ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಯೋಗ ವರದಿಗೆ ಅನುಕೂಲಸ್ಥರದೇ ವಿರೋಧ'

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಆಡಳಿತಾರೂಢ ಬಿಜೆಪಿ ಸದಸ್ಯ ವೀರಭದ್ರಪ್ಪ ಹಾಲಹರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಪ್ರಸಂಗ ವಿಧಾನಸಭೆಯಲ್ಲಿ ಗುರುವಾರ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು `ಸರ್ಕಾರದಲ್ಲಿ ಇರುವ ಅನುಕೂಲಸ್ಥರೇ ಈ ವರದಿ ಜಾರಿಗೆ ವಿರೋಧ ಮಾಡುತ್ತಿದ್ದಾರೆ. ಹಸಿವಿನ ಅರಿವಿಲ್ಲದ ಅಂತಹವರಿಗೆ ಮುಂದಿನ ದಿನಗಳಲ್ಲಿ ನಮ್ಮ ಜನ ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಬೋವಿ ಮತ್ತು ಬಂಜಾರ ಸಮುದಾಯಕ್ಕೆ ಸೇರಿದ ಸಚಿವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

`ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿದ ನಮ್ಮ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ನಿರಪರಾಧಿಗಳ ವಿರುದ್ಧ ದೂರು ದಾಖಲಿಸಿದ್ದು, ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು' ಎಂದು ಆಗ್ರಹಪಡಿಸಿದರು.

ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುವಾಗ ಅದನ್ನು ಹತ್ತಿಕ್ಕುವ ಉದ್ದೇಶದಿಂದ ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ನಿರಪರಾಧಿಗಳ ವಿರುದ್ಧ ಪೊಲೀಸ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ದೂರಿದರು.

ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಪಡಿಸಿದರು.
ಗೃಹ ಸಚಿವ ಆರ್.ಅಶೋಕ ಅವರು ಉತ್ತರ ನೀಡಿ, `ಇಡೀ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದು, ನಿರಪರಾಧಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಮಾದಿಗ ದಂಡೋರ ಸಂಘಟನೆಗೆ ಸೇರಿದ ಮುಖಂಡರ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಒಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಪ್ರಮಾಣ ಪತ್ರ ಕೊಡಿಸಲು ಕ್ರಮ: ಕೋಳಿ ಡೋರ, ಟೊಕರೆ ಕೋಳಿ, ಕೊಲಚ, ಕೊಲಗ ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಲಾಗಿದೆ. ಪಟ್ಟಿಯಲ್ಲಿದ್ದರೂ ಜಾತಿ ಪ್ರಮಾಣ ಪತ್ರ ಏಕೆ ನೀಡಿಲ್ಲ ಎಂಬುದನ್ನು ಪತ್ತೆಹಚ್ಚಿ ಕ್ರಮ ಜರುಗಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರ ಪರವಾಗಿ ಆಹಾರ ಸಚಿವ ಡಿ.ಎನ್.ಜೀವರಾಜ್ ವಿಧಾನಸಭೆಗೆ ತಿಳಿಸಿದರು.

ನಿಯಮ 69ರಡಿ ಬಿಜೆಪಿಯ ಸಾರ್ವಭೌಮ ಬಗಲಿ ವಿಷಯ ಪ್ರಸ್ತಾಪಿಸಿ, ವಿಜಾಪುರ ಜಿಲ್ಲೆಯಲ್ಲಿ ಈ ಸಮುದಾಯಗಳಿಗೆ ಸೇರಿದ ಜನರಿದ್ದು, ಅವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು.

`ಶಾಲಾ ದಾಖಲೆಗಳಲ್ಲಿ ಈ ಜಾತಿಗಳ ಹೆಸರುಗಳನ್ನು ನಮೂದಿಸಿದ್ದಾರೆ ಎಂಬ ಕಾರಣಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಆಗುವುದಿಲ್ಲ.

ಅಧಿಕಾರಿಗಳು ಸ್ಥಳ ಪರಿಶೀಲನೆ ಮೂಲಕ ಜಾತಿಯ ಮೂಲ ಪತ್ತೆ ಹಚ್ಚಬೇಕು. ಅರ್ಹರಿಗೆ ಜಾತಿ ಪ್ರಮಾಣ ಪತ್ರ ನಿರಾಕರಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಜೀವರಾಜ್ ಹೇಳಿದರು.

ಅಧಿವೇಶನ ಮುಂದಕ್ಕೆ: ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಗುರುವಾರ ಮುಂದೂಡಲಾಯಿತು.

13ನೇ ವಿಧಾನಸಭೆಯ 15ನೇ ಅಧಿವೇಶನ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ 5ರಿಂದ ನಡೆಯಿತು. ಒಟ್ಟು ಏಳು ದಿನ ಅಧಿವೇಶನ ನಡೆದಿದೆ. 36 ಗಂಟೆಗಳ ಕಾಲ ಸರ್ಕಾರಿ ಮತ್ತು ಖಾಸಗಿ ಕಾರ್ಯಕಲಾಪ ನಡೆಸಲಾಯಿತು ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ವಿಧಾನಸಭೆಗೆ ತಿಳಿಸಿದರು.

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ್ದಲ್ಲದೆ, ಸದಸ್ಯರಿಂದ 705 ಪ್ರಶ್ನೆಗಳನ್ನು ಸ್ವೀಕರಿಸಿ, 704 ಪ್ರಶ್ನೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ ಸದನದಲ್ಲಿ 90 ಪ್ರಶ್ನೆಗಳು ಹಾಗೂ ಲಿಖಿತ ಮೂಲಕ 614 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ಅವರು ಹೇಳಿದರು.

ಧನ ವಿನಿಯೋಗ ಮಸೂದೆ ಸೇರಿದಂತೆ ಒಟ್ಟು 19 ಮಸೂದೆಗಳನ್ನು ಮಂಡಿಸಲಾಗಿದೆ. ಈ ಹಿಂದಿನ ಅಧಿವೇಶನದಲ್ಲಿ ಮಂಡಿಸಿದ್ದ ಮಸೂದೆಗಳು ಸೇರಿ ಒಟ್ಟು 27 ಮಸೂದೆಗಳನ್ನು ವಿಧಾನಸಭೆ ಅಂಗೀಕರಿಸಿತು ಎಂದು ವಿವರಿಸಿದರು. 146 ಗಮನ ಸೆಳೆಯುವ ಸೂಚನೆಗಳನ್ನು ಸದಸ್ಯರಿಂದ ಸ್ವೀಕರಿಸಿದ್ದು, ಅದರಲ್ಲಿ 27 ಮಾತ್ರ ಚರ್ಚೆಯಾಗಿವೆ ಎಂದರು.

ಔಷಧಿ ಖರೀದಿಗೆ ಹೆಚ್ಚು ಹಣ ನೀಡುತ್ತಿಲ್ಲ: ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಮಾರುಕಟ್ಟೆ ದರಕ್ಕಿಂತ ಶೇ 15ರಿಂದ 20ರಷ್ಟು ಕಡಿಮೆ ಬೆಲೆಗೆ ಔಷಧಿಗಳನ್ನು ಖರೀದಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ವಿಧಾನಸಭೆಗೆ ತಿಳಿಸಿದರು.

ಬಿಜೆಪಿಯ ಡಾ.ಸಾರ್ವಭೌಮ ಬಗಲಿ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಔಷಧಿ ಮತ್ತು ಬಳಸಿ ಬಿಸಾಡುವ ವಸ್ತುಗಳನ್ನು ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಹೆಚ್ಚಿನ ದರಕ್ಕೆ ಖರೀದಿ ಮಾಡಲಾಗುತ್ತಿದೆ.

ಒಂದೇ ರೀತಿಯ ಔಷಧಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಡಿಮೆ ಬೆಲೆ ಕೊಟ್ಟು ಖರೀದಿ ಮಾಡಿದ್ದರೆ, ಬೌರಿಂಗ್ ಆಸ್ಪತ್ರೆಯಲ್ಲಿ ಅದಕ್ಕೆ ಮೂರು ಪಟ್ಟು ಹೆಚ್ಚಿಗೆ ಕೊಟ್ಟು ಖರೀದಿ ಮಾಡಲಾಗಿದೆ. ಇದನ್ನು ಸರಿಪಡಿಸಬೇಕು ಎಂದು ಬಗಲಿ ಸರ್ಕಾರದ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಉದಾಸಿ ಅವರು `ಈ ಆರೋಪ ಸುಳ್ಳು. ಮಾರುಕಟ್ಟೆ ದರಕ್ಕಿಂತ ಶೇ 15ರಿಂದ 20ರಷ್ಟು ಕಡಿಮೆ ಬೆಲೆಗೆ ಔಷಧಿಗಳನ್ನು ಖರೀದಿ ಮಾಡಿದ್ದು, ಇದಕ್ಕೆ ಪೂರಕವಾದ ದಾಖಲೆಗಳು ಕೂಡ ಇವೆ' ಎಂದು ಹೇಳಿದರು.
ಸಂಪುಟದಲ್ಲಿ ಚರ್ಚಿಸಿ

ನಿರ್ಧಾರ: ಶೆಟ್ಟರ್
ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯ ಕುರಿತು ಶೀಘ್ರವೇ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಗುರುವಾರ ಈ ಬಗ್ಗೆ ಅವರು ಹೇಳಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT