ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

.ಆಮೆಗತಿಯಲ್ಲಿ ನಿರಂತರ ಜ್ಯೋತಿ

Last Updated 15 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನ ಜನರ ಬಹುದಿನದ ಬೇಡಿಕೆಯಾದ ‘ನಿರಂತರ ಜ್ಯೋತಿ’ ಯೋಜನೆ ವಿವಿಧ ಕಾರಣಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.ಗ್ರಾಮೀಣ ಪ್ರದೇಶ ಮತ್ತು ಪಟ್ಟಣಕ್ಕೆ ನಿರಂತರ 24 ತಾಸು ವಿದ್ಯುತ್ ಪೂರೈಕೆಯ ಮಹತ್ವಾಕಾಂಕ್ಷಿ ‘ನಿರಂತರ ಜ್ಯೋತಿ’ ಯೋಜನೆ ಕಾಮಗಾರಿ ಪ್ರಾರಂಭವಾಗಿ ವರ್ಷ ಕಳೆದರೂ ಇದುವರೆಗೆ ಪೂರ್ಣಗೊಂಡಿಲ್ಲ. 102 ಹಳ್ಳಿಗಳಿಗೆ ವಿದ್ಯುತ್ ಪೂರೈಸುವ ಈ ಕಾಮಗಾರಿ 325 ಕಿ.ಮೀ. ಅಂತರದ ಹೊಸ ವಿದ್ಯುತ್ ಲೈನ್ ಹಾಗೂ 9 ಫೀಡರ್‌ಗಳಿಗೆ ಹೊಸ ಮಾರ್ಗ ನಿರ್ಮಿಸಲಾಗುತ್ತಿದೆ. ರೂ. 10.61 ಕೋಟಿ ವೆಚ್ಚದ, 11 ಕೆ.ವಿ. ಸಾಮರ್ಥ್ಯದ ಈ ಯೋಜನೆಯ ಕಾಮಗಾರಿಯನ್ನು ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಕಾಮಗಾರಿ ನಿರ್ವಹಣೆಯನ್ನು ಬೆಂಗಳೂರು ಮೂಲದ ‘ಟ್ರಾನ್ಸ್ ಗ್ಲೋಬಲ್’ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ ಹುಬ್ಬಳ್ಳಿಯ ಮತ್ತೊಂದು ಸಂಸ್ಥೆಗೆ ಉಪ ಗುತ್ತಿಗೆ ನೀಡಿದೆ.
 
‘ನಿರಂತರ ಜ್ಯೋತಿ ಕಾಮಗಾರಿ ಹಲವು ಕಾರಣಗಳಿಗಾಗಿ ಸ್ವಲ್ಪ ವಿಳಂಬವಾಗಿದೆ. ವಿದ್ಯುತ್ ಕಂಬ ಹಾಗೂ ಲೈನ್ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ನಿಯಮದಂತೆ 15 ಮೀ. ರಸ್ತೆ ಅಂಚಿನ ಆಚೆ ಕಂಬ ಹಾಕಬೇಕಾಗುತ್ತದೆ. ಹೊಲಗಳಲ್ಲಿ ಕಂಬ ಹಾಕಲು ರೈತರು ಒಪ್ಪುತ್ತಿಲ್ಲ. ಅಲ್ಲದೇ, ಅರಣ್ಯ ಪ್ರದೇಶದಲ್ಲಿ ಲೈನ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಮ್ಮತಿ ನೀಡುತ್ತಿಲ್ಲ. ಹೀಗಾಗಿ ಸಕಾಲದಲ್ಲಿ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರು ಅಸಹಾಯಕರಾಗಿದ್ದಾರೆ ಎಂದು ಬೆಸ್ಕಾಂ ಎಇಇ ಜಿ. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

 ‘ಗುತ್ತಿಗೆದಾರರಿಂದಲೂ ಕೆಲವು ಲೋಪಗಳಾಗಿವೆ. ಕಂಬದಿಂದ ಕಂಬಕ್ಕೆ 50 ಮೀ ಅಂತರವಿರಬೇಕು ಎಂಬ ನಿಯಮ ಮೀರಿ ಕಡಿಮೆ ಅಂತರದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಂಬಗಳನ್ನು ನೆಡಲಾಗಿದೆ. ಕೂಲಿ ಕಾರ್ಮಿಕರ ಕೊರತೆ ಸಹ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಂದ ತಾಲ್ಲೂಕಿನ ಮಲೆಮಾಚಿಕೆರೆ, ಗುರುಸಿದ್ದಾಪುರ, ಚಿಕ್ಕಅರಕೆರೆ, ರಸ್ತೆ ಮಾಕುಂಟೆ ಪ್ರದೇಶದಲ್ಲಿ ಕಾಮಗಾರಿ ತೀವ್ರ ವಿಳಂಬವಾಗಿದೆ’ ಎಂದು ಅವರು ವಿವರಿಸಿದರು.

ರಾತ್ರಿ ಹೆಚ್ಚು ವಿದ್ಯುತ್: ಪಲ್ಲಾಗಟ್ಟೆ ಗ್ರಾಮದ 6.3 ಎಂ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಪ್ರಸ್ತುತ  ಹೆಚ್ಚು ಒತ್ತಡ ಬೀಳುತ್ತಿದೆ. ರಾತ್ರಿ ಸಮಯದಲ್ಲಿ 2 ತಾಸು 3 ಫೇಸ್ ಪೂರೈಸಲಾಗುತ್ತಿದೆ. ಈ ಭಾಗದ ರೈತರ ಸಮಸ್ಯೆ ಪರಿಹಾರಕ್ಕಾಗಿ ರಾತ್ರಿ ಸಮಯದಲ್ಲಿ 4 ತಾಸು 3 ಫೇಸ್ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಇಇ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT