ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ವೈದ್ಯರ ಶ್ವಾನ ಪ್ರೀತಿ

Last Updated 27 ಮಾರ್ಚ್ 2011, 10:10 IST
ಅಕ್ಷರ ಗಾತ್ರ

ಗೋಕಾಕ: ಸಾಧಿಸುವ ಛಲವಿದ್ದರೆ ಸಾಧನೆ ಮಾಡಲು ಯಾವುದೂ ಅಸಾಧ್ಯವಲ್ಲ. ಸಾಧನೆ ಮಾಡಲು ಹಲವಾರು ಮಾರ್ಗಗಳಿದ್ದರೂ ಸಾಧನೆ ಮಾಡುವವರ ಸಂಖ್ಯೆ ವಿರಳ. ಆದರೆ ಗೋಕಾಕಿನ ಡಾ. ಆರ್.ಜಿ. ಪಾಟೀಲ ಇದಕ್ಕೆ ಅಪವಾದವಾಗಿದ್ದಾರೆ.
 

ವೃತ್ತಿಯಲ್ಲಿ ಆಯುರ್ವೇದ್ಯ ವೈದ್ಯರಾಗಿರುವ ಡಾ. ರಾಜನಗೌಡ ಪಾಟೀಲ ಅವರು ಸಾಧನೆಗಾಗಿ ಆಯ್ಕೆ ಮಾಡಿಕೊಂಡಿರುವ ಗುಣಮಟ್ಟದ ಶ್ವಾನ ತಳಿವೃದ್ಧಿ ಮತ್ತು ಅವುಗಳ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವ ಹವ್ಯಾಸ.

ಕಳೆದ ಸುಮಾರು 20 ವರ್ಷಗಳಿಂದ ಶ್ವಾನ ಬೆಳೆಸಿ ತರಬೇತಿ ನೀಡುತ್ತಿರುವ ಅವರು, ಜರ್ಮನ್ ಶೆಫರ್ಡ್ ತಳಿಯ ತರಬೇತಿಯಲ್ಲಿ ನಿಪುಣತೆ ಸಾಧಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಧಾರವಾಡ ಕೃಷಿ ಮೇಳದ ಶ್ವಾನ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಪಾಟೀಲ ನಿರಂತರವಾಗಿ ಈ ಕೃಷಿ ಮೇಳದಲ್ಲಿ ಪಾಲ್ಗೊಂಡು ಬಹುಮಾನ ಪಡೆಯುತ್ತಿರುವುದು ವಿಶೇಷವಾಗಿದೆ.
 

ಶ್ವಾನ ಪ್ರದರ್ಶನದಲ್ಲಿ ನಿರಂತರವಾಗಿ ಪಾಲ್ಗೊಂಡು ಹಲವಾರು ಬಹುಮಾನಗಳನ್ನು ಗಳಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲೂ ಅವರಿಂದ ತರಬೇತಿ ಪಡೆದ ಋತುರಾಜ ಕೆನಲ್ ಜಾತಿಗೆ ಸೇರಿದ ಶ್ವಾನಗಳು ಬಹುಮಾನ ಪಡೆದುಕೊಂಡಿವೆ.
 

ಸದ್ಯ ಋತುರಾಜ್ ಕೆನೆಲ್ ಎಂಬ ಶ್ವಾನ ಸಾಕಾಣಿಕೆ ಹಾಗೂ ಮರಿಗಳ ಮಾರಾಟ ಕೇಂದ್ರ ಆರಂಭಿಸಿದ್ದಾರೆ. ಚೆನ್ನೈ ಮೂಲದ ಕೆನೆಲ್ ಕ್ಲಬ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇಲ್ಲಿನ ವೈಶಿಷ್ಟವೆಂದರೆ ಖರೀದಿಸಿದ ಶ್ವಾನಗಳ ತಳಿ, ಪ್ರಮಾಣ ಪತ್ರ ಮತ್ತು ಉತ್ತಮ ತಳಿಯೆಂದು ಮೈಕ್ರೋ ಚಿಪ್ ಸಹ ನೀಡಲಾಗುತ್ತದೆ.
 

ಗೋಕಾಕ ನಗರದ ವೈದ್ಯ ಕೌಶಿಕ್ ಅವರೊಂದಿಗೆ ಶ್ವಾನ ತರಬೇತಿಯ ಹವ್ಯಾಸ ಬೆಳೆಸಿಕೊಂಡಿರುವ ಡಾ. ಪಾಟೀಲ, ಈವರೆಗೆ ಕನಿಷ್ಠ 30 ರಿಂದ 35 ಶ್ವಾನಗಳನ್ನು ಮಾರಾಟ ಮಾಡಿದ್ದು. ದಿಲ್ಲಿಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೋರ್ಸ್‌ನ ಅಧಿಕಾರಿಗಳು ಅವರಿಂದ ಶ್ವಾನ ಖರೀದಿ ಮಾಡಿರುವುದು ವಿಶೇಷವಾಗಿದೆ.
 

ಬೆಳಗಾವಿಯ ಹಿಂದಿನ ಜಿಲ್ಲಾಧಿಕಾರಿ ಡಾ. ರವಿಶಂಕರ ಹಾಗೂ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಪೊಲೀಸ್ ಇಲಾಖೆ, ಭಾರತೀಯ ಸೇನೆ ಕೂಡಾ ಅವರಿಂದ ಶ್ವಾನ ಖರೀದಿಸಿವೆ.
 

ಈಚೆಗೆ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ‘ಕೊಲ್ಲಾಪೂರ ಕೆನಲ್ ಕ್ಲಬ್ ಪ್ರದರ್ಶನ’ದಲ್ಲಿ ಅವರ ನಾಯಿಗೆ ಅತ್ಯುತ್ತಮ ಶ್ವಾನ ಪ್ರಶಸ್ತಿ, ಜರ್ಮನ್ ಶೆಫರ್ಡ್ ತಳಿಯ ರಾಣಿ ನಾಮದ ಶ್ವಾನ ಪ್ರಥಮ ಸ್ಥಾನ ಹಾಗೂ ಚಾಲೆಂಜ್ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
 

ಶ್ವಾನ ತರಬೇತಿಯ ತಮ್ಮ ಹವ್ಯಾಸದ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಪಾಟೀಲ ಅವರು, ಉತ್ಕೃಷ್ಟ ತಳಿಯನ್ನು ಜನತೆಗೆ ಪರಿಚಯಿಸಿ, ಉತ್ತರ ಕರ್ನಾಟಕದಲ್ಲಿ ಶ್ವಾನ ಪ್ರೇಮಿಗಳ ಸಂಖ್ಯೆ ಹೆಚ್ಚಿಸುವುದು ಗುರಿ ಇದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT