ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಕಮಲಕ್ಕೆ ತಕ್ಕ ಉತ್ತರ

Last Updated 3 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ಆಪರೇಷನ್ ಕಮಲದ ಕೂಸು ಎಸ್.ವಿ. ರಾಮಚಂದ್ರ ಅವರನ್ನು ಉಪಚುನಾವಣೆಯಲ್ಲಿ ಸೋಲಿಸುವ ಮೂಲಕ ಜಗಳೂರು ಕ್ಷೇತ್ರದ ಜನತೆ ರಾಜ್ಯದ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು. ಜಗಳೂರು ತಾಲ್ಲೂಕಿನ ಬಿಳಿಚೋಡಿನಲ್ಲಿ ಭಾನುವಾರ ನಡೆದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಪರ ಮತಯಾಚಿಸಿ ಅವರು ಮಾತನಾಡಿದರು.

ಬಹುಮತ ಇಲ್ಲದೇ ಪಕ್ಷೇತರರ ಸಹಕಾರದಿಂದ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ, ಆಪರೇಷನ್ ಕಮಲ ಹುಟ್ಟುಹಾಕುವ ಮೂಲಕ ಪ್ರಜಾಪ್ರಭುತ್ವದ ನಾಶಕ್ಕೆ ಮುನ್ನುಡಿ ಬರೆಯಿತು. ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಆಪರೇಷನ್ ಕಮಲಕ್ಕೆ ಬಲಿಯಾದ ಶಾಸಕರಿಗೆ ನೀಡುತ್ತಿದೆ. ಅನವಶ್ಯಕವಾಗಿ ಜನರ ಮೇಲೆ ಉಪಚುನಾವಣೆ ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್ ಪೂರೈಸಲು ಸಾಧ್ಯವಾಗದ ಸರ್ಕಾರ ಶಾಸಕರನ್ನು ಖರೀದಿಸಲು ಕೋಟಿಗಟ್ಟಲೆ ಹಣ ಚೆಲ್ಲುತ್ತಿದೆ.ಇತ್ತ ದುಡ್ಡಿನ ವ್ಯಾಮೋಹದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಗೆಲ್ಲಿಸಿದ ಪಕ್ಷಕ್ಕೆ, ನಂಬಿಕೆ ಇಟ್ಟ ಮತದಾರರಿಗೆ ಕೆಲವರು ದ್ರೋಹ ಮಾಡಿದ್ದಾರೆ.ಅಂತಹ ರಾಜಕೀಯ ನೀಚರನ್ನು ಸೋಲಿಸುವ ಮೂಲಕ ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎಂದು ಮತದಾರರನ್ನು ಕೋರಿದರು.

ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಭ್ರಷ್ಟಾಚಾರಿ, ಪಕ್ಷಾಂತರಿಗಳಿಗೆ ತಕ್ಕಪಾಠ ಕಲಿಸುವಂತೆ ಕೋರಿದರು.
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮಾತನಾಡಿ, ಪಕ್ಷಕ್ಕೆ, ಕ್ಷೇತ್ರದ ಮತದಾರರಿಗೆ ದ್ರೋಹ ಬಗೆಯುವ ಮೂಲಕ ರಾಮಚಂದ್ರ ಅವರು ಸ್ವಾಭಿಮಾನದ ಪಾಳೇಗಾರರಿಗೆ ಅವಮಾನ ಮಾಡಿದ್ದಾರೆ.

 ಜಗಳೂರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸದ ಯಡಿಯೂರಪ್ಪ ಯಾವ ಮುಖ ಇಟ್ಟುಕೊಂಡು ಮತಯಾಚಿಸುತ್ತಾರೆ ಎಂದು ಪ್ರಶ್ನಿಸಿದರು.ಮಾಜಿ ಸಂಸದ ಕೋದಂಡರಾಮಯ್ಯ, ಮಾಜಿ ಶಾಸಕ ಕೆ. ಮಲ್ಲಪ್ಪ, ಶಾಸಕರಾದ ಹಂಪಯ್ಯ, ರಾಯಪ್ಪ ನಾಯಕ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT