ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ: ಅನಗತ್ಯ ಶಂಕೆ

Last Updated 20 ಫೆಬ್ರುವರಿ 2011, 16:25 IST
ಅಕ್ಷರ ಗಾತ್ರ

ನಾಗೇಶ್ ಹೆಗಡೆಯವರ ಲೇಖನ ‘ಆರೋಗ್ಯಕ್ಕೆ ಅಪಾಯ ತರಬಲ್ಲ ಆಯುರ್ವೇದ’ (ಫೆ. 10) ಎನ್ನುವ ವಿಷಯಕ್ಕೆ ಪ್ರತಿಕ್ರಿಯೆ.
ಈ ಲೇಖನ ಭಾರತೀಯ ವೈದ್ಯ ಪದ್ಧತಿಯ ತತ್ವಗಳನ್ನೇ ತಳ್ಳಿಹಾಕಿದಂತಿದೆ. ಯಾವುದೇ ಇಂತಹ ಅಭಿಮತಕ್ಕೆ ಸಾಕಷ್ಟು ಆಧಾರ, ಅಂಕಿ ಅಂಶ ಹೆಚ್ಚಾಗಿ ಸಂಶೋಧನಾತ್ಮಕ ಹಿನ್ನೆಲೆ ಅವಶ್ಯ. ಆಯುರ್ವೇದ ಹುಟ್ಟಿ ಅರಳಿದ್ದು ಭಾರತದಲ್ಲಿ. ಐರೋಪ್ಯ ದೇಶಗಳು ಇದನ್ನು ಮಾನ್ಯ ಮಾಡಿಲ್ಲ ಎನ್ನುವ ಸಂಗತಿ ಬಗ್ಗೆ ನಾವು ಕಳವಳ ಪಡಬೇಕೆ? ಆಯುರ್ವೇದದ ಬಗ್ಗೆ ಅಧ್ಯಯನ ಮಾಡಿ, ಸತ್ಯಾಸತ್ಯತೆಯನ್ನು ಮನಗಂಡು ತುಂಬಾ ವಿಸ್ತಾರವಾಗಿ ರೋಗ ಪರಿಚಯಿಸುವ, ಚಿಕಿತ್ಸಿಸುವ ಸಂಶೋಧನಾ ವಿಚಾರವನ್ನು ಶ್ಲೋಕ ರೂಪದಲ್ಲಿ ಬರೆದ ಮಹಂತರ ಬಗ್ಗೆ ಅಲ್ಪಭಾವನೆ ತಾಳುವುದು ಸರಿಯಲ್ಲ.

 ಬೇರು, ಬೊಗಟೆ, ಕಷಾಯ... ಇತ್ಯಾದಿಗಳಲ್ಲಿ ಕಲಬೆರಿಕೆ ಮಾಡಿ ದಂಧೆ ಮಾಡುವ ಕಂಪೆನಿಗಳ ಬಗ್ಗೆ ತೀವ್ರ ನಿಗಾ ಇಡುವ ಕಾರ್ಯ ಯಾರದು? ಇದು ರೋಗಿಯ ಕೆಲಸವೇ? ಡಾಕ್ಟರ್ ಕೆಲಸವೇ? ಯಾವ ಯಾವ ಔಷಧದಲ್ಲಿ ಏನೇನಿದೆ, ಎಷ್ಟೆಷ್ಟಿದೆ ಎನ್ನುವ ಅಂಶಗಳನ್ನು ಗುಣಾತ್ಮಕವಾಗಿ ಪರಿಶೀಲಿಸಿ ಮಾರುಕಟ್ಟೆಗೆ ಬಿಡುವುದು ಜವಾಬ್ದಾರಿಯುತ ಕೆಲಸ. ಇದರಲ್ಲಿ ಬೇಜಾವಾಬ್ದಾರಿತನ, ನುಣುಚಿಕೊಳ್ಳುವ ಕಾರ್ಯತಂತ್ರ ಭ್ರಷ್ಟತೆಯನ್ನು ತೋರುವ ಕೆಲಸ ಸಾಧುವಲ್ಲ.

ಔಷಧ ಅಂಶಗಳಿಗಿಂತ ನಂಜಿನ ಅಂಶಗಳು ಹೆಚ್ಚಿರದಂತೆ ಸಂಸ್ಕರಣೆ ಮಾಡಿ ಹೊರಬಿಡಬೇಕು, ಕಲಬೆರಿಕೆ ಮಾಡಿ ಹಣ ಮಾಡುವ ಸಂಸ್ಥೆಗಳು ನೀಡುವ ಲಂಚಕ್ಕೆ ಮೊರೆ ಹೋದಲ್ಲಿ ಆಯುರ್ವೇದವೇಕೆ ಆಲೋಪತಿ, ಹೋಮಿಯೋಪತಿ... ಮುಂತಾದ ಪದ್ಧತಿಗಳೂ ಈ ಧನಪತಿಗಳ ಮುಂದೆ ನಿಷ್ಪ್ರಯೋಜಕ, ನಿರರ್ಥಕ, ಈ ನಂಜಿಗೆ ಹಣ ತಿನ್ನುವ ಅಧಿಕಾರಿಗಳು ಕಾರಣವಾಗಬಹುದೇ ಹೊರತು ವೈದ್ಯ ಪದ್ಧತಿ ಅಲ್ಲ.

ಇನ್ನು ಜನ ಸಾಮಾನ್ಯರು ತಿಳಿದಂಥವರೂ ಸಹಾ ಇಂದಿಗೂ ನೇರವಾಗಿ ಯಾವುದೇ ಅಧಿಕೃತ ಪದವಿ ಪಡೆಯದೇ ಇರುವ ನಕಲಿ ವೈದ್ಯರ ಹತ್ತಿರ ಹೋಗಿ ತಮ್ಮ ಅಸ್ವಸ್ಥತೆಯನ್ನು ಹೇಳಿಕೊಂಡು ಹಣ ಚೆಲ್ಲಿ ಬರುವವರ ಸಂಖ್ಯೆಯೇನು ಕಡಿಮೆ ಇಲ್ಲ. ಅಧಿಕೃತವಾದ ಪದವಿ ಪಡೆದು ಅಧಿಕೃತ ಪದ್ಧತಿಯಲ್ಲಿ ಚಿಕಿತ್ಸೆ ಮಾಡಬೇಕು ಎನ್ನುವ ನಿಯಮಕ್ಕೆ ನಾವು ಅಂಟಿಕೊಂಡಿಲ್ಲ! ಇದೊಂದು ವಿಪರ್ಯಾಸವಲ್ಲವೇ?

ಸಾವಿರಾರು ಔಷಧಗಳ ಗುಣಾತ್ಮಕ ವಿಶ್ಲೇಷಣೆ ಮಾಡಿ ನಿಖರವಾದ Composition ಗಳನ್ನು ಹೊಂದಿರುವ ಔಷಧಿಗಳು ಆಯಾ ಪದ್ಧತಿಯಲ್ಲಿ ಸಮಾಜಕ್ಕೆ ಬರಬೇಕು. ಈ ಕೆಲಸ ಮಾಡದೇ ಆಯುರ್ವೇದ ಆರೋಗ್ಯಕ್ಕೆ ಅಪಾಯ ಎನ್ನುವ ಅಭಿಮತ ಖಂಡಿತ ತಪ್ಪು. ಸನ್ಮಾರ್ಗಕ್ಕೆ ಎಲ್ಲರೂ ಕೈಜೋಡಿಸಬೇಕು. ತಪ್ಪಿತಸ್ಥರನ್ನು ನಿರ್ಭಿಡೆಯಿಂದ ಶಿಕ್ಷಿಸಬೇಕು. ಕಾಯಿಲೆ ಇಲ್ಲದಿದ್ದಾಗ ಆಯುರ್ವೇದದ ಔಷಧ ಪದ್ಧತಿ ಅನುಸರಿಸಿ, ಕಾಯಿಲೆ ಬಂದಾಗ ಅಲೋಪಥಿಯನ್ನು ನಂಬಿ - ಎಂದು ಹೇಳುವ ಡಾ. ವಾಮನ ಆಚಾರ್ಯ ಅವರ ಅಭಿಮತ ಅವರಿಗಷ್ಟೆ ಅನ್ವಯ.

ದೋಷವಿದ್ದಲ್ಲಿ ದೋಷ ಎಲ್ಲಿದೆ ಎಂದು ಹೇಳಬೇಕೇ ವಿನಹಃ ಇಂಥ ಅಭಿಪ್ರಾಯಗಳನ್ನು ನೀಡಿ ಸಮಾಜವನ್ನು ತಪ್ಪು ದಾರಿಗೆ ಎಳೆಯಬಾರದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT