ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಜಲಾಶಯಗಳಿದ್ದರೂ ವಿದ್ಯುತ್‌ ಇಲ್ಲ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜೋಯ್ಡಾ: ಆರು ಬೃಹತ್‌ ಜಲಾಶಯ ಗಳನ್ನು ಹೊಂದಿರುವ ಕಾಳಿ ನದಿಯ ಜಲಾನಯನ ಪ್ರದೇಶ ರಾಜ್ಯದ ಒಟ್ಟು ಜಲ ವಿದ್ಯುತ್‌ ಉತ್ಪಾದನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಆದರೆ ಕಾಳಿ ನದಿಯ ಉಗಮ ಸ್ಥಾನದ ಸುತ್ತಲಿನ ಹಲವು ಗ್ರಾಮಗಳಿಗೆ ಮಾತ್ರ ಇಂದಿಗೂ ವಿದ್ಯುತ್‌ ಸಂಪರ್ಕ ಇಲ್ಲವಾಗಿದ್ದು, ದೀಪದ ಅಡಿ ಎಂದಿಗೂ ಕತ್ತಲೂ ಎಂಬಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ.

ಪಶ್ಚಿಮ ಘಟ್ಟಗಳಿಂದ ಆವೃತ ವಾಗಿರುವ ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ಜೋಯ್ಡಾ ತಾಲ್ಲೂಕಿನ ಬಾಜಾರಕುನಂಗ್‌್ ಪಂಚಾಯ್ತಿಯ ಯಾವೊಂದು ಗ್ರಾಮಕ್ಕೂ ಈ ಗ್ರಿಡ್‌ಗಳಿಂದ ವಿದ್ಯುತ್‌ ಪೂರೈಕೆ ಯಾಗುತ್ತಿಲ್ಲ. ಇಷ್ಟು ಮಾತ್ರ ವಲ್ಲದೇ, ಬಹುಪಾಲು ಗ್ರಾಮ ಗಳಿಗೆ ರಸ್ತೆಯೂ ಇಲ್ಲ.

ಬಾಜಾರಕುನಂಗ್‌್ ಗ್ರಾಮ ತಾಲ್ಲೂಕು ಕೇಂದ್ರದಿಂದ 80 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮ ಪಂಚಾಯ್ತಿಗೆ ಒಳಪಡುವ ಗ್ರಾಮ ಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿನ ಕೆಲವು ಗ್ರಾಮಗಳಿಗೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸೌರ ವಿದ್ಯುತ್‌ ದೀಪಗಳನ್ನು ಒದಗಿಸಿವೆ. ಆದರೆ ಇವುಗಳೆಲ್ಲ ಕೆಟ್ಟಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಕ್ಯಾಸ್ಟಲ್‌ ರಾಕ್‌ನಿಂದ ( ಸುಮಾರು 20 ಕಿ.ಮೀ) ಬಾಜಾರಕುನಂಗ್‌ ಗ್ರಾಮಕ್ಕೆ ರಸ್ತೆ ಸಂಪರ್ಕವಿದೆ. ಆದರೆ ಮಳೆಗಾಲದ ಸಂದರ್ಭದಲ್ಲಿ ಡಿಗ್ಗಿ, ಅಸುಲಿ, ಕರಂಜೆ ಮತ್ತು ಪಡ್‌ಶೆಟ್‌ ಗ್ರಾಮಗಳನ್ನು ತಲುಪಲಾಗುವುದಿಲ್ಲ. ಬೇಸಿಗೆ ಕಾಲದಲ್ಲಿ ಜೀಪ್‌ಗಳ ಮೂಲಕ ಮಾತ್ರ ಇಲ್ಲಿಗೆ ತೆರಳಬಹುದು. ಗೋವಾ ಗಡಿಗೆ ಸೇರಿಕೊಂಡಂತಿರುವ ಈ ಭಾಗ ಪ್ರಕೃತಿ ಪ್ರಿಯರ ಸ್ವರ್ಗವಾಗಿದ್ದು, ಇಲ್ಲಿನ ಗ್ರಾಮಸ್ಥರು ಸಾಮಾನ್ಯ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಇಲ್ಲಿನ ಮಂದಿ ಬಾಜಾರಕುನಂಗ್‌ ತಲುಪಲು 15 ಕಿ.ಮೀ. ಕಾಲ್ನಡಿ ಗೆಯಲ್ಲೇ ಸಾಗಬೇಕು. ವೈದ್ಯರನ್ನು ಕಾಣಲು ಅವರು ಕ್ಯಾಸ್ಟಲ್‌ ರಾಕ್‌ ಅಥವಾ ರಾಮನಗರಕ್ಕೆ ತೆರಳಬೇಕು.

‘ಕಿಂಡಾಲೆ ಗ್ರಾಮ ಬಾಜಾರ ಕುನಂಗ್‌ನಿಂದ ಮೂರು ಕಿ.ಮೀ. ದೂರದಲ್ಲಿದ್ದು, ಈ ಗ್ರಾಮದಲ್ಲಿ ಏಕೈಕ ಸೌರ ಬೀದಿದೀಪವಿದೆ. ಸದ್ಯ ಅದೂ ಕೆಟ್ಟು ಹೋಗಿದ್ದು, ಸೀಮೆಎಣ್ಣೆ ದೀಪ ಅನಿವಾರ್ಯವಾಗಿದೆ. ಹಳ್ಳದಾಟುವ ಸಲುವಾಗಿ ಮರದ ಅಟ್ಟೆಗಳಿಂದ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಈ ಗ್ರಾಮಗಳಿಗೆ ಕ್ಯಾಸ್ಟಲ್‌ ರಾಕ್‌ ಹತ್ತಿರವಿದ್ದು,  ಕಾಲ್ನಡಿಗೆಯಲ್ಲೇ ಕ್ರಮಿಸಬೇಕಿದ್ದು, ತಾಲ್ಲೂಕು ಕೇಂದ್ರ ಕಚೇರಿ ತಲುಪುವುದು ದೂರದ ಮಾತು.

ಯಾರಿಗಾದರೂ ಆರೋಗ್ಯ ಕೆಟ್ಟರೆ ಬಾಜಾರಕುನಂಗ್‌ ತನಕ ಹೊತ್ತು ಕೊಂಡು ಹೋಗಬೇಕು. ಅಲ್ಲಿಂದ ವಾಹನ ವ್ಯವಸ್ಥೆ ಮಾಡಬಹುದು, ಕಾಡಿನೊಳಗೆ ಗ್ರಾಮಗಳಿರುವುದರಿಂದ ವಿದ್ಯುತ್‌ ಸಂಪರ್ಕ ಮತ್ತು ರಸ್ತೆ ಅಭಿವೃದ್ಧಿ ಪಡಿಸುವುದು ಕಷ್ಟ ವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕನಿಷ್ಠ ಮೂಲಸೌಕರ್ಯ ಗಳಿಗೆ ಸಾಕಷ್ಟು ಬಾರಿ ಬೇಡಿಕೆ ಇಟ್ಟಿದ್ದರೂ ಅದು ಈಡೇರಿಲ್ಲ’ ಎಂದು ದೂರುತ್ತಾರೆ ಕಿಂಡಾಲೆ ಗ್ರಾಮದ ನಿವಾಸಿ ಅರುಣ್‌ ಎಸ್‌. ಗವಡೆ.

1990ರಲ್ಲಿ  ಮ್ಯಾಂಗನೀಸ್‌ ಗಣಿಗಾರಿಕೆ ನಿಲ್ಲಿಸಿದ ನಂತರ ಇಲ್ಲಿನ ಜನರು ಗೋವಾಕ್ಕೆ ವಲಸೆ ಹೋಗ ಲಾರಂಭಿಸಿದ್ದು, ವರ್ಷದಲ್ಲಿ ಕೆಲವು ತಿಂಗಳುಗಳ ಮಟ್ಟಿಗೆ ಮಾತ್ರ ಇಲ್ಲಿಗೆ ಬರುತ್ತಾರೆ’ ಎನ್ನುತ್ತಾರೆ  ಗ್ರಾಮದ ನಿವಾಸಿ ಸುರೇಶ್‌ ಸಾವಂತ್‌....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT