ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಧನೋತ್ಸವದಲ್ಲಿ ಸಂಗೀತ ಪ್ರವಾಹ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಜನವರಿ ಮತ್ತು ಫೆಬ್ರುವರಿ ಬಂತೆಂದರೆ ಅದು ತ್ಯಾಗರಾಜ ಆರಾಧನಾ ಸಮಯ. ವಿವಿಧ ಸಂಘ ಸಂಸ್ಥೆಗಳು ಸಂತ, ವಾಗ್ಗೇಯಕಾರ ಶ್ರೀ ತ್ಯಾಗರಾಜರ ಆರಾಧನೆಯನ್ನು ಭಕ್ತಿ ಶ್ರದ್ಧೆಗಳು ಮತ್ತು ಅವರದೇ ಕೀರ್ತನೆಗಳನ್ನು ಹಾಡುವುದರ ಮೂಲಕ ಆಚರಿಸುತ್ತವೆ. ಇದೇ ಸಂದರ್ಭದಲ್ಲಿ ಪುರಂದರದಾಸರ ಆರಾಧನೆಯನ್ನೂ ಆಚರಿಸುವುದು ವಾಡಿಕೆ. ಈ ಇಬ್ಬರೂ ಶ್ರೇಷ್ಠರ ನೆನಪಿನಲ್ಲಿ ಸಂಗೀತೋತ್ಸವಗಳೂ ನಡೆಯುತ್ತಿರುವುದು ಸಂಗೀತಪ್ರಿಯರಿಗೆ ರಸದೌತಣದಂತಾಗಿದೆ.

ಮಲ್ಲೇಶ್ವರದ ನಾದಜ್ಯೋತಿ ಶ್ರೀತ್ಯಾಗರಾಜಸ್ವಾಮಿ ಭಜನ ಸಭೆ ಸತತವಾಗಿ 45 ವರ್ಷಗಳಿಂದ ನಾದಜ್ಯೋತಿ ಆರಾಧನಾ ಸಂಗೀತೋತ್ಸವ ಏರ್ಪಡಿಸುತ್ತಿದೆ. ಈ ಬಾರಿಯ ಒಂಬತ್ತು ದಿನಗಳ ಉತ್ಸವ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಆರಂಭಗೊಂಡಿತು. ಜತೆಗೆ ಊಂಛವೃತ್ತಿ ಹಾಗೂ ಪಂಚರತ್ನ ಕೃತಿಗಳ ಗಾಯನ ಕಾರ್ಯಕ್ರಮಗಳೂ ನಡೆದವು.


ಮೊದಲ ಕಛೇರಿಯನ್ನು ಯುವ ಕೊಳಲು ವಾದಕ ಮೈಸೂರು ಎ. ಚಂದನ್‌ಕುಮಾರ್ ಪ್ರಸ್ತುತ ಪಡಿಸಿದರು. ನಾಜೂಕಿನ ಊದುವಿಕೆ, ಸಾಹಿತ್ಯ ಸ್ಫುಟತೆಯ ತುತ್ತುಕ್ಕಾರಗಳು, ಭಾವರಾಗಗಳಿಗೆ ಇಂಬು ಕೊಡುವಂತಹ ಲಯ ನಿರ್ವಹಣೆ, ಸುಖ ನೀಡಿದ ಮಂದ್ರ ಸಂಚಾರಗಳು ಇತ್ಯಾದಿಯಾಗಿ ಅವರ ನುಡಿಸಾಣಿಕೆ ಸಹೃದಯಿಗಳ ಮನಸ್ಸನ್ನು ಜಯಿಸಿತು.

ಆರಂಭ ವಿಳಂಬವಾದರೂ ಉದಾತ್ತ ಮನೋಧರ್ಮ ಮತ್ತು ಮಂಡನೆಗಳಿಂದ ಚಂದನ್‌ಕುಮಾರ್ ತಮ್ಮ ಕಛೇರಿಯನ್ನು ಚಂದಗಾಣಿಸಿದರು. ನೇರವಾಗಿ ಎಂದರೋ ಮಹಾನುಭಾವರನ್ನು ವಂದಿಸಿ ಮುನ್ನಡೆದರು. ಆ ಪಂಚರತ್ನ ಕೀರ್ತನೆಯ ಸ್ವರ ಸಾಹಿತ್ಯವನ್ನು ಪಿಟೀಲು ವಾದಕ ಎಸ್. ಶೇಷಗಿರಿರಾವ್ ಅವರೊಡನೆ ಹಂಚಿಕೊಂಡು ನುಡಿಸಿ ಮುದಗೊಳಿಸಿದರು. ಸಾಕಷ್ಟು ಗಹನತೆಯಿಂದ ನಿರೂಪಿಸಬೇಕಾದ ಧರ್ಮವತಿ ರಾಗವನ್ನು ವಿಶದಪಡಿಸುವಾಗ ಅವರ ಪ್ರತಿಭೆ ಮತ್ತು ವಿದ್ವತ್ತು ಪ್ರಕಟಗೊಂಡಿತು. ಪರಂಧಾಮವತಿ ಕೀರ್ತನೆಯನ್ನು ನೆರವಲ್ ಮತ್ತು ಕಲ್ಪನಾಸ್ವರಗಳಿಂದ ಅಲಂಕರಿಸಿ ಶಾಸ್ತ್ರ ಬದ್ಧತೆ ತೋರಿದರು. ಭಜರೇಮಾನಸ (ಅಭೇರಿ) ಅವರ ವೇಣುವಾದನ ವೈಖರಿಯ ವಿಶಿಷ್ಟತೆ ತುಂಬಿಕೊಂಡಿತ್ತು. ಎಸ್. ಶೇಷಗಿರಿರಾವ್ (ಪಿಟೀಲು), ಎ. ವಿ. ಆನಂದ್(ಮೃದಂಗ) ಮತ್ತು ಎಂ. ಗುರುರಾಜ್(ಮೋರ್ಸಿಂಗ್) ಅವರ ಸಹಸ್ಪಂದನ ಉಪಯುಕ್ತವಾಗಿತ್ತು.

ಯುಗಳ ಗಾಯನ
ಗಾಢವಾದ ಸಂಪ್ರದಾಯ ನಿಷ್ಠೆಯಿಂದ ಹಾಡುವ ರುದ್ರಪಟ್ಟಣಂ ಸೋದರರು ಎಂತಲೇ ಸುಪ್ರಸಿದ್ಧರಾಗಿರುವ ಆರ್. ಎನ್. ತ್ಯಾಗರಾಜನ್ ಮತ್ತು ಆರ್.ಎನ್. ತಾರಾನಾಥನ್ ಸಂಗೀತೋತ್ಸವದ ಮೂರನೆಯ ದಿನ ತಮ್ಮ ಪಾಂಡಿತ್ಯ, ಸಮನ್ವಯ ದೃಷ್ಟಿಕೋನ ಮತ್ತು ಅನುಭಾವಪೂರ್ಣ ನಿದರ್ಶನಗಳನ್ನು ಒದಗಿಸಿದರು. ಆಯ್ಕೆ ಮತ್ತು ಪ್ರಸ್ತುತಿಗಳಿಂದ ಹಲವಾರು ನೆಮ್ಮದಿಯ ಕ್ಷಣಗಳನ್ನು ಸೃಷ್ಟಿಸಿದರು.

ದರ್ಬಾರ್ ವರ್ಣದೊಂದಿಗೆ ಕಛೇರಿಗೆ ಉತ್ತಮ ಚಾಲನೆ. ಗಟ್ಟಿಯಾದ ಅರಿವಿನಿಂದ ಹಾಡಬೇಕಾದ ಬೇಗಡೆ ರಾಗ ಮತ್ತು ಅದರಲ್ಲಿ ವಲ್ಲಭನಾಯಕಸ್ಯ ಕೃತಿಯನ್ನು ಸುಂದರವಾಗಿ ನಿರೂಪಿಸಿದರು. ಅದಕ್ಕೆ ಹೆಣೆಯಲಾಗಿದ್ದ ಸ್ವರಗಳು ಅವರ ಹೊಂದಾಣಿಕೆ ಮತ್ತು ಲಯ ಗಾಂಭೀರ್ಯವನ್ನು ಪ್ರದರ್ಶಿಸಿದವು. ಸಾಮ ರಾಗದ ಬೆಡಗನ್ನು ಚಿತ್ರಿಸಿ ಶಾಂತಮುಲೇಕ ಕೃತಿಗೆ ಸ್ವರವಿನ್ಯಾಸದ ಮೆರುಗನ್ನು ನೀಡಿದರು. ತಾರಾನಾಥನ್ ಅವರ ಕಂಠದಲ್ಲಿ ಸ್ವಲ್ಪ ತೊಂದರೆ ಕಾಣ ಬಂದಿತಾದರೂ ರಸಾಭಾಸವಾಗಲಿಲ್ಲ. ವಿಳಂಬದಲ್ಲಿ ಭೈರವಿ (ಕಾಮಾಕ್ಷಿ ಅಂಬ), ವಸಂತ (ಹರಿಹರಪುತ್ರಂ) ಮತ್ತು ಚಂದ್ರಚೂಡ ಶಿವಶಂಕರ ಶ್ರವಣ ಸುಖವನ್ನು ಇಮ್ಮಡಿಗೊಳಿಸಿದ ನಿರೂಪಣೆಗಳಾದವು.

ಚಾರುಲತಾ ರಾಮಾನುಜಂ (ಪಿಟೀಲು), ಹೆಚ್.ಎಸ್. ಸುಧೀಂದ್ರ (ಮೃದಂಗ) ಮತ್ತು ಬಿ.ರಾಜಶೇಖರ್ (ಮೋರ್ಸಿಂಗ್) ಪ್ರಬುದ್ಧ ಪಕ್ಕವಾದ್ಯಗಾರರಾಗಿ ಮೆರೆದರು.

ಪರಿಣಾಮಕಾರಿ ಅಭಂಗ
ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರ ಗಾಯನವೆಂದರೆ ಅದೊಂದು ಶ್ರೀಮಂತ ವಿನಿಕೆ. ಅವರ ಸಿರಿಕಂಠ, ವಿವಿಧ ರಚನೆಗಳನ್ನು ಹಾಡುವಾಗ ಭಾವಕ್ಕೆ ತಕ್ಕಂತಹ ಧ್ವನಿ ಹೊಂದಾಣಿಕೆ ಮುಂತಾದ ವಿಶಿಷ್ಟತೆಗಳಿಂದ ಅವರು ಚಿರಪರಿಚಿತರಾಗಿದ್ದಾರೆ.

ಆದರೆ ಸಂಗೀತೋತ್ಸವದ ನಾಲ್ಕನೆಯ ದಿನದಂದು ಅವರು ಹಾಡಿದಾಗ ಅವರು ತಮ್ಮ ಎಂದಿನ ಫಾರ್ಮ್‌ನಲ್ಲಿರದೆ ಏನೋ ಕೊರತೆ ಕಾಣಬಂದಿತು. ಜಯ ಜಯ ರಾಮಕೃಷ್ಣ ಹರಿಭಜನ್‌ನೊಂದಿಗೆ ಆರಂಭಿಸಿ ದುರ್ಗಾ ಮಾತಾ ಭವಾನಿ (ದುರ್ಗಾ) ಹಾಡಿದರು. ಕ್ಷೀರಾಬ್ಧಿ ಕನ್ನಿಕೆ ಮತ್ತು ಶ್ರೀನಿಕೇತನ ಸೊಗಸಾದ ಆಯ್ಕೆ. ಆದರೆ ಅವುಗಳ ಅಂತರ್ಗತ ಮಾಧುರ್ ಮತ್ತ ಲಾಲಿತ್ಯದಲ್ಲಿ ಸಂಗೀತ ಅವರ ಛಾಪು ಬಹಳ ಕಡಿಮೆ ಪ್ರಮಾಣದಲ್ಲಿ ಮೂಡಿ ಬಂದಿದ್ದು ಚಕಿತಗೊಳಿಸಿತು.

ಆದರೆ ಅವರು ಹಾಡಿದ ಕೆಲವು ಮರಾಠಿ ಅಭಂಗಗಳು ಉಂಟಾಗಿದ್ದ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದ್ದು ಸಮಾಧಾನಕರ. ರವೀಂದ್ರ ಕಾಟೋಟಿ (ಹಾರ್ಮೋನಿಯಂ), ರಾಜೇಶ್ (ಪ್ರಭಾವಗಳು) ಮತ್ತು ಉದಯರಾಜ ಕರ್ಪೂರ (ತಬಲ) ಸಾಥ್ ಸಮರ್ಥವಾಗಿತ್ತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT