ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭವಾಗದ ಕನ್ನಡ ಭವನ ನಿರ್ಮಾಣ

Last Updated 9 ಜುಲೈ 2012, 5:15 IST
ಅಕ್ಷರ ಗಾತ್ರ

ಬಳ್ಳಾರಿ: ತಮ್ಮ ಆಶಯಕ್ಕೆ ಸ್ಪಂದಿಸು ವಂತಾಗಲು ಒಂದು ಸುಸಜ್ಜಿತ ಕನ್ನಡ ಭವನ ಹೊಂದಬೇಕು ಎಂಬ, ಗಡಿ ನಾಡು ಬಳ್ಳಾರಿಯಲ್ಲಿನ ಕನ್ನಡಿಗರ ಕನಸು ನನಸಾಗುವ ಕಾಲ ಕೂಡಿ ಬರುತ್ತಲೇ ಇಲ್ಲ.

ಅನೇಕ ವರ್ಷಗಳಿಂದ ನಗರದಲ್ಲಿ ಒಂದು ಕನ್ನಡ ಭವನ ನಿರ್ಮಾಣ ವಾಗಬೇಕು ಎಂಬ ಆಶಯ ವ್ಯಕ್ತಪಡಿ ಸುತ್ತಲೇ, ಜನಪ್ರತಿನಿಧಿಗಳಿಗೆ, ಅಧಿಕಾರ ಶಾಹಿಗೆ ಮನವಿ ಮಾಡುತ್ತಲೇ ಇರುವ ಕನ್ನಡಿಗರ ಬೇಡಿಕೆ ಪೂರೈಸುವ ಭರವಸೆಗಳು ದೊರೆಯುತ್ತಿವೆಯಾ ದರೂ, ಕನಸು ಸಾಕಾರಗೊಳ್ಳುತ್ತಿಲ್ಲ.

ಬೆಳಗಾವಿಯಲ್ಲಿ ನಡೆಯಲಿದ್ದ ವಿಶ್ವ ಕನ್ನಡ ಸಮ್ಮೇಳನದ ಜ್ಯೋತಿ ಜಿಲ್ಲೆಯ ಕುರುಗೋಡು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಚಿವರಾಗಿದ್ದ ಜಿ. ಜನಾರ್ದನ ರೆಡ್ಡಿ ಅವರು ಆಶ್ವಾಸನೆ ನೀಡಿ, ಐದು ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದ್ದರು.

ನಂತರ ಮೂರು ಕೋಟಿಯಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಅವರೇ ಭರವಸೆ ನೀಡಿದ್ದರು. ಅದರಂತೆಯೇ ನಗರದ ಡಾ.ರಾಜ ಕುಮಾರ್ ರಸ್ತೆಯಲ್ಲಿನ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿ ಜಿಲ್ಲಾಡಳಿತ 13 ಸಾವಿರ ಚದರ ಅಡಿ ಜಾಗೆ ನೀಡಿದ್ದು, ಕಳೆದ ವರ್ಷದ ಅಂತ್ಯಕ್ಕೆ (2011ರ ಡಿಸೆಂಬರ್ 17ರಂದು) ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ದಿನವೇ ಶಾಸಕ ಬಿ.ಶ್ರೀರಾಮುಲು ಕನ್ನಡ ಭವನದ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿ ಸಿದ್ದರು.

ಎರಡು ದಿನಗಳ ಕಾಲ ನಡೆದಿದ್ದ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ, ಕನ್ನಡ ಭವನ ನಿರ್ಮಾಣಕ್ಕೆಂದೇ ಶಾಸಕರು ಮತ್ತು ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನ ದಲ್ಲಿ ರೂ ಒಂದು ಕೋಟಿ ನೆರವು ನೀಡುವುದಾಗಿಯೂ ತಿಳಿಸಿ, ಈ ಕುರಿತ ಪತ್ರವನ್ನು ಅಂದಿನ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರಿಗೆ ನೀಡಿದ್ದರು.

ಆದರೆ, ಭನವ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಏಳು ತಿಂಗಳೇ ಕಳೆದಿದ್ದರೂ ಕಟ್ಟಡ ನಿರ್ಮಾಣ ಕಾರ್ಯ ಒಂದಿಷ್ಟೂ ಆರಂಭವಾಗದಿ ರುವುದು ಕನ್ನಡಿಗರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ.

ಕನ್ನಡ ಸಾಹಿತ್ಯ ಪರಿಷತ್‌ಗೆ ಮೀಸಲಾಗಲಿರುವ ಈ ಭವನ ನಿರ್ಮಾಣವಾದಲ್ಲಿ ಸಾಹಿತ್ಯಕ ಚಟುವಟಿಕೆಗಳಾದ ಚರ್ಚೆ, ಸಂವಾದ, ವಿಚಾರ ಸಂಕಿರಣ, ಕವಿಗೋಷ್ಠಿ ಮತ್ತಿತರ ಕಾರ್ಯಕ್ರಮ ನಡೆಸಲು ಅನುಕೂಲವಾಗಲಿದೆ. ಆದರೆ, ಭವನ ನಿರ್ಮಾಣ ಕಾರ್ಯವು ಬಾಲಗೃಹ ಪೀಡೆಯಿಂದ ನರಳುವಂತಾಗಿದೆ.

ಹಣ ನೀಡಿಲ್ಲ: ಭವನದ ನಿರ್ಮಾಣಕ್ಕೆ ಅಗತ್ಯವಾಗಿರುವ ಅನುದಾನಕ್ಕೆ ಕೊರತೆ ಇದೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಮನೋಹರ ಮಸ್ಕಿ ರೂ 5 ಲಕ್ಷ, ಶಶಿಲ್ ನಮೋಶಿ ರೂ 1 ಲಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ರೂ 7 ಲಕ್ಷ ನೀಡಿದ್ದಾರೆ. ಶಾಸಕ ಬಿ. ಶ್ರೀರಾಮುಲು ರೂ 25 ಲಕ್ಷ ನೀಡಿದ್ದಾರೆ. ಇದೀಗ ಒಟ್ಟು ರೂ 38 ಲಕ್ಷ ಅನುದಾನ ಜಿಲ್ಲಾಡಳಿತದ ಬಳಿ ಇದೆ. ನಿರ್ಮಾಣ ಕಾರ್ಯ ಮಾತ್ರ ಆರಂಭವಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ನಿಷ್ಠಿ ರುದ್ರಪ್ಪ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬಳ್ಳಾರಿಯ ಇತರ ಶಾಸಕರು, ಸಂಸದರ‌್ಯಾರೂ ಈವರೆಗೆ ಅನುದಾನ ನೀಡಿಲ್ಲ. ಕೊಪ್ಪಳ ಸಂಸದ ಶಿವರಾಮೇಗೌಡ, ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಅನಿಲ್ ಲಾಡ್ ಅವರೂ ಅನುದಾನ ನೀಡ ಬಹುದಾಗಿದೆ. ಆದರೆ, ಇವರ‌್ಯಾರೂ ಹಣ ನೀಡಿಲ್ಲ. ಎಲ್ಲರಿಂದಲೂ ಅನುದಾನ ಕೋರಿ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನ ಆಗಿಲ್ಲ ಎಂದು ಅವರು ವಿವರಿಸಿದ್ದಾರೆ.

ಎಲ್ಲ ಜನಪ್ರತಿನಿಧಿಗಳೂ ಅನುದಾನ ನೀಡಿದಲ್ಲಿ ಕನಿಷ್ಠ ರೂ ಒಂದೂವರೆ ಕೋಟಿ ಸಂಗ್ರಹವಾಗಲಿದೆ. ಸುಸಜ್ಜಿತ ಕನ್ನಡ ಭವನ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬೇರೆಡೆ ಭವನ?: ಕೇವಲ 13 ಸಾವಿರ ಚದರ ಅಡಿ ಜಾಗೆಯಲ್ಲಿ ಕನ್ನಡ ಭವನ ನಿರ್ಮಿಸದೆ, ನಗರದಲ್ಲಿ ಬೇರೆಡೆ ಸರ್ಕಾರದಿಂದ ಕನಿಷ್ಠ ಒಂದು ಎಕರೆ ಜಮೀನು ಪಡೆದು ಸುಸಜ್ಜಿತ ಹಾಗೂ ಮಾದರಿ ಭವನ ನಿರ್ಮಿಸುವ ಇರಾದೆಯನ್ನೂ ಕಸಾಪ ನೂತನ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲೇ ಕನ್ನಡ ಭವನ ಇದ್ದರೂ ಪರವಾಗಿಲ್ಲ. ಆದರೆ, ಅಲ್ಲಿ ಸ್ಥಳಾವಕಾಶದ ಕೊರತೆ ಎದುರಾಗು ವುದರಿಂದ ಬೇರೆಡೆ ನಿರ್ಮಿಸಿದರೆ ಹೇಗೆ? ಎಂಬ ಆಲೋಚನೆಗಳೂ ಮೂಡಿವೆ.
ಈ ಕುರಿತು ಇದೇ 15ರಂದು ನಡೆಯಲಿರುವ ಕಾರ್ಯ ಕಾರಿ ಸಮಿತಿ ಸಭೆಯಲ್ಲಿ ಚರ್ಚಿಸ ಲಾಗುವುದು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಹೇಳಿದ್ದಾರೆ.

ಕನ್ನಡ ಭವನ ಎಲ್ಲಿಯೇ ನಿರ್ಮಾಣವಾದರೂ ಸರಿ. ಒಟ್ಟು ಸಾಹಿತ್ಯಕ ಚಟುವಟಿಕೆ ನಡೆಸಲು ಒಂದು ಸೂರು ಬೇಕು.

ಅದಕ್ಕೆ ಅಗತ್ಯವಿರುವ ಮಾರ್ಗೋಪಾಯಗಳನ್ನು ಸಂಬಂಧ ಪಟ್ಟವರು ಕಂಡು ಕೊಳ್ಳಲಿ ಎಂಬುದು ಕನ್ನಡ ಸಾಹಿತ್ಯಾಸಕ್ತರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT