ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೆ ಅಪಾಯ ತರಬಲ್ಲ ಆಯುರ್ವೇದ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಬೆಂಗಳೂರಿನ ಆಕಾಶ ನಡುಗುತ್ತಿದೆ. ದಟ್ಟ ಹೊಗೆ ಕಾರುತ್ತ, ಗಡಚಿಕ್ಕುವ ಸದ್ದು ಮಾಡುತ್ತ ‘ಏರೊ ಶೋ’ದಲ್ಲಿ ಜೆಟ್ ವಿಮಾನಗಳು ಗಗನದಲ್ಲಿ ರಂಗೋಲಿ ಬರೆಯುತ್ತಿವೆ. ಇದೇ ವೇಳೆಗೆ ‘ಅಂತರಿಕ್ಷ’ವೂ ನಡುಗುತ್ತಿದೆ.  2ಜಿ ಹಗರಣಕ್ಕೆ ಹೋಲಿಸಿದರೆ ಅದರ ದೊಡ್ಡಣ್ಣನೆನಿಸುವ 4ಜಿ ರೋಹಿತದ ಹಗರಣದಲ್ಲಿ ಇಸ್ರೊ ಬಾಹ್ಯಾಕಾಶ ಸಂಸ್ಥೆ ಸಿಲುಕಿದೆ. ಈ ನಡುವೆ ನೆಲಮಟ್ಟದಲ್ಲಿ ಬೇರೊಂದು ಬಗೆಯ ಕಂಪನಗಳು ಜನಸಾಮಾನ್ಯನ ಆತಂಕವನ್ನು ಹೆಚ್ಚಿಸಿವೆ. ನಮ್ಮ ಮೊಬೈಲ್ ಟವರ್‌ಗಳು ಸಾಕಷ್ಟು ಅಪಾಯಕಾರಿ ಕಿರಣಗಳನ್ನು ಹೊಮ್ಮುತ್ತಿವೆ ಎಂದೂ, ಅವುಗಳ ವಿಕಿರಣ ಸಾಮರ್ಥ್ಯವನ್ನು ಶೇಕಡಾ 90ಕ್ಕೆ ಇಳಿಸಬೇಕೆಂದೂ ಸರ್ಕಾರಿ ಸಮಿತಿ ಹೇಳಿದೆ. ಅಂಥ ಟವರ್‌ಗಳನ್ನು ಬೀಳಿಸುವಂತೆ ದಿಲ್ಲಿಯಲ್ಲಿ ಜನಾಗ್ರಹ ಆರಂಭವಾಗಿದೆ.

ಹಾಗಿದ್ದರೆ ನೆಲಕ್ಕಿಂತ ಕೆಳಗಿನ, ಬೇರುಮೂಲದ ಕ್ಷೇಮ ಸಮಾಚಾರ ಹೇಗೆ? ಅಲ್ಲೂ ಸಣ್ಣದೊಂದು ಕಂಪನ ಆರಂಭವಾಗಿದೆ. ಬೇರು, ಬೊಗಟೆ, ಗೆಡ್ಡೆ ಗೆಣಸು ಮತ್ತಿತರ ಸಸ್ಯಭಾಗಗಳಿಂದ ಸಿದ್ಧವಾಗುವ ಆಯುರ್ವೇದ ಔಷಧಗಳ ಬಳಕೆಯನ್ನು ನಿಷೇಧಿಸಬೇಕೆಂದು ಐರೋಪ್ಯ ಸಂಘ ತೀರ್ಮಾನಿಸಿದೆ. ಮೇ 1ರ ನಂತರ ಐರೋಪ್ಯ ದೇಶಗಳಿಗೆ ಆಯುರ್ವೇದ ಔಷಧಗಳು ಪ್ರವೇಶಿಸುವಂತಿಲ್ಲ. ಅದಕ್ಕೇ ಇನ್ನುಳಿದ ಎರಡು ತಿಂಗಳಲ್ಲಿ ಆದಷ್ಟೂ ಹೆಚ್ಚು ಮೂಲಿಕೆ ಪುಡಿ, ಮಾತ್ರೆ, ಲೇಹ್ಯ, ಕಷಾಯಗಳನ್ನು ತರಿಸಿಟ್ಟುಕೊಳ್ಳಿರೆಂದು ಆಯುರ್ವೇದ ಔಷಧಗಳನ್ನು ಇಲ್ಲಿಂದ ರಫ್ತು ಮಾಡುವ ಕಂಪೆನಿಗಳು ಅಲ್ಲಿನ ಬಳಕೆದಾರರಿಗೆ ಅಂತರ್ಜಾಲದಲ್ಲಿ ಪರೋಕ್ಷ ಜಾಹೀರಾತು ನೀಡತೊಡಗಿವೆ.

ಔಷಧದ ಹೆಸರಿನಲ್ಲಿ ಸಸ್ಯ, ಬೇರು, ಗೆಡ್ಡೆ, ಚಕ್ಕೆಗಳನ್ನು ಭಾರತ, ಚೀನಾ, ಥಾಯ್ಲೆಂಡ್ ಮತ್ತಿತರ ಏಷ್ಯದ ದೇಶಗಳಿಂದ ಕಂಪೆನಿಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಯುರೋಪಿಯನ್ನರಿಗೆ ಮಾರುತ್ತಿವೆ. ಈಚಿನ ವರ್ಷಗಳಲ್ಲಿ ಇಂಥ ಮಾರಾಟದ ಪ್ರಮಾಣ ಅತಿಯಾಗಿದೆ. ಅಲ್ಲಷ್ಟೇ ಅಲ್ಲ, ಅಮೆರಿಕ, ಕೆನಡಾಗಳಲ್ಲೂ ಏಷ್ಯನ್ ದೇಶಗಳ ಪುರಾತನ ಆರೋಗ್ಯ ರಕ್ಷಣಾ ತಂತ್ರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಲಂಗು ಲಗಾಮು ಇಲ್ಲದೆ ಮನೆಮನಗಳಿಗೆ ಇವು ಲಗ್ಗೆ ಹಾಕುತ್ತಿರುವುದು ಅತಿಯಾಯಿತೆಂಬ ಆಕ್ಷೇಪಣೆಗಳೂ ಅಲ್ಲಿ ಕಂಡು ಕೇಳಿಬರುತ್ತಿದ್ದವು.

ಕಾರಣವಿಷ್ಟೆ: ಇಂಥ ಬೇರು ಬೊಗಟೆ ಕಷಾಯಗಳಲ್ಲಿ ಕಲಬೆರಕೆ, ನಕಲಿಗಳಂತೂ ಇದ್ದೇ ಇರುತ್ತವೆ. ಅವುಗಳ ತಪಾಸಣೆ ನಡೆಸುವ ಕೆಲಸ ಸುಲಭವಲ್ಲ. ಇನ್ನು, ನಿಜಕ್ಕೂ ಔಷಧೀಯ ಅಂಶಗಳಿರುವ ಸಸ್ಯಸಾಮಗ್ರಿಗಳ ಮೇಲೆ ಕೂಡ ಐರೋಪ್ಯ ವೈದ್ಯ ಸಂಶೋಧಕರು ಆಕ್ಷೇಪಣೆ ಎತ್ತುತ್ತಲೇ ಇದ್ದಾರೆ. ಏಕೆಂದರೆ ಅನೇಕ ಸಸ್ಯಗಳಲ್ಲಿ ಔಷಧೀಯ ಗುಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಂಜಿನ ಅಂಶಗಳಿರುತ್ತವೆ. ಅತ್ಯಂತ ಕಾಳಜಿಯಿಂದ ನಂಜಿನ ಅಂಶವನ್ನೆಲ್ಲ ತೆಗೆದು ಸಂಸ್ಕರಿಸಿದರೆ ಮಾತ್ರ ಅನೇಕ ಸಸ್ಯ ಸಾಮಗ್ರಿಗಳು ಔಷಧವಾಗುತ್ತವೆ.
 
ರಫ್ತು ಮಾಡುವವರಲ್ಲಿನ ತೀವ್ರ ಪೈಪೋಟಿಯಿಂದಾಗಿ ಸಂಸ್ಕರಣೆ ಮಾಡದೆಯೇ ಪ್ರಶ್ನಾರ್ಹ ಗುಣಮಟ್ಟದ ಅನೇಕ ದ್ರವ್ಯಗಳು ಅಲ್ಲಿಗೆ ರಫ್ತಾಗುತ್ತಿದ್ದವು. ಈ ಮಧ್ಯೆ ನಾನಾ ಬಗೆಯ ಗಿಡಮೂಲಿಕೆಗಳನ್ನು ಚಿತ್ರಸಮೇತ ರಂಜನೀಯವಾಗಿ ವರ್ಣಿಸಿ ಅಂತರ್ಜಾಲದಲ್ಲಿ ಪ್ರಚಾರ ನೀಡಿದ್ದ ಪರಿಣಾಮವಾಗಿ ಯೋಗ, ಪ್ರಾಣಾಯಾಮಗಳಂತೆ ಇವುಗಳಿಗೂ ಬೇಡಿಕೆ ಹೆಚ್ಚತೊಡಗಿತ್ತು.
 
ಆದರೆ ಸಸ್ಯಮೂಲದ ಯಾವ ಔಷಧವನ್ನು ಹೇಗೆ ಬಳಸಬೇಕೆಂಬ ಬಗ್ಗೆ ನುರಿತ ವೈದ್ಯರ ಶಿಫಾರಸು ಸಿಗುತ್ತಿರಲಿಲ್ಲ. ಚ್ಯವನ್‌ಪ್ರಾಶದಿಂದ ಹಿಡಿದು ‘ಲಿವ್-52’ವರೆಗೆ ವೈದ್ಯರ ಶಿಫಾರಸಾಗಲೀ, ಪರೀಕ್ಷೆಯ ನಿಗದಿತ ಮಾನದಂಡವಾಗಲೀ ಇರಲಿಲ್ಲ. ಅನೇಕ ಸಂದರ್ಭಗಳಲ್ಲಿ ಕೆಲವು ಔಷಧಗಳ ಅತಿ ಬಳಕೆಯಿಂದ ವಿಪರೀತ ದುಷ್ಪರಿಣಾಮ ಉಂಟಾದ ವರದಿಗಳೂ ಆಗಾಗ ಬರತೊಡಗಿದ್ದವು.

ಉದಾಹರಣೆಗೆ ಅಮೃತಬಳ್ಳಿಯನ್ನೇ ಹೋಲುವ, ಆದರೆ ಪಾರಿವಾಳಗಳಂತೆ ಕಾಣುವ ಸುಂದರ ಹೂ ಬಿಡುವ ಅರಿಸ್ಟೊಲೋಕಿಯಾ (ಅಹಿಗಂಧಾ, ಈಶರ್ಮೂಲ್) ಸಸ್ಯದ ಭಾಗಗಳನ್ನು ಔಷಧಿ ರೂಪದಲ್ಲಿ ದೀರ್ಘಕಾಲ ಸೇವಿಸಿದ್ದ ಪರಿಣಾಮವಾಗಿ ಮೂತ್ರಪಿಂಡಗಳು ವಿಫಲವಾಗಿ ರೋಗಿಗಳು ಸಾವಪ್ಪಿದ ಅಪರೂಪದ ಉದಾಹರಣೆಯೂ ದೊಡ್ಡ ಚರ್ಚೆಗೆ ಕಾರಣವಾಗುತ್ತಿತ್ತು; ಅದನ್ನು ಅವೈಜ್ಞಾನಿಕವಾಗಿ ಸಂಸ್ಕರಿಸಿ ಬಾಟಲಿಯಲ್ಲಿ ತುಂಬಿ ಮಾರಿದ್ದೇ ಕಾರಣವೇ ಅಥವಾ ಶುದ್ಧ ಔಷಧೀಯ ಭಾಗವನ್ನೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದು ಕಾರಣವೇ, ಯಾರೂ ಯಾವ ತೀರ್ಮಾನಕ್ಕೂ ಬರಲಾಗದಂಥ ಪರಿಸ್ಥಿತಿ ಆಗಾಗ ಉದ್ಭವವಾಗುತ್ತಿತ್ತು.

ಇದಕ್ಕಿಂತ ದೊಡ್ಡ ಸಮಸ್ಯೆ ಏನೆಂದರೆ ಆಯುರ್ವೇದ ಔಷಧಗಳಲ್ಲಿ ಸೀಸ, ಪಾದರಸ ಮತ್ತು ಆರ್ಸೆನಿಕ್ ಈ ಮೂರೂ ಧಾತುಗಳನ್ನು ದೊಡ್ಡ ಪ್ರಮಾಣದಲ್ಲಿ ಭಸ್ಮದ ರೂಪದಲ್ಲಿ ಪುರಾತನ ಕಾಲದಿಂದಲೂ ಬಳಸುತ್ತಾರೆ. ಭಸ್ಮರೂಪದಲ್ಲಿ ಬಳಸುವುದರಿಂದ ದೇಹಕ್ಕೆ ಅನುಕೂಲವೆಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಆದರೆ ಆಧುನಿಕ ವಿಜ್ಞಾನದ ಪ್ರಕಾರ, ಇವೆಲ್ಲವೂ ದೇಹಕ್ಕೆ ನೇರವಾಗಿ ವಿಷವನ್ನು ಸೇರಿಸುತ್ತವೆ-

ಭಸ್ಮವಾಗಿರಲಿ, ದ್ರವರೂಪದಲ್ಲಿರಲಿ ಅವು ಕರುಳಿಗೆ ಸೇರಿ ರಕ್ತಗತವಾದರೆ ವಿಷವಾಗಿ ಪರಿಣಮಿಸುತ್ತವೆ. ರೋಮನ್ ಸಾಮ್ರಾಜ್ಯವೇ ಸೀಸ ಲೋಹದ ಅತಿ ಬಳಕೆಯಿಂದಾಗಿ ನಶಿಸಿ ಹೋಯಿತೆಂದು ಹೇಳಲಾಗುತ್ತದೆ. ನೆಪೋಲಿಯನ್ ಸಾವಿಗೆ ಆರ್ಸೆನಿಕ್ ವಿಷವೇ ಕಾರಣವೆಂದು ಹೇಳಲಾಗುತ್ತಿದೆ.

ಪಾದರಸವನ್ನು ಅತ್ಯಲ್ಪ ಪ್ರಮಾಣದಲ್ಲಿ ನಾಲ್ಕಾರು ವರ್ಷಗಳ ಕಾಲ (ಗೊತ್ತಿಲ್ಲದೆ) ಸೇವಿಸಿದ್ದರಿಂದ ಜಪಾನಿನ ಮಿನಾಮಾಟಾ ಪಟ್ಟಣದ ಸಾವಿರಾರು ಜನರು ನರಕಸದೃಶ ಜೀವನ ನಡೆಸಿ, ಸಾವಪ್ಪಿದ್ದು ಅಳಿಸಲಾಗದ ದಾಖಲೆಯಾಗಿದೆ. ಪೆಟ್ರೋಲ್ ಹೊಗೆಯಲ್ಲಿ ಸೀಸದ ಅಂಶ ಇರುವುದು ಅಪಾಯಕಾರಿ ಎಂಬುದು ಸಂಶಯಾತೀತವಾಗಿ ಗೊತ್ತಾಗಿದ್ದರಿಂದಲೇ ಪ್ರಪಂಚದ ಎಲ್ಲ ಕಡೆ ಸೀಸವಿಲ್ಲದ ಪೆಟ್ರೋಲ್ ಬಳಕೆಗೆ ಬಂದಿದೆ.

ಇಂಥ ಅಪಾಯಕಾರಿ ಧಾತುಗಳನ್ನೇ ಪುರಾತನ ಪಂಡಿತರು ಔಷಧವೆಂದು ರೋಗಿಗಳಿಗೆ ನುಂಗಿಸಿದ್ದನ್ನು ‘ಪಾರಂಪರಿಕ ಜ್ಞಾನ’ವೆಂದು ಬಿಂಬಿಸುವುದು ಸರಿಯೆ? ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಮನುಷ್ಯರಕ್ತದಲ್ಲಿ ವಾರಕ್ಕೆ ಹೆಚ್ಚೆಂದರೆ 25 ಮೈಕ್ರೊಗ್ರಾಮ್ ಸೇರಬಹುದು. ಶ್ರೀಲಂಕಾ ಮೂಲದ ವೈದ್ಯ ಸಂಶೋಧಕ ಇಂದಿಕಾ ಗವರಮ್ಮನ್ ಮತ್ತಿತರರು 2008ರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಆಯುರ್ವೇದ ಮಾತ್ರೆಗಳನ್ನು ದಿನಕ್ಕೆ 3ರಂತೆ ಸೇವಿಸುತ್ತಿದ್ದ, ಸಾವಿನಂಚಿಗೆ ಬಂದಿದ್ದ ಒಬ್ಬ ರೋಗಿಯ ರಕ್ತದಲ್ಲಿ 200 ಪಟ್ಟು ಹೆಚ್ಚು ಸೀಸವಿಷ ಇದ್ದುದು ಪತ್ತೆಯಾಗಿದೆ. ರೋಗಿಯ ಚಿಂತಾಜನಕ ಸ್ಥಿತಿಗೆ ಆಯುರ್ವೇದ ಔಷಧವೇ ಕಾರಣವೆಂದು ಹೇಳಿ, ಆ ರೋಗಿ ಬಳಸುತ್ತಿದ್ದ ಮಾತ್ರೆಗಳ ಚಿತ್ರಗಳನ್ನೂ ಪ್ರಕಟಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸೀಸವಿಷವಿದ್ದರೂ ಆ ವ್ಯಕ್ತಿ ಬದುಕಿರುವುದೇ ವೈದ್ಯಕೀಯ ವಿಸ್ಮಯವೆಂದು ಹೇಳಿ, ಆತನ ಸಾವನ್ನು ತಪ್ಪಿಸಲು ನಡೆಸಿದ ವೈದ್ಯಕೀಯ ಸಾಹಸಗಳನ್ನು ವಿವರಿಸಲಾಗಿದೆ. ಭಾರಲೋಹದ ಭಸ್ಮವನ್ನು ಹಿರಿಯರು ಸೇವಿಸಿದರೆ ಅಪಾಯ ಕೆಲಮಟ್ಟಿಗೆ ಕಡಿಮೆ ಇರುತ್ತದೆ. ಏಕೆಂದರೆ ಕರುಳಿನಲ್ಲಿ ಅದನ್ನು ಹೀರಿಕೊಳ್ಳುವ ಸಾಮರ್ಥ್ಯ ಅಷ್ಟಾಗಿರುವುದಿಲ್ಲ. ಆದರೆ ಮಕ್ಕಳ ಕರುಳಿನಲ್ಲಿ ಅದು ಬಲು ಶೀಘ್ರ ರಕ್ತಗತ ಆಗುವುದರಿಂದ ಅದು ಇನ್ನೂ ತೀವ್ರವಾಗಿ ರಕ್ತಹೀನತೆ, ಕರುಳಿನ ಊತ ಮತ್ತು ಮಾನಸಿಕ ಅಸ್ವಸ್ಥತೆ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ವೈದ್ಯತಜ್ಞರು ಹೇಳುತ್ತಾರೆ. 

ಕೆನಡಾ, ಯುಎಸ್‌ಎ, ಇಂಗ್ಲೆಂಡ್, ಅಷ್ಟೇಕೆ, ಭಾರತದಲ್ಲೂ ಆಯುರ್ವೇದ ಔಷಧಗಳ ಮೇಲೆ ನಡೆಸಿದ ಅದೆಷ್ಟೊ ಅಧ್ಯಯನಗಳಲ್ಲಿ ವಿಷಯುಕ್ತ ಭಾರಲೋಹಗಳು ಇರುವುದು ಗೊತ್ತಾಗಿದೆ. ಲ್ಯಾಬ್‌ಗಳಲ್ಲಿ ಅವುಗಳ ಪರೀಕ್ಷೆ ಮಾಡಬೇಕೆಂದೇನೂ ಇಲ್ಲ. ಕೆಲವು ಔಷಧಗಳ ಬಾಟಲಿ ಅಥವಾ ಮಾತ್ರೆ ಪಟ್ಟಿಯ ಮೇಲೆಯೇ ಅವು ಎಷ್ಟು ಪ್ರಮಾಣದಲ್ಲಿವೆ ಎಂಬುದನ್ನು ಬರೆದಿರುತ್ತಾರೆ. ಅವು ಔಷಧಗಳೇ ಆಗಬೇಕೆಂದೂ ಇಲ್ಲ.

ಶಕ್ತಿವರ್ಧಕ, ವೀರ್ಯವರ್ಧಕ ಅರಿಷ್ಟಗಳು, ರಸಪೇಯಗಳು, ಲೇಹ್ಯಗಳು ‘ಆಯುರ್ವೇದ ಸೂತ್ರದ ಪ್ರಕಾರ ತಯಾರಿಸಲ್ಪಟ್ಟಿದ್ದು’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತವೆ. ಆಕರ್ಷಕ ಡಬ್ಬಿಗಳಲ್ಲಿ ಸುಂದರ ಲೇಬಲ್ ಹಚ್ಚಿಸಿಕೊಂಡು ಇಂಥ ರಸಗಳು ಅನೇಕ ಸಂದರ್ಭಗಳಲ್ಲಿ ಮನೆಯ ಪಕ್ಕದ ಶೆಡ್‌ಗಳಲ್ಲೂ ತಯಾರಾಗಿರುವ ಸಂದರ್ಭವಿರುತ್ತದೆ. ಅಲ್ಲಿ ಸಂಸ್ಕರಣೆಯ ಮಾತು ಹಾಗಿರಲಿ, ಮೈಕ್ರೊಗ್ರಾಮ್ ಪ್ರಮಾಣದಲ್ಲಿ ಸೀಸ, ಪಾದರಸವೇ ಮುಂತಾದ ಧಾತುಗಳನ್ನು ಅಳೆದು ಸುರಿಯಬಲ್ಲ ಸಲಕರಣೆಯೂ ಇರಲಾರದು.

ಐರೋಪ್ಯ ಸಂಘದವರು ಆಯುರ್ವೇದ ಔಷಧಗಳಿಗೆ ನಿಷೇಧ ಹಾಕಲು ಬಹುರಾಷ್ಟ್ರೀಯ ಔಷಧಗಳ ಒತ್ತಾಯವೇ ಕಾರಣ ಎಂದು ಅನೇಕ ಆಯುರ್ವೇದ ಕಂಪೆನಿಗಳ ವಕ್ತಾರರು ಆರೋಪಿಸಿದ್ದಾರೆ.

ಅದು ನಿಜವೇ ಇದ್ದೀತೆಂದು ಹೇಳುವವರೂ ಆಯುರ್ವೇದದ ಅನಿಯಂತ್ರಿತ ಹಾವಳಿಯ ಬಗೆಗೆ ಎಚ್ಚರಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಷ್ಟೇ ಅಲ್ಲ, ಭಾರತದಲ್ಲೂ ಇಂಥ ಪಾರಂಪರಿಕ ಔಷಧಗಳಲ್ಲಿರುವ ಅನಿಷ್ಟಗಳ ನಿವಾರಣೆಗೆ, ಗುಣಮಟ್ಟದ ವರ್ಧನೆಗೆ ಹಾಗೂ ಶಿಸ್ತುಬದ್ಧ ಮಾನದಂಡಕ್ಕೆ ಒತ್ತಾಯಿಸುತ್ತಾರೆ. ‘ಕ್ಯಾನ್ಸರ್ ಕಾಯಿಲೆಯೆ? ಖಂಡಿತ ಅಲೊಪಥಿ ಡಾಕ್ಟರ್ ಬಳಿ ಹೋಗಬೇಡಿ. ಎಕ್ಸ್‌ವೈಝಡ್ ಪಂಡಿತರು ಗಿಡಮೂಲಿಕೆಯಲ್ಲೇ ಹಂಡ್ರೆಡ್ ಪರ್ಸೆಂಟ್ ವಾಸಿ ಮಾಡುತ್ತಾರೆ’ ಎಂದು ರೋಗಿಗಳ ದಿಕ್ಕು ತಪ್ಪಿಸಿ, ಕಾಯಿಲೆ ಮಾರಕವಾಗುವಂತೆ ಮಾಡುವ ಅಂಧ ಭಕ್ತರೂ ನಮ್ಮಲ್ಲಿದ್ದಾರೆ.
ಭಾರತೀಯ ಆಯುರ್ವೇದ ಪಂಡಿತರ ಮೇಲೆ ಅನೇಕ ಆರೋಪಗಳಿವೆ. ಔಷಧಗಳಲ್ಲಿ ಸ್ಟೆರಾಯಿಡ್ ಸೇರಿಸುವುದು,  ಶೀಘ್ರ ಶಮನಕ್ಕೆ ಅಲೊಪಥಿಕ್ ಔಷಧಗಳನ್ನು ಸೇರಿಸುವುದು, ತಮ್ಮ ಸಾಧನೆಗಳಿಗೆ ಉತ್ಪ್ರೇಕ್ಷಿತ ಪ್ರಚಾರ ಮಾಡುವುದು, ಏಡ್ಸ್‌ನಂಥ ಈಚಿನ ರೋಗಗಳಿಗೂ ಔಷಧವಿದೆಯೆನ್ನುವುದು, ಪುರಾತನ ವಿಧಾನಗಳಲ್ಲಿ ಹೇಳಲಾದ ಗಿಡಮೂಲಿಕೆಗಳು ಲಭ್ಯವೇ ಇಲ್ಲದಿದ್ದರೂ ಬೇರೇನನ್ನೊ ಸೇರಿಸಿ ರಸೌಷಧ ತಯಾರಿಸುವುದು, ಚಿನ್ನ-ಬೆಳ್ಳಿಯಂಥ ಲೋಹಗಳನ್ನು ಸೇರಿಸಿದ್ದೆಂದು ಲೈಂಗಿಕಮಾತ್ರೆಗಳನ್ನು ಮಾರುವುದು,  ಎಲ್ಲ ನಡೆಯುತ್ತವೆ. ಪಾರಂಪರಿಕ ಜ್ಞಾನದ ಬಗ್ಗೆ ನಮ್ಮಲ್ಲಿರುವ ಆದರ, ನಂಬುಗೆಯನ್ನೇ ದುರ್ಬಳಕೆ ಮಾಡಿಕೊಳ್ಳುವ ಇಂಥ ಹುನ್ನಾರಗಳಿಗೆ ನಿಯಂತ್ರಣ ಹಾಕುವುದು ಸುಲಭವಲ್ಲ.

‘ಆಯುರ್ವೇದ ಎಂದರೆ ಕೇವಲ ಔಷಧ ಪದ್ಧತಿಯಲ್ಲ, ಅದೊಂದು ಜೀವನ ವಿಧಾನ’ ಎಂಬುದನ್ನು ಎಲ್ಲರೂ ಹೇಳುತ್ತಾರೆ. ರೋಗ ಬಾರದಂತೆ ತಡೆಯುವ ಸೂತ್ರಗಳೆಲ್ಲ ಅದರಲ್ಲಿ ಸಮೃದ್ಧವಾಗಿ, ಸಮರ್ಥವಾಗಿ ಅಡಕವಾಗಿವೆ. ನಿಸರ್ಗಕ್ಕೆ ಹತ್ತಿರವಾಗಿ, ಸಹ್ಯವಾಗಿ ಬದುಕು ನಡೆಸುತ್ತಿದ್ದರೆ ಅವೆಲ್ಲ ಸರಿ. ಆದರೆ ನಾವಿಂದು ನಾನಾ ಬಗೆಯ ಕೃತಕ ಕೆಮಿಕಲ್, ಕೃತಕ ವಿಕಿರಣ, ಕೃತಕ ಸಾಮಗ್ರಿಗಳ ನಡುವೆ ಬದುಕುತ್ತಿದ್ದೇವೆ. ಅವುಗಳ ಮಧ್ಯೆ ಪುರಾತನ ವೈದ್ಯ ಪರಂಪರೆಯೂ ತನ್ನತನವನ್ನು ಕಳೆದುಕೊಂಡಿದೆ. ಆದ್ದರಿಂದಲೇ ‘ಕಾಯಿಲೆ ಇಲ್ಲದಿದ್ದಾಗ ಆಯುರ್ವೇದ ಔಷಧ ಪದ್ಧತಿ ಅನುಸರಿಸಿ; ಕಾಯಿಲೆ ಬಂದಾಗ ಅಲೊಪಥಿಯನ್ನು ನಂಬಿ’ ಎನ್ನುತ್ತಾರೆ, ವೈದ್ಯಕೀಯ ಪದವಿ ಪಡೆದಿದ್ದರೂ ಬೆಂಗಳೂರಿನಲ್ಲಿ ತ್ಯಾಜ್ಯಸಂಸ್ಕರಣಾ ಉದ್ಯಮಿಯಾಗಿರುವ ಡಾ. ವಾಮನ ಆಚಾರ್ಯ.

ಈ ಮಧ್ಯೆ ಜನಸಾಮಾನ್ಯರ ಸಂದಿಗ್ಧ ಎಂಥವರಿಗೂ ಅರ್ಥವಾಗುವಂಥದ್ದು. ಒಂದೆಡೆ ನಮ್ಮ ದೇಹವನ್ನು ಯಂತ್ರದಂತೆ ಪರಿಗಣಿಸಿ, ಒಂದಿಷ್ಟು ಮಾತ್ರೆ, ಇಂಜಕ್ಷನ್ ತುಂಬಿ ತಳ್ಳುವ ಅಲೊಪಥಿ. ಇನ್ನೊಂದೆಡೆ, ಹಣಮಾಡುವ ದಂಧೆಯಾಗಿ ಬದಲಾದ ಆಯುರ್ವೇದ ಚಿಕಿತ್ಸಾ ಪದ್ಧತಿ. ಈ ನಡುವೆ ನೀರು, ಹಣ್ಣು, ಹಾಲು, ಜೇನು ಎಲ್ಲವನ್ನೂ ಕಲುಷಿತಗೊಳಿಸಿ ಎಲ್ಲವನ್ನೂ ಭರಾಟೆಯಿಂದ ಮಾರುವ ಉದ್ಯಮಿಗಳು. ಇವೆಲ್ಲವುಗಳಿಂದ ಬಚಾವಾಗಿ ‘ಬದುಕಿದೆಯಾ ಇಂದು ಬಡಜೀವವೇ’ ಎಂದು ಹಾಯಾಗಿ ದಿಂಬಿಗೆ ತಲೆಕೊಡುವ ವಿಧಾನವನ್ನು ಎಲ್ಲಿಂದ ಕಲಿಯೋಣ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT