ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣವೆಂಬ ಭಾವಜಗತ್ತು

ಅಕ್ಷರ ಗಾತ್ರ

ನೋಡುತ್ತಿದ್ದರೆ ನೋಡಬೇಕೆನ್ನುವ ಹಂಬಲ ದುಪ್ಪಟ್ಟಾಗುತ್ತದೆ. ಹರಳುಗಳಿಂದ, ಮುತ್ತು ರತ್ನಗಳಿಂದ ಜೊತೆಗೆ ಕುಸುರಿ ಕಲೆಯಿಂದ ರೂಪಿತಗೊಂಡಿರುವ ಆಭರಣಗಳು ಒಂದಕ್ಕಿಂತ ಒಂದು ಸುಂದರ. ಸಾಂಪ್ರದಾಯಿಕ, ಆಧುನಿಕ ಎರಡು ಶೈಲಿಗಳೂ ಒಂದೆಡೆಯೇ ಮೇಳೈಸಿವೆ. ಈ ಆಭರಣಗಳು ಎಲ್ಲಾ ವಯೋಮಾನದ ಮಹಿಳೆಯರ ಹೃದಯ ಕದಿಯಲು ಸಜ್ಜಾಗಿವೆ. 

ಹೆಣ್ಣಿಗೆ ಸಹಜವಾಗಿ ಒಡವೆ ಎಂದರೆ ವ್ಯಾಮೋಹ. ಅದರಲ್ಲೂ ಆಭರಣಗಳಲ್ಲಿ ವೈವಿಧ್ಯ ಎಂದರೆ ಆಕೆಗೆ ಇನ್ನೂ ಅಚ್ಚುಮೆಚ್ಚು. ಪ್ರತಿಯೊಂದರಲ್ಲೂ ಹೊಸತನ ಹುಡುಕುವವರಿಗೆ ತೊಡುವ ಆಭರಣಗಳೂ ಎಲ್ಲರನ್ನು ಸೆಳೆಯುವಂತಿರಬೇಕು ಎಂಬ ಹಂಬಲವಿರುತ್ತದೆ. ಈ ಆಶಯವನ್ನೇ ಬಂಡವಾಳ ಮಾಡಿಕೊಂಡು ವಿಭಿನ್ನ ಶೈಲಿಯ ಆಭರಣ ಸಂಗ್ರಹಗಳನ್ನು ತಯಾರಿಸುತ್ತಿದ್ದಾರೆ ಚೇತನಾ ನಂದ.

`ಆಭರಣವೆಂದರೆ ಕೇವಲ ನಿರ್ಜೀವ ವಸ್ತುವಿನಂತೆ ನಾವು ಭಾವಿಸುವುದಿಲ್ಲ, ಅದರೊಂದಿಗೆ ಭಾವನಾತ್ಮಕ ನಂಟನ್ನೂ ಬೆಳೆಸಿಕೊಳ್ಳುತ್ತೇವೆ. ಆದ್ದರಿಂದ ಈ  ಸಂಬಂಧವನ್ನು ಇನ್ನಷ್ಟು ಮಧುರಗೊಳಿಸಲು ಒಡವೆ ಕುಸುರಿ ಕಲೆಯಲ್ಲಿ ತೊಡಗಿಕೊಂಡೆ~ ಎನ್ನುತ್ತಾರೆ ಚೇತನಾ.
ಮೂಲತಃ ದೆಹಲಿಯವರಾದ ಚೇತನಾ ನಂದ ಅವರಿಗೆ ಆಭರಣ ವಿನ್ಯಾಸದಲ್ಲಿ ಮೊದಲಿನಿಂದಲೂ ಆಸಕ್ತಿ.

ಜೆಮ್ ಅಂಡ್ ಜ್ಯುವೆಲ್ಲರಿ ಪ್ರೊಮೋಷನ್ ಕೌನ್ಸಿಲ್ ಮತ್ತು ಜೆಮಾಲಜಿಯಲ್ಲಿ ಪದವಿ ಪಡೆದ ಇವರಿಗೆ ಒಡವೆಗಳಲ್ಲಿ ಕುಸುರಿ ಕೈಚಳಕ ತೋರುವುದು ಅಷ್ಟು ಕಷ್ಟವೆನಿಸಲಿಲ್ಲ. ಆದರೆ ಇನ್ನೂ ವಿಭಿನ್ನವಾದದ್ದನ್ನು ಹೊರತರಬೇಕೆಂಬ ಹಂಬಲದೊಂದಿಗೆ ಆಭರಣಗಳಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಬೆಳ್ಳಿ ಅಥವಾ ಚಿನ್ನದ ಒಡವೆಗಳನ್ನು ಮಾಡುವುದರಲ್ಲಿ ವಿಶೇಷತೆಯಿಲ್ಲ.
 
ಎರಡೂ ಲೋಹಗಳನ್ನು ಒಟ್ಟಿಗೆ ಸೇರಿಸಿ ಕಾಲ ಕಾಲಕ್ಕೆ ತಕ್ಕಂತೆ ಶೈಲಿಗಳನ್ನೂ ಬದಲಿಸಿ ಹೊಸ ವಿನ್ಯಾಸ ನೀಡುವುದೇ ಸವಾಲಿನ ಕೆಲಸ. ಆ ಸವಾಲಿಗೆ ಎದೆಗೊಡುವುದರಲ್ಲಿ ನಮ್ಮ ಯಶಸ್ಸಿದೆ~ ಎಂದು ಹೇಳುತ್ತಾರೆ ಚೇತನಾ.

`ಆಭರಣಗಳನ್ನು ಕೇವಲ ಲಾಭಕ್ಕೆಂದು ವಿನ್ಯಾಸ ಮಾಡಿದರೆ ಅದರಲ್ಲಿ ಅರ್ಥವಿಲ್ಲ. ಅದು ಗ್ರಾಹಕರ ಮನ ಮೆಚ್ಚಿ, ಅವರು ಮತ್ತೆ ನಮ್ಮ ಬಳಿ ಬರುವಂತಾದರೆ ಅದು ಸಾರ್ಥಕವೆನಿಸುತ್ತದೆ~ ಎಂದು ಸಂತಸದಿಂದ ನುಡಿಯುತ್ತಾರೆ ಅವರು.

ಇವರ ಕೈಯಲ್ಲಿ ಕಿವಿಯೋಲೆ, ಉಂಗುರ, ಕಾಲುಂಗುರ, ಬ್ರೇಸ್‌ಲೆಟ್, ಬಳೆ, ಬೈತಲೆ ಎಲ್ಲವೂ ಕುಸುರಿ ಕಲೆಯಿಂದ ಕಂಗೊಳಿಸಿವೆ. ಲೋಹ ಮಿಶ್ರಿತ ಒಡವೆಗಳು ಆಕರ್ಷಣೆಯ ಒಂದು ಅಂಶವಾದರೆ, ಅದರಲ್ಲಿನ ಚಿತ್ತಾರಗಳು ಇನ್ನೊಂದು ಅಂಶ. ಜೊತೆಗೆ ಮ್ಯಾಚಿಂಗ್ ಬಯಸುವವರಿಗೆ ಬಣ್ಣಬಣ್ಣದ ಕುಂದನ್, ಮಣಿ, ಹರಳು, ಮುತ್ತು, ನವರತ್ನಗಳ ಸಾಥ್ ಕೂಡ ಇರುತ್ತದೆ.

ಇತರೆ ಒಡವೆಗಳಿಗಿಂತ ಅದೇನೋ ಹೊಸತನ ಇವರ ಒಡವೆಗಳಲ್ಲಿ ಗೋಚರಿಸುತ್ತವೆ. ಅದರಲ್ಲೂ ಇವರ ಕ್ಯೂಬಿಕ್ ಝೆರ್ಕೊನಿಯಾ ಎಂಬ ಸಂಗ್ರಹ ವಿಶೇಷವಾಗಿದೆ. ಇವರ ಈ ಒಡವೆ ಸಂಗ್ರಹಗಳಿಗೆ ಮನಸೋತ ಕೆಲ ಕಲಾವಿದರೂ ತಮಗೆ ಬೇಕಾದಂತೆ ಇವರಲ್ಲಿ ಆಭರಣಗಳಿಗೆ ಡಿಸೈನ್ ಮಾಡಿಸಿಕೊಳ್ಳುತ್ತಾರೆ.

ಎಲ್ಲಾ ವಯೋಮಾನದ ಮಹಿಳೆಯವರನ್ನೂ ಮನಮೆಚ್ಚಿಸುವ ಒಡವೆಗಳನ್ನು ಹೊರತಂದಿರುವ ಇವರು ಸದ್ಯದಲ್ಲೇ ಪುರುಷರಿಗೂ ಒಪ್ಪುವ ಆಭರಣಗಳನ್ನು ಹೊರತರುವ ಯೋಜನೆ ಹೊಂದಿದ್ದಾರೆ.  

ನವರತ್ನಗಳ ಆಯ್ಕೆಗಳಲ್ಲೂ ಇವರಲ್ಲಿ ಎರಡು ಬಗೆಗಳಿವೆ, ಒಂದು ಸಾಮಾನ್ಯ ಮತ್ತೊಂದು ಅತ್ಯಮೂಲ್ಯ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಒಡವೆಗಳನ್ನು ರೂಪಿಸಲಾಗುತ್ತದೆ. 600 ರೂ ಇಂದ 6ಲಕ್ಷದವರೆಗೂ ಬೆಲೆಬಾಳುವ ಆಭರಣಗಳು ಇವರಲ್ಲಿ ದೊರೆಯುತ್ತದೆ. ಇವರೊಂದಿಗೆ ಸುಮಾರು 10 ಮಂದಿ ಈ ಕಸುಬಿನಲ್ಲಿ ತೊಡಗಿಕೊಂಡಿದ್ದಾರೆ.
 
ಒಡವೆ ತಯಾರಿಕೆಯ ಒಂದೊಂದು ಹಂತದ ಕೆಲಸಕ್ಕೂ ಒಬ್ಬೊಬ್ಬರು ನಿಗದಿಯಾಗಿರುತ್ತಾರೆ. ಕಳೆದ 2 ವರ್ಷಗಳಿಂದ ನಗರದ ನಂಟು ಇಟ್ಟುಕೊಂಡಿರುವ ಇವರಿಗೆ ಬೆಂಗಳೂರೆಂದರೆ ಬಹಳ ಇಷ್ಟವಂತೆ. ಇಲ್ಲಿ ಎಲ್ಲಾ ರೀತಿಯ ಗ್ರಾಹಕರೂ ಇದ್ದಾರೆ. ಬೆಂಗಳೂರಿಗರು ಅಲಂಕಾರ ಪ್ರಿಯರು, ಆದ್ದರಿಂದ ಇಲ್ಲಿ ಆಭರಣ ಸಂಗ್ರಹದ ಪ್ರದರ್ಶನವನ್ನು ಹಮ್ಮಿಕೊಂಡಿರುವುದು ಎನ್ನುತ್ತಾರೆ.ಇದೇ ಗುರುವಾರ ಮೇ 31ರಿಂದ ಜೂನ್ 2ರವರೆಗೆ ಚೇತನಾ ಅವರ ಆಭರಣ ಸಂಗ್ರಹದ ಪ್ರದರ್ಶನ ನಡೆಯಲಿದೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ. ಬೆಳಿಗ್ಗೆ 11ರಿಂದ 7ರವರೆಗೆ ಈ ಪ್ರದರ್ಶನ ಮುಕ್ತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT