ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ವರ್ಷದ ಮಗು ಸಾವು

ದೇವಸ್ಥಾನದಲ್ಲಿ ಪಾನಕ ಕುಡಿದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Last Updated 20 ಏಪ್ರಿಲ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆ ಬಳಿಯ ವಾಲ್ಮೀಕಿನಗರದಲ್ಲಿನ ಬಂಡೆ ಗುಡಿಸಲು ಪ್ರದೇಶದಲ್ಲಿ ಶುಕ್ರವಾರ ರಾಮನವಮಿ ಹಬ್ಬದ ಪ್ರಯುಕ್ತ ದೇವಸ್ಥಾನವೊಂದರಲ್ಲಿ ಪಾನಕ ಹಾಗೂ ಮಜ್ಜಿಗೆ ಕುಡಿದ 50ಕ್ಕೂ ಹೆಚ್ಚು ಮಂದಿ ಸ್ಥಳೀಯರು ಅಸ್ವಸ್ಥಗೊಂಡಿದ್ದು, ಆರು ವರ್ಷದ ಮಗುವೊಂದು ಮೃತಪಟ್ಟಿದೆ.

ಬಂಡೆ ಗುಡಿಸಲು ಪ್ರದೇಶದಲ್ಲಿ ವಾಸವಿರುವ ಮುರುಗನ್ ಮತ್ತು ಪರಮೇಶ್ವರಿ ದಂಪತಿಯ ಗಂಗಾ ಎಂಬ ಹೆಣ್ಣು ಮಗು ಸಾವನ್ನಪ್ಪಿದೆ. ಅಸ್ವಸ್ಥರನ್ನು ವಿಕ್ಟೋರಿಯಾ, ವಾಣಿವಿಲಾಸ ಹಾಗೂ ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯ (ಕಿಮ್ಸ) ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥರಲ್ಲಿ ಸುಮಾರು 20 ಮಕ್ಕಳು, 15 ಮಹಿಳೆಯರು ಮತ್ತು 15 ಮಂದಿ ಪುರುಷರು ಇದ್ದಾರೆ ಎಂದು ಚಾಮರಾಜಪೇಟೆ ಪೊಲೀಸರು ಹೇಳಿದ್ದಾರೆ.

ವಾಲ್ಮೀಕಿನಗರ ಎರಡನೇ ಮುಖ್ಯರಸ್ತೆಯ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಪಾನಕ ಮತ್ತು ಮಜ್ಜಿಗೆ ವಿತರಿಸಲಾಗಿತ್ತು.
ದೇವಸ್ಥಾನದಲ್ಲಿ ಮಜ್ಜಿಗೆ ಮತ್ತು ಪಾನಕ ಕುಡಿದು ಮನೆಗೆ ಬಂದಿದ್ದ ಸ್ಥಳೀಯರಿಗೆ ಶನಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ವಾಂತಿ ಹಾಗೂ ಭೇದಿಯ ಲಕ್ಷಣ ಕಾಣಿಸಿಕೊಂಡಿದೆ. ಕೆಲವರಿಗೆ ಏಳೆಂಟು ಬಾರಿ ವಾಂತಿಯಾಗಿ ನಿತ್ರಾಣಗೊಂಡಿದ್ದಾರೆ. ಅವರನ್ನು ಕುಟುಂಬ ಸದಸ್ಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅದೇ ರೀತಿ ನಾಲ್ಕೈದು ಬಾರಿ ವಾಂತಿಯಾಗಿ ಅಸ್ವಸ್ಥಗೊಂಡ ಮಗು ಗಂಗಾಳನ್ನು ಪೋಷಕರು ಬೇಗನೆ ಆಸ್ಪತ್ರೆಗೆ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ನಂತರ ಮಗು ಪ್ರಜ್ಞೆ ತಪ್ಪಿದಾಗ ಪೋಷಕರು ಕಿಮ್ಸಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗಾಗಲೇ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

`ದೇವಸ್ಥಾನದಲ್ಲಿ ಮಜ್ಜಿಗೆ ಮತ್ತು ಪಾನಕ ಕುಡಿದು ಬಂದ ನಂತರ ರಾತ್ರಿವರೆಗೆ ಏನೂ ತೊಂದರೆಯಾಗಿರಲಿಲ್ಲ. ಆದರೆ, ಬೆಳಗಿನ ಜಾವ ಮೂರ‌್ನಾಲ್ಕು ಬಾರಿ ವಾಂತಿಯಾಯಿತು. ಬಳಿಕ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದರು' ಎಂದು ಸ್ಥಳೀಯ ನಿವಾಸಿ ಲಕ್ಷ್ಮಣ್ `ಪ್ರಜಾವಾಣಿ'ಗೆ ತಿಳಿಸಿದರು.

ವಿಷಾಹಾರ ಸೇವನೆಯಿಂದಾಗಿ ಮಗು ಸಾವನ್ನಪ್ಪಿದೆ ಮತ್ತು ಸ್ಥಳೀಯರು ಅಸ್ವಸ್ಥಗೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ದೇವಸ್ಥಾನದಲ್ಲಿ ಪಾನಕ ಮತ್ತು ಮಜ್ಜಿಗೆ ವಿತರಿಸಿದ್ದ ಪಳನಿ ಎಂಬ ವ್ಯಕ್ತಿಯ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಅಸ್ವಸ್ಥಗೊಂಡಿರುವವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT