ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆ ಪಟ್ಟಿಗೆ ಅನುಮತಿ ಕೋರಿದ ಆಯೋಗ!

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  362 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆ ಮತ್ತು ಸಂದರ್ಶನ ಮುಗಿದು ಆಯ್ಕೆ ಪಟ್ಟಿ ಸಿದ್ಧವಾಗಿದೆ. ಅದನ್ನು ಪ್ರಕಟಿಸಲು ಅನುಮತಿ ನೀಡಬೇಕು ಎಂದು ಕೆಪಿಎಸ್‌ಸಿ ರಾಜ್ಯ ಸರ್ಕಾರವನ್ನು ಕೋರಿದ್ದು ಇದೂ ಕೂಡ ಈಗ ವಿವಾದದ ಕೇಂದ್ರವಾಗಿದೆ.

ಕೆಪಿಎಸ್‌ಸಿ ನಡೆಸಿದ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಭಾರಿ  ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆಯುತ್ತಿದೆ. ಪರೀಕ್ಷೆ, ಸಂದರ್ಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಐಡಿ ಪೊಲೀಸರು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಇದರ ನಡುವೆಯೇ ಕೆಪಿಎಸ್‌ಸಿ ಆಯ್ಕೆ ಪಟ್ಟಿ ಪ್ರಕಟಣೆಗೆ ಅನುಮತಿ ಕೇಳಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಅನುಮತಿ ಕೋರಿ ಕೆಪಿಎಸ್‌ಸಿ ಕಳೆದ ವಾರವೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಕೆಪಿಎಸ್‌ಸಿ ಮೂಲಗಳು ಹೇಳುತ್ತವೆ. ಇದನ್ನು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಮೂಲಗಳು ಕೂಡ ದೃಢಪಡಿಸುತ್ತವೆ. ಸಿಐಡಿ ತನಿಖೆ ನಡೆಯುತ್ತಿರುವಾಗಲೇ ಆಯ್ಕೆ ಪಟ್ಟಿ ಪ್ರಕಟಣೆಗೆ ಏನು ಅವಸರ ಎಂದು ಪ್ರಶ್ನೆ ಮಾಡಿದರೆ `ಅಯ್ಯೋ ಅವರ ಸಮಸ್ಯೆ ಬಹಳ ಇದೆ' ಎಂದು ಆಯೋಗದ ಮೂಲಗಳು ಹೇಳುತ್ತವೆ.

`ಕೆಲಸ ಕೊಡಿಸುತ್ತೇವೆ ಎಂದು ಹಣ ಪಡೆದಿದ್ದಾರೆ. ಹಣಕ್ಕಾಗಿ ಕೆಪಿಎಸ್‌ಸಿ ಸದಸ್ಯರು ಬೇಡಿಕೆ ಇಟ್ಟಿದ್ದರು ಎನ್ನುವುದನ್ನು ಡಾ.ಮೈತ್ರಿ ಎಂಬುವವರು ಬಹಿರಂಗ ಪಡಿಸಿದ್ದರು. ಈಗ ಎಲ್ಲ ಅವ್ಯವಹಾರಗಳು ಬಹಿರಂಗವಾಗಿ ಸಿಐಡಿ ತನಿಖೆ ನಡೆಯುತ್ತಿದೆ. ತನಿಖೆ ಮುಗಿದು ವರದಿ ಏನು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಈಗಾಗಲೇ ನಡೆಸಲಾದ ಪರೀಕ್ಷೆ ಮತ್ತು ಸಂದರ್ಶನವನ್ನು ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸುವಂತೆ ಆದೇಶಿಸಲೂ ಬಹುದು. ಈ ಎಲ್ಲ ಪ್ರಕ್ರಿಯೆ ಮುಗಿಯಲು ಬಹಳ ದಿನ ಬೇಕು. ಹಣ ಪಡೆದುಕೊಂಡಿದ್ದರೂ ಕೆಲಸ ಕೊಡಲು ಸಾಧ್ಯವಿಲ್ಲ. ಹಣ ಕೊಟ್ಟವರು ಈಗ ವಾಪಸು ಕೊಡಿ ಎಂದು ಕೇಳುತ್ತಿದ್ದಾರೆ. ಕೆಲವು ಸದಸ್ಯರು ತಲೆಮರೆಸಿಕೊಂಡಿದ್ದಾರೆ.

ಅದಕ್ಕೆ ಆಯ್ಕೆ ಪಟ್ಟಿ ಪ್ರಕಟ ಮಾಡಿದರೆ ತಾವು ಬಚಾವಾಗಬಹುದು. ಹಣ ವಾಪಸು ಕೊಡಿ ಎಂದು ಪೀಡಿಸಿದರೆ  ಸರ್ಕಾರದ ಕಡೆ ಕೈತೋರಿಸಬಹುದು ಎಂಬ ಲೆಕ್ಕಾಚಾರ ಕೂಡ ಇದರಲ್ಲಿದೆ' ಎಂದು ಮೂಲಗಳು ಹೇಳುತ್ತವೆ. ಆಯ್ಕೆ ಪಟ್ಟಿಯನ್ನು ಈಗಲೇ ಪ್ರಕಟಿಸುವಂತೆ ಒತ್ತಡ ಹೇರಲು ಇನ್ನೊಂದು ಕಾರಣವೂ ಇದೆ.

ಪ್ರಕಟಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿರುವುದರಿಂದ ಸರ್ಕಾರ `ಪಟ್ಟಿ ಪ್ರಕಟಿಸಿ' ಎಂದರೆ ಪರವಾಗಿಲ್ಲ. ಅಕಸ್ಮಾತ್ ಪಟ್ಟಿಗೆ ತಡೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಯಾವುದಾದರೂ ಅಭ್ಯರ್ಥಿ ಮೂಲಕ ಪ್ರಶ್ನೆ ಮಾಡಬಹುದು ಎಂಬ ಲೆಕ್ಕಾಚಾರವೂ ಇದರಲ್ಲಿದೆ ಎಂದು ಮೂಲಗಳು ತಿಳಿಸುತ್ತವೆ.

`ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಂದರ್ಶನ ನಡೆಸಬೇಡಿ' ಎಂದು ಚುನಾವಣಾ ಆಯೋಗ ಸೂಚಿಸಿದಾಗ ಅದನ್ನು ಜೆ.ಅಮಿತ್ ಎಂಬ ಅಭ್ಯರ್ಥಿ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, `ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಂದರ್ಶನ ನಡೆಸುವುದು ಸೂಕ್ತವಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ಸಂದರ್ಶನವನ್ನು ಮುಂದೂಡಿ' ಎಂದು ಸೂಚಿಸಿತ್ತು.

ಆದರೂ ಮತ್ತೊಬ್ಬ ಅಭ್ಯರ್ಥಿ ಡಿ.ಎಂ.ಗೀತಾ ಸಂದರ್ಶನವನ್ನು ಮುಂದೂಡಲು ಸೂಚಿಸಿರುವುದನ್ನು ಕೆಎಟಿಯಲ್ಲಿ ಪ್ರಶ್ನೆ ಮಾಡಿದ್ದರು. ಇದೇ ತಂತ್ರವನ್ನು ಈಗಲೂ ಪ್ರಯೋಗಿಸಲು ಕೆಲವರು ಮುಂದಾಗಿದ್ದಾರೆ ಎಂದು ಮೂಲಗಳು ಹೇಳುತ್ತವೆ. ವಿಷಯ ತಜ್ಞರಲ್ಲದವರು ಮೌಲ್ಯಮಾಪನ ನಡೆಸಿದ್ದಾರೆ, ಇಂಗ್ಲಿಷ್ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಕನ್ನಡ ಮಾಧ್ಯಮದವರು ಮೌಲ್ಯಮಾಪನ ಮಾಡಿದ್ದಾರೆ.

ಕೆಪಿಎಸ್‌ಸಿ ನಿಯಮಾವಳಿ ಪ್ರಕಾರ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಮಾಡುವವರು ವಿಷಯ ತಜ್ಞರಾಗಿರಬೇಕು, ಪ್ರಾಧ್ಯಾಪಕ, ಸೆಲೆಕ್ಷನ್ ಗ್ರೇಡ್ ಅಧ್ಯಾಪಕ ಅಥವಾ ಹಿರಿಯ ಉಪನ್ಯಾಸಕರಾಗಿರಬೇಕು. ಆದರೆ ಈ ಬಾರಿ ಈ ನಿಯಮಗಳನ್ನು ಮೀರಿ ಅತಿಥಿ ಉಪನ್ಯಾಸಕರೂ ಕೂಡ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ ಎಂಬ ಆರೋಪಗಳಿವೆ.

ಸಂದರ್ಶನದಲ್ಲಿ ತಮಗೆ ಬೇಕಾದವರಿಗೆ ಮಾತ್ರ ಹೆಚ್ಚಿನ ಅಂಕ ನೀಡಲಾಗಿದೆ. ಒಂದೇ ಕುಟುಂಬದ ಮೂವರಿಗೆ ಕೆಲಸ ನೀಡಲಾಗಿದೆ. ಮೀಸಲಾತಿಯನ್ನೂ ತಿದ್ದಲಾಗಿದೆ ಎಂಬ ಆರೋಪಗಳೂ ಇದ್ದು ಈ ಕುರಿತಂತೆಯೇ ಸಿಐಡಿ ತನಿಖೆ ನಡೆಸುತ್ತಿದೆ.

ಸಿಐಡಿ ಪೊಲೀಸರು ಕೆಪಿಎಸ್‌ಸಿ ಹಿಂದಿನ ಅಧ್ಯಕ್ಷ ಗೋನಾಳ ಭೀಮಪ್ಪ, ಆಯೋಗದ ಪೀಠಾಧಿಕಾರಿ ಅರುಣಾಚಲಂ, ಕಾರ್ಯದರ್ಶಿ ಕೆ.ಆರ್.ಸುಂದರ್, ಸದಸ್ಯೆ ಡಾ.ಮಂಗಳಾ ಶ್ರೀಧರ್, ಅವರ ಆಪ್ತ ಸಹಾಯಕ ಅಶೋಕ್‌ಕುಮಾರ್ ಮುಂತಾದವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಕೊಠಡಿ ತುಂಬಾ ದಾಖಲೆಗಳೇ ತುಂಬಿಕೊಂಡಿವೆ.

ಅವುಗಳ ಪರಿಶೀಲನೆ ಕೂಡ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕೆಪಿಎಸ್‌ಸಿ ಆಯ್ಕೆ ಪಟ್ಟಿ ಪ್ರಕಟಣೆಗೆ ಅನುಮತಿ ಕೇಳಿರುವುದು ಅಚ್ಚರಿಯನ್ನುಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT