ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾ ಗಾಂಧಿಗೆ ಭಾವಪೂರ್ಣ ವಿದಾಯ

ಹುಟ್ಟೂರಲ್ಲಿ ಮರಳಿ ಮಣ್ಣಿಗೆ * ಮಂಡೇಲಾ ಇನ್ನು ನೆನಪು ಮಾತ್ರ
Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕುನು (ದಕ್ಷಿಣ ಆಫ್ರಿಕಾ):  ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ  ನೆಲ್ಸನ್‌ ಮಂಡೇಲಾ ಅಂತ್ಯ­ಕ್ರಿಯೆ ಭಾನುವಾರ ಅವರ ಹುಟ್ಟೂ­ರಾದ ಕುನುವಿನಲ್ಲಿ ಸಕಲ ಸರ್ಕಾರಿ  ಗೌರವಗಳೊಂದಿಗೆ ನಡೆಯಿತು.

ದೇಶ, ವಿದೇಶಗಳ ಸಾವಿರಾರು ಗಣ್ಯರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ  ಮಂಡೇಲಾ ಅವರು ತಾವು ಹುಟ್ಟಿ, ಬೆಳೆದ ಊರಿನ ಮಣ್ಣಲ್ಲಿಯೇ ಮಣ್ಣಾದರು. ಅಲ್ಲಿಗೆ  95 ವರ್ಷಗಳ ಸುದೀರ್ಘ ಇತಿಹಾಸಕ್ಕೆ ತೆರೆ ಬಿದ್ದಿತು. 

ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್‌ ಜುಮಾ, ಬ್ರಿಟನ್‌  ರಾಜಕುಮಾರ ಚಾರ್ಲ್ಸ್, ಅಮೆರಿಕದ ಪ್ರಸಿದ್ಧ ಟಿ.ವಿ. ನಿರೂಪಕಿ ಓಫ್ರಾ ವಿನ್‌ಫ್ರೇ, ಡೆಸ್ಮಂಡ್‌ ಟುಟು, ಮಂಡೇಲಾ ಅವರ ಆಪ್ತಮಿತ್ರ ಅಹ್ಮದ್‌ ಕಥ್ರಾಡಾ  ಸೇರಿದಂತೆ ಸುಮಾರು 4,500 ಗಣ್ಯ ಅತಿಥಿಗಳು ಭಾವಪೂರ್ಣ ವಿದಾಯ ಕೋರಿದರು.

ವರ್ಣಭೇದ ನೀತಿಯ ವಿರುದ್ಧದ ಹೋರಾಟದಲ್ಲಿ ಮಂಡೇಲಾ ಅವ­ರೊಂದಿಗಿದ್ದ ಹೋರಾಟಗಾರರೆಲ್ಲ ಈ ಐತಿಹಾಸಿಕ ಕ್ಷಣದಲ್ಲಿ ಹಾಜರಿದ್ದರು.

ಸಮಾಧಿ ಸ್ಥಳಕ್ಕೆ  ತೆರಳಲು ಕುಟುಂಬದ ಸದಸ್ಯರು ಸೇರಿ  450 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾ­ಗಿತ್ತು. ಹೀಗಾಗಿ  ಎಲ್ಲರಿಗೂ ತೀರಾ ಹತ್ತಿರದಿಂದ ಅಂತಿಮ ವಿಧಿ, ವಿಧಾನ­ಗಳನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ.

ಪ್ರಿಟೋರಿಯಾದಿಂದ ಶನಿವಾರ  ತರಲಾದ ರಾಷ್ಟ್ರಧ್ವಜ ಹೊದಿ­ಸಿದ್ದ ಶವ­ಪೆಟ್ಟಿಗೆಯನ್ನು  ಹಸುಗಳ ಚರ್ಮ­ಗಳ ಮೇಲೆ ಇಡಲಾಯಿತು.  ಸುತ್ತಲೂ 95 ಮೊಂಬತ್ತಿ ಬೆಳಗಿಸಲಾಯಿತು.

ಮಂಡೇಲಾ ಗೌರವಾರ್ಥ ರಾಷ್ಟ್ರ­ಧ್ವಜವನ್ನು ಅರ್ಧಕ್ಕಿಳಿಸಲಾಗಿತ್ತು.   ಯೋಧರು ಆಕಾಶದತ್ತ 21 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.

ಮಂಡೇಲಾ ಪತ್ನಿಯರಾದ ಗ್ರೇಕಾ ಮಶೆಲ್‌, ಮಾಜಿ ಪತ್ನಿ ವಿನ್ನಿ ಮಂಡೇಲಾ ಸೇರಿದಂತೆ ಅಬಾ ಥೆಂಬು ಕುಟುಂಬದ ಸದಸ್ಯರು ಅಂತಿಮ  ಸಾಂಪ್ರದಾಯಿಕ ವಿಧಿ, ವಿಧಾನಗಳಲ್ಲಿ ಭಾಗವಹಿಸಿದ್ದರು. ಕ್ಸೋಸಾ ಸಂಪ್ರದಾಯದಂತೆ  ಅಂತ್ಯ­ಕ್ರಿಯೆ ಮಾಡಲಾಯಿತು.

1990ರಲ್ಲಿ ಜೈಲಿನಿಂದ ಬಿಡುಗಡೆ­ಯಾದ ನಂತರ ಮಂಡೇಲಾ ಅವರು ಕುನುವಿನಲ್ಲಿ ಖರೀದಿಸಿದ್ದ ಅಚ್ಚುಮೆಚ್ಚಿನ ತೋಟದಲ್ಲಿಯೇ ಸಮಾಧಿ­ಯಾದರು.

‘ಇಲ್ಲಿ ಮಲಗಿರುವ ವ್ಯಕ್ತಿ ಈ ನೆಲದ ಹೆಮ್ಮೆಯ ಪುತ್ರ’ ಎಂದು ಆಫ್ರಿ­ಕಾದ ನ್ಯಾಶನಲ್‌ ಕಾಂಗ್ರೆಸ್‌ ಉಪಾಧ್ಯಕ್ಷ ಸೈರಿಲ್‌ ರಾಮ್‌ಫೋಸಾ   ಹೇಳಿದರು.

‘95 ವರ್ಷಗಳ ಸುದೀರ್ಘ ಜೀವನದ ಪಯಣ ಇಂದಿಗೆ ಕೊನೆಗೊಂಡಿತು. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲರೂ ನಡೆಯುತ್ತೇವೆ’ ಎಂದು ದಕ್ಷಿಣಾ ಆಫ್ರಿಕಾ ಅಧ್ಯಕ್ಷ ಜಾಕೋಬ್‌ ಜುಮಾ ನುಡಿದರು. ‘ಈ ಮಣ್ಣಿನಲ್ಲಿ ಮಗ ಸ್ವತಂತ್ರ ಮತ್ತು ಸಮಾನತೆಯ ಜಾಗತಿಕ ಸಂಕೇತವಾಗಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು.

ವರ್ಣಭೇದ ನೀತಿಯ ವಿರುದ್ಧದ ಮಂಡೇಲಾ ಅವರ ಹೋರಾಟದಲ್ಲಿ ಜೊತೆಯಾಗಿದ್ದ ಜಾರ್ಜ್‌ ಬಿಜೋಸ್‌, ಅಹ್ಮದ್ ಕಥ್ರಾಡಾ ಮತ್ತು ಡೆಸ್ಮಂಡ್‌ ಟುಟು ಮಾತನಾಡುವಾಗ ಭಾವೋಗ್ವೇ­ದಕ್ಕೆ ಒಳಗಾದರು.  ಅವರ ಮಾತು ಕೇಳಿ ಅಲ್ಲಿ ನೆರೆದವರ ಕಣ್ಣಂಚಿನಲ್ಲಿ ನೀರು ಜಿನುಗಿತು.

ಅಗಲಿದ ಆಪ್ತಮಿತ್ರನಿಗೆ ಕಣ್ಣೀರ ತರ್ಪಣ!
ಅಸಮಾನತೆ ಮತ್ತು ವರ್ಣಭೇದ ನೀತಿಯ ವಿರುದ್ಧದ ಹೋರಾಟದಲ್ಲಿ ಮಂಡೇಲಾ ಅವರೊಂದಿಗೆ 26 ವರ್ಷ ಕಾರಾಗೃಹದಲ್ಲಿ ಕಳೆದ ಅವರ  ಆಪ್ತ ಒಡನಾಡಿ ಹಾಗೂ ಭಾರತೀಯ ಮೂಲದ ಅಹ್ಮದ್‌ ಕಥ್ರಾಡಾ ಭಾನುವಾರ ತಮ್ಮ ಆಪ್ತಮಿತ್ರನನ್ನು ನನೆದು ಕಣ್ಣೀರಾದರು.

‘ಇಂತಹ ನಾಯಕನನ್ನು ಇತಿಹಾಸದ ಎಲ್ಲಿಯೂ ಕಂಡಿಲ್ಲ’ ಎಂದ 85 ವರ್ಷದ ಕಥ್ರಾಡಾ  ಕೇಪ್‌ಟೌನ್‌ನ ರಾಬೆನ್‌ ದ್ವೀಪದ ಕಾರಾಗೃಹದಲ್ಲಿ  26 ವರ್ಷ ಮಂಡೇಲಾ ಜೊತೆಗಿದ್ದರು.

‘ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಹತ್ತು ವರ್ಷಗಳ ಹಿಂದೆ ಮಡಿದ ವಾಲ್ಟರ್‌ ಸಿಸುಲು ಮಡಿದಾಗ ನಾನು ತಂದೆಯನ್ನು ಕಳೆದುಕೊಂಡಿದ್ದೆ. ಇಂದು ಅಣ್ಣನನ್ನು ಕಳೆದು ಕೊಂಡಿದ್ದೇನೆ’ ಎಂದು ಬಿಕ್ಕಿದರು. ಕಥ್ರಾಡಾ  ಪೋಷಕರು ಮೂಲತಃ ಗುಜರಾತ್‌ನ ಸೂರತ್‌ನವರು. ಅನೇಕ ದಶಕಗಳ ಹಿಂದೆ ಅವರು ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT