ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭವಾಗದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ

ಮೊಳಕಾಲ್ಮುರು: 35 ವರ್ಷ ಕಳೆದರೂ ವಹಿವಾಟು ಇಲ್ಲ
Last Updated 3 ಆಗಸ್ಟ್ 2013, 10:06 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಹಿಂದುಳಿದ ಮತ್ತು ಗಡಿಭಾಗ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳು ಜಾರಿ ಯಾಗುತ್ತಿರುವುದು ಒಂದೆಡೆ ಯಾದರೆ ಇದಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ತಾಲ್ಲೂಕಿನ ರಾಂಪುರದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಅವ್ಯವಸ್ಥೆ ಸಾಗುತ್ತಿದೆ.

ಜಿಲ್ಲೆಯಲ್ಲಿಯೇ ಗ್ರಾಮೀಣ ಭಾಗದ ಪ್ರಮುಖ ವಾಣಿಜ್ಯ ಕೇಂದ್ರ ಎಂದು ಗುರುತಿಸಿಕೊಂಡಿರುವ ರಾಂಪುರ ಸುತ್ತಲಿನ ಸೊಂಡೂರು, ಕೂಡ್ಲಿಗಿ, ನೆರೆಯ ರಾಯದುರ್ಗ ತಾಲ್ಲೂಕಿನ 70ರಿಂದ 80 ಗ್ರಾಮಗಳಿಗೆ ವಹಿವಾಟು ಕೇಂದ್ರ ಬಿಂದುವಾಗಿದೆ. ಇಲ್ಲಿನ ರೈತರು ಕೃಷಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಗಳಿಗೆ ಮುಖ್ಯವಾಗಿ ರಾಂಪುರ ಅವಲಂಬಿಸಿದ್ದಾರೆ.

ಮಾರುಕಟ್ಟೆ ಆರಂಭವಾಗಿ 35 ವರ್ಷ ಕಳೆದರೂ ಇಲ್ಲಿ ಇನ್ನೂ ವಹಿವಾಟು ಮಾತ್ರ ಆರಂಭವಾಗಿಲ್ಲ. ಆದರೂ, ಮಾರುಕಟ್ಟೆ ಒಳಗಡೆ ರಸ್ತೆ, ಚರಂಡಿ, ಹರಾಜು ಕಟ್ಟೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಗಾಗಿ ರೂ 1 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದ್ದು, ಪ್ರತಿವರ್ಷ ಹಣ ಬಿಡುಗಡೆಯಾಗುತ್ತಿದೆ. ಮಾರುಕಟ್ಟೆ ಸ್ಥಿತಿ ತಿಳಿದೂ ಸಹ ಕಳೆದ ವರ್ಷ ಐದು ಮಳಿಗೆ ನಿರ್ಮಾಣ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ರಾಷ್ಟ್ರೀಯ ಕಿಸಾನ್ ಸಂಘದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಮಂಜುಳಾ ಸ್ವಾಮಿ ಪ್ರಶ್ನಿಸುತ್ತಾರೆ.

ನೂತನ ಮಳಿಗೆಗಳನ್ನು ಹರಾಜು ಮಾಡಿ ಪರವಾನಗಿ ಸಹ ನೀಡಲಾಗಿದೆ. ಆದರೆ, ಯಾರೂ ಮಾರುಕಟ್ಟೆಯಲ್ಲಿ ವಹಿವಾಟು ಮಾಡದೇ ಬಸ್‌ನಿಲ್ದಾಣ, ಗ್ರಾ.ಪಂ. ಎದುರು, ವ್ಯಾಪಾರಸ್ಥರ ಮನೆಗಳ ಮುಂದೆ ವ್ಯಾಪಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಸರಿಯಾದ ದರ ಸಿಗದೇ ಅನ್ಯಾಯವಾಗುತ್ತಿದೆ. ಹತ್ತಿ ಋತುವಿನಲ್ಲಿ ಟನ್‌ಗಟ್ಟಲೆ ಹತ್ತಿಯನ್ನು ಸಿಕ್ಕ-ಸಿಕ್ಕ ಕಡೆಗಳಲ್ಲಿ ತೂಕ ಮಾಡಲಾಗುತ್ತಿದೆ. ಮಾರುಕಟ್ಟೆ ಆರಂಭವಾದಲ್ಲಿ ಚಳ್ಳಕೆರೆ ಮಾರುಕಟ್ಟೆಗೆ ತೊಂದರೆಯಾಗಲಿದೆ ಎಂಬ ಕಾರಣ ಸಹ ಒತ್ತು ನೀಡಿದೆ ಎಂದು ಅವರು ಹೇಳುತ್ತಾರೆ.

ಮಾರುಕಟ್ಟೆ ವ್ಯರ್ಥವಾಗುತ್ತಿರುವ ಬಗ್ಗೆ ಲೋಕಾಯಕ್ತಕ್ಕೆ ದೂರು ಸಲ್ಲಿಸಿದ್ದ ಕಾರಣ, ಕುರಿ ಮಾರಾಟವನ್ನು ಮಾತ್ರ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿದೆ. ಲೋಕಾಯಕ್ತ ತನಿಖೆ ಪರಿಣಾಮ ಜುಲೈ 19ರಂದು ಮಾರುಕಟ್ಟೆ ಜಿಲ್ಲಾ ಉಪ ನಿರ್ದೇಶಕರು ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಈಚೆಗೆ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಎಲ್ಲಾ ಉಪ ಮಾರುಕಟ್ಟೆಗಳನ್ನು ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಹೇಳಿಕೆ ನೀಡಿರುವುದು ಸಂತಸಕರ ಸಂಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಮಾರುಕಟ್ಟೆ ಆರಂಭಕ್ಕೆ ಕ್ರಮ ಕೈಗೊಳ್ಳುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT