ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರುಷಿಯ ಕೊಲೆಗಡುಕರು ಯಾರು?

Last Updated 8 ಜನವರಿ 2011, 8:45 IST
ಅಕ್ಷರ ಗಾತ್ರ

ಅರುಷಿಗೆ ನ್ಯಾಯ ಸಿಗಲಿಲ್ಲ. ಕೊಲೆ ಆರೋಪಿಗಳು ಪತ್ತೆ ಆಗಲಿಲ್ಲ. 2008ರ ಮೇ 16ರಂದು ನಡೆದ ಈಕೆ ಕೊಲೆ ಹಿಂದಿನ ‘ನಿಗೂಢ’ ಭೇದಿಸಲು ಸಾಧ್ಯವಾಗದೆ ಸಿಬಿಐ ಕೈಚೆಲ್ಲಿದೆ. ‘ವೃತ್ತಿಪರ ತನಿಖಾ ಸಂಸ್ಥೆ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ‘ಕೇಂದ್ರ ತನಿಖಾ ದಳ’ ಪ್ರಕರಣದ ತನಿಖೆ ಕೈಬಿಡುವುದಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ನಗೆಪಾಟಲಿಗೆ ಗುರಿಯಾಗಿದೆ. ಖ್ಯಾತ ದಂತ ವೈದ್ಯರಾದ ತಲ್ವಾರ್ ದಂಪತಿ ಪುತ್ರಿ 14 ವರ್ಷದ ಆರುಷಿ ದೆಹಲಿ ಹೊರವಲಯದ ನೊಯ್ಡಾದ (ಉತ್ತರ ಪ್ರದೇಶ) ‘ಜಲವಾಯು ವಿಹಾರ’ದ ಮನೆಯಲ್ಲಿ ಭೀಕರವಾಗಿ ಕೊಲೆಯಾಗಿದ್ದು ಈಗ ಇತಿಹಾಸ. ಸಾರ್ವಜನಿಕವಾಗಿ ತೀವ್ರ ಕುತೂಹಲ ಕೆರಳಿಸಿರುವ ಪ್ರಕರಣ ಮಾಧ್ಯಮಗಳಿಗೂ ಸಾಕಷ್ಟು ಮಸಾಲೆ ಒದಗಿಸಿದೆ.

ಬಾಲಕಿ ಕೊಲೆ ಸುದ್ದಿ ಹರಡುತ್ತಿದ್ದಂತೆ ‘ಕೊಲೆಗಾರ ಯಾರು?’ ಎಂಬ ಪ್ರಶ್ನೆ ಎದುರಾಯಿತು. ಹಿಂದೆಯೇ ಪೊಲೀಸರ ಕಾರ್ಯಾಚರಣೆಯೂ ಆರಂಭವಾಯಿತು. ನಾಪತ್ತೆಯಾಗಿದ್ದ ಮನೆಗೆಲಸದ ಆಳು ನೇಪಾಳದ  ಪ್ರಸಾದ್ ಅಲಿಯಾಸ್ ಹೇಮರಾಜ್ ಮೇಲೆ ಗುಮಾನಿ ಬಂತು. ಉತ್ತರ ಪ್ರದೇಶ ಪೊಲೀಸರು ಹಿಂದುಮುಂದು ಯೋಚಿಸದೆ ಹೇಮರಾಜ್ ಮೇಲೆ ಗೂಬೆ ಕೂರಿಸಿದರು. ಆತನ ಬಂಧನಕ್ಕೂ ಬಲೆ ಬೀಸಿದರು. ಹೇಮರಾಜ್ ಕುರಿತು ಮಾಹಿತಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಣೆಯೂ ಹೊರ ಬಿತ್ತು. ಈತನ ಊರಿಗೂ ತಂಡ ರವಾನೆಯಾಯಿತು.

‘ಆತುರಗಾರರಿಗೆ ಬುದ್ಧಿ ಮಂದ’ ಎಂಬಂತೆ ಉತ್ತರ ಪ್ರದೇಶ ಪೊಲೀಸರು ಎಡವಿದ್ದು ಇಲ್ಲೇ! ಯಾವುದೇ ತನಿಖಾಧಿಕಾರಿ ಮಾಡಬೇಕಾದ ಮೊಟ್ಟ ಮೊದಲ ಕೆಲಸ ಘಟನೆ ನಡೆದ ಸ್ಥಳದ ಸಂರಕ್ಷಣೆ. ಆರೋಪಿಗಳ ಜಾಡು ಹಿಡಿಯಲು ಇದು ಅತೀ ಮುಖ್ಯ. ಆದರೆ, ಈ ಪ್ರಕರಣದಲ್ಲಿ ಇದು ಆಗಲಿಲ್ಲ. ಕೃತ್ಯ ನಡೆದ ಸ್ಥಳವನ್ನು ಜೋಪಾನ ಮಾಡುವ ಜಾಣ್ಮೆಯನ್ನು ಪೊಲೀಸರು ಪ್ರದರ್ಶಿಸಲಿಲ್ಲ. ಸ್ಥಳದಲ್ಲಿ  ದೊರೆಯಬಹುದಾಗಿದ್ದ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಗಮನ ಹರಿಸಲಿಲ್ಲ. ಇದನ್ನು ಬಿಟ್ಟು ಉಳಿದೆಲ್ಲವನ್ನು ಮಾಡಿದರು. ಪೊಲೀಸರು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಸಾಕ್ಷ್ಯಗಳೆಲ್ಲ ಕೈಕೊಟ್ಟಿದ್ದವು.

ಪೊಲೀಸರು ಹುಡುಕಾಡುತ್ತಿದ್ದ ಹೇಮರಾಜ್ ಕೂಡಾ ಕೊಲೆಯಾಗಿದ್ದ. ಈತನ ಶವ ತಲ್ವಾರ್ ಮನೆ  ತಾರಸಿ ಮೇಲೆ ಪತ್ತೆಯಾದಾಗ ತನಿಖಾಧಿಕಾರಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಅಲ್ಲಿಯವರೆಗೆ ಆತನೇ  ಆರೋಪಿ ಎಂದು ನಂಬಿದ್ದ ಪೊಲೀಸರ ಕಣ್ಣಿಗೆ ಅನಂತರ ಕಂಡಿದ್ದು ಆರುಷಿ ತಂದೆ ಡಾ. ರಾಜೇಶ್ ತಲ್ವಾರ್! ಜೋಡಿ ಕೊಲೆ ಆರೋಪದ ಮೇಲೆ ರಾಜೇಶ್ ತಲ್ವಾರ್ ಅವರನ್ನು ಬಂಧಿಸಲಾಯಿತು. ಬಂಧನದ ಹಿಂದೆ ಕಥೆಯೊಂದು ಸೃಷ್ಟಿಯಾಯಿತು. ರಾಜೇಶ್‌ಗೆ ಮತ್ತೊಬ್ಬ ಮಹಿಳೆ ಜತೆ ಅನೈತಿಕ ಸಂಬಂಧವಿತ್ತು,

ಇದಕ್ಕೆ ಮಗಳ ವಿರೋಧವಿತ್ತು, ಈ ವಿಷಯವನ್ನು ಹೇಮರಾಜ್ ಜತೆ ಆರುಷಿ ಹಂಚಿಕೊಂಡಿದ್ದಳು. ಇದು ಇವರಿಬ್ಬರ ನಡುವೆ ‘ನಂಟು’ ಬೆಳೆಯಲು ಕಾರಣವಾಗಿತ್ತು. 15ರಂದು ಮಧ್ಯ ರಾತ್ರಿ ಇಬ್ಬರೂ ‘ಆಕ್ಷೇಪಾರ್ಹ’ ಸ್ಥಿತಿಯಲ್ಲಿರುವುದನ್ನು ಕಂಡು ಹೌಹಾರಿದ ರಾಜೇಶ್ ಈ  ಕೊಲೆ ಮಾಡಿದ್ದಾನೆ... ಎಂದೆಲ್ಲ ಪೊಲೀಸರು ಪ್ರತಿಪಾದಿಸಿದರು. ಈ ಆರೋಪಗಳಲ್ಲಿ ಯಾವುದನ್ನೂ ಸಾಬೀತುಪಡಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ ಎಂಬುದು ಮತ್ತೊಂದು ಕಥೆ.

ರಾಜೇಶ್ ಬಂಧನವನ್ನು ಪತ್ನಿ ಡಾ.ನೂಪುರ್ ಪ್ರತಿಭಟಿಸಿದರು. ಪೊಲೀಸರು ತಮ್ಮ ಪತಿ  ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆಂದು ದೂರಿದರು. ಪೊಲೀಸರ ಮೇಲೆ ನಂಬಿಕೆ ಇಲ್ಲದಿರುವುದರಿಂದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು. ಮಾಯಾವತಿ ಸರ್ಕಾರ ವಿಳಂಬ ಮಾಡದೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು. 2008ರ ಜೂನ್ 1ರಂದು ಸಿಬಿಐ ತನಿಖೆ ಆರಂಭವಾಯಿತು. 25 ಅಧಿಕಾರಿಗಳ ವಿಶೇಷ ತಂಡವೂ ರಚನೆ ಆಯಿತು. ಆ ವೇಳೆಗೆ ಇಡೀ ಪ್ರಕರಣದ ತನಿಖೆ ಹಳಿ ತಪ್ಪಿತ್ತು. ಅದುವರೆಗೂ ನಡೆದ ಪೊಲೀಸರ  ತನಿಖೆ ‘ಕಳಪೆ’ ಎಂಬ ಟೀಕೆಯೂ ಬಂತು. ಪರಿಣಾಮವಾಗಿ ಸ್ಥಳದಲ್ಲಿ ಲಭ್ಯವಾಗಬಹುದಾಗಿದ್ದ ಬಹಳಷ್ಟು ಸಾಂದರ್ಭಿಕ ಸಾಕ್ಷ್ಯಗಳು ನಾಶವಾಗಿವೆ ಎಂದೂ ಸಿಬಿಐ ಆರೋಪಿಸಿತು.

ಹೇಮರಾಜ್ ಕೋಣೆಯಲ್ಲಿ ಸಿಕ್ಕ ವಿಸ್ಕಿ ಬಾಟಲಿ ಮೇಲಿನ ಬೆರಳಚ್ಚು ಸಂಗ್ರಹಿಸಿಲ್ಲ. ಅಪರಾಧ ಸ್ಥಳದ ಸಾಕ್ಷ್ಯಾಧಾರಗಳನ್ನು ಸಂರಕ್ಷಿಸದೆ ನಾಶಪಡಿಸಲು ಅವಕಾಶ ಮಾಡಿಕೊಡಲಾಗಿದೆ. ಕೃತ್ಯದ ಸ್ಥಳಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮದವರ ಪ್ರವೇಶ ನಿರ್ಬಂಧಿಸಿಲ್ಲ ಎಂದೆಲ್ಲ ಸಿಬಿಐ ಬಡಬಡಿಸಿತು. ಪೊಲೀಸರು ಮಾಡಿದ ಹತ್ತಾರು ಪ್ರಮಾದಗಳನ್ನು ಎತ್ತಿ ತೋರಿತು.

ಸಿಬಿಐ ಜತೆ ‘ಏಮ್ಸ್’ ಪರಿಣಿತರು ದನಿಗೂಡಿಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಆಗಿರುವ ದೋಷಗಳ ಕಡೆಗೂ ಬೆರಳು ಮಾಡಲಾಯಿತು. ‘ವಿಧಿವಿಜ್ಞಾನ ಪ್ರಯೋಗಾಲಯದ ಅನುಭವ ಇಲ್ಲದ ವೈದ್ಯರಿಂದ ಆರುಷಿ ಮತ್ತು ಹೇಮರಾಜ್ ಶವ ಪರೀಕ್ಷೆ (ಆಟೋಪ್ಸಿ) ಮಾಡಿಸಲಾಗಿದೆ. ಶವದ ಮೈಮೇಲೆ ಸಿಗಬಹುದಾಗಿದ್ದ ಬೆರಳಚ್ಚುಗಳನ್ನು ಕೂಡಾ ಕಡೆಗಣಿಸಲಾಗಿದೆ. ಈ ಕೆಲಸದಲ್ಲಿ ಪರಿಣಿತರ ನೆರವು ಪಡೆದಿಲ್ಲ ಎಂದು ಪರಿಣಿತ ವೈದ್ಯ ತಂಡ ಹೇಳಿತು.

ಆರುಷಿ ಗುಪ್ತಾಂಗದಿಂದ ಹೊರ ಬಂದಿರುವ ‘ಬಿಳಿ ದ್ರವ್ಯ’ದ ಪರೀಕ್ಷೆಯನ್ನು ಶವ ಪರೀಕ್ಷೆ ಮಾಡಿದ ವೈದ್ಯರು ನಡೆಸಿಲ್ಲ ಎಂಬ ಪ್ರಶ್ನೆಯನ್ನು ‘ಏಮ್ಸ್’ ವೈದ್ಯರ ತಂಡ ಎತ್ತಿದೆ. ಶವದ ಮೇಲೆ ದೊರೆಯುವ ಪ್ರತಿಯೊಂದು ಸಾಕ್ಷ್ಯ ಕಲೆ ಹಾಕಿ ಪರೀಕ್ಷಿಸಿ ವರದಿಯಲ್ಲಿ ಪ್ರಸ್ತಾಪಿಸಬೇಕಾದ್ದು ಮರಣೋತ್ತರ ಪರೀಕ್ಷೆ ಕೈಗೊಳ್ಳುವ ವೈದ್ಯರ ಕರ್ತವ್ಯ. ಇದು ಕಡ್ಡಾಯವೂ ಹೌದು. ಆರುಷಿ ಪ್ರಕರಣದಲ್ಲಿ ಇದ್ಯಾವುದೂ ಪಾಲನೆ ಆಗಿಲ್ಲ.

ಇವೆಲ್ಲವೂ ಗೊತ್ತಿಲ್ಲದೆ ಆಗಿರುವ ಲೋಪವೇ? ಉದ್ದೇಶಪೂರ್ವಕ ಕೆಲಸವೇ? ವೈದ್ಯರು ಹಾಗೂ ಪೊಲೀಸರ ಮೇಲೆ ಯಾರಾದರೂ ಪ್ರಭಾವ ಬೀರಿ ತನಿಖೆಯ ಹಾದಿ ತಪ್ಪಿಸಿದರೆ? ಇವೆಲ್ಲ ಪ್ರಶ್ನೆಗಳು  ಚರ್ಚೆಯಾಗುತ್ತಿದೆ. ಆರುಷಿ ಮತ್ತು ಹೇಮರಾಜ್ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮಂಪರು ಪರೀಕ್ಷೆ, ಸುಳ್ಳು ಪತ್ತೆ ಪರೀಕ್ಷೆ ಒಳಗೊಂಡಂತೆ ಎಲ್ಲ ಮಾರ್ಗಗಳನ್ನು ಬಳಸಿ ಸೋತಿದ್ದಾರೆ. ಯಾವ ಪರೀಕ್ಷೆಗಳೂ ತನಿಖಾ ಸಂಸ್ಥೆ ಪ್ರಯೋಜನಕ್ಕೆ ಬಂದಿಲ್ಲ. ‘ಬಂಧಿತರು ಅಮಾಯಕರು’ ಎಂಬ ತೀರ್ಮಾನಕ್ಕೂ ಸಿಬಿಐ ಬಂದಿದೆ.

ಹಾಗಾದರೆ ಆರುಷಿ ಮತ್ತು ಹೇಮರಾಜ್ ಅವರನ್ನು ಕೊಲೆ ಮಾಡಿದವರು ಯಾರು? ಎಂಬ ಪ್ರಶ್ನೆ ಎರಡೂವರೆ ವರ್ಷದ ಬಳಿಕವೂ ಉಳಿದುಕೊಂಡಿದೆ. ಉತ್ತರ ಪ್ರದೇಶ ಪೊಲೀಸರನ್ನು ಸಿಬಿಐ ದೂಷಣೆ ಮಾಡಿದೆ. ತನಿಖೆ ದಿಕ್ಕು ತಪ್ಪಿಸಿದ್ದಕ್ಕಾಗಿ ನೊಯ್ಡಾ ಪೊಲೀಸ್ ಠಾಣೆ ಅಧಿಕಾರಿ ಅಮಾನತುಗೊಂಡಿದ್ದಾರೆ. ಘಾಜಿಯಾಬಾದ್ ಜಿಲ್ಲೆಯ ಆಗಿನ ಎಸ್ಪಿ ವರ್ಗಾವಣೆ ಆಗಿದ್ದಾರೆ. ‘ನಾವು ತನಿಖೆ ದಿಕ್ಕು ತಪ್ಪಿಸಿಲ್ಲ. ಕೊಲೆ ನಡೆದ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸದೆ ಆರುಷಿ ಪೋಷಕರು ನೆರೆಹೊರೆಯವರನ್ನು ಕರೆದಿದ್ದಾರೆ. ಇದರಿಂದ ಸಾಂದರ್ಭಿಕ ಸಾಕ್ಷ್ಯಗಳು ಹಾಳಾಗಿದೆ’ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ಸಿಬಿಐ ಕೂಡಾ ಇಡೀ ಪ್ರಕರಣವನ್ನು ಗೋಜಲು ಮಾಡಿದೆ. ಸಿಕ್ಕಸಿಕ್ಕವರನ್ನು ವಿಚಾರಣೆಗೆ ಒಳಪಡಿಸಿದೆ. ಅನುಮಾನ ಬಂದ ಒಂದು ಎಳೆಯನ್ನು ಹಿಡಿದುಕೊಂಡು ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಕೆಲಸ ಮಾಡಿಲ್ಲ. ಇದು ಸಿಬಿಐ ವೈಫಲ್ಯಕ್ಕೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

ಯಾರ ಪ್ರತಿಪಾದನೆ ಏನೇ ಇರಲಿ ಕೊಲೆ ಆರೋಪಿ ತಪ್ಪಿಸಿಕೊಂಡಿದ್ದಾನೆ. ಆರುಷಿಗೆ ಅನ್ಯಾಯವಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಪಕ್ಷಗಳ ‘ಬಾಲಬಡುಕ’ ಸಂಸ್ಥೆ ಎಂಬ ಟೀಕೆಗೆ ಈಗಾಗಲೇ ಗುರಿಯಾಗಿರುವ ಸಿಬಿಐ ವೃತ್ತಿಪರತೆ, ದಕ್ಷತೆ-ಸಾಮರ್ಥ್ಯ ಕುರಿತು ಮರು ಚಿಂತಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT