ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಕೋಟಿ ಮೌಲ್ಯದ ವಸ್ತು ವಶ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದರೋಡೆ, ಕಳವು ಮತ್ತಿತರ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ಆಗ್ನೇಯ ವಿಭಾಗದ ಪೊಲೀಸರು ಸುಮಾರು ಆರು ಕೆ.ಜಿ ಚಿನ್ನಾಭರಣ ಹಾಗೂ 69 ಲಕ್ಷ ನಗದು ಸೇರಿದಂತೆ ಆರು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`ಸಿಬ್ಬಂದಿ 224 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ 150 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 22 ಕೆ.ಜಿ ಬೆಳ್ಳಿ ವಸ್ತುಗಳು, 569 ಲ್ಯಾಪ್‌ಟಾಪ್, 13 ಕಾರು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂರು ತಿಂಗಳ ಅವಧಿಯಲ್ಲಿ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಉತ್ತಮ ಕಾರ್ಯ ನಿರ್ವಹಿಸಿರುವ ಸಿಬ್ಬಂದಿಗೆ 2.50 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಏರ್‌ಪೋರ್ಟ್ ಠಾಣೆ ಪೊಲೀಸರು ಕನ್ನಕಳವು, ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಿ ಸುಮಾರು 2.27 ಕೋಟಿ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಜಯನಗರ ನಿವಾಸಿ ಶ್ರೀಹರ್ಷ (32) ಎಂಬಾತನನ್ನು ಬಂಧಿಸಿರುವ ಏರ್‌ಪೋರ್ಟ್ ಪೊಲೀಸರು 30 ಲಕ್ಷ ನಗದು ಹಾಗೂ 565 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೆಲ್ ಕಂಪೆನಿಯ ಮಾರಾಟ ವಿಭಾಗದಲ್ಲಿ ವ್ಯವಸ್ಥಾಪಕನಾಗಿದ್ದ ಶ್ರೀಹರ್ಷ ಸಂಸ್ಥೆಗೆ ವಂಚಿಸಿ 727 ಲ್ಯಾಪ್‌ಟಾಪ್‌ಗಳನ್ನು ಬೇರೆ ಕಂಪೆನಿಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗಳಲ್ಲಿ ಕಳವು ಮಾಡಿದ್ದ ಆರೋಪದ ಮೇಲೆ ಮಂಜುನಾಥ, ಆತನ ಪತ್ನಿ ಸುಮಿತ್ರಾ ಮತ್ತು ಸ್ನೇಹಿತ ಪ್ರಕಾಶ್ ಎಂಬುವರನ್ನು ಬಂಧಿಸಿರುವ ಹುಳಿಮಾವು ಪೊಲೀಸರು 65 ಲಕ್ಷ ಮೌಲ್ಯದ ವಜ್ರದ ಓಲೆ, ಚಿನ್ನಾಭರಣ ಹಾಗೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಹೋಗಿ ಮನೆಯ ಮಾಲೀಕರು ಮತ್ತು ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಆ ಮನೆಗಳ ಮಾಲೀಕರು ಕುಟುಂಬ ಸದಸ್ಯರೊಂದಿಗೆ ಹೊರಗೆ ಹೋಗುವ ಸಂದರ್ಭವನ್ನು ಕಾದು ಕಳವು ಮಾಡುತ್ತಿದ್ದರು. ಈ ಮೂರು ಮಂದಿಯನ್ನು ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅವರು ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಜುನಾಥನ ವಿರುದ್ಧ ನ್ಯಾಯಾಲಯದಿಂದ 35 ವಾರೆಂಟ್‌ಗಳು ಜಾರಿಯಾಗಿದ್ದವು. ಅಪರಾಧ ಕೃತ್ಯದಿಂದ ಗಳಿಸಿದ್ದ ಹಣದಲ್ಲಿ ಆತ ಪತ್ನಿಯ ಹೆಸರಿನಲ್ಲಿ ಬೆಂಗಳೂರಿನ ವಿವಿಧೆಡೆ ನಿವೇಶನಗಳನ್ನು ಖರೀದಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ಗಳಿಗೆ ವಿಳಾಸದ ನಕಲಿ ದಾಖಲೆಪತ್ರಗಳನ್ನು ನೀಡಿ ಕ್ರೆಡಿಟ್ ಕಾರ್ಡ್ ಪಡೆದು ವಂಚಿಸುತ್ತಿದ್ದ ಆರೋಪಿ ಜೈಶೀಲನ್ ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಜೈಶೀಲನ್ ವಿಳಾಸದ ಸುಳ್ಳು ದಾಖಲೆಪತ್ರ ನೀಡಿ ಖಾತೆಗಳನ್ನು ತೆರೆದು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುತ್ತಿದ್ದ. ನಂತರ ಆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಮಾಲ್‌ಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಪಿಗಳಾದ ಡಿ.ರಾಚಪ್ಪ, ಆರ್.ಅಶೋಕ, ಸುಬ್ಬಣ್ಣ, ಇನ್‌ಸ್ಪೆಕ್ಟರ್‌ಗಳಾದ ಎಂ.ಎಚ್.ನಾಗ್ಟೆ, ಬಲರಾಮೇಗೌಡ, ಎಸ್.ಸುಧೀರ್, ಗಣಪತಿ, ಬಿ.ಎಸ್.ಮೋಹನ್‌ಕುಮಾರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ್, ಡಿಸಿಪಿ ಡಾ.ಪಿ.ಎಸ್. ಹರ್ಷ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT