ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕರ ಬದುಕಿಗೆ ಮಣ್ಣಿನ ಸಂರಕ್ಷಣೆ ಅಗತ್ಯ

ಮಣ್ಣು ವಿಜ್ಞಾನ ದಿನಾಚರಣೆಯಲ್ಲಿ ಡಾ.ಪಿ.ಎಂ.ಸಾಲಿಮಠ ಅಭಿಮತ
Last Updated 6 ಡಿಸೆಂಬರ್ 2013, 9:23 IST
ಅಕ್ಷರ ಗಾತ್ರ

ಶಿವಮೊಗ್ಗ: ಮಣ್ಣು ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಸುಸ್ಥಿರ ಕೃಷಿ ಉತ್ಪಾದನೆ ಮತ್ತು ಮಾನವನ ಆರೋಗ್ಯಕರ ಜೀವನಕ್ಕೆ ಮಣ್ಣಿನ ಸಂರಕ್ಷಣೆ ಅತ್ಯವಶ್ಯಕ ಎಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಪಿ.ಎಂ.ಸಾಲಿಮಠ ಅಭಿಪ್ರಾಯಪಟ್ಟರು.

ನವಿಲೆಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಣ್ಣು ವಿಜ್ಞಾನ ದಿನಾಚರಣೆ ಮತ್ತು ಭಾರತೀಯ ಮಣ್ಣುಶಾಸ್ತ್ರ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನಾ ಕಾರಣಗಳಿಂದ ಮಣ್ಣಿನ ಆರೋಗ್ಯ ಇಂದು ಹದಗೆಡುತ್ತಿದ್ದು, ಅದನ್ನು ಸರಿಪಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ತುರ್ತು ಇದೆ ಎಂದು ಅವರು ಪ್ರತಿಪಾದಿಸಿದರು.

ವಿಶ್ವ ಆಹಾರ ಭದ್ರತೆಯ ದೃಷ್ಟಿಯಿಂದ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಕರೆಯ ಮೇರೆಗೆ ಜಾಗತಿಕ ಮಣ್ಣು ಆರೋಗ್ಯ ದಿನಾಚರಣೆಯನ್ನ ಇನ್ನಷ್ಟು ಕ್ರಿಯಾಶೀಲವಾಗಿ ಆಚರಿಸುವ ಅವಶ್ಯಕತೆ ಇದೆ ಎಂದರು.

ಭಾರತೀಯ ಮಣ್ಣು ಶಾಸ್ತ್ರ ಸಂಘದ ಶಿವಮೊಗ್ಗ ಶಾಖೆ ಉದ್ಘಾಟಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಆರ್‌.ಸಿದ್ದರಾಮಪ್ಪ ಮಾತನಾಡಿ, ಮಣ್ಣು ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ವಸ್ತುನಿಷ್ಠತೆ, ಕ್ರಿಯಾಶೀಲತೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಣ್ಣುಶಾಸ್ತ್ರ ಸಂಘ, ರೈತರೊಂದಿಗೆ ಉತ್ತಮ ಸಂಬಂಧ ಹೊಂದಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಭಾರತೀಯ ಮಣ್ಣು ಶಾಸ್ತ್ರ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ.ಟಿ.ಎಸ್‌.ವಾಗೀಶ್‌ ಮಾತನಾಡಿ, ಸಮಾಜದ ಪ್ರಗತಿಗಾಗಿ ಮಣ್ಣು ವಿಜ್ಞಾನದ ಜ್ಞಾನವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶ ಸಂಘ ಹೊಂದಿದೆ ಎಂದರು.

ಬೆಂಗಳೂರು ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮಣ್ಣು ವಿಜ್ಞಾನ ಮುಖ್ಯಸ್ಥ ಡಾ.ಎ.ಎನ್‌.ಗಣೇಶ್‌ ಮೂರ್ತಿ, ಆಹಾರಭದ್ರತೆಯಲ್ಲಿ ಮಣ್ಣಿನ ಗುಣಮಟ್ಟದ ಪಾತ್ರ ಬಗ್ಗೆ ಉಪನ್ಯಾಸ ನೀಡಿದರು.
ಭಾರತೀಯ ಮಣ್ಣುಶಾಸ್ತ್ರ ಸಂಘದ ನವದೆಹಲಿಯ ಅಧ್ಯಕ್ಷ ಡಾ.ಆರ್‌.ಕೆ.ರತನ್‌ ಅವರಿಂದ ಬಂದ ಸಂದೇಶವನ್ನು ಡಾ.ಎಚ್‌.ಎಂ.ಚಿದಾನಂದಪ್ಪ ವಾಚಿಸಿದರು.

ಸಮಾರಂಭದಲ್ಲಿ ವಿ.ವಿ. ಶಿಕ್ಷಣ ನಿರ್ದೇಶಕ ಡಾ.ಎ.ಎಸ್‌.ಕುಮಾರಸ್ವಾಮಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ.ಎಂ.ಎಸ್‌.ವಿಘ್ನೇಶ್‌ ವಹಿಸಿದ್ದರು. ವಿ.ವಿ.ಸಹಾಯಕ ಸಂಶೋಧನಾ ನಿರ್ದೇಶಕ ಡಾ.ವೈ.ವಿ.ಶೆಟ್ಟಿ ಸ್ವಾಗತಿಸಿದರು. ಮಹಾಶ್ವೇತ ಚರ್ಕವರ್ತಿ, ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಗುರುಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT