ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಕ್ಕೇರದ, ಮೂರಕ್ಕಿಳಿಯದ ಬದುಕು

ಜಿಲ್ಲೆಯಲ್ಲಿ 17 ಸಾವಿರ ದಾಟಿದ ಅಂಗವಿಕಲರ ಸಂಖ್ಯೆ
Last Updated 3 ಡಿಸೆಂಬರ್ 2013, 9:56 IST
ಅಕ್ಷರ ಗಾತ್ರ

ಕಾರವಾರ: ಅಂಗವಿಕಲರ ಶ್ರೇಯೋಭಿ ವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ, ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ, ನಿಗದಿತ ಸಮಯಕ್ಕೆ ದೊರೆಯದಿರುವುದರಿಂದ ಜಿಲ್ಲೆಯ ಅಂಗವಿಕಲರ ಬದುಕು ಆರಕ್ಕೇರದು, ಮೂರಕ್ಕಿಳಿಯದು ಎನ್ನುವಂತಾಗಿದೆ.

ಹೌದು. ಜಿಲ್ಲೆಯಲ್ಲಿ ಒಟ್ಟು  17,488 ಅಂಗವಿಕಲರಿದ್ದು, ಅಧಿಕಾರಿ ಗಳ ವಿಳಂಬ ನೀತಿಯಿಂದ ಅವರು ಸೌಲಭ್ಯ ಪಡೆಯುವುದಕ್ಕಾಗಿ ಸರ್ಕಾರಿ ಕಚೇರಿಗಳತ್ತ ಅಲೆಯುತ್ತಿದ್ದಾರೆ.

ಅಂಗವಿಕಲರಲ್ಲಿ ಕೆಲವರು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡರೆ ಮತ್ತೆ ಕೆಲವರು ಸರ್ಕಾರದ ಸೌಲಭ್ಯವನ್ನು ನಿರೀಕ್ಷಿಸದೇ ಸ್ವ ಉದ್ಯೋಗ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ರಸ್ತೆಬದಿಗಳಲ್ಲಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಸ್ವಾವಲಂಬಿಯಾಗಿ ದುಡಿಯುತ್ತಿದ್ದಾರೆ.

‘ಅಂಗವಿಕಲರಿಗೆ ಸಿಗುವ ಮಾಸಾಶನ ಕೆಲ ತಿಂಗಳಿಂದ ಸ್ವಲ್ಪ ಹೆಚ್ಚಳ ಮಾಡಲಾಗಿದೆ. ಶೇ 40–77ರಷ್ಟು ವೈಕಲ್ಯ ಇರುವವರಿಗೆ ₨ 400ರಿಂದ ₨ 500ಕ್ಕೆ ಹಾಗೂ ಶೇ 75ರಿಂದ ಶೇ 100ರಷ್ಟು ವೈಕಲ್ಯ ಇರುವವರಿಗೆ ₨ 1,000ದಿಂದ ₨ 1,200ಗೆ ಹೆಚ್ಚಳ ಮಾಡಲಾಗಿದೆ. ಆದರೆ, ಅಂಗವಿಕಲತೆ ಇರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳಲು ಹೋದರೆ ವೈದ್ಯರು ವಿಳಂಬ ನೀತಿ ಅನುಸರಿಸು ತ್ತಾರೆ ಮತ್ತು ಲಂಚ ಕೇಳುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಂಗವಿಕಲರೊಬ್ಬರು ದೂರಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್‌, ದೃಷ್ಟಿಹೀನರಿಗೆ ಕೋಲು (ವಾಕಿಂಗ್‌ ಸ್ಟಿಕ್‌), ಕಿವುಡರಿಗೆ ಶಬ್ದ ಕೇಳುವ ಸಾಧನಗಳು ಸೇರಿದಂತೆ ವಿವಿಧ ಸಾಧನೋಪಕರಣಗಳನ್ನು ವಿತರಿಸಲಾಗುತ್ತದೆ. ಆದರೆ, ಈ ಸಾಧನಗಳನ್ನು ಪಡೆದುಕೊಳ್ಳಲು ರಾಜಕೀಯ ಲಾಬಿ ನಡೆಸಲಾಗುತ್ತಿದೆ. ಇದರಿಂದ ಹೆಚ್ಚಿನ ಅಂಗವೈಕಲ್ಯ ಇರುವವರಿಗೆ ಈ ಸೌಲಭ್ಯಗಳು ಸರಿಯಾಗಿ ಲಭ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಅಂಗವಿಕಲರಿಗೆ ₨ 550 ಪಡೆದು ಕೆಎಸ್‌ಆರ್‌ಟಿಸಿ ಬಸ್‌ಪಾಸ್‌ ನೀಡುತ್ತಿದೆ. ಈ ಪಾಸ್‌ನಲ್ಲಿ 100 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಬಹುದು ಎಂಬ ನಿಯಮವಿದೆ. ಆದರೆ, 75 ಕಿ.ಮೀ.ಗಿಂತ ದೂರ ಕ್ರಮಿಸಿದರೆ ಸಾಕು ನಿರ್ವಾಹಕರು ಹಣ ಕೇಳುತ್ತಾರೆ’ ಎಂದು ಸುರೇಶ್‌ ತಾಂಡೇಲ್‌ ‘ಪ್ರಜಾವಾಣಿ’ಯೊಂದಿಗೆ ಅವಲತ್ತು ಕೊಂಡರು.

17,488 ಅಂಗವಿಕಲರು:  ಜಿಲ್ಲೆಯಲ್ಲಿರುವ 17, 488 ಅಂಗವಿಕಲ ರಿದ್ದು, ಈ ಪೈಕಿ ದೈಹಿಕ ಹೂನತೆ, ಅಂಧತ್ವ, ಮಂದದೃಷ್ಟಿ, ಶ್ರವಣದೋಷ, ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥರು ಸೇರಿದ್ದಾರೆ.

ಒಟ್ಟು ಅಂಗವಿಕಲರ ಸಂಖ್ಯೆಯಲ್ಲಿ 9 ಸಾವಿರಕ್ಕಿಂತ ಹೆಚ್ಚು ಮಂದಿ ದೈಹಿಕ ನ್ಯೂನ್ಯತೆ ಉಳ್ಳವರಾಗಿದ್ದಾರೆ.

ಸಮರ್ಪಕವಾಗಿ ಬಳಕೆಯಾಗದ ಅನುದಾನ
ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರದಿಂದ ವರ್ಷದಿಂದ ಒಂದು ಕೋಟಿ ಅನುದಾನ ಬರುತ್ತದೆ. ಇದರಲ್ಲಿ ಶೇ 3ರಷ್ಟು ಹಣವನ್ನು ಅಂಗವಿಕಲರ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಮವಿದೆ. ಆದರೆ, ಪಂಚಾಯ್ತಿಗಳು ಆ ಹಣವನ್ನು ಇತರೆ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ವ್ಯಯ ಮಾಡುತ್ತಿವೆ.

-ಪ್ರವೀಣ್‌ಕುಮಾರ್‌ ಶೆಟ್ಟಿ ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT