ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೆಸ್ಸೆಸ್ಸ್ ವಿರುದ್ಧ ವ್ಯವಸ್ಥಿತ ಪಿತೂರಿ

Last Updated 2 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಗೋಕಾಕ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಸಂಸ್ಕಾರವುಳ್ಳ ಸಂಘಟನೆಗಳೊಂದಿಗೆ ನಿಕಟ ಸಂಪರ್ಕವುಳ್ಳ ಯುವಕರ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವ್ಯವಸ್ಥಿತ ಪಿತೂರಿ ನಡೆಸಿದೆ’ ಎಂದು ಉಡುಪಿ ಮೂಲದ ಶ್ರೀಕೃಷ್ಣ ಜ್ಞಾನಯೋಗ ಪ್ರತಿಷ್ಠಾನ ಆಪಾದಿಸಿದೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ರಾಜ್ಯ ಘಟಕದ ಅಧ್ಯಕ್ಷ ದಯಾನಂದ ಗುರೂಜಿ, ಪೊಲೀಸ್ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡುವ ಮೂಲಕ ಅಮಾಯಕರನ್ನು ಬಂಧಿಸಿ ಅವರ ತೇಜೋವಧೆಗೆ ಯತ್ನಿಸುತ್ತಿದೆ ಎಂದು ಆರೋಪ ಮಾಡಿದರು.

ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ 2008ರಲ್ಲಿ ನಡೆದ ಬಾಂಬ್ ಸ್ಫೋಟ ಘಟನೆ ಬಳಿಕ ಇದೀಗ ಸುಮಾರು ಮೂರು ವರ್ಷಗಳಿಗೂ ಹೆಚ್ಚಿನ ಸಮಯ ಗತಿಸಿದ ಮೇಲೆ ನಗರದ ಯುವಕ ಪ್ರವೀಣ ವೆಂಕಟೇಶ ಟಕ್ಕಳಕಿ ಎಂಬಾತನನ್ನು ಸೋಮವಾರ ಬೆಳಗಿನ ಜಾವ ಮಹಾರಾಷ್ಟ್ರ ರಾಜ್ಯದ ಎ.ಟಿ.ಎಸ್. ಸ್ಕ್ವಾಡ್ ತಂಡ ಬಂಧಿಸಿದೆ ಎಂದು ಕಟುವಾಗಿ ಟೀಕಿಸಿದರು.

ಉಪ ಜೀವನ ನಡೆಸಲು ಮೊಬೈಲ್ ಅಂಗಡಿಯೊಂದನ್ನು ನಡೆಸುತ್ತಿದ್ದ ಪ್ರವೀಣ ಟಕ್ಕಳಕಿ ಅವರ ಕುಟುಂಬ ವರ್ಗವನ್ನು ಕಂಡು ಸಾಂತ್ವನ ಹೇಳಲು ನಗರಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ ದಯಾನಂದ ಗುರೂಜಿ, ಕಾಂಗ್ರೆಸ್ ಸರ್ಕಾರ ಹಿಂದೂ ಯುವಕರನ್ನೇ ಗುರಿಯಾಗಿಟ್ಟುಕೊಂಡು ಇಂಥ ದುಷ್ಕೃತ್ಯದಲ್ಲಿ ತೊಡಗಿದರೆ ಹಿಂದೂ ಸಂಘಟನೆಗಳು ರಾಷ್ಟ್ರಾದ್ಯಂತ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗುವುದು ಅನಿವಾರ್ಯವಾಗುತ್ತದೆ ಎಂಬ ಮುನ್ನೆಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ಹಿಂದೂ ಸಂಘಟನೆಗಳನ್ನು ಹಾಗೂ ಮಠಾಧೀಶರನ್ನು ‘ಕೇಸರಿ ಭಯೋತ್ಪಾದಕ ಸಂಘಟನೆ’ಗಳೆಂದು ಬಿಂಬಿಸುವ ಹುನ್ನಾರ ನಡೆಸಿರುವುದು ಹಿಂದೂಗಳನ್ನು ಕೆರಳಿಸಿದೆ ಎಂದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿರುವಾಗ ನಿಮ್ಮ ಆಪಾದನೆ ಆಡಳಿತಾರೂಢ ಪಕ್ಷದ ವಿರುದ್ಧವೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಹಣ ಬಲದಿಂದ ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ಹಿಂದೂ ಸಂಘಟನೆಗಳನ್ನು ಹತ್ತಿಕ್ಕಲು ಬಳಸಲು ಯತ್ನಿಸುತ್ತಿದೆ ಎಂದು ಆಪಾದಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ಸದಾಶಿವ ಗುದಗೋಳ ಮತ್ತು ಶಿವಶಂಕರ ಖಾನಾಪೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT