ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿಯಲ್ಲಿ ಆಡಳಿತ ಭವನ ಕಾಮಗಾರಿ

Last Updated 9 ಜೂನ್ 2011, 7:35 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದ ಮಂಗಸಂದ್ರ ಬಳಿ ಬೆಂಗಳೂರು ವಿಶ್ವವಿದ್ಯಾಲಯ  ಸ್ನಾತಕೋತ್ತರ ಕೇಂದ್ರದ ಆಡಳಿತ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ. ಆದರೆ ಅಲ್ಲಿಗೆ ತೆರಳಲು ವಿದ್ಯಾರ್ಥಿ- ಸಿಬ್ಬಂದಿ ಮೂರು ತಿಂಗಳು ಕಾಯಬೇಕಿದೆ.

ಇತ್ತೀಚೆಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಪರಿಣಾಮ ಎಚ್ಚೆತ್ತ ವಿಶ್ವವಿದ್ಯಾಲಯ ಮತ್ತೆ ಕಾಮಗಾರಿ ಆರಂಭಿಸುವಂತೆ ಕೆಲವೇ ದಿನಗಳ ಹಿಂದೆ ಗುತ್ತಿಗೆದಾರರಿಗೆ ಪತ್ರ ಬರೆದಿದೆ. ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ.

ವಿಶ್ವವಿದ್ಯಾಲಯದ ಎಂಜಿನಿಯರುಗಳ ನಡುವಿನ ವೈಮನಸ್ಸಿನ ಪರಿಣಾಮ ಕಾಮಗಾರಿ ನೆನಗುದಿಗೆ ಬಿದ್ದಿತ್ತು ಎನ್ನಲಾಗಿದ್ದು, ಉಸ್ತುವಾರಿ ನೋಡಿಕೊಳ್ಳುವಂತೆ ಕುಲಸಚಿವರಿಗೆ ಸೂಚಿಸ ಲಾಗಿದೆ. ಅಲ್ಲದೆ, ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವಂತೆ ಕುಲಪತಿಗಳು ಹಣಕಾಸು ಅಧಿಕಾರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೊಠಡಿ, ಶೌಚಾಲಯ, ಗ್ರಂಥಾಲಯ, ನೀರು ಸೇರಿದಂತೆ ಎಲ್ಲ ಮೂಲಸೌಕರ್ಯ ಕೊರತೆಯಿಂದ ಕಳೆದ 13 ವರ್ಷದಿಂದ ಬಳಲುತ್ತಿರುವ ಸ್ನಾತಕೋತ್ತರ ಕೇಂದ್ರವನ್ನು ಸದ್ಯಕ್ಕೆ ಬಹುತೇಕ ಪೂರ್ಣಗೊಂಡಿರುವ ಆಡಳಿತ ಸಂಕೀರ್ಣಕ್ಕೆ ಸ್ಥಳಾಂತರಿಸಿದರೆ ಕೊಂಚ ಉಸಿರಾಡಬಹುದು ಎಂಬುದು ಕೇಂದ್ರದ ಸಿಬ್ಬಂದಿ ನುಡಿ.

ನಿಧಾನಗತಿ: `ಆಡಳಿತ ಸಂಕೀರ್ಣದಲ್ಲಿ ವಾಟರ್‌ಪ್ರೂಫಿಂಗ್, ಛಾವಣಿ ಕೆಲಸ, ಬಣ್ಣ ಹೊಡೆಯುವುದು, ನೆಲಗಾರೆ ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಶೀಘ್ರ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಚರಂಡಿ ನಿರ್ಮಾಣ ಕಾಮಗಾರಿಯನ್ನೂ ಇದೇ ವಾರದಲ್ಲಿ ಆರಂಭಿಸಲಾಗುವುದು. ಇನ್ನಷ್ಟು ಕೆಲಸಗಾರರನ್ನು ನಿಯೋಜಿಸಲಾಗುವುದು~ ಎಂದು ಸಿಬ್ಬಂದಿ `ಪ್ರಜಾವಾಣಿ~ಗೆ ತಿಳಿಸಿದರು.

`ಒಟ್ಟಾರೆ ಯೋಜನೆಯನ್ನು ಮುಂದುವರಿಸಿ ಎಂದು ತಿಳಿಸಿ ವಿಶ್ವವಿದ್ಯಾಲಯ ಪತ್ರವನ್ನು ನೀಡಿದೆ. ಆಡಳಿತ ಸಂಕೀರ್ಣವನ್ನು 3 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಆ ಹೊತ್ತಿಗೆ ಶೈಕ್ಷಣಿಕ ಸಂಕೀರ್ಣದ ಮೇಲ್ಛಾವಣಿ ಕೆಲಸವನ್ನೂ ಪೂರ್ಣಗೊಳಿಸಲು ಯತ್ನಿಸಲಾಗುವುದು. ಬಾಕಿ ಹಣವನ್ನು ನೀಡಿದರೆ ಒಂದೂವರೆ ವರ್ಷದಲ್ಲಿ ಎಲ್ಲ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುವುದು~ ಎಂದು ಗುತ್ತಿಗೆದಾರರಿಂದ ನಿಯೋಜಿತರಾದ ವ್ಯವಸ್ಥಾಪಕ ಬಸವರಾಜು ತಿಳಿಸಿದ್ದಾರೆ.

ವಿಳಂಬ ನೀತಿ: ನಾಲ್ಕು ವರ್ಷದ ಹಿಂದೆ ಸರ್ಕಾರ ಕೇಂದ್ರಕ್ಕೆಂದು ಮಾಲೂರು ರಸ್ತೆಯ ಮಂಗಸಂದ್ರ ಬಳಿ 30 ಎಕರೆ ಜಮೀನು ಮಂಜೂರು ಮಾಡಿತ್ತು. 11 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ 2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷದ ಗಡುವು ಕೂಡ ನಿಗದಿಯಾಗಿತ್ತು.

ಸ್ಥಳ ಬಳಕೆಗೆ ಸಂಬಂಧಿಸಿ ಅರಣ್ಯ ಇಲಾಖೆಯ ಆಕ್ಷೇಪದ ನಡುವೆ ಜಮೀನನ್ನು 2008ರಲ್ಲಿ ಗುತ್ತಿಗೆದಾರರಿಗೆ ನೀಡಲಾಗಿತ್ತು. ಜೊತೆಗೆ ವಿಶ್ವವಿದ್ಯಾಲಯವು ಕಟ್ಟಡದ ಸಮಗ್ರ ವಿನ್ಯಾಸ (ಡ್ರಾಯಿಂಗ್) ಮಾಹಿತಿಯನ್ನು ನೀಡಲೂ ವಿಳಂಬ ಮಾಡಿತ್ತು. ಈ ವಿಳಂಬದ ನಡುವೆಯೂ ಗುತ್ತಿಗೆದಾರರು ಆಡಳಿತ ಸಂಕೀರ್ಣವನ್ನು ಬಹುತೇಕ ನಿರ್ಮಿಸಿದ್ದರು. ನಂತರದ ನಿರ್ಮಾಣಕ್ಕೆ ಅಗತ್ಯ ಡ್ರಾಯಿಂಗ್‌ಗಳಿಗಾಗಿ ಮನವಿ ಸಲ್ಲಿಸಿದ್ದರು. ಆದರೆ ಪ್ರಯೋಜನವಾಗಲಿಲ್ಲ.

ಒಪ್ಪಂದದ ಪ್ರಕಾರ 2010ರ ನವೆಂಬರ್‌ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಗೊಳ್ಳಬೇಕಿತ್ತು. ಗುತ್ತಿಗೆಯ ಅವಧಿ ಮುಗಿದಿರುವುದರಿಂದ ಮುಂದಿನ ಕಾಮಗಾರಿಗೆ ಪ್ರಸ್ತುತ ಮಾರುಕಟ್ಟೆ ದರವನ್ನು ನಿಗದಿ ಮಾಡಬೇಕು ಎಂಬ ಮನವಿಯನ್ನೂ ಅವರು ವಿ.ವಿ.ಗೆ ಸಲ್ಲಿಸಿದ್ದರು. ಅದಕ್ಕೆ ವಿಶ್ವವಿದ್ಯಾಲಯ ಸ್ಪಂದಿಸಿರಲಿಲ್ಲ. ಈ ವಿಳಂಬ ನೀತಿಯ ಪರಿಣಾಮ ವಾಗಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT