ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಭವಿಷ್ಯ ಬಲಿ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸ್ಪಾಟ್‌ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಶಿಸ್ತು ಸಮಿತಿಯು ಎಸ್. ಶ್ರೀಶಾಂತ್, ಅಂಕಿತ್ ಚವಾಣ್ ಅವರಿಗೆ ಆಜೀವ ನಿಷೇಧ ಶಿಕ್ಷೆ ವಿಧಿಸಿರುವುದು ಉತ್ತಮ ಬೆಳವಣಿಗೆ. ಸ್ವತಃ ಬಿಸಿಸಿಐ ಈ ಕ್ರಮ ಕೈಗೊಂಡಿರುವುದನ್ನು ಗಮನಿಸಿದರೆ  ಹಗರಣದಲ್ಲಿ ಈ ಇಬ್ಬರೂ ಭಾಗಿಯಾಗಿರುವುದಕ್ಕೆ ಖಚಿತ ದಾಖಲೆಗಳಿವೆ ಎಂದೇ ಅರ್ಥ. ಐಪಿಎಲ್‌ನಲ್ಲಿ ವಂಚನೆ ನಡೆದಿದೆ ಎಂಬುದನ್ನು ಸ್ವತಃ ಬಿಸಿಸಿಐ ಒಪ್ಪಿಕೊಂಡಂತಾಯಿತು.

ಐಪಿಎಲ್ ಪಂದ್ಯಗಳ ವೇಳೆ ಕೋಟ್ಯಂತರ ಜನ ಮೋಸ ಹೋಗಿರುವುದೂ ಇದರಿಂದ ಸಾಬೀತಾಯಿತು. ಈ ಪ್ರಕರಣದಲ್ಲಿ ಇವರು ಮತ್ತು ಇನ್ನಿಬ್ಬರನ್ನು ತಪ್ಪಿತಸ್ಥರೆಂದು ಬಿಸಿಸಿಐ ನಿರ್ಧರಿಸಿದೆ. ಆದರೆ ಇಂತಹದ್ದೊಂದು ಹಗರಣದಲ್ಲಿ ಈ ನಾಲ್ವರಷ್ಟೇ ಅಲ್ಲ, ಇನ್ನೂ ಹಲವರು ಇರುವ ಸಾಧ್ಯತೆ ಇದೆ. ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಎರಡು ತಿಂಗಳ ಹಿಂದೆ ಚೆನ್ನೈ ಸೂಪರ್‌ಕಿಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನೂ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದರು.

ಆದರೆ ಅನುಮಾನದ ತೂಗುಕತ್ತಿಯ ಅಡಿಯಲ್ಲಿದ್ದ ರಾಜಸ್ತಾನ್ ರಾಯಲ್ಸ್, ಚೆನ್ನೈ ತಂಡಗಳು ಕಳಂಕಿತವಲ್ಲ ಎಂದು ಬಿಸಿಸಿಐ ಅವಸರದಲ್ಲಿಯೇ ತೀರ್ಮಾನಿಸಿಬಿಟ್ಟಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಬಿಸಿಸಿಐ ನಡೆದುಕೊಂಡಿದೆ. ಆಟಗಾರರ ಬಗ್ಗೆ ತೋರಿದ ನಿಷ್ಠುರ ನಿಲುವನ್ನೇ, ತಂಡಗಳ ಮಾಲೀಕರು ಮತ್ತು ಆಡಳಿತಗಾರರ ಬಗ್ಗೆಯೂ ಶಿಸ್ತು ಸಮಿತಿ ತೋರಿಸಬೇಕಿತ್ತು. ಹೀಗಾಗಿ ಆಟಗಾರರನ್ನಷ್ಟೇ ಬಲಿಪಶು ಮಾಡಲಾಯಿತೇ ಎಂಬ ಅನುಮಾನ ಕಾಡುವುದು ಸಹಜ. ದೆಹಲಿ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು ಅದು ಏನು ಹೇಳುತ್ತದೆ ಎನ್ನುವುದೂ ಮುಖ್ಯವಾಗುತ್ತದೆ.

ಒಂಬತ್ತು ವರ್ಷಗಳ ಹಿಂದೆ ನಾಗಪುರದಲ್ಲಿ ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ಟೆಸ್ಟ್‌ನಲ್ಲಿಯೇ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದ ಶ್ರೀಶಾಂತ್ ನಂತರ ಟೆಸ್ಟ್‌ಗಳಲ್ಲಿ, ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ಟ್ವೆಂಟಿ 20 ಟೂರ್ನಿಗಳಲ್ಲಿ ಭಾರತದ ಪರ ಎದ್ದು ಕಂಡಿದ್ದರು. ತಮ್ಮ ವೇಗದ ಬೌಲಿಂಗ್ ಮೋಡಿಯಿಂದ ರಾಷ್ಟ್ರೀಯ ತಂಡದ ಹಲವು ಗೆಲುವುಗಳಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಆದರೆ ಅತಿಯಾದ ಆವೇಶದ ವರ್ತನೆಯಿಂದ, ಬೇಜವಾಬ್ದಾರಿ ನಡೆಗಳಿಂದ ಹಲವು ಸಲ ಕಿರಿಕಿರಿ ಉಂಟು ಮಾಡಿದ್ದನ್ನೂ ಮರೆಯುವಂತಿಲ್ಲ. ಐಪಿಎಲ್‌ನ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡರೂ ಅಂಕಿತ್ ಚವಾಣ್ ಉತ್ತಮ ಆಲ್‌ರೌಂಡರ್ ಆಗಿ ಎತ್ತರಕ್ಕೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರು.

ಆದರೆ ಚಿಕ್ಕ ವಯಸ್ಸಿನ ಇವರಿಬ್ಬರೂ ವೈಭೋಗದ ಆಮಿಷಕ್ಕೆ ಸಿಲುಕಿ ತಮ್ಮ ಅತ್ಯುತ್ತಮ ಕ್ರೀಡಾ ಬದುಕನ್ನೇ ಹಾಳು ಮಾಡಿಕೊಂಡರು. ರಾಹುಲ್ ದ್ರಾವಿಡ್ ಅವರಂತಹ ಸರಳ, ಸಜ್ಜನಿಕೆಯ ನಾಯಕನ ನೆರಳಲ್ಲಿಯೇ ಶ್ರೀಶಾಂತ್ ಹಾದಿ ತಪ್ಪಿದ್ದೊಂದು ವಿಪರ್ಯಾಸ. ನಮ್ಮ ಪ್ರತಿಭಾವಂತ ಕಿರಿಯ ಆಟಗಾರರು ಸಾಮರ್ಥ್ಯ ವೃದ್ಧಿ ಮಾಡಿಕೊಂಡರಷ್ಟೇ ಸಾಲದು; ಸಚಿನ್, ದ್ರಾವಿಡ್, ಕುಂಬ್ಳೆಯವರಂತಹ ವ್ಯಕ್ತಿತ್ವವನ್ನೂ ಮೈಗೂಡಿಸಿಕೊಳ್ಳಬೇಕು ಎಂಬ ಸತ್ಯ ಶ್ರೀಶಾಂತ್ ಪ್ರಕರಣದಿಂದ ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT