ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ತಪಾಸಣೆ ತಪ್ಪಿಸಿ ಬವಣೆ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊರುವ ಮಹಿಳೆ ತನ್ನ ಅತ್ತೆ, ಮಾವ, ಪತಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾಳೆ. ವಯಸ್ಸಾದ ಅತ್ತೆ, ಮಾವನಿಗೆ ಹೊತ್ತೊತ್ತಿಗೆ ಸರಿಯಾಗಿ ಮಾತ್ರೆ, ಔಷಧ ಕೊಡುವುದರಿಂದ ಹಿಡಿದು, ನಿಯಮಿತವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ತಪಾಸಣೆಗಳನ್ನು ಮಾಡಿಸಿ, ಅವರ ಕಾಯಿಲೆಗಳು ನಿಯಂತ್ರಣದಲ್ಲಿ ಇವೆಯೇ ಎಂಬುದನ್ನು ದೃಢಪಡಿಸಿಕೊಳ್ಳುವ ತನಕವೂ ಬಹುತೇಕ ಮನೆಗಳಲ್ಲಿ ಆಕೆಯದೇ ಕೆಲಸ. ತನ್ನ ಮಕ್ಕಳ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ವೈದ್ಯರ ಬಳಿ ಧಾವಿಸಿ, ಅನುಮಾನಗಳಿಗೆ ಉತ್ತರ ಕಂಡುಕೊಳ್ಳುತ್ತಾಳೆ; ಮರೆಯದೆ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸುತ್ತಾಳೆ. ಪತಿ ಅನಾರೋಗ್ಯದಿಂದ ಬಳಲಿದಾಗಲೂ ಆತನನ್ನು ಬಲವಂತದಿಂದ ವೈದ್ಯರಲ್ಲಿಗೆ ಕರೆದೊಯ್ಯತ್ತಾಳೆ. ಹೀಗೆ ಕುಟುಂಬದ ಎಲ್ಲ ಸದಸ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಮಹಿಳೆ ತನ್ನ ಆರೋಗ್ಯದ ವಿಷಯ ಬಂದಾಗ ಅದೇಕೋ ನಿರ್ಲಕ್ಷ್ಯ ವಹಿಸುವುದೇ ಹೆಚ್ಚು.

ತಾನು ವೈದ್ಯರ ಬಳಿ ಹೋಗುವ ದಿನವನ್ನು ಒಂದಲ್ಲ ಒಂದು ಕಾರಣ ಹೇಳುತ್ತಾ ಮುಂದೂಡುತ್ತಾಳೆ. ಇದು ಸರಿಯೇ? ವಯಸ್ಸಾದಂತೆ ಆಕೆಯ ಆರೋಗ್ಯದಲ್ಲೂ ಏರುಪೇರಾಗಿ, ಕಾಯಿಲೆಗಳು ದೇಹಕ್ಕೆ ಜೊತೆಯಾಗಬಹುದು. ಕೆಲವೊಮ್ಮೆ ಯಾವ ಗುಣಲಕ್ಷಣಗಳ ಸುಳಿವೂ ಕೊಡದೆ ಕಾಯಿಲೆಯ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳಬಹುದು. ಇದು ಪತ್ತೆಯಾಗಬೇಕಲ್ಲವೇ? ಆದ್ದರಿಂದಲೇ ಪ್ರತಿ ಮಹಿಳೆಯೂ 35 ವರ್ಷದ ನಂತರ ಒಮ್ಮೆ ಸಂಪೂರ್ಣವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ತದನಂತರ ವೈದ್ಯರ ಸಲಹೆಯಂತೆ ವರ್ಷಕ್ಕೆ ಒಮ್ಮೆಯಾದರೂ ಕೆಲವು ನಿಗದಿತ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ವಿಶ್ವದ ಎಲ್ಲ ದೇಶಗಳಲ್ಲೂ ಮಹಿಳೆಯರ ಸಂಪೂರ್ಣ ಆರೋಗ್ಯ ತಪಾಸಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ತಪಾಸಣೆಯ ಪರೀಕ್ಷೆಗಳು, ಮಾಡಿಸಿಕೊಳ್ಳಬೇಕಾದ ವಯಸ್ಸು ಮಾತ್ರ ಆಯಾಯ ದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಕಾಯಿಲೆಗಳು, ಸಾಮಾನ್ಯವಾಗಿ ಅವು ಕಾಣಿಸಿಕೊಳ್ಳಬಹುದಾದ ವಯಸ್ಸು ಮುಂತಾದವುಗಳನ್ನು ಅವಲಂಬಿಸಿರುತ್ತವೆ.

ಹೀಗಾಗಿ, ನಮ್ಮ ಮಹಿಳೆಯರ ಸ್ಥಿತಿಗತಿಗೆ ಅನುಗುಣವಾಗಿ ಸಂಪೂರ್ಣ ಆರೋಗ್ಯ ತಪಾಸಣೆಯಲ್ಲಿ ಬರುವ ವಿವಿಧ ಪರೀಕ್ಷೆಗಳಾವುವು ನೋಡೋಣ:

ತಜ್ಞ ವೈದ್ಯರಲ್ಲಿ ಸಲಹೆ ಹಾಗೂ ತಪಾಸಣೆ: ಆರೋಗ್ಯವಂತ ಮಹಿಳೆಯರಿಗೂ ವರ್ಷಕ್ಕೊಮ್ಮೆ ತಜ್ಞ ವೈದ್ಯರಲ್ಲಿ ಸಲಹೆ ಹಾಗೂ ತಪಾಸಣೆ ಕಡ್ಡಾಯ. ದೇಹದ ತೂಕ, ರಕ್ತದೊತ್ತಡ, ಹೃದಯ, ಶ್ವಾಸಕೋಶ ಮತ್ತಿತರ ಅಂಗಾಂಗ ವ್ಯವಸ್ಥೆಗಳ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಆ ಸಂದರ್ಭದಲ್ಲಿ ಯಾವುದಾದರೂ ಕಾಯಿಲೆಯ ಸೂಚನೆ ಕಂಡುಬಂದರೆ ವೈದ್ಯರ ಸೂಚನೆಯಂತೆ ಇತರ ತಪಾಸಣೆಗಳನ್ನೂ ಮಾಡಿಸಿಕೊಳ್ಳ ಬೇಕಾಗುತ್ತದೆ.

ಸ್ತ್ರೀರೋಗ ತಜ್ಞರಿಂದ: ಸ್ತ್ರೀರೋಗ ತಜ್ಞರಿಂದ ಗರ್ಭಕೋಶ, ಅದಕ್ಕೆ ಸಂಬಂಧಿಸಿದ ಇತರ ಅಂಗಾಂಗಗಳ ತಪಾಸಣೆ ಹಾಗೂ ಸಲಹೆಯೂ ಈ ವಯಸ್ಸಿನಲ್ಲಿ ಅಗತ್ಯ ಎನಿಸುತ್ತದೆ.

ಪ್ರಯೋಗಾಲಯದಲ್ಲಿ ಮಾಡಿಸಬೇಕಾದ ಪರೀಕ್ಷೆ
ಸಂಪೂರ್ಣ ರಕ್ತ ಕಣ ಹಾಗೂ ರಕ್ತಹೀನತೆ ಪತ್ತೆ: ಬಹಳಷ್ಟು ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ರಕ್ತಹೀನತೆಯೂ ಒಂದು. ದೈನಂದಿನ ಕೆಲಸಗಳನ್ನು ಮಾಡುವಾಗ ಕಾಣುವ ಆಯಾಸ, ಕಣ್ಣಿನ ಸುತ್ತಲೂ ಕಪ್ಪಾಗುವಿಕೆ ಹಾಗೂ ಕ್ರಿಯಾಶೀಲತೆಯ ಇಳಿಮುಖಕ್ಕೆ ರಕ್ತಹೀನತೆಯೂ ಒಂದು ಕಾರಣ ಇರಬಹುದು. ಹಾಗಾಗಿ ಅದರ ಪತ್ತೆ ಹಾಗೂ ಸೂಕ್ತ ಚಿಕಿತ್ಸೆ ಕಡ್ಡಾಯವಾಗಿ ಆಗಲೇಬೇಕು.

ಸಕ್ಕರೆ ಅಂಶ: ಸಾಮಾನ್ಯವಾಗಿ 35ರ ಆಸುಪಾಸಿನಲ್ಲಿ ದೇಹಕ್ಕೆ ಜೊತೆಯಾಗುವ ಮಧುಮೇಹ ಕಾಯಿಲೆಯ ಪತ್ತೆಗೆ ಈ ಪರೀಕ್ಷೆ  ಸಹಕಾರಿ. ಪ್ರಾಥಮಿಕ ಹಂತಗಳಲ್ಲೇ ಸಕ್ಕರೆ ಕಾಯಿಲೆ ಪತ್ತೆಯಾದರೆ, ಶೀಘ್ರದಲ್ಲಿ ಚಿಕಿತ್ಸೆಯನ್ನೂ ಪ್ರಾರಂಭಿಸಬಹುದು.

ಕಾಯಿಲೆಯ ತೀವ್ರತೆಗೆ ತಕ್ಕಂತೆ ಆಹಾರ ಶೈಲಿ, ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ರೂಢಿಸಿಕೊಂಡು ಕಾಯಿಲೆಯನ್ನು ಹತೋಟಿಯಲ್ಲಿ ಇಡಬಹುದು ಮತ್ತು ಸಂಭವನೀಯ ಪರಿಣಾಮಗಳನ್ನು ತಡೆಯಬಹುದು.

ಪಿತ್ತಜನಕಾಂಗ (ಲಿವರ್): ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಲಿವರ್‌ನ ಕಾರ್ಯದಕ್ಷತೆ ಬಗ್ಗೆ ತಿಳಿಯಲು ಈ ಪರೀಕ್ಷೆ ನೆರವಾಗುತ್ತದೆ.

ಕೊಬ್ಬಿನಾಂಶ: ಸ್ಥೂಲಕಾಯ ಇದ್ದವರಿಗೆ ಮಾತ್ರವೇ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಅಧಿಕವಾಗಿ ಇರುತ್ತದೆ ಎಂದು ಬಹಳಷ್ಟು ಜನ ತಿಳಿದುಕೊಂಡಿರುತ್ತಾರೆ. ಆದರೆ ಎಷ್ಟೋ ಬಾರಿ ದೇಹದ ತೂಕ, ಎತ್ತರಕ್ಕೆ ತಕ್ಕಂತೆ ಇದ್ದರೂ ರಕ್ತದಲ್ಲಿನ ಕೊಬ್ಬಿನಾಂಶ ಸಾಮಾನ್ಯ ಪ್ರಮಾಣಕ್ಕಿಂತಲೂ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿ ಮಹಿಳೆಯೂ ದೇಹದ ತೂಕಕ್ಕೆ ಅನುಗುಣವಾಗಿ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಒಂದು ವೇಳೆ ಕೊಬ್ಬಿನಾಂಶ ಹೆಚ್ಚಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ವೈದ್ಯರ ಮಾರ್ಗದರ್ಶನ ಪಡೆಯಬಹುದು. ಏಕೆಂದರೆ ಸಾಮಾನ್ಯ ಪ್ರಮಾಣಕ್ಕಿಂತಲೂ ಹೆಚ್ಚಾದ ಕೊಬ್ಬು, ರಕ್ತನಾಳಗಳ ಒಳ ಪದರಗಳಲ್ಲಿ ಶೇಖರವಾಗಿ ದೇಹದ ಪ್ರಮುಖ ಅಂಗಗಳಾದ ಹೃದಯ, ಮೆದುಳು, ಮೂತ್ರಪಿಂಡದ ರಕ್ತಪರಿಚಲನೆಗೆ ತಡೆಯುಂಟು ಮಾಡಬಹುದು. ಹೀಗಾದಾಗ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಕಾಯಿಲೆಗಳಿಗೆ ಕರೆ ಕೊಟ್ಟಂತಾಗುತ್ತದೆ.

ಮಲ ಪರೀಕ್ಷೆ: ಮಲದೊಡನೆ ವಿಸರ್ಜನೆಯಾಗುವ ರಕ್ತಕಣಗಳು ಹಾಗೂ ಅಸಾಮಾನ್ಯ ಜೀವಕೋಶಗಳು ಕೆಲವೊಮ್ಮೆ ದೊಡ್ಡ ಕರುಳಿನ ಕ್ಯಾನ್ಸರ್‌ನ್ನು ಪತ್ತೆ ಹಚ್ಚಲು ನೆರವಾಗುತ್ತವೆ.

ಮೂತ್ರ ಪರೀಕ್ಷೆ: ಈ ಪರೀಕ್ಷೆಯಿಂದ ಕಿಡ್ನಿ, ಮೂತ್ರನಾಳ ಹಾಗೂ ಮೂತ್ರಕೋಶದಲ್ಲಿ ಇರಬಹುದಾದ ಸೋಂಕಿನ ಬಗ್ಗೆ ಅರಿವಾಗುತ್ತದೆ. ಅಲ್ಲದೆ, ಮೂತ್ರದಲ್ಲಿ ರಕ್ತಕಣಗಳು ಹಾಗೂ ಕ್ಯಾನ್ಸರ್ ಸೂಚಿತ ಜೀವಕೋಶಗಳೇನಾದರೂ ಕಂಡುಬಂದರೆ ಮುಂದಿನ ಹಂತದ ತಪಾಸಣೆಗಳ ನೆರವಿನಿಂದ ಕ್ಯಾನ್ಸರ್ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಅಲ್ಟ್ರಾಸೌಂಡ್ ಸ್ಕ್ಯಾನಿಂಗ್: ಹೊಟ್ಟೆಯ ಸ್ಕ್ಯಾನಿಂಗ್‌ನಿಂದ ಪಿತ್ತಜನಕಾಂಗ, ಪಿತ್ತಕೋಶ, ಮೂತ್ರಪಿಂಡ, ಮೂತ್ರನಾಳ, ಗುಲ್ಮದ (ಸ್ಪ್ಲೀನ್) ಆಕಾರ ಹಾಗೂ ಚಹರೆಯಲ್ಲಿನ ಬದಲಾವಣೆಗಳು ತಿಳಿದುಬರುತ್ತವೆ. ಅಷ್ಟೇ ಅಲ್ಲದೆ, ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಪಿತ್ತಕೋಶದಲ್ಲಿನ ಕಲ್ಲುಗಳ ಬಗ್ಗೆಯೂ ಇದರಿಂದ ತಿಳಿದುಬರುತ್ತದೆ.

ಕೆಳಹೊಟ್ಟೆಯ ಸ್ಕ್ಯಾನಿಂಗ್‌ನಿಂದ ಗರ್ಭಕೋಶ, ಗರ್ಭನಾಳ, ಅಂಡಾಶಯ ಹಾಗೂ ಮೂತ್ರಕೋಶದ ವ್ಯತ್ಯಾಸಗಳನ್ನು ಪತ್ತೆ ಹಚ್ಚಬಹುದು. ಗರ್ಭಕೋಶದಲ್ಲಿ ಇರಬಹುದಾದ ಗಡ್ಡೆಗಳು ಮತ್ತು ಅಂಡಾಶಯದಲ್ಲಿ ಇರಬಹುದಾದ ನೀರು ತುಂಬಿದ ಗಡ್ಡೆಗಳನ್ನು ಕೆಳಹೊಟ್ಟೆಯ ಸ್ಕ್ಯಾನಿಂಗ್‌ನಿಂದ ಗುರುತಿಸಬಹುದು.

ಮೂಳೆಗಳ ಆರೋಗ್ಯ: 35ರಿಂದ 40ರ ಆಸುಪಾಸಿನ ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಇಳಿಮುಖದಿಂದ ರಕ್ತದಲ್ಲಿನ ಕ್ಯಾಲ್ಷಿಯಂ ಅಂಶವೂ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಮೂಳೆಗಳು ಟೊಳ್ಳಾಗಬಹುದು. ಆದ್ದರಿಂದ ಈ ವಯೋಮಾನದ ಮಹಿಳೆಯರಲ್ಲಿ ಮೂಳೆ ಸವೆತವನ್ನು ಪತ್ತೆ ಮಾಡುವುದು ಬಹಳ ಮುಖ್ಯ ಎನಿಸುತ್ತದೆ. ಪತ್ತೆ ಮಾಡುವ ವಿಧಾನಗಳೆಂದರೆ-

ರಕ್ತದ ಕ್ಯಾಲ್ಷಿಯಂ ಪ್ರಮಾಣ: ಇದು  ಸಾಮಾನ್ಯಕ್ಕಿಂತ ಕಡಿಮೆ ಇದ್ದಲ್ಲಿ ವೈದ್ಯರ ಮಾರ್ಗದರ್ಶನದ ಮೇರೆಗೆ ಕ್ಯಾಲ್ಷಿಯಂ ಮಾತ್ರೆ ಹಾಗೂ ಕ್ಯಾಲ್ಷಿಯಂ ಹೇರಳವಾಗಿರುವ ಆಹಾರವನ್ನು ಸೇವಿಸಬಹುದು.

ಮೂಳೆ ಸಾಂದ್ರತೆ: ಮೂಳೆಗಳು ಕ್ಯಾಲ್ಷಿಯಂ ಅಂಶದಿಂದ ಸದೃಢವಾಗಿವೆಯೋ ಅಥವಾ ಟೊಳ್ಳಾಗುತ್ತಾ ಇವೆಯೋ ಎಂಬ ಬಗ್ಗೆ ಮೂಳೆ ಸಾಂದ್ರತೆಯು ತಿಳಿಸುತ್ತದೆ. ಕೆಲವು ಪ್ರಯೋಗಾಲಯಗಳಲ್ಲಿ ಮಾತ್ರ ಮಾಡುವ ಈ ಪರೀಕ್ಷೆಯನ್ನು ಮೂಳೆರೋಗ ತಜ್ಞರ ಸಲಹೆ ಪಡೆದು ಮಾಡಿಸಿಕೊಳ್ಳಬಹುದು.

ಹೃದಯ ಸಂಬಂಧಿ ಕಾಯಿಲೆ: ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು. ಆದರೆ ಮಾಸಿಕ ಋತುಚಕ್ರ ಸ್ಥಗಿತಗೊಂಡ ನಂತರ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಪ್ರಮಾಣ ಕಡಿಮೆ ಆಗುವುದರಿಂದ ಮಹಿಳೆಯರಲ್ಲೂ ಈ ಕಾಯಿಲೆಗಳ ಸಾಧ್ಯತೆ ಪುರುಷರಲ್ಲಿ ಇದ್ದಷ್ಟೇ ಇರುತ್ತದೆ. ಪತ್ತೆಗೆ ನೆರವಾಗುವ ಪರೀಕ್ಷೆಗಳೆಂದರೆ-

ಇ.ಸಿ.ಜಿ ಪರೀಕ್ಷೆ
ಎದೆಗೂಡಿನ ಎಕ್ಸ್‌ರೇ
ಹೃದಯದ ಸ್ಕ್ಯಾನಿಂಗ್ (ಎಕೋಕಾರ್ಡಿಯಾಗ್ರಫಿ)
ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಇತರ ಕೊಬ್ಬಿನ ಅಂಶಗಳ ಪ್ರಮಾಣ
ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ

ಈ ಮೇಲಿನ ಆರು ತಪಾಸಣೆಗಳು ಹೃದಯದ ಕಾರ್ಯವೈಖರಿ, ರಕ್ತಪರಿಚಲನೆ, ಹೃದಯ ಕವಾಟಗಳ ಸದೃಢತೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುತ್ತವೆ. 

ಕ್ಯಾನ್ಸರ್‌ಗಾಗಿ ತಪಾಸಣೆ
ಮಹಿಳೆಯರಲ್ಲಿ ಸಂಭವಿಸುವ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಏಕೆಂದರೆ ಆರಂಭಿಕ ಹಂತಗಳಲ್ಲಿ ಪತ್ತೆ ಮಾಡಿದರೆ ಈ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅಲ್ಲದೆ ಚಿಕಿತ್ಸೆಯೂ ಸುಲಭ ಹಾಗೂ ಕಡಿಮೆ ವೆಚ್ಚದ್ದಾಗಿರುತ್ತದೆ. ಮತ್ತೊಂದು ಅಂಶವೆಂದರೆ ಈ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತಗಳಲ್ಲೇ ಪತ್ತೆ ಮಾಡಲು ಸುಲಭ ತಪಾಸಣಾ ವಿಧಾನಗಳೂ ಇದೀಗ ಲಭ್ಯವಿವೆ.

ಗರ್ಭಕೋಶದ ಕೊರಳಿನ ಕ್ಯಾನ್ಸರ್
ಭಾರತದ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಈ ಬಗೆಯ ಕ್ಯಾನ್ಸರ್ ಕೂಡ ಒಂದು. ಆರಂಭಿಕ ಹಂತಗಳಲ್ಲಿ ಈ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ವಿಧಾನವೆಂದರೆ,

ಪ್ಯಾಪ್‌ಸ್ಮಿಯರ್ ಪರೀಕ್ಷೆ: ಈ ಪರೀಕ್ಷೆಯಲ್ಲಿ ಗರ್ಭಕೋಶದ ಕೊರಳಿನ ಮೇಲ್ಪದರದಲ್ಲಿರುವ ಜೀವಕೋಶಗಳನ್ನು ತೆಗೆದು ಅವುಗಳನ್ನು ಪರೀಕ್ಷಿಸಿ, ಅದರಲ್ಲಿ ಇರಬಹುದಾದ ಕ್ಯಾನ್ಸರ್ ಜೀವಕೋಶಗಳ ಬಗ್ಗೆ ವರದಿ ಮಾಡುತ್ತಾರೆ. ಇದು ಪ್ರಾಥಮಿಕ ಹಂತದಲ್ಲೇ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಪ್ರಕ್ರಿಯೆಯನ್ನು ಗುರುತಿಸಲು ಸಹಕಾರಿ.

ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯವಾಗಿರುವ ಪ್ರತಿ ಮಹಿಳೆಯೂ 30 ವರ್ಷದ ನಂತರ ಪ್ಯಾಪ್‌ಸ್ಮಿಯರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಸತತವಾಗಿ ಮೂರು ವರ್ಷ ಯಾವುದೇ ತೊಂದರೆ ಕಂಡುಬರದಿದ್ದರೆ, ನಂತರದ ದಿನಗಳಲ್ಲಿ ಮೂರು ವರ್ಷಕ್ಕೊಮ್ಮೆ ಈ ಪರೀಕ್ಷೆಗೆ ಒಳಗಾಗಬಹುದು.

ಸ್ತನ ಕ್ಯಾನ್ಸರ್ ಪತ್ತೆ ವಿಧಾನ
ಸ್ತನ ಕ್ಯಾನ್ಸರ್ ಈಗ ಭಾರತದಲ್ಲೂ ಹೆಚ್ಚಾಗಿದೆ. ಆರಂಭಿಕ ಹಂತಗಳಲ್ಲಿ ಪತ್ತೆಯಾದರೆ ಈ ಕ್ಯಾನ್ಸರ್ ಅನ್ನೂ ಸಂಪೂರ್ಣವಾಗಿ ಗುಣಪಡಿಸಬಹುದು.

1. ಮ್ಯೋಮೋಗ್ರಫಿ ಪರೀಕ್ಷೆ: ಈ ಪರೀಕ್ಷೆಯಲ್ಲಿ ವಿಕಿರಣಗಳ ನೆರವಿನಿಂದ ಅತಿ ಸೂಕ್ಷ್ಮವಾಗಿರುವ ಸ್ತನ ಕ್ಯಾನ್ಸರ್ ಗಡ್ಡೆಯನ್ನೂ ಕಂಡುಹಿಡಿಯಬಹುದು.

2. ಸ್ವಯಂ ಪರೀಕ್ಷೆ: ಮಹಿಳೆಯರು ಸ್ವತಃ ತಮ್ಮ ಸ್ತನಗಳನ್ನು  ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಬೇಕು. ಈ ರೀತಿ ಮಾಡಿದಾಗ ಸ್ತನಗಳಲ್ಲಿ ಗಡ್ಡೆ ಅಥವಾ ಗಂಟು ಎನಿಸಿದರೆ, ಸ್ತನಗಳ ತೊಟ್ಟಿನಿಂದ ದ್ರವವೇನಾದರೂ ಒಸರುತ್ತಿದ್ದರೆ ಕೂಡಲೇ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು.

3. ಎಫ್.ಎನ್.ಎ.ಸಿ. (ಫೈನ್ ನೀಡಲ್ ಆ್ಯಸ್ಪಿರೇಶನ್ ಸೈಟಾಲಜಿ) ಮತ್ತು ಬಯಾಪ್ಸಿ ಪರೀಕ್ಷೆ: ನೆನಪಿರಲಿ, ಸ್ತನದಲ್ಲಿ ಕಂಡುಬರುವ ಎಲ್ಲ ಗಡ್ಡೆಗಳೂ ಕ್ಯಾನ್ಸರ್ ಗಡ್ಡೆಗಳಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಅವು ಹಾರ್ಮೋನುಗಳ ಪ್ರಭಾವದಿಂದ ಆಗುವ ಗಡ್ಡೆಗಳಿರಬಹುದು. ಅಲ್ಲದೆ, ಮಾಸಿಕ ಋತುಚಕ್ರದ ಸಮಯದಲ್ಲಿ ಸ್ತನಗಳಲ್ಲಿ ಆಗುವ ಸಹಜ ಬದಲಾವಣೆಗಳೂ ಗಡ್ಡೆಗಳಂತೆ ಅನ್ನಿಸಬಹುದು. ಆದ್ದರಿಂದ ಅನುಮಾನ ಬಂದಾಗ ವೈದ್ಯರಲ್ಲಿ ತೆರಳಿ, ಅವರ ಸಲಹೆಯ ಮೇರೆಗೆ  ಎಫ್.ಎನ್.ಎ.ಸಿ. ಪರೀಕ್ಷೆ ಮತ್ತು ಗಡ್ಡೆಯ ಬಯಾಪ್ಸಿ ಪರೀಕ್ಷೆಯಿಂದ ಅದು ಕ್ಯಾನ್ಸರ್ ಹೌದೋ ಅಲ್ಲವೋ ಎಂದು ತಿಳಿಯಲು ಸಾಧ್ಯ.

ಆರೋಗ್ಯವೇ ಭಾಗ್ಯ, ಆರೋಗ್ಯವಂತ ಮಹಿಳೆಯಿಂದ ಮಾತ್ರವೇ ಯಶಸ್ವಿ ಕುಟುಂಬ ನಿರ್ವಹಣೆ ಸಾಧ್ಯ. ಆದ್ದರಿಂದ ಮಹಿಳೆಯರು ಕಡ್ಡಾಯವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
 

ಥೈರಾಯಿಡ್ ಸಮಸ್ಯೆಯೇ?
ಇತ್ತೀಚಿನ ದಿನನಿತ್ಯದ ವೈದ್ಯಕೀಯ ವೃತ್ತಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಬಹಳಷ್ಟು ಮಹಿಳೆಯರು ಥೈರಾಯಿಡ್ ಗ್ರಂಥಿಯ ಸಮಸ್ಯೆಯಿಂದ ಬಳಲುವುದು ಗೋಚರವಾಗುತ್ತದೆ. ದೇಹದ ಎಲ್ಲ ಚಯಾಪಚಯ ಕ್ರಿಯೆಗಳಿಗೆ ಥೈರಾಯಿಡ್ ಗ್ರಂಥಿಯ ಹಾರ್ಮೋನುಗಳು ಅತ್ಯವಶ್ಯ.

ಗ್ರಂಥಿಯ ಕಾರ್ಯದಲ್ಲಿ ಇಳಿಮುಖವಾದಾಗ ಮಹಿಳೆಯು ಆಯಾಸ, ದೈನಂದಿನ ಕೆಲಸಗಳಲ್ಲಿ ನಿರಾಸಕ್ತಿ, ಚರ್ಮ ಒರಟಾಗುವಿಕೆ, ತೂಕ ಹೆಚ್ಚಾಗುವಿಕೆ, ಮಾಸಿಕ ಋತುಚಕ್ರದಲ್ಲಿ ವ್ಯತ್ಯಾಸ, ರಕ್ತಹೀನತೆ, ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆಗಳಿಂದ ಬಳಲಬಹುದು. ಆದರೆ ಅನೇಕ ಮಹಿಳೆಯರು ರೋಗಲಕ್ಷಣಗಳ ಕಾರಣ ಪತ್ತೆಯಾಗದೆ ಸೂಕ್ತ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ.

ಆದ್ದರಿಂದ ಪ್ರತಿ ಮಹಿಳೆಯೂ ಸಂಪೂರ್ಣ ಆರೋಗ್ಯ ತಪಾಸಣೆಯೊಂದಿಗೆ ರಕ್ತದಲ್ಲಿನ ಥೈರಾಯಿಡ್ ಹಾರ್ಮೋನುಗಳ ಪ್ರಮಾಣವನ್ನು ಪರೀಕ್ಷೆ ಮಾಡಿಸಿಕೊಂಡರೆ, ಸಮಸ್ಯೆ ಇದ್ದಲ್ಲಿ ಪತ್ತೆಯಾಗಿ ಕೂಡಲೇ ಚಿಕಿತ್ಸೆ ಪ್ರಾರಂಭಿಸಲು ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT