ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭಗೊಳ್ಳದ ವಿದ್ಯುತ್ ವಿತರಣಾ ಕೇಂದ್ರ

Last Updated 10 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ನಾವುಂದ (ಬೈಂದೂರು): ಇಲ್ಲಿ ವಿದ್ಯುತ್ ವಿತರಣ ಉಪಕೇಂದ್ರಕ್ಕೆ ನಿವೇಶನ ಕಾದಿರಿಸಿದ್ದು ಎರಡು ದಶಕಗಳ ಹಿಂದೆ. ಅದರಲ್ಲಿ ಕಾಮಗಾರಿ ಆರಂಭವಾದುದು ಐದು ವರ್ಷಗಳ ಹಿಂದೆ. ಅದು ಪೂರ್ತಿಗೊಳ್ಳಬೇಕಾಗಿದ್ದುದು ನಾಲ್ಕು ವರ್ಷ ಹಿಂದೆ. ಅದಕ್ಕೆ ಚಾಲನೆ ದೊರೆಯುವುದು ಮಾತ್ರ ಇನ್ನೆಷ್ಟೊ ಕಾಲ ಮುಂದೆ ಎನ್ನುವಂತಾಗಿದೆ ನಾವುಂದದ ವಿದ್ಯುತ್ ವಿತರಣ ಉಪಕೇಂದ್ರದ ಸ್ಥಿತಿ.

ಬೈಂದೂರು ಮೆಸ್ಕಾಂ ಉಪವಿಭಾಗಕ್ಕೆ ಸೇರಿದ ನಾವುಂದ ಪರಿಸರದ ಗ್ರಾಮಗಳು ದೀರ್ಘ ಕಾಲದಿಂದ ಅನುಭವಿಸುತ್ತ ಬಂದಿರುವ ವಿದ್ಯುತ್ ವ್ಯತ್ಯಯ, ಲೋ ವೋಲ್ಟೇಜ್ ಸಮಸ್ಯೆಗಳ ಪರಿಹಾರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಉದ್ದೇಶದಿಂದ ಸಾಕಷ್ಟು ಮುಂದಾಲೋಚನೆಯಿಂದ ಎರಡು ದಶಕಗಳ ಹಿಂದೆ ಇಲ್ಲಿನ ಮಸ್ಕಿ ಎಂಬಲ್ಲಿ ವಿಶಾಲ ನಿವೇಶನವನ್ನು ಕಾದಿರಿಸಲಾಯಿತು. ಉಪಕೇಂದ್ರ ನಿರ್ಮಾಣಕ್ಕೆ ಜನರ ಒತ್ತಾಯ ತೀವ್ರಗೊಂಡ     ಪರಿಣಾಮವಾಗಿ      ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 2007ರ ಏಪ್ರಿಲ್‌ನಲ್ಲಿ 110/33 ಕಿಲೊವಾಟ್‌ನ ಈ ವಿತರಣಾ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಿತು.

ಸಾಮಗ್ರಿ ಒದಗಿಸುವ, ಜೋಡಿಸುವ ಮತ್ತು ಸಿವಿಲ್ ಕೆಲಸ ಒಳಗೊಂಡ ಈ ಕಾಮಗಾರಿಯ ಅಂದಿನ ಅಂದಾಜು ವೆಚ್ಚ ರೂ. 1425.71 ಲಕ್ಷ. ಇದರ ಗುತ್ತಿಗೆ ಪಡೆದ ಬೆಂಗಳೂರು ಮೂಲದ ದೀಪಕ್ ಕೇಬಲ್ಸ್ (ಇಂಡಿಯ) ಸಂಸ್ಥೆಗೆ ಕೇಂದ್ರ ನಿರ್ಮಿಸಲು ಏಳು ತಿಂಗಳ ಮತ್ತು ಪ್ರಸರಣ ಮಾರ್ಗ ರಚಿಸಲು 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಎರಡೂ ಕೆಲಸಗಳನ್ನು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಿತ್ತು. ಹಾಗೆ ಮಾಡಿದ್ದರೆ 2007ರ ಕೊನೆಯೊಳಗೆ ಯೋಜನೆ ಪೂರ್ಣಗೊಂಡು ಬಳಕೆಗೆ ಲಭ್ಯವಾಗಬೇಕಿತ್ತು. ಆದರೆ ಅವಧಿ ಮುಗಿದು ನಾಲ್ಕು ದೀರ್ಘ ವರ್ಷಗಳು ಗತಿಸಿದ್ದರೂ ಈ ಕೆಂದ್ರದಿಂದ ಬೆಳಕು ಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. 

ಕೇಂದ್ರದ ಕಾಮಗಾರಿಯ ಜತೆಗೆ ಕುಂದಾಪುರ ವಿತರಣಾ ಕೇಂದ್ರದಿಂದ ನಾವುಂದದ ಈ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಗೋಪುರ ನಿರ್ಮಾಣ ಮತ್ತು ಲೈನ್ ಎಳೆಯುವ ಕಾರ್ಯ ನಡೆದಾಗ ಮಾರ್ಗದುದ್ದಕ್ಕೆ ಭೂಮಾಲಕರಿಂದ ಎದುರಾದ ಅಡ್ಡಿ ಆತಂಕಗಳನ್ನು ಒಂದೊಂದಾಗಿ ನಿವಾರಿಸಿಕೊಳ್ಳುತ್ತ ಸಾಗಿದ ಈ ಮಹತ್ವದ ಯೋಜನೆಗೆ ಈಗ ಅಂತಿಮ ಅಡ್ಡಿಯಾಗಿ ಪರಿಣಮಿಸಿರುವುದು ಪೂರೈಕೆ ಮಾರ್ಗದಲ್ಲಿ ಅಡ್ಡ    ಬಂದಿರುವ ಅರಣ್ಯ ಇಲಾಖೆಗೆ ಸೇರಿದ ಭೂಮಿ.

ಮಾರ್ಗ ಮಧ್ಯದ ಸೇನಾಪುರ ಗ್ರಾಮದಲ್ಲಿ ಎರಡು 85 ಅಡಿ ಎತ್ತರದ ಗೋಪುರ ನಿರ್ಮಿಸಿ, ಲೈನ್ ಎಳೆದರೆ ಪ್ರವಹನ ಮಾರ್ಗ ಪೂರ್ಣಗೊಂಡು ಕೇಂದ್ರ ಕಾರ್ಯವೆಸಗಲು ಸಾಧ್ಯವಾಗುತ್ತದೆ. ಅದು ಅಲ್ಲಿನ ಸರ್ವೆ ನಂಬ್ರ 94ಪಿ1ರಲ್ಲಿ ಬರುತ್ತದೆ. ಈ ಭೂಮಿ ‘ಪರಿಗಣಿತ ಅರಣ್ಯ’ ಎನಿಸಿದ್ದು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧೀನದಲ್ಲಿದೆ.ಈ ಪ್ರವಹನ ಮಾರ್ಗಕ್ಕೆ ಅದು 0. 688 ಹೆಕ್ಟೇರ್ ಭೂಮಿಯನ್ನು ಬಿಟ್ಟುಕೊಡಬೇಕು. ಅದರಲ್ಲಿ 96 ಗೇರು ಮತ್ತು 40 ಕಾಚಿನ ಮರಗಳಿವೆ; ಮೂರು ವರ್ಷಗಳ ಹಿಂದೆ ನೆಟ್ಟ 40 ಗೇರು ಸಸಿಗಳಿವೆ. ಮಾರ್ಗ ಹಾದುಹೊಗುವುದರಿಂದ ನಿಗಮಕ್ಕೆ ಅಗುವ ರೂ. 6,61,500  ನಷ್ಟವನ್ನು ಕೆಪಿಟಿಸಿಎಲ್ ಭರಿಸಲು ಒಪ್ಪಿದೆ. ಅದರೆ ಅರಣ್ಯಭೂಮಿಯ ವರ್ಗಾವಣೆಗೆ 1980ರ ಅರಣ್ಯ ಸಂರಕ್ಷಣಾ ಕಾಯಿದೆಯ ಎರಡನೇ ಪ್ರಕರಣದನ್ವಯ ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯವಿದೆ. ಈ ಪ್ರಕ್ರಿಯೆಗೆ ಕೆಲ ಕಾಲದ ಹಿಂದಷ್ಟೆ ಚಾಲನೆ ನೀಡಲಾಗಿದೆ. ವಿವಿಧ ಹಂತಗಳನ್ನು ದಾಟಿರುವ ಸಂಬಂಧಿಸಿದ ಪ್ರಸ್ತಾವನೆ ಡಿಸೆಂಬರದಲ್ಲಿ ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ

ಕಾರ್ಯದರ್ಶಿಗಳ ಕಚೇರಿಯನ್ನು ಹೊಕ್ಕಿದೆ. ಅಲ್ಲಿಂದ ಅದರ ಮುಂದಿನ ಪಯಣ ಯಾವಾಗ ಆರಂಭವಾಗುತ್ತದೆ, ಎಂದು ಗುರಿ ತಲಪುತ್ತದೆ, ಅದು ದಿನಗಳೇ, ತಿಂಗಳೆ, ವರ್ಷಗಳೆ ಎನ್ನುವುದನ್ನು ಊಹಿಸಲಾಗುತ್ತಿಲ್ಲ. ನಾವುಂದದಲ್ಲಿ ಪೂರ್ಣಗೊಂಡು ಬಳಕೆಯಾಗದೆ ತುಕ್ಕು ಹಿಡಿಯುತ್ತಿರುವ ವಿತರಣ ಕೇಂದ್ರ ಮತ್ತು ಪರಿಸರದ ವಿವಿಧ ವರ್ಗದ ವಿದ್ಯುತ್ ಗ್ರಾಹಕರು ಅನುಭವಿಸುತ್ತಿರುವ ಬವಣೆಗಳ ನಡುವೆ ಉದ್ಭವವಾಗುವ ಪ್ರಶ್ನೆಗಳು ಹಲವು. ಅದರಲ್ಲಿ ಮುಖ್ಯವಾದುದು ಅನುಷ್ಠಾನ ಹಂತದಲ್ಲಿ ಎದುರಾಗುವ ಸಹಜ ಅತಂಕಗಳನ್ನು ಮುಂದಾಲೋಚನೆ ಮಾಡದೇ, ಆ ನಿಟ್ಟಿನಲ್ಲಿ ಸಕಾಲಿಕ ಪರಿಹಾರ ಕ್ರಮಕ್ಕೆ ಮುಂದಾಗದೆ ಯೋಜನೆ ರೂಪಿಸಿದ್ದು. ಸಾರ್ವಜನಿಕ ಹಣದ ಪೋಲು, ಸೇವೆಯ ಸ್ಥಾಗಿತ್ಯಗಳಿಗೆ ಯಾರಾದರೂ ಹೊಣೆಯಾಗುವುದು ಬೇಡವೆ ಎಂದು ನಾಗರಿಕರು ಪ್ರಶ್ನಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT