ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಗ್ರಾಮದಲ್ಲಿ ಗ್ರಾಮ ಸಭೆ ನಡೆಸಲು ತೀರ್ಮಾನ

ಬಸವ ವಸತಿ ಯೋಜನೆಯಡಿ ಮನೆ ಹಂಚಿಕೆ
Last Updated 18 ಡಿಸೆಂಬರ್ 2013, 4:46 IST
ಅಕ್ಷರ ಗಾತ್ರ

ಹಾವೇರಿ: ಬಸವ ವಸತಿ ಯೋಜನೆಯಡಿ ಮನೆ ಹಂಚಿಕೆ ಕುರಿತು ತಾಲ್ಲೂಕಿನ ಆರು ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಿಲ್ಲ. ಹೀಗಾಗಿ ಅವುಗಳನ್ನು ಹೊರತುಪಡಿಸಿ ಉಳಿದ ಹದಿನೇಳು ಗ್ರಾಮ ಪಂಚಾಯಿತಿಗಳ ಫಲಾನುಭವಿಗಳ ಪಟ್ಟಿಗೆ ಮಂಗಳವಾರ ನಡೆದ ಜಾಗೃತ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಗುತ್ತಲ, ಕಳ್ಳಿಹಾಳ, ಬಸಾಪುರ, ಕನಕಾಪೂರ, ಹಂದಿಗನೂರ, ಕಂಚಾರಗಟ್ಟಿ ಗಮ ಪಂಚಾಯಿತಿಯಲ್ಲಿ ನಡೆಸಿದ ಗ್ರಾಮ ಸಭೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಮಾಡಿದ ಕುರಿತು ವಿಡಿಯೊ ಸಿ.ಡಿಯ ಚಿತ್ರಿಕರಣ ಸ್ಪಷ್ಟವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಸಭೆ ನಡೆಸಿ ಆಯ್ಕೆಮಾಡಿದ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸುವಂತೆ ನಿರ್ಧರಿಸಲಾಯಿತು.

ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಅಲ್ಲದೇ, ಮಾಹಿತಿ ಕೇಳದ ತಾ.ಪಂ. ಸದಸ್ಯರಿಗೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಮತ್ತೊಮ್ಮೆ ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಸದಸ್ಯರಾದ ಪರಮೇಶಪ್ಪ ಕುರುವತ್ತಿಗೌಡ್ರ, ಬಸವರಾಜ ಕಳಸೂರ, ಲಕ್ಷ್ಮವ್ವ ಮೆಲ್ಮರಿ, ಚನ್ನಬಸಪ್ಪ ಅರಳಿ ಒತ್ತಾಯಿಸಿದರು.

ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಈ ಹಿಂದಿನ ಸರ್ಕಾರ ಬಡವರನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಿದ್ದರೇ ರಾಜ್ಯದಲ್ಲಿ ಬಡವರು ಗುಡಿಸಲು ವಾಸಿಗಳು ಇರುತ್ತಿರಲಿಲ್ಲ. ಇದೀಗ ಪಕ್ಷಪಾತವಾಗಿ ಅರ್ಹರಿಗೆ ಮನೆ ಹಂಚಿಕೆ ಮಾಡಲು ಎಲ್ಲರ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಸದಸ್ಯರು, ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಎದುರಿಗೆ ಅಧಿಕಾರಿಗಳು ಚೀಟಿ ಎತ್ತಿ ಫಲಾನುಭವಿ ಆಯ್ಕೆಮಾಡಿದ್ದಾರೆ ನಿಜ. ಆದರೆ, ನಿಯಮಗಳ ಪ್ರಕಾರ ಗ್ರಾಮ ಸಭೆಗಳನ್ನು ನಡೆಸಿಲ್ಲ.

ಆದ್ದರಿಂದ ಅಧಿಕಾರಿಗಳು ತಯಾರಿಸಿದ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಹೊಸದಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ರಾಜೇಂದ್ರ ಹಾವೇರಣ್ಣನವರ, ಚಿಕ್ಕಮಕ್ಕಳಂತೆ ಹಠ ಮಾಡಿದರೆ, ಒಮ್ಮತದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಸದಸ್ಯರೆಲ್ಲರು ಪರಸ್ಪರ ಸಹಕಾರದಿಂದ ಒಮ್ಮತದ ತೀರ್ಮಾನ ಕೈಗೊಳ್ಳಲು ಮುಂದಾಗಬೇಕು ಎಂದಾಗ, ಸದಸ್ಯರು ಸೂಚಿಸಿದ ಗ್ರಾಮ ಪಂಚಾಯಿತಿಗಳನ್ನು ಬಿಟ್ಟು ಉಳಿದ ಗ್ರಾಮ  ಪಂಚಾಯಿತಿಗಳ ಫಲಾನುವಿಗಳ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT