಡೇ ರಜೆ ಹಾಕಿ ಬರ‌್ತೇನೆ, ರೆಡಿಯಾಗಿರು. ಸಂಜೆ ಝೂಗೆ ಹೋಗೋಣ. ಅಲ್ಲಿ ವಿಶೇಷವಾದ ಒಂದು ಕುದುರೆ ಬಂದಿದೆಯಂತೆ. you know, that is very rare an unimaginable  ಅಂತೆ! ರೆಡಿಯಾಗಿರು~. ಕರೆ ಕಟ್ ಆಯಿತು.
ಗಂಡನ ದೂರಧ್ವನಿಗೆ ತನ್ನ ಗತದ ನೆನಪುಗಳ ಕೊಂಡಿಯು ತುಂಡಾಗಿ ರಸಭಂಗವಾದಂತೆ ಮಿಡುಕಿದಳು ಗೀತಾಲಕ್ಷ್ಮಿ.

`ಯಾಕೆ ಬಂದಾನೋ ರಾಕ್ಷಸ....~ ಎಂಬ ಭಾವ ಸುಳಿದುಹೋಯಿತು. ಮದುವೆಯಾದ ದಿನದಿಂದ ಆತ ಅಕ್ಷರಶಃ ರಾಕ್ಷಸನಂತೆ ಆವರಿಸಿ ಕುದುರೆಯಂತೆ ಕೆನೆದು ವಿಜಯಪತಾಕೆ ಹಾರಿಸುತ್ತಿದ್ದ. ಮತ್ತೆ ಮತ್ತೆ ತೀರದ ಅವನ ದಾಹಕ್ಕೆ ಈಕೆ ತತ್ತರಿಸಿಹೋಗಿದ್ದಳು.

ಆದ್ದರಿಂದಲೇ ಮನೆಯ ಪಕ್ಕದ ಕ್ರಾಸಿನ ಸ್ವಾಮಿ ಸತ್ಯಾನಂದ ಆಶ್ರಮದ ಬೆಳಗಿನ ಪ್ರವಚನದ ಖಾಯಂ ಶ್ರೋತೃವಾಗಿ ಶಾಂತಿಯನ್ನು, ಸುಖವನ್ನು ಅರಸುತ್ತಿದ್ದಳು.
***

ಅಂದಿನ ದಿನಪತ್ರಿಕೆಗಳಲ್ಲಿ ವಿಶೇಷ ಸುದ್ದಿಯೊಂದು ಬಾಕ್ಸ್ ಐಟಮ್ಮುಗಳಲ್ಲಿ ರಾರಾಜಿಸುತ್ತಿತ್ತು:


`ವಿಶ್ವದ ಅತಿ ಪ್ರಾಚೀನ ಹಾಗೂ ಬಹು ಅಪರೂಪದ ಕುದುರೆಯೊಂದನ್ನು ಹೊಂದಿದ ಕೀರ್ತಿಗೆ ಇದೀಗ ಮೈಸೂರು ಮೃಗಾಲಯ ಪಾತ್ರವಾಗಿದೆ. ಇರಾಕ್, ಇರಾನ್, ಸಿರಿಯಾ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ, ಈಗ ಅಳಿವಿನ ಅಂಚಿನಲ್ಲಿರುವ ವಿಶ್ವದ ಅತ್ಯುತ್ತಮ ಗುಣಮಟ್ಟದ, ಬಲಿಷ್ಠವಾದ, ವಿಶಿಷ್ಟ ತಳಿಯ ಕುದುರೆ ಇದಾಗಿದೆ.

ಹಲವು ವರ್ಷಗಳ ರಾಜತಾಂತ್ರಿಕ ಪ್ರಯತ್ನದ ಫಲವಾಗಿ ಅರಬ್‌ನಿಂದ ಮೈಸೂರು ಮೃಗಾಲಯವು ಇದನ್ನು ಪಡೆದುಕೊಂಡಿದೆ. ಅಪರೂಪದ ತಳಿ ಸಂರಕ್ಷಣೆ ಹಾಗೂ ಸಂತಾನೋತ್ಪತ್ತಿ ಉದ್ದೇಶವನ್ನು ಹೊಂದಲಾಗಿದೆ~.


ಆದರೆ ಕುದುರೆಯ ವಿಶೇಷತೆ ಬಗ್ಗೆ ಪತ್ರಿಕಾ ವರದಿಗಿಂತ ಹೆಚ್ಚಿನ ಮಾಹಿತಿಗಳು ಜನಮಾನಸದಲ್ಲಿ ವೇಗವಾಗಿ ಹರಿದಾಡುತ್ತಾ ಜನರಲ್ಲಿ ಕೌತುಕವನ್ನು ಹೆಚ್ಚಿಸಿದ್ದವು.
ಈ ಅರಬ್ಬೀ ಕುದುರೆಯು ಹಿಂದೆ ಮೊಗಲರ ಕಾಲದಲ್ಲಿ ಮನ್ಸಬ್‌ದಾರರು ಬಳಸುತ್ತಿದ್ದ ಯುದ್ಧದ ಕುದುರೆಗಳ ಜಾತಿಯದ್ದಾಗಿದ್ದು ನಾಗಾಲೋಟದಿಂದ ಓಡಬಲ್ಲುದಾಗಿತ್ತು.
 
ಬಲಿಷ್ಠ ನೀಳ ಕಾಲುಗಳು, ಸಮೃದ್ಧ ಕೇಶರಾಶಿ, ಸದೃಢದೇಹ, ಚೂಪಾದ ನಾಲಗೆ, ಮೋಹಕವಾದ ಬಣ್ಣ-ರೂಪುಗಳೊಂದಿಗೆ ಕನ್ನಡವೂ ಸೇರಿದಂತೆ ವಿಶ್ವದ ಹಲವು ಭಾಷೆಗಳನ್ನು ಆಲಿಸಿ ಅರ್ಥಮಾಡಿಕೊಳ್ಳುತ್ತದಂತೆ! ಮನುಷ್ಯರಂತೆ ಆಕಳಿಸುತ್ತದೆ...

ಕೂಗುತ್ತದಂತೆ! ಮನುಷ್ಯ ಸ್ನೇಹಿಯಂತೆ ಕಂಡರೂ ಒಮ್ಮಮ್ಮೆ ಹಸುವಿನಂತೆ, ಗೂಳಿಯಂತೆ, ಸಿಂಹದಂತೆ, ಸುಂದರ ಪುರುಷನಂತೆ ರೂಪ ಧರಿಸುವ ಸಾಮರ್ಥ್ಯವಿರುವುದರಿಂದ ಬಹಳ ಅಪಾಯಕಾರಿ ಪ್ರಾಣಿ!- ಚಿತ್ರ ವಿಚಿತ್ರ ಸುದ್ದಿಗಳು ಹರಡಿದ್ದವು.
 
ಅಲ್ಲದೆ ಅದರ ವಿವಿಧ ಅಂಗಗಳು ಪುರುಷತ್ವವರ್ಧಕ, ಕಾಮೋತ್ತೇಜಕವಾಗಿಯೂ ಉಪಯುಕ್ತ ಎಂಬ ಮಾಹಿತಿಯು ಜನರಲ್ಲಿ ಸಂಚಲನೆ ಉಂಟುಮಾಡಿತ್ತು! ಒಟ್ಟಾರೆ ಇಡೀ ಕುದುರೆಯು ಅಸೀಮ ಶಕ್ತಿ-ಯುಕ್ತಿ, ವೀರ್ಯವಂತಿಕೆಯ ಪ್ರತಿರೂಪವಾಗಿ ನಗರದ ಜನತೆಯ ವಿಸ್ಮಯಕ್ಕೆ ಕಾರಣವಾಗಿತ್ತು. ಸದರಿ ಸಂಗತಿಯು ಇಡೀ ರಾಜ್ಯಕ್ಕೆ ಹಬ್ಬಿ ಜನಸಾಗರವು ತಂಡೋಪತಂಡವಾಗಿ ಮೈಸೂರಿನ ಕಡೆಗೆ ಧಾವಿಸತೊಡಗಿತ್ತೆಂದರೆ...
***
“ಅಷ್ಟಮದಗಳಲ್ಲಿ ರೂಪಮದ, ಯೌವನನ ಮದ, ಹಣಮದಗಳು ಒಂದುಗೂಡಿದರೆ ಅದು ಯಾವ ಕಟ್ಟು-ಕಟ್ಟಲೆಗೂ ದಕ್ಕಲಾರದು. ಸಿಕ್ಕವರನ್ನೆಲ್ಲಾ ತುಳಿಯುತ್ತಾ, ಸಿಕ್ಕಿದ್ದನ್ನೆಲ್ಲಾ ಧೂಳೀಪಟ ಮಾಡುತ್ತಾ ಗೂಳಿಯಂತೆ ಮುನ್ನುಗ್ಗುತ್ತದೆ. ಸದರಿ ಮದಮಾನಸವು ಅಂತರಂಗದ ಅರಿವಿಗೆ ಮಾತ್ರ ಸೋಲಬಲ್ಲದೇ ಪರಂತು ಬೇರೆ ಇಲ್ಲ.

ಭಗವತ್ ಚಿಂತನೆಯಲ್ಲಿ ಧ್ಯಾನಮಗ್ನರಾಗದ ಹೊರತು ಮುಕ್ತಿಯಿಲ್ಲ. ಪ್ರೇಮ-ಕಾಮಗಳು ದಾಂಪತ್ಯದ ಅನುಸರಣೆಯಲ್ಲಿ ಸಹಜವೇ ಆದರೂ ಸಂತಾನೋತ್ಪತ್ತಿ, ವಂಶಾಭಿವೃದ್ಧಿಯ ಮೂಲ ಉದ್ದೇಶಕ್ಕೆ ಅದು ಸೀಮಿತವಾಗಬೇಕು. ಕೌಟುಂಬಿಕ ನೈತಿಕತೆಯ ಚೌಕಟ್ಟುಗಳಾಚೆಗೆ....”-

ಸ್ವಾಮಿ ಸತ್ಯಾನಂದರ ಸಂಜೆ ಪ್ರವಚನದ ನಡುವೆಯೂ ಅವೆರಡು ಕಂಗಳ ಅರಸುವಿಕೆಯು ಅವಳ ಗೈರುಹಾಜರಿಯ ಗಮನಿಸಿ ಸೋತು ಸುಮ್ಮನಾಯಿತು. ಗೀತಾಲಕ್ಷ್ಮಿಯು ಗಂಡನೊಡನೆ ಮೃಗಾಲಯದ ಭೇಟಿಯಲ್ಲಿದ್ದಳು.


ದಿನಕಳೆದಂತೆ ಕುದುರೆಯ ಖ್ಯಾತಿ ಹೆಚ್ಚಾಗತೊಡಗಿತ್ತು. ಮೃಗಾಲಯದ ಇತರ ಪ್ರಾಣಿಗಳು ಮಂಕಾಗತೊಡಗಿದ್ದವು. ಪ್ರತಿದಿನದ ರಾತ್ರಿಗಳಲ್ಲಿ ಕುದುರೆಯ ಕೆನೆತ, ಗೂಳಿಯ ಗುಟುರುಗಳು ಇತರೆ ಪ್ರಾಣಿಗಳ ವಿಭಿನ್ನ ಸದ್ದುಗಳೊಂದಿಗೆ ಮಿಳಿತವಾಗಿ ಗದ್ದಲದ ಸಂತೆಯಾಗಲಾರಂಭಿಸಿತ್ತು. ಪ್ರತಿ ಬೆಳಿಗ್ಗೆ ಯಾವುದಾದರೊಂದು ಪ್ರಾಣಿಯಲ್ಲಿ ಮುಖ ಮೂತಿ, ಮೈಗಳು ತರಚಿದಂತೆ, ಪರಚಿದಂತೆ ಗುರುತುಗಳು ಮೂಡತೊಡಗಿದವು.

ಮೃಗಾಲಯದ ಸಿಬ್ಬಂದಿ ಕಟ್ಟೆಚ್ಚರ ವಹಿಸಿ ಪ್ರತಿ ಪ್ರಾಣಿ-ಪಕ್ಷಿಗಳನ್ನೂ ನಿಗದಿಯಾದ ಪ್ರತ್ಯೇಕ ಕೋಣೆಗಳಲ್ಲಿರಿಸಿ ಬಿಗಿಯಾಗಿ ಬೀಗ ಜಡಿದಿದ್ದರೂ ದಾಳಿಯ ಗುರುತುಗಳು ಮೂಡುವುದು ನಿಂತಿರಲಿಲ್ಲ. ಝೂನ ಅಧಿಕಾರಿಗಳಿಗಿದು ಬಿಡಿಸದ ಕಗ್ಗಂಟಾಗಿತ್ತು. ಸಿಂಹದಂಥ ಸಿಂಹವೂ ಗಾಯಗೊಂಡಿತ್ತೆಂದರೆ...
***

ವರುಷ ಮೂರು ಕಳೆದರೂ ಮಡಿಲು ತುಂಬಿರಲಿಲ್ಲ. ಗರ್ಭ ಕಟ್ಟಲು ಬಿಡುವು ನೀಡದ `ಮೈದಾಳಿ~ಯಿಂದಾಗಿ ಎರಡು ಬಾರಿ ಗರ್ಭಪಾತವಾಗಿತ್ತು. `ಇದು ಮತ್ತೆ ರಿಪೀಟ್ ಆದ್ರೆ ಗರ್ಭಧಾರಣೆಯ ಅವಕಾಶ ತೀರಾ ಕಡಿಮೆ~ ಎನ್ನುವ ಡಾಕ್ಟರರ ಮಾತು ಇವಳನ್ನು ತಿವಿಯುತ್ತಿತ್ತು.


ಅತುಲ ಪ್ರೀತಿ, ಸುಕೋಮಲ ಭಾವಗಳ ನಿರೀಕ್ಷೆಯಲ್ಲಿ ಹೊಸ ಬಾಳಿಗೆ ಅಡಿಯಿಟ್ಟವಳಿಗೆ ಸುಖೇಶನ ಸುಖಲೋಲುಪತೆ ರೇಜಿಗೆ ಹುಟ್ಟಿಸಿತ್ತು. ಅವನ ಪ್ರತಿಸ್ಪರ್ಶವೂ ಅವಳಿಗೆ ಸುಖದ ನರಳಿಕೆಗಳ ಬದಲಾಗಿ ಸರೀಸೃಪದ ಹರಿದಾಟದಂತೆ ಭಾಸವಾಗತೊಡಗಿತ್ತು. ಮೈ ಮೈಲಿಗೆ ಆಗುತ್ತಿದೆ; ಮನಸ್ಸು ಮಲಿನವಾಗುತ್ತಿದೆ ಎನ್ನಿಸಿ ಶುಭ್ರ ಗಾಳಿಗೆ ಮೈ-ಮನಸ್ಸು ಒಡ್ಡಿ ನಿಲ್ಲಬೇಕೆಂಬ ಧಾವಂತ ಹೆಚ್ಚಾಗುತ್ತಿತ್ತು.

ಅಂತಹ ಹೊತ್ತಲ್ಲಿ ಅವಳಿಗೆ ಕಂಡಿದ್ದು ಸ್ವಾಮಿ ಸತ್ಯಾನಂದರ ಆಶ್ರಮ; ಮತ್ತಲ್ಲಿ ಸಿಕ್ಕ, ಅಸೀಮ ಗೌರವ-ಕಾಳಜಿಗಳನ್ನು ತೋರುವ ಶಾಂತ ಹೃದಯದ ಗೆಳೆಯ. ಅವಳಿಗೊಂದು ಓಯಸಿಸ್ ಗೋಚರಿಸಿತ್ತು.


ಇದ್ದಕ್ಕಿದ್ದಂತೆ ಅರಬ್ಬೀ ಕುದುರೆಯು ಮೃಗಾಲಯದಿಂದ ತಪ್ಪಿಸಿಕೊಂಡಿತ್ತು!
ಸುದ್ದಿಯು ನಗರದಾದ್ಯಂತ ಕಾಳ್ಗಿಚ್ಚಿನಂತೆ ಹರಡಿತು. ನಿಜವೋ ಸುಳ್ಳೋ ಖಚಿತಪಡಿಸಿಕೊಳ್ಳಲು ಜನತೆ-ಸುದ್ದಿಮಾಧ್ಯಮಗಳು ಮೃಗಾಲಯಕ್ಕೆ ಮುಗಿಬಿದ್ದರು.
ಸುದ್ದಿ ನಿಜವಾಗಿತ್ತು.


ಮೃಗಾಲಯದ ಅಧಿಕಾರಿಗಳು ಪೊಲೀಸ್ ಕಂಪ್ಲೇಂಟ್ ಕೊಟ್ಟರು. `ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ. ಅರಣ್ಯ ಇಲಾಖೆಗೆ ದೂರು ಕೊಡಿ~ ಎಂದು ಪೊಲೀಸರು ಪ್ರಕರಣವನ್ನು ಕಾಡಿಗೆ ಸಾಗಹಾಕಿದರು. ಅರಣ್ಯಾಧಿಕಾರಿಗಳು ಅಳೆದು ತೂಗಿ- `ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಇದು ನಾಡಿನ ಪ್ರಾಣಿ, ಮೇಲಾಗಿ ಸಾಕುಪ್ರಾಣಿ. ನಮ್ಮದೇನಿದ್ರೂ ವೈಲ್ಡ್ ಅನಿಮಲ್ಸು ಮಾತ್ರ~ ಎಂದು ದೂರನ್ನೇ ದೂರ ತಳ್ಳಿದರು.

ಕುದುರೆ ಕಾಣೆಯಾದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ನಾಡಿನ ಜನತೆಯಲ್ಲಿ ಹೊಸ ಸಂಚಲನವೇ ಸೃಷ್ಟಿಯಾಯಿತು. ಕಿರುತೆರೆ ವಾಹಿನಿಗಳು ಇದೇ ಸುದ್ದಿಯನ್ನು ಮತ್ತೆ ಮತ್ತೆ ಬಿತ್ತರಿಸಿ ಜನರಲ್ಲಿ ಕೆಟ್ಟ ಕುತೂಹಲ, ಅನಗತ್ಯ ಭಯ ಬಿತ್ತಿದವು.


`ಯಃಕಶ್ಚಿತ್ ಒಂದು ಪ್ರಾಣಿ ಕಾಣೆಯಾಗಿದ್ದಕ್ಕೆ ಇಷ್ಟೊಂದು ಆತಂಕಬೇಕಿಲ್ಲ, ಇದೊಂದು ಸಾಮಾನ್ಯ ಘಟನೆ. ಶಾಂತಿಯಿಂದಿರಿ~ ಎಂದು ಸರ್ಕಾರ ಮನವಿ ಮಾಡಿತು. ಆದರೆ ಜನಮರುಳೋ ಜಾತ್ರೆ ಮರುಳೋ.... ಬಲ್ಲವರಾರು? ಸಮೂಹಸನ್ನಿ ಎಂಬುದು ಯಾವತ್ತಿಗೂ ಒಂದು ಹುಚ್ಚುಕುದುರೆಯೇ ಅಲ್ಲವೆ?

ಕುದುರೆಗೆ ಆರೋಪಿಸಲಾಗಿದ್ದ ಗುಣವಿಶೇಷಗಳೇ ಜನರ ಭೀತಿಗೆ ಮೂಲವಾಗಿದ್ದು ಮಾತ್ರ ಸೋಜಿಗವಾಗಿತ್ತು! ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಧಾರ್ಮಿಕ, ಆರ್ಥಿಕ, ರಾಜಕೀಯ ಅರಾಜಕತೆಗಳು ಕೂಡಿ ಸನ್ನಿವೇಶವನ್ನು ತಂತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದ್ದವು.
***

ಅತಿಯು ಮಿತಿಯು ಮೀರಿ ತುಟಾಗ್ರವನ್ನು ತಲುಪಿತ್ತು. ಎಂಥೆಂಥದೋ ತಾಯಿತ, ಚೂರ್ಣ, ಲೇಹ್ಯಗಳನ್ನು ಬಳಸಲು ಶುರುವಿಟ್ಟುಕೊಂಡ ಸುಖೇಶ ನೀಲಿಚಿತ್ರಗಳ ಎಲ್ಲ ವರಸೆಗಳನ್ನೂ ಹೆಂಡತಿಯ ಮೇಲೆ ಪ್ರಯೋಗಿಸಲಾರಂಭಿಸಿದ್ದ. ಗಂಡನ ಗೂಳಿಯಂತೆ ಮುನ್ನುಗ್ಗುವ ಪರಿ, ಕುದುರೆಯಂಥ ವರ್ತನೆ ಇವಳಲ್ಲಿ ಅಚ್ಚರಿ ಹುಟ್ಟಿಸಿದ್ದವು. ಆದರೆ ಅಮೃತವೂ ವಿಷವಾದ ಪರಿಯ ಮುಂದೆ ಅದೇನೂ ದೊಡ್ಡದಲ್ಲ ಎಂಬ ವಿಷಾದವು ಅವಳನ್ನು ಆವರಿಸಿತ್ತು.

ಪ್ರಶಾಂತ ಮಠದಂಗಳ, ಹೊಸ ಗೆಳೆಯ... ಇವು ಮಾತ್ರ ಅವಳ ಪಾಲಿಗೆ ನಂಬಿಕೊಂಡ ಸತ್ಯಗಳಾಗಿ ಗೋಚರಿಸಿದವು. ಎಲ್ಲ ಬಗೆಯ ದಾಳಿ - ದೌರ್ಜನ್ಯಗಳಿಂದ ಮುಕ್ತವಾದ, ಪ್ರೀತಿ-ಪ್ರೇಮ, ಸ್ನೇಹಗಳಾಚೆಯ; ದೈಹಿಕ ವಾಂಛೆಯನ್ನೊಲ್ಲದ ಬಂಧಕ್ಕೆ ಆತ ಆಹ್ವಾನಿಸಿದ್ದ. ಅಲೌಕಿಕದಂಥ ಸಂಬಂಧ! ಇಲ್ಲವೆನ್ನಲಾಗಲಿಲ್ಲ. ದೈಹಿಕ ದೌರ್ಜನ್ಯಕ್ಕೆ ಮಾನಸಿಕ ಸಾಂತ್ವನದ ಪರಿಹಾರ ಪಡೆಯಲು ಒಡಂಬಟ್ಟಳು ಗೀತಾ ಲಕ್ಷ್ಮಿ.
***

ಕುದುರೆಯು ಕುಂಬಾರರ ಮನೆಗೆ ನುಗ್ಗಿ ಮಡಕೆ ಕುಡಿಕೆಗಳನ್ನು ಒಡೆಯಿತಂತೆ. ಆಚಾರ‌್ರ ಮನೆಯ ತಿದಿಯನ್ನು ತುಳಿದು ಹರಿಯಿತಂತೆ. ಗೌಡರಟ್ಟಿ ಎಮ್ಮೆ ಹಸು-ಕರುಗಳ ಮೇಲೆ ದಾಳಿ ಮಾಡಿತಂತೆ. ಶೆಟ್ಟರಂಗಡಿ ಧ್ವಂಸ ಆಯಿತಂತೆ. ಲಿಂಗಾಯಿತರ ಮನೆ ನುಗ್ಗಿ, ಹೊಲೇರ ಮನೆಯಿಂದ ಆಚೆ ಬಂದು.... ಬ್ರಾಹ್ಮಣರ ಮನೆಗೂ ಹೊಕ್ಕಿ ಜಾತಿ ಕೆಡಿಸಿತಂತೆ... ಎಂಬ ಸುದ್ದಿಗಳು ವ್ಯಾಪಕವಾಗಿ ಹಬ್ಬಿದವು. ದಿಟವೋ - ಸಟೆಯೋ ಒಬ್ಬರೂ ಕಂಡವರಿಲ್ಲ.

ಎಲ್ಲರ ಮನೆಗಳಲ್ಲೂ ವಿಚಿತ್ರ ಅನುಭವಗಳು. ಕುದುರೆಯು ಹೊಕ್ಕಾಡಿದಂತೆ... ಗಂಡಂದಿರ ಮೈಮೇಲೆ ಗೂಳಿ ಬಂದಂತೆ... ಯಾವುದೋ ದಾಳಿ ನಡೆದ ಕುರುಹುಗಳು ಮೂಡತೊಡಗಿದವು. ದಾಳಿಗೆ ಹೆಣ್ಣುಗಂಡಿನ ಭೇದ ಇರಲಿಲ್ಲವಾದರೂ ಬಹುತೇಕ ಹೆಂಗಸರೇ ಗುರಿ ಆಗಿದ್ದಂತೆ ತೋರುತ್ತಿತ್ತು. ಜನರಲ್ಲಿ ಹಿಂಸಾಪ್ರವೃತ್ತಿಯು ಸಮೂಹ ಸನ್ನಿಯಾಗತೊಡಗಿತು.

ದಾಳಿ - ಆಕ್ರಮಣಗಳಿಂದ ಎಲ್ಲೆಲ್ಲೂ ಪ್ರಕ್ಷುಬ್ಧತೆ, ಅಶಾಂತಿ. `ಯಃಕಶ್ಚಿತ್ ಒಂದು ಕುದುರೆ ಹಿಡಿಯಲಾರದ ಪೊಲೀಸು - ಕಾನೂನು ನಮಗೆ ಬೇಕಾ? ಏನ್ ಮಾಡುತ್ತೀರೋ ಗೊತ್ತಿಲ್ಲ. ಪೊಲೀಸು - ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮೂರು ದಿನದೊಳಗೆ ಕುದುರೆ ಹಿಡಿದು ತರಬೇಕು~. ಸರ್ಕಾರ ತಾಕೀತು ಮಾಡಿತು. `ಆಪರೇಷನ್ ಅಶ್ವಮೇಧ~ ಎಂಬ ಗುಪ್ತ ಸಂಕೇತನಾಮದಲ್ಲಿ ಜಂಟಿ ಕಾರ್ಯಾಚರಣೆ ಶುರುವಾಯಿತು. ಅನುಮಾನ ಬಂದ ನಾಲ್ಕಾರು ಜನರನ್ನು ಬಂಧಿಸಿದರು. ಮೇಲಧಿಕಾರಿಗಳಿಗೆ ಸುದ್ದಿ ಹೋಯಿತು.

ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಬೆಚ್ಚಿದ ಬಂಧಿತರು ಜಪ್ಪಯ್ಯ ಅಂದರೂ ತುಟಿಬಿಚ್ಚಲಿಲ್ಲ. ಮನಬಂದಂತೆ ಥಳಿಸಿದರು. ಕಡೆಗೆ ಹಿಡಿದು ತಂದ ಪೊಲೀಸರನ್ನೇ ವಿಚಾರಣೆಗೆ ಗುರಿಪಡಿಸಿ ಅವರು ಕೊಟ್ಟ ಹೇಳಿಕೆಯನ್ನೇ ರೆಕಾರ್ಡ್ ಮಾಡಿದರು.
***


ಮನೆಯಲ್ಲಿ ಮುದುಡಿದ ತಾವರೆ ಮಠದಂಗಳದಲ್ಲಿ ಅರಳಿ ಹಿಗ್ಗುತ್ತಿತ್ತು. ಎರಡು ಹೃದಯಗಳು ಪರಸ್ಪರ ಮಿಡಿದುಕೊಳ್ಳುತ್ತಿದ್ದವು. ಹೊಸಗಾಳಿಗೆ ಮೈಯೊಡ್ಡಿ ನೋವು - ಭಾವಗಳ ಹಂಚುಂಡವು. ಹೆಣ್ಣುಗಂಡುಗಳ ನಡುವೆ ಪ್ರೇಮ ಕಾಮವಲ್ಲದ ಎದೆಯ ಸಂಬಂಧವೊಂದು ಏಕೆ ಸಾಧ್ಯವಿಲ್ಲ? ಈಗ ನಾವಿಲ್ಲವೆ... ಎಂಬ ಭಾವ ಅವಳಲ್ಲಿ ವಿಶ್ವಾಸ ತುಂಬುತ್ತಿತ್ತು. `ಮನವಿತ್ತೆ... ತನುವೇಕೆ ಹೊಲ್ಲ?~ ಎಂಬ ಪ್ರಶ್ನೆಯು ಎದೆಯ ಗೆಳೆಯನ
 

ಕಿಬ್ಬೊಟ್ಟೆಯಾಳದಲ್ಲಿ ಮುಲುಕಲಾರಂಭಿಸಿದ್ದನ್ನು ಇವಳು ಹೇಗೆ ತಾನೆ ಅರಿಯಲು ಸಾಧ್ಯ?
ಪೊಲೀಸರ ತನಿಖೆಯು ಸ್ವಲ್ಪ ಸ್ವಲ್ಪವೇ ಪ್ರಗತಿ ಸಾಧಿಸುತ್ತಿತ್ತು. ಸಿಟಿ ಬಸ್ ಸ್ಟಾಂಡ್, ಮಾರ್ಕೆಟ್, ಗಾಂಧಿ ಚೌಕಗಳಲ್ಲಿ ತಾಯಿತ, ಚೂರ್ಣ, ಲೇಹ್ಯಗಳನ್ನು ಮಾರುತ್ತಿದ್ದವರನ್ನು ಬಂಧಿಸಿದರು. ಅವರು ನೀಡಿದ ಸುಳಿವಿನಿಂದ ಮತ್ತಷ್ಟು ಜನ ಅರೆಸ್ಟಾದರು. ಆದರೆ ಮೂಲಗಮ್ಯವು ಮಾತ್ರ ಅಭೇದ್ಯ ಕೋಟೆಯಂತೆ ಸವಾಲು ಎಸೆದಿತ್ತು. ಈ ಮಧ್ಯೆ ಗೂಳಿ ಕುದುರೆಯ ಹಾವಭಾವಗಳಿಂದ ಹಿಂಸ್ರಾಪಶುಗಳಂತೆ ವರ್ತಿಸುತ್ತಿದ್ದವರ ಸಂಖ್ಯೆ ದ್ವಿಗುಣಗೊಂಡು ಜೈಲುಗಳು ತುಂಬಿಹೋದವು.

ಸರ್ಕಾರಕ್ಕೆ ತಲೆನೋವು ಶುರುವಾಯಿತು. ತನಿಖಾಧಿಕಾರಿಗಳು ಬದಲಾದರು, ಹೊಸ ತಂತ್ರಗಳು ಜಾರಿಗೆ ಬಂದವು. ಕೊನೆಗೆ ತಾಯಿತ ಮಾರುತ್ತಿದ್ದವರನ್ನು ನಾರ್ಕೋ ಅನಾಲಿಸಿಸ್ ಮತ್ತು ಮಂಪರು ಪರೀಕ್ಷೆಗಳಿಗೆ ಒಳಪಡಿಸಿದಾಗ- `ಕುದುರೆಯ ಬಾಲದ ಕೂದಲು, ಬೆನ್ನಿನ ಕೇಶಗಳಿಂದ ತಾಯಿತಗಳನ್ನೂ ಕುದುರೆಯ ಯಾವ್ಯಾವುದೋ ಅವಯವಗಳಿಂದ ಲೇಹ್ಯ-ಚೂರ್ಣಗಳನ್ನು ತಯಾರಿಸುತ್ತಿದ್ದುದೂ... ಅದರಲ್ಲಿ ಒಣ ಮಾಂಸ ಅಥವಾ ಬ್ರೆಡ್ಡಿನಂಥಾ ತುಣುಕುಗಳಿದ್ದುದೂ ಬೆಳಕಿಗೆ ಬಂತು.

ಚೈನ್‌ಲಿಂಕ್ ಮಾರಾಟದ ತಂತ್ರದಿಂದ ಕೈ ಬದಲಾವಣೆ ಮಾಡಿ ಮಾರಲಾಗುತ್ತಿತ್ತು. ಮಾರುವವರಿಗೆ ಕೈ ತುಂಬಾ ಕಾಸು ಸಿಗುತ್ತಿತ್ತು. ಎಲ್ಲಿಂದ? ಹೇಗೆ? ಸರಬರಾಜಾಗುತ್ತಿವೆ ಎಂಬ ಮೂಲವು ಗೊತ್ತಿರಲಿಲ್ಲ. ಅದು ಅವರಿಗೆ ಬೇಕೂ ಇರಲಿಲ್ಲ. ಜನರು ಹಟಕೋ ಚಟಕ್ಕೋ ಬಿದ್ದವರಂತೆ ಖರೀದಿಸುತ್ತಿದ್ದರು ಎಂಬುದೂ ತಿಳಿಯಿತು. ಆದರೆ ತಪ್ಪಿಸಿಕೊಂಡ ಕುದುರೆಯ ಬಗ್ಗೆ ಮಾಹಿತಿ ಸಿಗಲಿಲ್ಲ.

`ತಾಕತ್ ಕಿ ದಾವತ್ ಅಂತಾ ಈ ಸುವ್ವರ್ ನನ್ ಮಕ್ಳು ಕುದುರೇನಾ ಕೊಂದು ತಿಂದ್ಬಿಟ್ಟಿರಬೇಕು...~ ಎಂದು ತಮಗೆ ತಾವೇ ಹೇಳಿಕೊಳ್ಳುತ್ತಾ ಕುಸಿದು ಕುಂತರು ತನಿಖಾಧಿಕಾರಿ ಷರೀಫ್ ಸಾಹೇಬರು. `ಕುದುರೆ - ಗೂಳಿಗಳ ದಾಳಿಗಳಿಗಿಂತ ಮನುಷ್ಯನ ದುರಾಸೆಯೇ ಭೀಕರ. ಸಕಲ ಜೀವಜಂತುಗಳಲ್ಲೂ ಇರುವ ಹಿಂಸಾ ಮನೋವೃತ್ತಿಯು ಯಾವಾಗ? ಹೇಗೆ? ಉದ್ದೀಪನಗೊಳ್ಳುವುದೋ ಬಲ್ಲವರಾರು?~ ಎಂದು ಸಾಹೇಬರು ಹಣೆಯ ಬೆವರು ಒರೆಸಿಕೊಂಡರು.
***
ಸರ್ಕಾರಕ್ಕೆ ವರದಿ ಸಲ್ಲಿಕೆಯಾಯಿತು. ವರದಿಯಲ್ಲಿ ಮುಖ್ಯವಾಗಿ ಎರಡು ಬಗೆಯ ಅಭಿಪ್ರಾಯ ಮಂಡಿಸಲಾಗಿತ್ತು.

ಅಭಿಪ್ರಾಯ ಒಂದು:
ಬಹುಶಃ ಕುದುರೆಯ ಅತಿಮಾನುಷ ಶಕ್ತಿಯನ್ನು, ಕಾಮೋತ್ತೇಜಕ ಗುಣಗಳನ್ನು ತಾವು ಹೊಂದಲು ಕುದುರೆಯನ್ನು ಅಪಹರಿಸಿಕೊಂಡು ತಿಂದಿರಬಹುದು. ಇದರ ಪರಿಣಾಮ ಜನರ ಮೇಲಾಗಿರಬಹುದು. ಲೇಹ್ಯ, ಚೂರ್ಣ, ತಾಯಿತಗಳು ಇದಕ್ಕೆ ಪುಷ್ಟಿ ನೀಡುತ್ತವೆ.

ಅಭಿಪ್ರಾಯ ಎರಡು:
ಪ್ರಸ್ತುತ ಸನ್ನಿವೇಶ ಗಮನಿಸಿದರೆ ಕುದುರೆಯ ವಿಶೇಷ ಶಕ್ತಿಗಳು, ವೀರ್ಯವಂತಿಕೆಯ ಗುಣಗಳ ಬಗ್ಗೆ ಜನರಲ್ಲಿ ಉಂಟಾದ ವ್ಯಾಮೋಹ ಮತ್ತು ಕುತೂಹಲಗಳು ಸುಪ್ತವಾಗಿದ್ದ ಮನುಷ್ಯನ ಮೂಲಪ್ರವೃತ್ತಿಗಳಾದ ಕಾಮ ಮತ್ತು ಹಿಂಸಾ ಮನೋವೃತ್ತಿಯನ್ನು ಕೆರಳಿಸಿರಬಹುದು.

ಕುದುರೆಯು ತಮಗೆ ಮೈದುಂಬಿದೆ ಅಥವಾ ತಮ್ಮಳಗೆ ಹೊಕ್ಕಿ ಗೂಳಿಯಂತಾಡಿಸುತ್ತಿದೆ ಎಂಬ ಭ್ರಮೆಗೆ ಬಿದ್ದು ಹಿಂಸಾಚಾರಕ್ಕೆ ತೊಡಗಿರಬಹುದು. ಇದು ಸಮೂಹ ಸನ್ನಿಯ ರೂಪ ಪಡೆದ ಕಾರಣ ಹಿಂಸೆ ವ್ಯಾಪಕವಾಗಿದೆ.

ಉಪಸಂಹಾರ:

ಪ್ರಸ್ತುತ ಗುಪ್ತಚರ ವರ್ತಮಾನದ ಪ್ರಕಾರ ಜನಸಾಮಾನ್ಯರ ಆಂತರ‌್ಯದಲ್ಲಿ ಹಿಂಸೆ ಹೆಚ್ಚಾಗುತ್ತಾ ಇದೆ. ಅದು ರಾಜ್ಯವ್ಯಾಪಿ ಹರಡುತ್ತಿದೆ. ಹಿಂಸಾಗುಣಗಳನ್ನು ತೋರಿದವರನ್ನೆಲ್ಲಾ ಬಂಧಿಸುತ್ತಾ ಹೋದರೆ ಜೈಲುಗಳು ತುಂಬಿ ತುಳುಕುತ್ತವೆ. ಸ್ಥಳಾವಕಾಶದ ಕೊರತೆ ಉಂಟಾಗುವುದಲ್ಲದೆ ಸಮಾಜದ ಸ್ವಾಸ್ಥ್ಯವೂ ಹಾಳಾಗುವ ಸಂಭವವಿರುತ್ತದೆ.ಸದರಿ ಅಂಶಗಳನ್ನು ಘನ ಸರ್ಕಾರದ ಅವಗಾಹನೆಗೆ ಸಲ್ಲಿಸಲಾಗಿದೆ.
***

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಯಿತು.
ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟದ ತುರ್ತು ಸಭೆ ಕರೆದರು. ಸಭೆಯಲ್ಲಿ ಹಲವು ಸಾಧ್ಯತೆಗಳ ಚರ್ಚೆ ನಡೆಯಿತು. ಕಡೆಗೆ ಮುಜರಾಯಿ ಮಂತ್ರಿ ಚೆನ್ನಯ್ಯ ಶೆಟ್ಟರು- `ಯಾರೋ ಒಬ್ಬ ತಪ್ಪು ಮಾಡಿದ್ರೆ ಹಿಡಿದು ಶಿಕ್ಷೆ ಕೊಡಬೋದು. ರಾಜ್ಯಕ್ಕೆ ರಾಜ್ಯವೇ ಹಿಂಸೆಯಲ್ಲಿ ತೊಡಗಿದ್ರೆ ಯಾರನ್ನ ಹಿಡಿಯೋದು? ಯಾರನ್ನ ಶಿಕ್ಷಿಸೋದು? ಇದು ಪೊಲೀಸು ಕಾನೂನುಗಳಿಂದ ಆಗೋ ಕೆಲ್ಸ ಅಲ್ಲ.
 
ಜನರ ಮನಸ್ಸಿನಲ್ಲಿ ಕುಂತಿರೋ ಹಿಂಸಾ ಮನೋಭಾವನೆಗಳನ್ನ ಕಿತ್ತುಹಾಕದ ಹೊರತು ಶಾಂತಿಯಿಲ್ಲ. ಇದು ಧರ್ಮಸೂಕ್ಷ್ಮದ ಪ್ರಶ್ನೆ. ಶಾಶ್ವತವಾದ ಪರಿಹಾರ ಬೇಕೂಂದ್ರೆ ನಾವು ನಮ್ಮ ಸನಾತನ ಸಂಸ್ಕೃತಿ, ಅಧ್ಯಾತ್ಮದ ಕಡೆಗೆ ಕೈಚಾಚಬೇಕು...~ ಎಂದು ಮಂಡಿಸಿದ ಅಭಿಪ್ರಾಯವು ಒಪ್ಪಿತವಾಯಿತು.

ಜನತೆಯ ನಿಯೋಗದೊಂದಿಗೆ ಸ್ವಾಮಿ ಸತ್ಯಾನಂದರ ಬಳಿ ಹೋಗಿ ಅಷ್ಟಮಂಗಲ ಪ್ರಶ್ನೆ ಹಾಕಿಸಿ ಪರಿಹಾರ ಕೇಳಬೇಕು ಎಂಬುದಾಗಿ ಸಚಿವ ಸಂಪುಟವು ನಿರ್ಣಯಿಸಿ ಸಭೆಯನ್ನು ಬರ್ಖಾಸ್ತುಗೊಳಿಸಿತು.
***

ಅಲ್ಲಾಡಿ ಇಲ್ಲಾಡಿ ಕೊಟ್ಟ ಕೊನೆಗೆ ಮೈಲಾರಕ್ಕೆ ಬಂದಿದ್ದ ಮನಸ್ಸಿನ ಗೆಳೆಯ. ಆಶ್ರಮದ ಧ್ಯಾನ ಮಂದಿರದ ಪಕ್ಕದಲ್ಲಿರುವ ಹೋಮ ಹವನ ನಡೆಸುವ ದೊಡ್ಡ ಕೋಣೆಯಲ್ಲಿ ಅವೆರಡು ಹೃದಯಗಳು ಸಂವಾದಿಸುತ್ತಿದ್ದವು. ಬರಬರುತ್ತಾ ಅದು ಅನೂಹ್ಯವಾದ ಘಟ್ಟ ತಲುಪಿತ್ತು. ಅಲ್ಲಿ ಅಗ್ನಿಕುಂಡದಲ್ಲಿ ಬೂದಿಯು ವಿಭೂತಿಯಂತೆ ಬೆಳ್ಳಗೆ ಹರಡಿತ್ತು. ಬೂದಿಯ ಕೆಳಗಿದ್ದ ಕೆಂಡದುಂಡೆಗಳ ಕಾವು ಇನ್ನೂ ಆರಿರಲಿಲ್ಲ.

`ಜೀವ-ಭಾವ ಒಂದಾದ ಮೇಲೆ ಮಡಿವಂತಿಕೆ ಏಕೆ?~ ವಿಷಯಕ್ಕೆ ಬಂದ.
`ಏನು ನಿಮ್ಮ ಮಾತಿನ ಅರ್ಥ?~ ಇವಳು ಬೆಚ್ಚಿದಳು.
`ಮನವಿಲ್ಲದವರಲ್ಲಿ ತನುವಿತ್ತು ಘಾಸಿಗೊಳ್ಳುವ ಬದಲು ತನುಮನವೆರಡೂ ಇರುವಲ್ಲಿ ಮೈಯಿ ಮೈಲಿಗೆಯೇ?~ ಆಧುನಿಕ ವಚನಕಾರನಂತೆ ನುಡಿದು ಬಾಚಿತಬ್ಬಿ ತುಟಿಗೆ ತುಟಿಯನ್ನೊತ್ತಿ ದೀರ್ಘ ಚುಂಬನವಿತ್ತನು.
ಈಕೆ ಹೌಹಾರಿ, ದೂರ ತಳ್ಳಿ- `ಅವನು ಎದೆಗೆ ಚೂರಿ ಹಾಕಿದ. ನೀನು ಬೆನ್ನಿಗೆ ಹಾಕಿದೆ~ ಎಂದು ಕೆನ್ನೆಗೆ ಬಾರಿಸಿದಳು.


ಮತ್ತೂ ಹತ್ತಿರಕ್ಕೆ ಬಂದು ಏನೇನೋ ಬಡಬಡಿಸುತ್ತಿದ್ದ. ಅವರ ಮಾತು ಎಳೆದಾಟಗಳ ನಡುವೆ ಅವಳ ಸೀರೆ ಸೆರಗು ಹೋಮಕುಂಡಕ್ಕೆ ಬಿದ್ದಿತ್ತು. ಸೆರಗಿನ ಚುಂಗಿಗೆ ಕೆಂಡವು ಅಂಟಿತ್ತು...


ಜನತೆಯ ನಿಯೋಗದೊಂದಿಗೆ ಮುಜರಾಯಿ ಮಂತ್ರಿಗಳು ಆಶ್ರಮಕ್ಕೆ ಬಂದರು. ಧ್ಯಾನ ಮಂದಿರದಲ್ಲಿ ಕೂತಿದ್ದ ಸ್ವಾಮಿ ಸತ್ಯಾನಂದರ ಪಾದಗಳಿಗೆ ಎರಗಿದರು ಮಂತ್ರಿಗಳು. ಆದರೆ ಅವು ಅಲ್ಲಿರಲಿಲ್ಲ. ಪಾದಕಮಲಗಳು ಪದ್ಮಾಸನ ಭಂಗಿಯಲ್ಲಿದ್ದವು.

ನಿಯೋಗದ ಬಿನ್ನಹದ ಬಳಿಕ- “ನನಗೆ ಗೊತ್ತು, ಇದು ಹೀಗೇ ಆಗುತ್ತೇಂತ. ಅದಕ್ಕೇ ನಾನು ಹೇಳಿದ್ದು `ಅಶ್ವಮೇಧಯಾಗ~ ಆಗ್ಬೇಕು ಅಂತಾ...”
`ಆಗಲಿ ಸ್ವಾಮಿ, ಎಲ್ಲ ವ್ಯವಸ್ಥೆ ಮಾಡ್ಕೊಳ್ಳಿ. ಎಷ್ಟು ಖರ್ಚಾದರೂ ಚಿಂತೆಯಿಲ್ಲ. ಸರ್ಕಾರ ಭರಿಸುತ್ತೆ. ರಾಜ್ಯಕ್ಕೆ, ಜನಗಳಿಗೆ ಒಳ್ಳೇದಾಗಬೇಕು ಅಷ್ಟೇ...~- ಮಂತ್ರಿಗಳ ಮಾತಿಗೆ ಒಮ್ಮೆ ಜೋರಾಗಿ ನಕ್ಕರು ಸ್ವಾಮಿ ಸತ್ಯಾನಂದರು.

`ಹ್ಹಹ್ಹಹ್ಹಾ... ಹ್ಹಹ್ಹಹ್ಹಾ...~ ಜನರು ಸತ್ಯದರ್ಶನವಾದಂತೆ ಬೆಚ್ಚಿದರು! ಸ್ವಾಮಿಗಳ ಕಟಬಾಯಿ ಮತ್ತು ದವಡೆಗಳಲ್ಲಿ ಕೋರೆಹಲ್ಲುಗಳು ಮೂಡಿದ್ದವು. ಯಾಕೋ ಕಿವಿಗಳು ಕೊಂಚ ಉದ್ದವಾಗಿ ನಿಮಿರಿದಂತಿದ್ದವು. ತಲೆಯ ಮೇಲೆ ಎರಡು ಕವೆಗಳು ಕುಡಿಯೊಡೆಯುತ್ತಿರುವ ಸೂಚನೆ ತೋರುತ್ತಿತ್ತು. ಕತ್ತಿನ ಸುತ್ತ ಕೂದಲು... ಕಣ್ಣ ಕೆಳಗೆ ಕಪ್ಪು; ಕಣ್ಣ ಒಳಗೆ ರಕ್ತವರ್ಣ... ಬದಲಾದ ಸ್ವಾಮೀಜಿಯ ಚಹರೆಗಳು ನೆರೆದಿದ್ದ ಜನರಲ್ಲಿ ಹತ್ತು ಹಲವು ಅಚ್ಚರಿ, ಅನುಮಾನಗಳನ್ನು ಹುಟ್ಟಿಸಿ ಸಾವಿರ ಪ್ರಶ್ನೆಗಳಿಗೆ ಬೀಜವಾದವು.

ನಗುವು ಅಲೆ ಅಲೆಯಾಗಿ ಹೆಚ್ಚುತ್ತಾ ಹೋದಂತೆ ಆಶ್ರಮದ ಹೆಂಗಸೊಬ್ಬಳು ಬೆಚ್ಚಿಬಿದ್ದಳು, ತಲೆ ಸುತ್ತಿ ಬವಳಿ ಬಂದಿತ್ತು. ತಕ್ಷಣವೇ ಅಲ್ಲಿದ್ದವರು ತಲೆಗೆ ನೀರು ತಟ್ಟಿ, ಬಾಯಿಗೊಂದಿಷ್ಟು ಕುಡಿಸಿದರು. `ಪಾಪ! ಬಸುರಿ ಹೆಂಗಸು ಅಂತಾ ಕಾಣ್ತದೆ...~ ಗುಂಪಿನ ನಡುವೆ ಒಂದು ಕರುಣೆಯ ಹೆಣ್ಣು ಉದ್ಗಾರ ಕೇಳಿಸಿತು.

...ಗೀತಾಲಕ್ಷ್ಮಿಯ ಸೆರಗಿನ ಚುಂಗಿಗೆ ಅಂಟಿದ ಕೆಂಡವು ಕೆರಳಿ ಅವಳ ಸೀರೆಯನ್ನೆಲ್ಲಾ ಕೆನ್ನಾಲಿಗೆಯಿಂದ ನೆಕ್ಕತೊಡಗಿತು. ಅರಿವಿಗೇ ಬರದೆ ಹೊತ್ತಿಕೊಂಡ ಬೆಂಕಿಗೆ ಕಿಟಾರನೆ ಕಿರುಚಿ ಸೀರೆ ಕಿತ್ತೆಸೆದು ಧ್ಯಾನ ಮಂದಿರಕ್ಕೆ ಒಳ ಉಡುಪಿನಲ್ಲೇ ಓಡಿ ಬಂದಳು.

ಸ್ವಾಮೀಜಿಯ ಬದಲಾದ ಚಹರೆ, ಹೆಂಗಸಿನ ಆರೈಕೆಗಳ ಗೊಂದಲದಲ್ಲಿದ್ದ ಜನಕ್ಕೆ ಹೊಸ ಶಾಕ್! ಜನ ಕಣ್ಣು ಬಾಯಿ ಅರಳಿಸಿ ನಿಂತುಬಿಟ್ಟರು. ದಢಕ್ಕನೆದ್ದ ಸ್ವಾಮೀಜಿಗಳು ಪದ್ಮಾಸನ ಕಳಚಿ ಪವಿತ್ರ ಪಾದಗಳನ್ನು ನೆಲಕ್ಕೂರಿದರು. ಅಸಾಧ್ಯ ನೋವಿನಿಂದ ನರಳಿದ ಕುದುರೆಯೊಂದರ ಆರ್ತನಾದವು ಅಲ್ಲೆಲ್ಲಾ ತುಂಬಿದಂತೆ ಭಾಸವಾಯಿತು! ತಮ್ಮ ಪಾದಕಮಲಗಳ ಬದಲಾಗಿ ಕುದುರೆಯ ಗೊರಸಿನ ಪಾದಗಳಲ್ಲಿ ನಿಂತಿದ್ದರು ಸ್ವಾಮೀಜಿ.

ಜನರು ಬೆಚ್ಚಿ ಹಿಂದೆ ಸರಿದರು. ದೃಶ್ಯ - ಶ್ರಾವ್ಯಗಳೆರಡೂ ಅವರೊಳಗೆ ನಂಬಿಕೆ - ಅಪನಂಬಿಕೆಗಳ ಜೋಕಾಲಿ ತೂಗುತ್ತಿದ್ದವು. ಮಂತ್ರಿಗಳು ಭಕ್ತಿಪರವಶರಾಗಿ ಅಡ್ಡ ಬಿದ್ದು ಸ್ವಾಮೀಜಿಗಳ ಪವಿತ್ರ ಪಾದಗಳನ್ನು ತಡಕುತ್ತಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT