ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾವಲು ಸಮಿತಿ ತನಿಖೆ

ಸವಿತಾ ಪ್ರಕರಣ, ಐರ‌್ಲೆಂಡ್‌ನಿಂದ ತಂಡ ರಚನೆ
Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಲಂಡನ್ (ಪಿಟಿಐ): ದಂತ ವೈದ್ಯೆ ಸವಿತಾ ಹಾಲಪ್ಪನವರ ಸಾವಿನ ಪ್ರಕರಣದ ಬಗ್ಗೆ ಐರ‌್ಲೆಂಡ್‌ನ ಆರೋಗ್ಯ ಕಾವಲು ಸಮಿತಿ ತನಿಖೆ ನಡೆಸಲಿದೆ. ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಗುವುದು ಎಂದು ಐರ‌್ಲೆಂಡ್ ಸರ್ಕಾರ ಘೋಷಿಸಿದ ಎರಡು ದಿನಗಳ ಬಳಿಕ ಈ ತೀರ್ಮಾನ ಹೊರಬಿದ್ದಿದೆ.
`ಐರ‌್ಲೆಂಡ್ ಸರ್ಕಾರದ ಆರೋಗ್ಯ ಮಾಹಿತಿ ಮತ್ತು ಗುಣಮಟ್ಟ ಪ್ರಾಧಿಕಾರವು ಆದಷ್ಟು ಶೀಘ್ರ ಪ್ರಕರಣದ ತನಿಖೆ ಪೂರ್ಣಗೊಳಿಸಿ, ವರದಿ ಸಲ್ಲಿಸಲಿದೆ' ಎಂದು ಕಾವಲು ಸಮಿತಿಯ ವಕ್ತಾರರು ತಿಳಿಸಿದ್ದಾರೆ.
 
ಈ ವಾರದಿಂದ ತನಿಖೆ ಆರಂಭಿಸಲು ಪ್ರಾಧಿಕಾರ ಸಿದ್ಧತೆ ಪ್ರಾರಂಭಿಸಿದೆ. ಹೆರಿಗೆ ತಜ್ಞ ವೈದ್ಯ, ಶೂಶ್ರಷಕಿ ಮತ್ತು ಇಬ್ಬರು ಸೂಕ್ಷ್ಮಜೀವಿ ಶಾಸ್ತ್ರಜ್ಞರು ಸೇರಿದಂತೆ ಒಟ್ಟು 11 ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ.
 
ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷತೆ, ಅವರಿಗೆ ನೀಡಲಾಗುವ ಸೇವೆಗಳು ಮತ್ತು ಗರ್ಭ ಧರಿಸಿದ ಮಹಿಳೆಯ ಆರೋಗ್ಯ, ತೀವ್ರ ಚಿಂತಾಜಕನ ಸ್ಥಿತಿಯಲ್ಲಿದ್ದಾಗ ಕೈಗೊಳ್ಳುವ ಕ್ರಮಗಳ ಕುರಿತು ಸಮಿತಿಯು ತನಿಖೆ ನಡೆಸಲಿದೆ ಎಂದು `ಐರಿಷ್ ಟೈಮ್ಸ' ವರದಿ ಮಾಡಿದೆ. ತನಿಖೆ ಸಂದರ್ಭದಲ್ಲಿ ಗಮನಕ್ಕೆ ಬರುವ ಅಂಶಗಳನ್ನು ಪ್ರಕಟಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
 
17 ವಾರಗಳ ಗರ್ಭೀಣಿಯಾಗಿದ್ದ ಸವಿತಾ ಹಾಲಪ್ಪನವರ ತೀವ್ರ ಬೆನ್ನು ನೋವಿನಿಂದಾಗಿ ಅಕ್ಟೋಬರ್ 21ರಂದು ಗಾಲ್‌ವೇ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. 
 
ಗರ್ಭಪಾತ ಮಾಡಲು ವೈದ್ಯರು ನಿರಾಕರಿಸಿದ್ದರಿಂದ ನಂಜು ಏರಿ ಅಕ್ಟೋಬರ್ 28ರಂದು ಸವಿತಾ ಮೃತಪಟ್ಟಿದ್ದರು. ಗರ್ಭಪಾತ ಕ್ಯಾಥೋಲಿಕ್ ಸಂಪ್ರದಾಯಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ಮಾಡಲು ಆಗುವುದಿಲ್ಲ ಎಂದು ಆಸ್ಪತ್ರೆಯ ವೈದ್ಯರು ಸವಿತಾ ಪತಿ ಪ್ರವೀಣ್ ಹಾಲಪ್ಪನವರ ಅವರು ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿದ್ದರು.
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT