ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕರ ಭಾರತಕ್ಕೆ ನರೇಂದ್ರ ಮೋದಿ ಕರೆ

ಸುವರ್ಣ ಜೆಎನ್‌ಎಂಸಿ ಸಂಭ್ರಮ
Last Updated 19 ಡಿಸೆಂಬರ್ 2013, 19:33 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಸಂದರ್ಭದಲ್ಲಿ ದೇಶದಾದ್ಯಂತ ನೈರ್ಮಲ್ಯ ಅಭಿಯಾನವನ್ನು ಸಮರೋಪಾದಿಯಲ್ಲಿ ಕೈಗೊ ಳ್ಳುವ ಮೂಲಕ 2022ರಲ್ಲಿ ಆಚರಿಸಲಿರುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಆರೋಗ್ಯಕರ ಭಾರತವನ್ನು ನಿರ್ಮಿಸಬೇಕು’ ಎಂದು ಗುಜರಾತ್‌ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕರೆ ನೀಡಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಸಂಸ್ಥೆಯ ಜವಾಹ ರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲದ (ಜೆಎನ್‌ಎಂಸಿ) ಸುವರ್ಣ ಮಹೋತ್ಸವದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗಾಂಧೀಜಿ ನೈರ್ಮಲ್ಯಕ್ಕೆ ಬಹಳ ಮಹತ್ವ ನೀಡಿದ್ದರು. 2018ರಲ್ಲಿ ಅವರ 150ನೇ ಜಯಂತಿಯನ್ನು ನಾವು ಆಚರಿಸುತ್ತಿರುವುದರಿಂದ ಮುಂದಿನ 5 ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ ನೈರ್ಮಲ್ಯ ಆಂದೋಲನವನ್ನು ನಡೆಸಬೇಕು. ಮುಂದಿನ ಐದು ವರ್ಷಕ್ಕೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಬರಲಿರುವುದರಿಂದ ಆರೋಗ್ಯವಂತ ಭಾರತ ಅಭಿಯಾನವನ್ನೂ ಆರಂಭಿಸಬೇಕು’ ಎಂದು ಹೇಳಿದರು.

‘ದೇಶದಲ್ಲಿ ನಾಲ್ಕು ಕೋಟಿ ಜನರು ರೋಗ ಬಂದಾಗ ಸಾಲಗಾರರಾಗುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಸಿಗದಿರುವುದರಿಂದ ಹಲವು ರೋಗಗಳು ಬರುತ್ತಿವೆ. ಹೀಗಾಗಿ ಖಾಸಗಿ ನೈರ್ಮಲ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಸಾರ್ವಜನಿಕ ನೈರ್ಮಲ್ಯಕ್ಕೂ ನೀಡಬೇಕು. ನಮಗೆ ಆರೋಗ್ಯ ವಿಮೆಯ ಜೊತೆಗೆ ಆರೋಗ್ಯ ಖಾತ್ರಿಯ ಅಗತ್ಯವಿದೆ. ಆಸ್ಪತ್ರೆಗಳ ಹಾಸಿಗೆಯ ಮೇಲೆ ಕೊನೆ ಉಸಿರು ಎಳೆಯುವವರಿಗೂ ಪರಿಹಾರ ನೀಡುವ ರೀತಿಯಲ್ಲಿ ವಿಮೆ ಕಂಪೆನಿಗಳು ‘ಬೆಡ್‌ ಇನ್ಶೂರನ್ಸ್‌’ ಆರಂಭಿ ಸಬೇಕು’ ಎಂದು ಮೋದಿ ಸಲಹೆ ನೀಡಿದರು.

‘ಇಂದಿಗೂ ನಾವು ಹಲವು ವೈದ್ಯಕೀಯ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಿ ಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಮಾನವ ಸಂಪನ್ಮೂಲದ ಬೆಳವಣಿಗೆ ಜೊತೆ ಜೊತೆಗೆ ತಂತ್ರಜ್ಞಾನ ಅಭಿವೃದ್ಧಿಗೂ ನಾವು ಮಹತ್ವ ನೀಡಬೇಕು. ವೈದ್ಯ ವಿದ್ಯಾರ್ಥಿಗಳು ವಿವಿಧ ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕು. ಯುವ ವೈದ್ಯರು ಸೇವಾ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮೂಲಕ ‘ಆರೋಗ್ಯಕರ ಭಾರತ’ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಕೆಎಲ್‌ಇ ಸಂಸ್ಥೆಯ ಕಿರು ಪರಿಚಯ ಮಾಡಿಕೊಟ್ಟ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ‘ಕೆಎಲ್‌ಇ ಸಂಸ್ಥೆಯು 2016ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆ ಸಮಾರಂಭಕ್ಕೆ ನೀವು ಪ್ರಧಾನಿಯಾಗಿ ಪಾಲ್ಗೊಳ್ಳಬೇಕು ಎಂಬುದು ನಮ್ಮೆಲ್ಲರ ಆಸೆ’ ಎಂದು ಪರೋಕ್ಷವಾಗಿ ಮೋದಿ ಪರ ಪ್ರಚಾರ ಮಾಡಿದರು.

ಸಂಸ್ಥೆ ಅಧ್ಯಕ್ಷ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಡಿ. ಪಾಟೀಲ, ಜೆಎನ್‌ಎಂಸಿ ನಡೆದು ಬಂದ ದಾರಿ ಕುರಿತು ಮಾಹಿತಿ ನೀಡಿದರು. ಕುಲಪತಿ ಪ್ರೊ. ಸಿ.ಕೆ. ಕೊಕಾಟೆ, ಜೆಎನ್‌ಎಂಸಿ ಪ್ರಾಚಾರ್ಯ ಡಾ. ಎ.ಎಸ್‌. ಗೋಧಿ, ಉಪ ಪ್ರಾಚಾರ್ಯೆ ಡಾ. ಎನ್‌.ಎಸ್‌. ಮಹಾಂತಶೆಟ್ಟಿ, ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಬಾಗೇವಾಡಿ, ಕಾರ್ಯದರ್ಶಿ ಬಾಪು ದೇಸಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT