ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕೇಂದ್ರ: ಸಮಸ್ಯೆಗಳ ಆಗರ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ಆಸ್ಪತ್ರೆ ಊರಾಚೆಗಿರುವ ಪರಿಣಾಮ ನಿರ್ಲಕ್ಷ್ಯದ ಗೂಡಾಗಿದೆ. ದೂರದ ಈ ಆಸ್ಪತ್ರೆಯನ್ನು ತಲುಪಲು ರೋಗಿಗಳಿಗೆ ಸರಿಯಾದ ಸೌಲಭ್ಯಗಳಿಲ್ಲದೆ ಗರ್ಭಿಣಿಯರು ಅನುಭವಿಸುತ್ತಿರುವ ಪಡಿಪಾಟಲು ಹೇಳತೀರದಂತಾಗಿದೆ.

ವಿಜಯಪುರದಲ್ಲಿ 30 ಹಾಸಿಗೆ ಸೌಲಭ್ಯವುಳ್ಳ ವಿಶಾಲವಾದ ಸಮುದಾಯ ಆರೋಗ್ಯ ಕೇಂದ್ರವನ್ನು 2012ರ ಜನವರಿ 24 ರಂದು ಮುಖ್ಯಮಂತ್ರಿ ಸದಾನಂದ ಗೌಡರು ಅಧಿಕೃತವಾಗಿ ಉದ್ಘಾಟಿಸಿದರು. ವಿಪರ್ಯಸವೆಂದರೆ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಗೆ ಬೇಕಾದ ಮೂಲ ಸೌಲಭ್ಯಗಳೇ ಇಲ್ಲಿಲ್ಲ!

ಮೊದಲು ಊರಿನ ಹೃದಯ ಭಾಗದಲ್ಲಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಹೊರರೋಗಿ ವಿಭಾಗ ಮಾತ್ರ ಇತ್ತು. ಊರಿನ ಜನಸಂಖ್ಯೆ 50,000 ಕ್ಕೂ ಮೀರಿ ಬೆಳೆದಿರುವ ಕಾರಣ ಹೊರವಲಯದ ವಿಶಾಲವಾದ ಜಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಲಾಯಿತು.

ಕಟ್ಟಡವು 2009ರಲ್ಲೇ ಸಿದ್ಧಗೊಂಡಿದ್ದರೂ ಉದ್ಘಾಟನೆಗಾಗಿ 3 ವರ್ಷ ಕಾಯಬೇಕಾಯಿತು. 2009 ರಲ್ಲಿ ನಿರ್ಮಾಣ ಕಾರ್ಯವು ಶೇ.60 ರಷ್ಟು ಮುಗಿಯುತ್ತಿದ್ದಂತೆ ಸರ್ಕಾರವು ವೈದ್ಯರನ್ನು ನೇಮಿಸಿಕೊಳ್ಳಲು ಆದೇಶ ಹೊರಡಿಸಲಾಗಿತ್ತು. 2010 ರ ಮೇ ತಿಂಗಳಲ್ಲಿ ಕಟ್ಟಡದ ಕೆಲಸ ಪೂರ್ಣವಾದರೂ ಸಿಬ್ಬಂದಿಗಳ ನೇಮಕವಾಗಿರಲಿಲ್ಲ.
 
2011 ರ ಆಗಸ್ಟ್ ತಿಂಗಳಲ್ಲಿ ಯಡಿಯೂರಪ್ಪನವರಿಂದ ಉದ್ಘಾಟನೆಯಾಗಬೇಕಿದ್ದ ಕಟ್ಟಡ ನಾನಾ ರಾಜಕೀಯ ಕಾರಣಗಳಿಂದ ಮುಂದೂಡಲ್ಪಟ್ಟಿತು. ಕೊನೆಗೆ ಆರೋಗ್ಯ ಇಲಾಖೆ ಆಸ್ಪತ್ರೆ ಪ್ರಾರಂಭಿಸುವಂತೆ ಮೌಖಿಕ ಆದೇಶ ಹೊರಡಿಸಿತು. ಹಾಗಾಗಿ 2011 ರ ಆಗಸ್ಟ್ 21 ರಂದು ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರ ಆರಂಭವಾಯಿತು.

ವಿಷಾದದ ಸಂಗತಿ ಎಂದರೆ ಆಸ್ಪತ್ರೆಗೆ ಮಂಜೂರಾದ ಸಿಬ್ಬಂದಿಗಳ ಸಂಖ್ಯೆಯಲ್ಲಿ ಶೇ.50 ರಷ್ಟು ಹುದ್ದೆಗಳು ಇದುವರೆಗೂ ಭರ್ತಿಯಾಗಿಲ್ಲ. ಸ್ತ್ರೀ ಆರೋಗ್ಯ ಮತ್ತು ಪ್ರಸೂತಿ ತಜ್ಞೆಯ ಅವಶ್ಯಕತೆ ಜರೂರಾಗಿ ಇದ್ದು ಆ ಹುದ್ದೆ ಖಾಲಿಯಾಗೇ ಇದೆ. ಪ್ರಸ್ತುತ ಈ ಜಾಗದಲ್ಲಿ 3 ತಿಂಗಳು ತರಬೇತಿ ಹೊಂದಿದ ಸ್ತ್ರೀ ವೈದ್ಯರೊಬ್ಬರು ಕೆಲಸ ನಿರ್ವಹಿಸುತ್ತಿದ್ದು ಸಹಜ ಹೆರಿಗೆಗಳನ್ನು ಮಾತ್ರ ಮಾಡಿಸುತ್ತಿದ್ದಾರೆ ಮತ್ತು ಬೇರೆ ವೈದ್ಯರಿಲ್ಲದ ಕಾರಣ ಸಾಮಾನ್ಯ ರೋಗಿಗಳನ್ನೂ ಅವರೇ ಪರೀಕ್ಷಿಸಿ ಚಿಕಿತ್ಸೆ ನೀಡುವಂತಾಗಿದೆ.

ಮಕ್ಕಳ ತಜ್ಞರ ಹುದ್ದೆಗೆ ಒಬ್ಬ ವೈದ್ಯರು ನೇಮಕವಾಗಿದ್ದು ಅವರೂ ಒಂದು ತಿಂಗಳ ರಜೆಯ ಮೇಲೆ ಹೋಗಿದ್ದಾರೆ. ಹೃದಯ ಸಂಬಂಧಿ ಮತ್ತು ಕಾಮಾಲೆಯಂತಹ ಸೂಕ್ಷ್ಮ ರೋಗಗಳ ಚಿಕಿತ್ಸೆಗೆ ಮಂಜೂರಾದ ವೈದ್ಯಕೀಯ ಚಿಕಿತ್ಸಕರ ಹುದ್ದೆ ಹಾಗೂ ದಂತ ವೈದ್ಯರ ಹುದ್ದೆಗಳೂ ಭರ್ತಿಯಾಗಿಲ್ಲ.

ಎಕ್ಸ್ ರೇ ತಂತ್ರಜ್ಞರ ಹುದ್ದೆ ಭರ್ತಿಯಾಗಿದ್ದರೆ ಇಲ್ಲಿ ಎಕ್ಸ್ ರೇ ಉಪಕರಣೆಗಳೇ ಇಲ್ಲ. ಪ್ರಯೋಗಶಾಲೆ ಇ್ದ್ದದರೂ ತಂತ್ರಜ್ಞರಿಲ್ಲ. ಪ್ರಥಮ ದರ್ಜೆ ಸಹಾಯಕ, ಗುಮಾಸ್ತ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಇನ್ನೂ ಯಾರನ್ನೂ ನೇಮಿಸಿಲ್ಲ. ಸ್ಟಾಫ್ ನರ್ಸ್ ಹುದ್ದೆಗೆ 6 ಸ್ಥಾನಗಳು ಮಂಜೂರಾಗಿದ್ದು, ಈಗ ಒಬ್ಬರು ಮಾತ್ರವೇ ನೇಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಸ್ಪತ್ರೆಯ ಸ್ವಚ್ಛತೆ ಕಾಪಾಡಲು ಬೇಕಾದ ಗ್ರೂಪ್ `ಡಿ~ಯ 12 ಹುದ್ದೆಗಳಿಗೆ 3 ಜನ ಮಾತ್ರ ನೇಮಕಗೊಂಡಿದ್ದಾರೆ. ಪ್ರತಿಯೊಂದು ಆಸ್ಪತ್ರೆಗೂ ನಾನ್ ಕ್ಲಿನಿಕಲ್ ಸೇವೆಗೆ ಸಹಾಯಕರು ಬೇಕಿದ್ದು ಅವರ ನೇಮಕಾತಿಯ ವಿಷಯವೇ ಪ್ರಸ್ತಾಪವಾಗಿಲ್ಲ. ಇರುವ ಒಂದು ಆಂಬುಲೆನ್ಸ್‌ಗೆ ಚಾಲಕನ ನೇಮಕವಾಗಿಲ್ಲ.

ರಾತ್ರಿ ಪಾಳಿ ಕೆಲಸ ನಿರ್ವಹಿಸಲಂತೂ ಯಾರೂ ಇಲ್ಲ. ನೇಮಕಗೊಂಡಿರುವ ಸಿಬ್ಬಂದಿಗಳೇ ಒಬ್ಬರಿಗೊಬ್ಬರು ಸಹಾಯಕರಾಗಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ.

ವೈದರು ಬರೆದು ಕೊಟ್ಟ ಔಷಧಿ ಆಸ್ಪತ್ರೆಯಲ್ಲಿ ಸಿಗದಿದ್ದರೆ ಮತ್ತೆ ಊರಿನೊಳಗೆ ಬಂದು ತೆಗೆದುಕೊಂಡು ಅದನ್ನು ದೃಢಪಡಿಸಿಕೊಳ್ಳಲು ಮತ್ತೆ ವೈದ್ಯರಲ್ಲಿಗೆ ಹೋಗಬೇಕಾಗುತ್ತದೆ. ಇದು ಬಡರೋಗಿಗಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ಮತ್ತು ಹಸುಗೂಸುಗಳನ್ನು ಕರೆದುಕೊಂಡು ಬರುವ ತಾಯಂದಿರಿಗೆ ತ್ರಾಸದಾಯಕವಾಗಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮೋರೆಡ್ಡಿ ಅವರನ್ನು ಸಂಪರ್ಕಿಸಿದಾಗ, `ಸಿಬ್ಬಂದಿ ಮತ್ತು ಆಸ್ಪತ್ರೆಯ ಇತರೆ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ. ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳೂ ಸುಧಾರಣೆಯಾಗಲಿವೆ ಎಂದು ಅವರು ಪ್ರತಿಕ್ರಿಯಿಸಿದರು.

ಈ ಕ್ಷೇತ್ರದ ಜನಪ್ರತಿನಿಧಿಗಳು ಈ ಸಮಸ್ಯೆಯ ಬಗ್ಗೆ ಗಮನಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT