ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆ ನಡಿಗೆಯಲ್ಲಿ ಶೌಚಾಲಯ ಯೋಜನೆ

Last Updated 8 ಅಕ್ಟೋಬರ್ 2011, 10:35 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಸರ್ಕಾರದ ಸಂಪೂರ್ಣ ಗ್ರಾಮ ನೈರ್ಮಲ್ಯ ಯೋಜನೆ ಗುರಿ ಮುಟ್ಟುವಲ್ಲಿ ಜಿಲ್ಲೆ ಸಂಪೂರ್ಣವಾಗಿ ಎಡವಿದ್ದು, ಯೋಜನೆ ಜಾರಿಯಾಗಿ ಅರ್ಧ ದಶಕ ಕಳೆದರೂ ಪ್ರಗತಿ ಮಾತ್ರ ನಿರಾಶದಾಯಕವಾಗಿದೆ.

ಜಿಲ್ಲಾ ಪಂಚಾಯಿತಿ ನೇರ ಉಸ್ತುವಾರಿಯಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಯೋಜನೆ ಅನುಷ್ಠಾನವಾಗುತ್ತಿದ್ದು, ಪ್ರತಿ ಮನೆಗೂ ಶೌಚಾಲಯ ಇರುವಂತೆ ನೋಡಿಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶ. ಆದರೆ ಯೋಜನೆ 2005ರ ಅಕ್ಟೋಬರ್ 2ರಂದು ಜಾರಿಯಾಗಿ ಇಲ್ಲಿಗೆ ಆರು ವರ್ಷ ಕಳೆಯುತ್ತಾ ಬಂದರೂ `ಸಂಪೂರ್ಣ ನೈರ್ಮಲ್ಯ~ದ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಜನರ ಆರೋಗ್ಯದ ದೃಷ್ಟಿಯಿಂದ ಬಯಲು ಶೌಚಾಲಯಕ್ಕೆ ಇತಿಶ್ರೀ ಹಾಕುವುದು ಅನಿವಾರ್ಯ. ಹೀಗಾಗಿ ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಹಾಯಧನ ಬಳಸಿಕೊಂಡು ಬೇರೆ ಜಿಲ್ಲೆಗಳು ಉತ್ತಮ ಪ್ರಗತಿ ಸಾಧಿಸುತ್ತಿದ್ದರೆ ಜಿಲ್ಲೆಯಲ್ಲಿ ಆಮೆ ನಡಿಗೆಯಂತೆ ಸಾಗಿದೆ.

ಸಂಪೂರ್ಣ ಸ್ವಚ್ಛತಾ ಯೋಜನೆಯಡಿ ಶೌಚಾಲಯ ನಿರ್ಮಾಣದ ಸಾಮಾಗ್ರಿಗಳ ಪೂರೈಕೆಯನ್ನು ಸರ್ಕಾರೇತರ ಸಂಸ್ಥೆಗೆ ಗುತ್ತಿಗೆ ನೀಡಿ ಭ್ರಷ್ಟಾಚಾರಕ್ಕೆ ಎಡೆ ಮಾಡಿದ ಆರೋಪದ ನಂತರ 110 ಗ್ರಾ.ಪಂ.ಗಳಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ತನಿಖೆ ನಂತರ ಯೋಜನೆಗೆ ಚಾಲನೆ ನೀಡಲಾಗಿದ್ದು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.

ಸ್ವಚ್ಛತೆಯಲ್ಲಿ ಸಂಪೂರ್ಣ ಸಾಧನೆ (ಪ್ರತಿ ಮನೆಗೂ ಶೌಚಾಲಯ ಮಾತ್ರವಲ್ಲದೆ ಊರಿನ ರಸ್ತೆಗಳ ಸ್ವಚ್ಛತೆ, ಚರಂಡಿ, ಪ್ಲಾಸ್ಟಿಕ್ ನಿಷೇಧ ಮುಂತಾದವುಗಳು) ಮಾಡಿದ ಗ್ರಾ.ಪಂ.ಗಳನ್ನು ಯೋಜನೆಯಡಿ `ನಿರ್ಮಲ ಗ್ರಾಮ~ ಎಂದು ಗುರುತಿಸಿ ರಾಷ್ಟ್ರಮಟ್ಟದ ಪುರಸ್ಕಾರ ನೀಡಲಾಗುತ್ತದೆ. ಗ್ರಾ.ಪಂ. ಮಾತ್ರವಲ್ಲದೆ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೂ ಈ ಪುರಸ್ಕಾರ ನೀಡಲಾಗುತ್ತದೆ. ಆದರೆ ಪುರಸ್ಕಾರ ಪಡೆಯುವುದಿರಲಿ ಸರಿಯಾಗಿ ಶೌಚಾಲಯ ಕಟ್ಟಲೂ ಸಾಧ್ಯವಾಗಿಲ್ಲ.

ಯೋಜನೆಯಡಿ ಬಡ ಕುಟುಂಬಗಳಿಗೆ ರೂ. 3700, ಎನ್‌ಆರ್‌ಇಜಿ ಅಡಿ 90 ದಿನಗಳ ಕಾರ್ಮಿಕ ದಿನ ಬಳಕೆಗೆ ಅವಕಾಶವಿದೆ. ಹೀಗಿದ್ದೂ ಜಿಲ್ಲೆಯಲ್ಲಿ ಈವರೆಗೂ ಅರ್ಧದಷ್ಟು ಬಡ ಕುಟುಂಬಗಳಿಗೂ ಶೌಚಾಲಯ ಕಲ್ಪಿಸಿಲ್ಲ. ಜಿಲ್ಲೆಗೆ ರೂ. 85 ಕೋಟಿ ಯೋಜನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ ಮೊದಲ ಕಂತು ರೂ. 17 ಕೋಟಿ ಬಿಡುಗೆ ಮಾಡಿತ್ತು. ಇದರಲ್ಲಿ ಈವರೆಗೂ ರೂ. 11 ಕೋಟಿಯನ್ನಷ್ಟೇ ಬಳಸಿಕೊಳ್ಳಲಾಗಿದೆ.

ದೇಶದಲ್ಲಿ ಮೊದಲ ನಿರ್ಮಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಗುರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬಹುತೇಕ ಪ್ರಗತಿ ಸಾಧಿಸಿರುವ ಜಿಲ್ಲೆಗಳಲ್ಲಿ ಜನರ, ಸಂಘ, ಸಂಸ್ಥೆ ಹಾಗೂ ಶಾಲಾ ಮಕ್ಕಳ ಸಹಭಾಗಿತ್ವದಲ್ಲಿ ಯೋಜನೆ ಯಶಸ್ವಿಯಾಗುವಂತೆ ನೋಡಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನೀರು ನೈರ್ಮಲ್ಯ ಸಮಿತಿ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲವಾಗಿದೆ.

ಜಿಲ್ಲೆಯ 312 ಗ್ರಾ.ಪಂ.ಗಳ ಪೈಕೆ ಇಲ್ಲಿವರೆಗೂ ಹೆಗ್ಗೆರೆ, ಗುಬ್ಬಿ ತಾಲ್ಲೂಕಿನ ಚೇಳೂರು, ಶಿರಾ ತಾಲ್ಲೂಕಿನ ತರೂರು, ತಿಪಟೂರು ತಾಲ್ಲೂಕಿನ ನೊಣವಿನಕೆರೆ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾ.ಪಂ. ನಿರ್ಮಲ ಗ್ರಾಮ ಪುರಸ್ಕಾರ ಪಡೆದಿವೆ. ಯೋಜನೆ ಜಾರಿಯಾಗಿ ಆರು ವರ್ಷ ಸಂದರೂ ಕನಿಷ್ಠ ವರ್ಷಕ್ಕೆ ಒಂದು ಗ್ರಾಮ ಪಂಚಾಯಿತಿಯೂ ನಿರ್ಮಲ ಪುರಸ್ಕಾರ ಪಡೆದಿಲ್ಲ.

ನೀರಿನ ಅಭಾವ, ಜಾಗದ ಕೊರತೆಯೂ ಕೂಡ ಶೌಚಾಲಯ ಕಟ್ಟಲು ಜನರು ಹಿಂದೇಟು ಹಾಕಲು ಕಾರಣ ಎಂಬ ವಾದ ಕೇಳಿಬರುತ್ತಿದೆ. ಅಲ್ಲದೆ ಗ್ರಾ.ಪಂ. ಕಾರ್ಯದರ್ಶಿ, ಅಧ್ಯಕ್ಷರು ಮನೆ ಬಾಗಿಲಿಗೆ ಹೋಗಿ ಫಲಾನುಭವಿಗಳನ್ನು ಗುರುತಿಸುತ್ತಿಲ್ಲ. ಬದಲಿಗೆ ಜನರೆ ಯೋಜನೆ ಲಾಭ ಪಡೆಯಲು ಗ್ರಾ.ಪಂ.ಗೆ ಅಲೆಯುವಂಥ ಸ್ಥಿತಿ ಇದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಶೌಚಾಲಯ ಕಟ್ಟಿಕೊಳ್ಳಲು ಯಾವುದೇ ಸಹಾಯ ಧನ ನೀಡುವುದಿಲ್ಲ. ಹೀಗಾಗಿ ಈ ಕುಟುಂಬಗಳ ಮನವೊಲಿಸಿ ಶೌಚಾಲಯ ಕಟ್ಟಿಕೊಳ್ಳುವಂತೆ ಮಾಡಬೇಕು. ಈ ಸಂಬಂಧ ಜನ ಜಾಗೃತಿ ಮೂಡಿಸಬೇಕು. ಆದರೆ ಜಿಲ್ಲೆಯಲ್ಲಿ ಈ ಸಂಬಂಧ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಿಗೆ `ಜಾಗೃತಿ~ ಇಲ್ಲವಾಗಿದೆ ಎನ್ನುತ್ತಾರೆ ಪದ್ಮರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT