ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆಯಾದವರು ಏಳು, ಪಡೆದವರು ಎಂಟು!

ಶಿಕ್ಷಕರ ಪ್ರಶಸ್ತಿಗಾಗಿ ಹೆಚ್ಚಿದ ಒತ್ತಡ: ಶಿಷ್ಟಾಚಾರ ಉಲ್ಲಂಘನೆ
Last Updated 6 ಸೆಪ್ಟೆಂಬರ್ 2013, 6:49 IST
ಅಕ್ಷರ ಗಾತ್ರ

ಕೋಲಾರ:  ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆಯಾದವರು ಏಳು ಮಂದಿ. ಆದರೆ ವೇದಿಕೆಯಲ್ಲಿ ಪ್ರಶಸ್ತಿ ಪಡೆದವರು ಎಂಟು ಮಂದಿ.

ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಈ ವಿಲಕ್ಷಣ ಘಟನೆ ನಡೆಯಿತು. ಈ ಗೊಂದಲದ ಜೊತೆಗೆ, ಪ್ರಶಸ್ತಿ ಪಡೆದವರ ಜೊತೆಗೆ ಫೋಟೋ ತೆಗೆಸಿಕೊಳ್ಳುವವರು ವೇದಿಕೆ ಏರಿದ ಪರಿಣಾಮ ನೂಕುನುಗ್ಗಲು ಏರ್ಪಟ್ಟು, ಕೆಲ ಕಾಲ ವೇದಿಕೆಯು ಯಾರ ನಿಯಂತ್ರಣಕ್ಕೂ ಬಾರದಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಏಳು ಶಿಕ್ಷಕರ ಹೆಸರನ್ನು ಕರೆದರು. ಏಳು ಕುರ್ಚಿಗಳನ್ನೂ ಹಾಕಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ದಿಢೀರನೆ ಬಂದ ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಯೊಬ್ಬರು ಕುರ್ಚಿ ಸಮೇತ ಹಾಜರಾಗಿ ಕುಳಿತರು.

ಏಳರ ಬದಲು ಎಂಟು ಶಿಕ್ಷಕರನ್ನು ಕಂಡ ಮಾಧ್ಯಮದ ಮಂದಿ ಆ ಕುರಿತು ಗಮನ ಸೆಳೆದಾಗ, ವೇದಿಕೆಯಿಂದಲೇ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ವಿ.ಪದ್ಮನಾಭ, `ಸುಮ್ಮನೆ ಇದ್ದುಬಿಡಿ, ಕಾಯ್ರಕಮ ನಡೆಯಲಿ. ಅವರಿಗೂ ಒಂದು ಪ್ರಶಸ್ತಿ ಕೊಟ್ಟು ಬಿಡೋಣ' ಎಂದು ಮನವಿ ಮಾಡಿ ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದರು.

ಒತ್ತಡ: ಶಿಕ್ಷಕರ ಪ್ರಶಸ್ತಿಯನ್ನು ಕೊಡಿಸಲು ಶಿಕ್ಷಕರ ಸಂಘದ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಪರಿಣಾಮವಾಗಿ ಪಟ್ಟಿಯಲ್ಲಿ ಇಲ್ಲದವರೊಬ್ಬರಿಗೂ ಪ್ರಶಸ್ತಿ ನೀಡಲಾಗಿದೆ. ಪ್ರತಿ ತಾಲ್ಲೂಕಿನ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡುವ ಶಿಷ್ಟಾಚಾರವನ್ನೂ ಮುರಿಯಲಾಗಿದೆ ಎಂದು ಕಾರ್ಯಕ್ರಮದಲ್ಲಿದ್ದ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಬುಧವಾರ ಮಧ್ಯಾಹ್ನ ಶಿಕ್ಷಣ ಇಲಾಖೆಯು ಮಾಧ್ಯಮಗಳಿಗೆ ಪೂರೈಸಿದ ಪ್ರಾಥಮಿಕ ಶಾಲಾ ವಿಭಾಗದ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯಲ್ಲಿ ಕೇವಲ ಆರು ಹೆಸರುಗಳಿದ್ದವು. ಆದರೆ ರಾತ್ರಿ 7ರ ವೇಳೆಗೆ ಕೋಲಾರ ತಾಲ್ಲೂಕಿನ ಯಳಚೀಪುರ ಶಾಲೆಯ ಕೆ.ವಿ.ಜಗನ್ನಾಥ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಉಪನಿರ್ದೇಶಕರು ಪತ್ರವನ್ನು ನೀಡಿದ್ದರು.

ಕೋಲಾರ ತಾಲ್ಲೂಕಿಗೆ ಎರಡು ಪ್ರಶಸ್ತಿ ನೀಡುವ ಈ ನಿರ್ಧಾರವನ್ನು ಶಿಕ್ಷಕರ ಸಂಘದ ಕೆಲವು ಪ್ರಮುಖರು ಆಕ್ಷೇಪಿಸಿ, ಪ್ರೌಢಶಾಲಾ ವಿಭಾಗಕ್ಕೆ ಮುಳಬಾಗಲು ತಾಲ್ಲೂಕಿನ ಶಿಕ್ಷಕರನ್ನು ಆಯ್ಕೆ ಮಾಡುವಂತೆ ಉಪನಿರ್ದೇಶಕರ ಮೇಲೆ ಒತ್ತಡ ಹೇರಿದರು. ಅವರ ಒತ್ತಡಕ್ಕೆ ಮಣಿದ ಅಧಿಕಾರಿಯು ಶಿಕ್ಷಕರೊಬ್ಬರಿಗೆ ಪ್ರಶಸ್ತಿ ನೀಡಲು ಒಪ್ಪಿದರು ಎನ್ನಲಾಗಿದೆ.

ತಮ್ಮ ಹೆಸರನ್ನು ಹೇಳದಿದ್ದರೂ ವೇದಿಕೆ ಏರಿ ಶಿಕ್ಷಕರೊಬ್ಬರು ಪ್ರಶಸ್ತಿ ಪಡೆದ ಘಟನೆ ಯಾವ ಅಡಚಣೆಯೂ ಇಲ್ಲದೆ ನಡೆದು ಹೋಯಿತು. ಪಟ್ಟಿಯಲ್ಲಿ ಇಲ್ಲದಿದ್ದರೂ ಹೆಚ್ಚುವರಿಯಾಗಿ ಪ್ರಶಸ್ತಿಯನ್ನು ಪಡೆದ ಶಿಕ್ಷಕ ಮುಳಬಾಗಲು ತಾಲ್ಲೂಕಿನ ಹೊಸಹಳ್ಳಿಯ ರಮೇಶ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಕರ ಆಯ್ಕೆಯಲ್ಲಿ ಎಡವಟ್ಟು
ಪ್ರಶಸ್ತಿಗೆ ಆಯ್ಕೆಯಾಗುವ ಶಿಕ್ಷಕರು ಸಚ್ಚಾರಿತ್ರ್ಯವನ್ನು ಹೊಂದಿರಬೇಕು. ಅವರ ಬಗೆಗೆ ಯಾವುದೇ ದೂರು, ವಿಚಾರಣೆ, ನ್ಯಾಯಾಲಯದ ಪ್ರಕರಣಗಳು ಇರಬಾರದು. ಆ ಬಗ್ಗೆ ಆಯ್ಕೆ ಸಮಿತಿಗಳು ಪ್ರಮಾಣಪತ್ರವನ್ನು ನೀಡಬೇಕು ಎಂದು ಶಿಕ್ಷಣ ಇಲಾಖೆ ಹೇಳುತ್ತದೆ.
ಆದರೆ ಇಲಾಖೆಯು ಈ ಅಂಶಗಳನ್ನು ಗಮನಿಸದೆ ಶಿಕ್ಷಕರೊಬ್ಬರನ್ನು ಆಯ್ಕೆ ಮಾಡಿರುವ ಸಂಗತಿಯೂ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಕೆ ಬಿ ಹೊಸಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಆನಂದಕುಮಾರ್ ಅವರ ವಿರುದ್ಧ ನಗರದ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಚೆಕ್‌ಬೌನ್ಸ್ (ಸಿಸಿ 35/09) ಪ್ರಕರಣ ದಾಖಲಾಗಿದೆ. ತಮ್ಮಿಂದ ಪಡೆದ ಹಣವನ್ನು ನೀಡದೆ ಸದರಿ ಶಿಕ್ಷಕರು ವಂಚಿಸಿದ್ದಾರೆ ಎಂದು ದೂರಿ ನರಸಾಪುರದ ಎನ್.ಡಿ.ರಮೇಶ್‌ಎಂಬುವವರು ದಾಖಲಿಸಿರುವ ದೂರಿನ ವಿಚಾರಣೆ ನಡೆಯುತ್ತಿದೆ.

ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡುವಾಗ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದ್ದರೂ, ಶಿಕ್ಷಕರ ಸಂಘದ ಕೆಲವರ ಒತ್ತಡಕ್ಕೆ ಮಣಿದು ಆಯ್ಕೆ ಮಾಡಿದ್ದಾರೆ ಎಂದೂ ಕೆಲವು ಶಿಕ್ಷಕರು ಆರೋಪಿಸಿದ್ದಾರೆ.

ದೂರು, ವಿಚಾರಣೆ, ನ್ಯಾಯಾಲಯದ ಪ್ರಕರಣಗಳನ್ನು ಎದುರಿಸದ ಒಬ್ಬ ಶಿಕ್ಷಕರೂ ಕೋಲಾರ ತಾಲ್ಲೂಕಿನಲ್ಲಿ ಅಧಿಕಾರಿಗಳಿಗೆ ಸಿಗಲಿಲ್ಲವೇ? ಎಂಬುದು ಶಿಕ್ಷಕರ ಪ್ರಶ್ನೆ.

ಈ ಕುರಿತು ಸ್ಪಷ್ಟನೆ ಪಡೆಯಲು `ಪ್ರಜಾವಾಣಿ'ಯು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT