ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ,ಯೋಗ ಚಿಕಿತ್ಸಾ ಪದ್ಧತಿ:ರಾಮದೇವ್ ವಿಶ್ವಾಸ

Last Updated 15 ಏಪ್ರಿಲ್ 2011, 5:30 IST
ಅಕ್ಷರ ಗಾತ್ರ

ಮೈಸೂರು: ‘ಇನ್ನು 20 ವರ್ಷಗಳಲ್ಲಿ ಭಾರತದಲ್ಲಿ ಆಯುರ್ವೇದ ಮತ್ತು ಯೋಗ ಚಿಕಿತ್ಸಾ ಪದ್ಧತಿಯಾಗಲಿದೆ’ ಎಂದು ಹರಿದ್ವಾರ ದಿವ್ಯಯೋಗಮಂದಿರದ ಸ್ವಾಮಿ ಬಾಬಾ ರಾಮ್‌ದೇವ್ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು.

ಲಲಿತ ಮಹಲ್ ಹತ್ತಿರ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಗಳ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತೀಯ ಪುರಾತ ನ ವೈದ್ಯಪದ್ಧತಿಯಾಗಿರುವ ಆಯುರ್ವೇದವು ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಥೈರಾಯಿಡ್, ಕಿಡ್ನಿ ವೈಫಲ್ಯ ಸೇರಿದಂತೆ ಹಲ ವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಆಯುರ್ವೇದ ವೈದ್ಯ ಪದ್ಧತಿಯು ಈ ಭೂಮಿ ಮೇಲೆ ಎಂದು ಗಿಡಮೂಲಿಕೆ ಗಳು ಬೆಳೆಯಲು ಆರಂಭಿಸಿದವೋ ಅಂದಿನಿಂದಲೇ ಹುಟ್ಟಿಕೊಂಡಿತು. ಇಷ್ಟೊಂದು ಪುರಾತನವಾದ ವೈದ್ಯ ಪದ್ಧತಿ ಮತ್ತೊಂದಿಲ್ಲ’ ಎಂದು ಅಭಿಮಾನ ಪಟ್ಟರು.

‘ಅಲೋಪತಿ ವೈದ್ಯ ಪದ್ಧತಿಗೆ ಕೇವಲ 200 ರಿಂದ 250 ವರ್ಷಗಳ ಇತಿಹಾಸವಿದೆ. ಈ ಪದ್ಧತಿಯಿಂದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಥೈರಾಯಿಡ್‌ನಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡಬಹುದೇ ಹೊರತು ಸಂಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ. ಆದರೆ ಯೋಗಾಭ್ಯಾಸದಿಂದ ಸಕ್ಕರೆ ಕಾಯಿಲೆ, ಬಿಪಿ, ಕಿಡ್ನಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಕಪಾಲಭಾತಿಯಿಂದ ಕಿಡ್ನಿ ತೊಂದರೆ ಇಲ್ಲವಾಗುತ್ತದೆ’ ಎಂದು ತಿಳಿಸಿದರು.

‘ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವವರನ್ನು ಕೇಳಿದರೆ ಮಾನಸಿಕ ಒತ್ತಡ, ಸಕ್ಕರೆ ಕಾಯಿಲೆ, ಬೊಜ್ಜುತನ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದಾಗಿಹೇಳುತ್ತಾರೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ಇವುಗಳಿಂದ ದೂರ ಉಳಿಯಬಹುದು. ನೀವು ಹೆಚ್ಚು ಅಂದರೆ  ನಿಮ್ಮ ಕುಟುಂಬ ಇಲ್ಲವೆ ಕಚೇರಿಯ ಜವಾಬ್ದಾರಿ ವಹಿಸಿಕೊಂಡಿರಬಹುದು. ಆದರೆ ನಾನು ಈ ದೇಶದ 126 ಕೋಟಿ ಜನರ ಆರೋಗ್ಯದ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಆದರೆ ನಾನೂ ಸ್ವಲ್ಪವೂ ಒತ್ತಡಕ್ಕೆ ಒಳಗಾಗದೆ ತುಂಬಾ ಖುಷಿಯಾಗಿದ್ದೇನೆ’ ಎಂದರು.

‘ಭಾರತೀಯ ಸಂಸ್ಕೃತಿ, ಪರಂಪರೆ, ಸಾಧು ಸಂಸತರನ್ನು ಎಂದೆಂದಿಗೂ ಮುಗಿಸಲು ಆಗುವುದಿಲ್ಲ. ನಮ್ಮದು ಶ್ರೇಷ್ಠ ಸಂಸ್ಕೃತಿ ಮತ್ತು  ಪರಂಪರೆ. ಆದ್ದರಿಂದ ಆರೋಗ್ಯವಂತ ಭಾರತವನ್ನು ನಿರ್ಮಾಣ ಮಾಡುವುದೇ ನನ್ನ ಉದ್ದೇಶ’ ಎಂದು ತಿಳಿಸಿದರು.

ಕೊಯಮತ್ತೂರಿನ ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಕಾಲೇಜು ಕಟ್ಟಡವನ್ನು, ಭಾರತೀಯ ವೈದ್ಯ ಪದ್ಧತಿಗಳ  ಕೇಂದ್ರೀಯ ಪರಿಷತ್ತಿನ ಅಧ್ಯಕ್ಷ ಡಾ.ರಘುನಂದನ್ ಶರ್ಮ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾ ಮದಾಸ್ ಅಧ್ಯಕ್ಷತೆ ವಹಿಸಿದ್ದರು. ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶಿವರಾತ್ರಿದೇಶಿ  ಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತೀಯ ವೈದ್ಯಪದ್ಧತಿಗಳ ಕೇಂದ್ರೀಯ ಪರಿಷತ್ತಿನ ಉಪಾಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್, ಮೇಯರ್ ಸಂದೇಶ್ ಸ್ವಾಮಿ, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಆಯುಷ್‌ನ ನಿರ್ದೇಶಕ ಗಾ.ನಂ.ಶ್ರೀಕಂಠಯ್ಯ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್.ಬೆಟ್‌ಕೆರೂರ್, ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT