ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಧನೆ-ಶೋಷಣೆ ಸ್ತ್ರೀ ಪಾತ್ರಗಳ ಎರಡು ಮುಖಗಳು

ನೂರು ಕಣ್ಣು ಸಾಲದು
Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಸಮಾಜದಲ್ಲಿ ಮಹಿಳೆಯರ ಬಗ್ಗೆ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಾ ಬಂದಿರುವ ವಿಚಾರ ಇಂದು ನಿನ್ನೆಯದಲ್ಲ.  ಆರಾಧನೆ ಹಾಗೂ ಶೋಷಣೆಗೆ ಹೆಣ್ಣುಮಕ್ಕಳು ಒಳಗಾಗುತ್ತಿರುವುದು ಸಮಕಾಲೀನ ಸ್ಥಿತಿಯಲ್ಲೂ ವಾಸ್ತವ. ಸಮಾಜದಲ್ಲಿನ ಘಟನೆಗಳಿಗೆ ಚಿತ್ರರಂಗ ಮೂಕಿ ಯುಗದಿಂದಲೂ ಸ್ಪಂದಿಸುತ್ತಿದೆ. ಆ ಸ್ಪಂದನ ಈಗಲೂ ಪರಿಣಾಮಕಾರಿಯಾಗಿದೆ.

`ಪರಾಶಕ್ತಿ', `ಕಾಳಿ', `ಸಂತೋಷಿ ಮಾ' ಹಾಗೂ `ಕಲ್ಯಾಣದುರ್ಗಾ' ಮಹಿಳೆಯನ್ನು ಶಕ್ತಿ ಸ್ವರೂಪಿಣಿ ಎಂದು ಬಿಂಬಿಸಿ ತಯಾರಾದ ಕೆಲವು ಪ್ರಮುಖ ಚಿತ್ರಗಳು. ಇಂಥ ಚಿತ್ರಗಳ ಇನ್ನೊಂದು ತುದಿಗೆ ಶೋಷಿತ ಸ್ತ್ರೀಯರ ದುಃಖ-ದುಮ್ಮೋನಗಳನ್ನು ಹೊತ್ತು ತರುವ ಸಿನಿಮಾಗಳೂ ರೂಪುಗೊಂಡಿವೆ. ಆದರೆ ಮಹಿಳೆಯರನ್ನು ದೇವತೆಯಂತೆ ಆರಾಧಿಸುವ ಚಿತ್ರಗಳ ಸಂಖ್ಯೆಯ ಎದುರು ಸ್ತ್ರೀ ತವಕ ತಲ್ಲಣಗಳನ್ನು ಒಳಗೊಂಡ ಚಿತ್ರಗಳ ನಿರ್ಮಾಣ ಬಹಳ ವಿರಳ.

ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ ಕೆ. ಸುಬ್ರಮಣ್ಯಮ್ 1930ರ ದಶಕದಲ್ಲಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಿರ್ದೇಶಿಸಿದ  `ಬಾಲ ಯೋಗಿನಿ' ಬಹು ಚರ್ಚಿತವಾದ ಚಿತ್ರಗಳಲ್ಲೊಂದು. ಬಾಲ ವಿಧವೆಯೊಬ್ಬಳು ಅನುಭವಿಸುವ ಯಾತನಾಮಯ ಬದುಕನ್ನು ಎಳೆಎಳೆಯಾಗಿ ಬಿಡಿಸಿಡುವ `ಬಾಲ ಯೋಗಿನಿ', ಬಾಲ್ಯ ವಿವಾಹ ಪದ್ಧತಿಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರವಾಗಿ ಚರ್ಚಿಸಿತು.

ಆ ಸಂದರ್ಭದಲ್ಲಿ ಕಟು ಟೀಕೆಗಳನ್ನು ಎದುರಿಸಿದ ಈ ಚಿತ್ರದಲ್ಲಿ ಬ್ರಾಹ್ಮಣ ಮಹಿಳೆಯೊಬ್ಬಳು ತಲೆಕೂದಲು ತೆಗೆಸಿಕೊಂಡು ಅಭಿನಯಿಸಿದ್ದರು. ಇಂತಹ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸಲೂ ಹಿಂಜರಿಯುತ್ತಿದ್ದ ಆ ಕಾಲಘಟ್ಟದಲ್ಲಿ ಚಲನಚಿತ್ರ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಪರಿಣಾಮವಾಗಿ ನಿರ್ದೇಶಕ ಕೆ. ಸುಬ್ರಮಣ್ಯಮ್ ಅವರು ತಮ್ಮ ಸಮುದಾಯದಿಂದಲೇ ಬಹಿಷ್ಕಾರಕ್ಕೆ ಒಳಗಾದರು.

ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ದನಿ ಎತ್ತುವಂತಹ ಧೈರ್ಯ ತೋರಿದ ನಿರ್ದೇಶಕ ಸುಬ್ರಮಣ್ಯಮ್, ಶ್ರೀಮಂತ ಕುಟುಂಬಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪ್ರವೃತ್ತಿಯನ್ನು ಪ್ರಶ್ನಿಸಿದರು. ಈ ಪ್ರಯತ್ನದ ಫಲವಾಗಿಯೇ ಅವರ'ತ್ಯಾಗ ಭೂಮಿ' ಎನ್ನುವ ಚಿತ್ರವನ್ನೂ ಗುರ್ತಿಸಬಹುದು.

ಸಿರಿವಂತ ಗಂಡ ತನ್ನ ಹೆಂಡತಿಯನ್ನು ಆಟದ ಗೊಂಬೆಯನ್ನಾಗಿ ಮಾಡಿಕೊಂಡು ಕಿರುಕುಳ ಕೊಡುವುದೇ ಅಲ್ಲದೆ ಆಕೆಯನ್ನು ಮನೆಯಿಂದ ಹೊರಗಟ್ಟುತ್ತಾನೆ. ತನಗಾದ ಅನ್ಯಾಯದಿಂದ ಸಿಡಿದೇಳುವ ಆ ಹೆಣ್ಣುಮಗಳು ಸ್ವಂತ ಪರಿಶ್ರಮದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುತ್ತಾಳೆ. ಹಣ ಹಾಗೂ ಖ್ಯಾತಿಯನ್ನು ಪಡೆಯುತ್ತಾಳೆ. ತನ್ನ ಹಣವನ್ನೆಲ್ಲ ಕಳೆದುಕೊಂಡ ಆಕೆಯ ಪತಿ ಬೀದಿಗೆ ಬಂದು ಅನಾಥನಾಗಿರುತ್ತಾನೆ.

ಆತ ತನ್ನ ಪತ್ನಿಯ ಬಳಿ ಬಂದು ತನ್ನ ತಪ್ಪುಗಳನ್ನು ಕ್ಷಮಿಸಲು ಅಂಗಲಾಚುತ್ತಾನೆ. ಮತ್ತೆ ತನ್ನನ್ನು ಪತಿಯೆಂದು ಸ್ವೀಕರಿಸಲು ಬೇಡುತ್ತಾನೆ. ಆದರೆ, ಪುರುಷ ಸಮಾಜದಿಂದ ಮಹಿಳೆಗಾದ ಅವಮಾನವನ್ನು ಮರೆಯದ ಪತ್ನಿ, ತನ್ನ ಪತಿಯನ್ನು ಮತ್ತೆ ಒಪ್ಪಿಕೊಳ್ಳಲು ನಿರಾಕರಿಸುತ್ತಾಳೆ. ಆದರೆ ಆತನನ್ನು ಕ್ಷಮಿಸಿ ಆತನೊಡನೆ ಸೌಹಾರ್ದದಿಂದ ಇರಲು ನಿರ್ಧರಿಸುತ್ತಾಳೆ. ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುವಂತಹ `ತ್ಯಾಗ ಭೂಮಿ' ಸಿನಿಮಾದ ಕಥಾ ಹಂದರವನ್ನೇ ಪ್ರಧಾನವಾಗಿಟ್ಟು ಭಾರತದ ಅನೇಕ ಭಾಷೆಗಳಲ್ಲಿ ಇಂತಹ ಚಿತ್ರಗಳು ತಯಾರಾಗಿವೆ.

ವಿಧವೆಯಾದರೆ ಆಕೆ ಬದುಕಿದ್ದರೂ ಸತ್ತಂತೆ ಇರಬೇಕಾದ ಅನಿಷ್ಟ ಸಂಪ್ರದಾಯಗಳು ಹಿಂದೆ ಇದ್ದವು. ಹೀಗಾಗಿ ಗಂಡನ ಚಿತೆಗೆ ಹೆಂಡತಿಯೂ ಹಾರಿ ಆತ್ಮಾಹುತಿ ಮಾಡಿಕೊಳ್ಳುವ `ಸತಿ  ಪದ್ಧತಿ' ಆಚರಣೆಯಲ್ಲಿತ್ತು. ಸಮಾಜದ ಇಂತಹ ಮೌಢ್ಯಗಳನ್ನು ತೆರೆಯ ಮೇಲೆ ತರುವ, ಅದಕ್ಕೆ ಪರಿಹಾರ ನೀಡುವ ಅನೇಕ ಚಿತ್ರಗಳೂ ಭಾರತೀಯ ತೆರೆಯ ಮೇಲೆ ಬಂದಿವೆ. ಈಗಲೂ ಬರುತ್ತಿವೆ. 

ಒಂದರ್ಥದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ ತಲೆಕೂದಲು ತೆಗೆಸಿಕೊಂಡು, ಬಿಳಿ ಅಥವಾ ಕೆಂಪು ಸೀರೆಗಳನ್ನು ಧರಿಸಿ ಮಾನಸಿಕ ಕ್ಷೋಭೆಗೆ ತುತ್ತಾಗುವ ಯುವ ವಿಧವೆಯರಿಗೆ ದಾರಿದೀಪ ಆಗುವಂತಹ, ವೈಧವ್ಯಕ್ಕೆ ಪರಿಹಾರ ಸೂಚಿಸುವ ಚಿತ್ರವನ್ನು ದಕ್ಷಿಣದ ಹೆಸರಾಂತ ನಿರ್ದೇಶಕ ಬಿ.ಎನ್. ರೆಡ್ಡಿ ಅವರು ನಿರ್ದೇಶಿಸಿದರು. ಆ ಚಿತ್ರದ ಹೆಸರು `ಸುಮಂಗಲಿ'. 

ಗಂಡ ತೀರಿಕೊಂಡರೂ ಪತ್ನಿ ಮರುಮದುವೆ ಮಾಡಿಕೊಳ್ಳಬಹುದೆಂಬ ಕಥಾ ಹಂದರವಿದ್ದ `ಸುಮಂಗಲಿ' ದಕ್ಷಿಣದ ಬಹುತೇಕ ಭಾಷೆಗಳ್ಲ್ಲಲಿ ಸಿದ್ಧವಾಯಿತು. ಇಂತಹ ಸಂಪ್ರದಾಯ ಆಚರಿಸುವ ಸಮಾಜಗಳಿಂದ ತೀವ್ರ ಟೀಕೆಗಳಿಗೆ ಒಳಗಾದರೂ `ಸುಮಂಗಲಿ' ನೋಡುಗರ ಮೆಚ್ಚುಗೆ ಪಡೆಯಿತು.

ಬಾಲ ವಿಧವೆಯರು ಪಡುವ ಬವಣೆಯನ್ನು ಚಲನಚಿತ್ರ ಮಾಧ್ಯಮ ಆಗಾಗ ಅನಾವರಣಗೊಳಿಸುತ್ತಲೇ ಬರುತ್ತಿದೆ. ಕನ್ನಡದ `ಫಣಿಯಮ್ಮ' ಇಂತಹದ್ದೇ ಕಥೆಯುಳ್ಳದ್ದು. ಪ್ರೇಮಾ ಕಾರಂತರು ನಿರ್ದೇಶಿಸಿದ, ಎಂ.ಕೆ. ಇಂದಿರಾ ಅವರ ಕಾದಂಬರಿ ಆಧರಿಸಿದ `ಫಣಿಯಮ್ಮ'  ಮಹಿಳೆಯರ ಸ್ವಾಭಿಮಾನವನ್ನು ಎತ್ತಿಹಿಡಿಯುವಂತಹ ಸಂದೇಶವನ್ನು ಹೊತ್ತುತಂದ ಚಿತ್ರ. ಪತಿ ನಿಧನದ ಬಳಿಕ ಯುವ ಪತ್ನಿ ಸಂಪ್ರದಾಯದಂತೆ ತಲೆ ಬೋಳು ಮಾಡಿಸಿಕೊಳ್ಳಲು ನಿರಾಕರಿಸುವ ದಿಟ್ಟ ನಿರ್ಧಾರವನ್ನು `ಫಣಿಯಮ್ಮ' ಚಿತ್ರ ಒಳಗೊಂಡಿತ್ತು.

ಮಹಿಳೆಯರ ಸಮಸ್ಯೆಗಳನ್ನು ಪುರುಷರು ವಿಶ್ಲೇಷಿಸುವುದರಿಂದ ಆಗುವ ಪರಿಣಾಮಕ್ಕಿಂತ ಭಿನ್ನವಾದ ಹಾಗೂ ವಿವಿಧ ಒಳನೋಟಗಳನ್ನು ಒಳಗೊಂಡಿರುವ ನಿರ್ದೇಶಕಿಯರ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ.

ಪ್ರೇಮಾ ಕಾರಂತರ ನಂತರ ವಿಜಯ್ ಮೆಹತಾ ವಿಧವೆಯರ ಸಂಕಷ್ಟಗಳನ್ನು `ರಾವ್ ಸಾಹೇಬ್' ಚಿತ್ರದ ಮೂಲಕ ಅನಾವರಣಗೊಳಿಸಿದರು. ಹಿಂದೂ ಸಮಾಜದ ಕೆಲವರ್ಗಗಳಲ್ಲಿ ಆಚರಿಸುವ ಸಂಪ್ರದಾಯಗಳಿಂದ ವಿಧವೆಯರ ಜೀವನದಲ್ಲಿ ಆಗುವ ದುರಂತಗಳನ್ನು ಈ ಚಿತ್ರ ಬೆಳಕಿಗೆ ತಂದಿತು.

ಬಾಲ ವಿಧವೆಯರ ಮನ ಕಲಕುವ ಪರಿಸ್ಥಿತಿಯನ್ನು `ಫಣಿಯಮ್ಮ', `ರಾವ್ ಸಾಹೇಬ್' ರೀತಿಯ ಚಿತ್ರಗಳು ನೋಡುಗರ ಮನ ಮುಟ್ಟುವಂತೆ ಕಟ್ಟಿಕೊಟ್ಟವು. ಜೊತೆಗೆ ಸಮಾಜದಲ್ಲಿನ ನ್ಯೂನತೆಗಳತ್ತ ಬೆಟ್ಟುಮಾಡಿ ತೋರಿಸಿದವು.

ಹೆಣ್ಣು ಮನಸ್ಸಿನಲ್ಲಾಗುವ ಏರುಪೇರುಗಳನ್ನು ಸಮರ್ಥವಾಗಿ ಹೊರ ಹಾಕಿದ ಈ ಚಿತ್ರಗಳು, ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳ ಸ್ವಾತಂತ್ರ್ಯಹರಣ, ಪತಿಯಿಂದಾಗುವ ಮಾನಸಿಕ ಹಾಗೂ ದೈಹಿಕ ಹಿಂಸೆ, ಅತ್ತೆ ಮಾವಂದಿರಿಂದ ಉಂಟಾಗುವ ಕಿರುಕುಳ ಮೊದಲಾದ ಸಂಕಷ್ಟಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದವು. ಎಳೆಯ ವಯಸ್ಸಿನಲ್ಲೇ ವಿಧವೆಪಟ್ಟ ಪಡೆದುಕೊಳ್ಳುವ ಹೆಣ್ಣು ಮಗುವಿನ ಕಷ್ಟ ಕೋಟಲೆಗಳನ್ನು ಸಮಾಜದ ಮುಂದಿಡುವ ಪ್ರಯತ್ನ ಇಂದಿಗೂ ಪ್ರಸ್ತುತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT