ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರದ ಬೆಂಕಿ: ಶೀತಲೀಕರಣ ಕಟ್ಟಡ ಕುಸಿತ

ರೂ.20 ಕೋಟಿಗೂ ಅಧಿಕ ನಷ್ಟ ಅಂದಾಜು...
Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬಳ್ಳಾರಿ: ಸ್ಥಳೀಯ ಕೈಗಾರಿಕಾ ಪ್ರದೇಶದಲ್ಲಿನ ಶೀತಲೀಕರಣ ಘಟಕ `ಸಾಯಿ ಬಾಲಾಜಿ ಕೋಲ್ಡ್ ಸ್ಟೋರೇಜ್' ಗೋದಾಮಿನಲ್ಲಿ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಬೆಂಕಿಯನ್ನು ತಹಬದಿಗೆ ತರುವ ಕಾರ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರವೂ ಮುಂದುವರಿಸಿದ್ದು, ಕೋಟ್ಯಂತರ ಮೌಲ್ಯದ ಗೋದಾಮಿನ ಕಟ್ಟಡ ಕುಸಿದುಬಿದ್ದಿದೆ.

ರೈತರು ಇರಿಸಿದ್ದ ಮೆಣಸಿನಕಾಯಿ ಸೇರಿದಂತೆ  ವಿವಿಧ ಬಗೆಯ ಆಹಾರಧಾನ್ಯ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕಟ್ಟಡವೂ ಸೇರಿದಂತೆ ಒಟ್ಟಾರೆ ರೂ. 20 ಕೋಟಿಗೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಭಾನುವಾರ ರಾತ್ರಿಯವರೆಗೂ ಬೆಂಕಿ ನಂದಿಸಲು ಯತ್ನಿಸಿದರೂ ಫಲಕಾರಿ ಆಗದ್ದರಿಂದ, ಸೋಮವಾರ ಬೆಳಿಗ್ಗೆ ಹುಬ್ಬಳ್ಳಿಯಿಂದ ತರಿಸಲಾದ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯದ `ಸ್ಕೈ ಲಿಫ್ಟರ್'ನ ಸಹಾಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯು, ರಾತ್ರಿಯವರೆಗೂ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದರು.

ಶೀತಲೀಕರಣ ಗೋದಾಮಿನಲ್ಲಿ ಇರಿಸಲಾಗಿದ್ದ ಅಂದಾಜು ರೂ 10 ಕೋಟಿ ಮೌಲ್ಯದ ಮೆಣಸಿನಕಾಯಿ, ಕಡಲೆ, ಜೋಳ, ಗೋಧಿ, ಹವೀಜ, ಹುಣಸೆಹಣ್ಣು, ಸಜ್ಜೆ, ಗೋವಿನಜೋಳ ಮತ್ತಿತರ ಆಹಾರ ಸಾಮಗ್ರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹೆಚ್ಚು ದರ ಸಿಗುವವರೆಗೆ ಸುರಕ್ಷಿತವಾಗಿರಲಿ ಎಂದೇ ಗೋದಾಮಿನಲ್ಲಿ ಇರಿಸಿದ್ದ ರೈತರಲ್ಲಿ ತೀವ್ರ ಆತಂಕ ಮೂಡಿದೆ.

ಗೋದಾಮಿನ ಕಟ್ಟಡ ಮತ್ತು ಆಹಾರ ಉತ್ಪನ್ನಗಳನ್ನು ಸಂಪೂರ್ಣ ವಿಮಾ ಸೌಲಭ್ಯಕ್ಕೆ ಪಳಪಡಿಸಲಾಗಿದೆ. ವಿಮಾ ಸಂಸ್ಥೆ ಪರಿಹಾರ ಬಿಡುಗಡೆ ಮಾಡಿದ ಕೂಡಲೇ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೋದಾಮಿನ ಮೇಲ್ವಿಚಾರಕರು ತಿಳಿಸಿದ್ದಾರೆ.

ವಿಷಾನಿಲದ ಅಪಾಯ: ಶೀತಲೀಕರಣ ಘಟಕದ ಪಕ್ಕದಲ್ಲೇ ಇರಿಸಲಾಗಿರುವ 500 ಕೆ.ಜಿ. ಪ್ರಮಾಣದ ದ್ರವೀಕೃತ ಅಮೋನಿಯಾ ಒಂದೊಮ್ಮೆ ಸ್ಫೋಟಿಸಿದಲ್ಲಿ ವಿಷಾನಿಲ ಹೊರಸೂಸುವ ಸಾಧ್ಯತೆ ಇದೆ. ಇದು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಚಿಂತೆಗೀಡುಮಾಡಿದೆ.

`ತಂಪನೆಯ ವಾತಾವರಣ ಕಲ್ಪಿಸಲು ಬಳಕೆಯಾಗುವ ಈ ದ್ರವೀಕೃತ ಅಮೋನಿಯಾ ಇರುವ ಟ್ಯಾಂಕರನ್ನು ಬೇರೆಡೆ ಸ್ಥಳಾಂತರಿಸುವುದು ಅಸಾಧ್ಯ. ಕಟ್ಟಡದ ಇನ್ನೊಂದು ಪಾರ್ಶ್ವ ಟ್ಯಾಂಕರ್ ಇರಿಸಿರುವ ಸ್ಥಳದತ್ತ ಕುಸಿದು ಬಿದ್ದಲ್ಲಿ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಅಗ್ನಿಶಾಮಕದ ದಳದ ಅಧಿಕಾರಿ ಎಂ.ಎನ್. ನರಸಿಂಹಮೂರ್ತಿ ತಿಳಿಸಿದ್ದಾರೆ.

`ಬೆಂಕಿಯ ಕೆನ್ನಾಲಿಗೆ ಕಟ್ಟಡದೊಳಗೆ ವ್ಯಾಪಿಸಿದ್ದು, ಒಳಗೆ ಇರಿಸಲಾಗಿರುವ ಆಹಾರ ಉತ್ಪನ್ನಗಳನ್ನು ಹೊರತರುವುದು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕುಸಿಯುತ್ತಿರುವ ಕಟ್ಟಡದ ಒಳಗೆ ಹೋಗುವುದೂ ಅಪಾಯಕಾರಿ. ಜಿಲ್ಲೆಯ ಇತರೆಡೆಗಳಿಂದಲೂ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಇದುವರೆಗೆ ಒಟ್ಟು 200ಕ್ಕೂ ಅಧಿಕ  ಟ್ರಿಪ್ ನೀರು ಸಿಂಪಡಿಸಿದರೂ ಬೆಂಕಿ ನಂದಿಲ್ಲ' ಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಠಾಣೆಯ ಡಿವೈಎಸ್‌ಪಿ ರುದ್ರಮುನಿ, ತಹಶೀಲ್ದಾರ್ ಶರಣಪ್ಪ, ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT