ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾಳಜಿ ಅಗತ್ಯ: ಜಿಲ್ಲಾಧಿಕಾರಿ

Last Updated 2 ಜುಲೈ 2013, 6:00 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರ ಮಕ್ಕಳ ಏಳ್ಗೆಗೆ ಹಾಗೂ ಜನಾರೋಗ್ಯ ಸಂರಕ್ಷಣೆಗೆ ಹಲವು ಯೋಜನೆ ರೂಪಿಸಿದೆ. ಆರೋಗ್ಯದ ಬಗ್ಗೆ ಜನ ಇನ್ನಷ್ಟು ಜಾಗೃತರಾಗಬೇಕು. ಅಪೌಷ್ಟಿಕತೆ, ಬಾಲ್ಯವಿವಾಹ ಮತ್ತು ಬಡತನ ಸಮಸ್ಯೆ ನಿವಾರಣೆಯು ಸಾಕ್ಷರತೆ ಮತ್ತು ಜನಜಾಗೃತಿಯಿಂದ ಸಾಧ್ಯ ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಹೇಳಿದರು.

ಸೋಮವಾರ ಕೃಷಿ ವಿವಿ ಸಭಾಭವನದಲ್ಲಿ ಬೆಂಗಳೂರಿನ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ರಾಯಚೂರಿನ ಭಾರತ ಜ್ಞಾನ ವಿಜ್ಞಾನ ಸಮಿತಿಗಳು ಜಿಲ್ಲಾ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳು ಮತ್ತು ಆರೋಗ್ಯ ಎಂಬ ವಿಷಯ ಕುರಿತ 2015ರ ನಂತರ ಸಹಸ್ರಮಾನದ ಅಭಿವೃದ್ಧಿ ಗುರಿಗಳೇನು ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸದೃಢ ಮಕ್ಕಳು ಆರೋಗ್ಯಯುತ ಜನ ದೇಶದ ಸಂಪತ್ತು. ಮಕ್ಕಳ ಆರೋಗ್ಯ ಸಂರಕ್ಷಣೆ, ಭವಿಷ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಮುಖ್ಯ ಅತಿಥಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ ಜ್ಞಾನಪ್ರಕಾಶ ಮಾತನಾಡಿ, ಜಿಲ್ಲಾ ಪಂಚಾಯಿತಿಯು ಜಿಲ್ಲೆಯ ಜನತೆ ಆರೋಗ್ಯ ಸಂರಕ್ಷಣೆಗೆ ಗಮನಹರಿಸಿದೆ. ಆರೋಗ್ಯಕ್ಕೆ ಹಾನಿಕರ ಫ್ಲೋರೈಡ್ ಸೇರಿದಂತೆ 15 ವಸ್ತುಗಳು ಜಿಲ್ಲೆಯ ಕೆಲ ಕಡೆಗೆ ಸಿಗುವ ನೀರಿನಲ್ಲಿದೆ. ಜನ ಈ ನೀರು ಕುಡಿದು ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸಲು ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಜಿಲ್ಲೆಯಲ್ಲಿ ಆರಂಭ ಮಾಡಲಾಗುತ್ತಿದೆ.

ಪ್ರಥಮ ಹಂತವಾಗಿ ಕಲ್ಲೂರು ಮತ್ತು ಪೋತ್ನಾಳದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಇಂಥ ಘಟಕ ಸ್ಥಾಪನೆ ಉದ್ದೇಶ ಇದೆ ಎಂದು ವಿವರಿಸಿದರು.
ಜನರಿಗೆ ಶುದ್ಧವಾದ ನೀರನ್ನು ನೀಡುವ ಉದ್ದೇಶದಿಂದ ಜಿಲ್ಲಯಲ್ಲಿ  ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೋಹಿಣಿ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ, ಬೆಡ್ಸ್ ನಿರ್ದೇಶಕ ಫಾದರ್ ಜೊಯ್ ನೆಡುಂಪಾರಂಬಿಲ್, ಬೆಂಗಳೂರಿನ ಯುನಿಸೆಫ್ ಪೌಷ್ಠಿಕಾಂಶ ವಿಷಯ ಸಲಹೆಗಾರ ಡಾ.ಬ್ರಿಜೇಶ, ಕೃಷಿ ವಿವಿ ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್ ಕಮ್ಮಾರ, ಸ್ನೇಹ ಜೀವಿ ಸಂಸ್ಥೆ ಕಾರ್ಯದರ್ಶಿ ಅಂಬಣ್ಣ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT