ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಕೈಗೇ ‘ಕನ್ನಡ – ಸಂಸ್ಕೃತಿ’ ಅಧಿಕಾರ

ಲೋಕಾಯುಕ್ತ ತನಿಖೆ ಎದುರಿಸುತ್ತಿರುವವರಿಗೇ ಇಲಾಖೆಯ ಪ್ರಭಾರ
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಜೊತೆ ನೀಡುವ ಬಂಗಾರದ ಪದಕಗಳ ಕಣ್ಮರೆ ಮತ್ತು ಇಲಾಖೆಯ ಅನುದಾನ ದುರ್ಬಳಕೆ ಪ್ರಕರಣದಲ್ಲಿ ಲೋಕಾ­ಯುಕ್ತ ಪೊಲೀಸರಿಂದ ತನಿಖೆ ಎದುರಿ­ಸುತ್ತಿರುವ ಅಧಿಕಾರಿಗೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಹುದ್ದೆಯ ಪ್ರಭಾರ ಒಪ್ಪಿಸಲಾಗಿದೆ. ಇದರಿಂದ ತನಿಖೆಗೆ ಹಿನ್ನಡೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪದಕ ನಾಪತ್ತೆ ಮತ್ತು ಹಣ ದುರುಪಯೋಗ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಿ.ಟಿ.ಮುನಿರಾಜು ಅವರು ಲೋಕಾಯುಕ್ತ ತನಿಖೆ ಎದುರಿಸು­ತ್ತಿದ್ದಾರೆ. ಆದರೆ ವಾರದ ಹಿಂದೆ ಅವರನ್ನೇ ಇಲಾಖೆಯ ಪ್ರಭಾರಿ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.

ಇಲಾಖೆಯ ಸಾರಥ್ಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯ­ದರ್ಶಿ ರಮೇಶ್‌ ಬಿ.ಝಳಕಿ ಕಳೆದ ತಿಂಗಳು ಸೇವೆಯಿಂದ ನಿವೃತ್ತರಾದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾ­ಖೆಯ ಕಾರ್ಯದರ್ಶಿ ಕೆ.ಆರ್‌.­ನಿರಂಜನ ಅವರಿಗೆ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹುದ್ದೆಯನ್ನೂ ನೀಡಲಾಗಿದೆ.

ಅದೇ ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್‌.ರಾಮಕೃಷ್ಣ ಅವರೂ ನಿವೃತ್ತರಾಗಿದ್ದರು. ಈ ಹುದ್ದೆಗೆ ಇನ್ನೂ ಯಾರನ್ನೂ ನಿಯೋ­ಜನೆ ಮಾಡಿಲ್ಲ. ಇಲಾಖೆಯಲ್ಲಿ ಈಗ ಪೂರ್ಣ ಪ್ರಮಾಣದ ಕಾರ್ಯದರ್ಶಿ, ಆಯುಕ್ತರು ಮತ್ತು ನಿರ್ದೇಶಕರೇ ಇಲ್ಲ. ನಿರ್ದೇಶಕರ ಹುದ್ದೆಯಲ್ಲಿ ಕುಳಿತಿರುವ ಮುನಿರಾಜು ಅವರ ಕೈಗೆ ಇಡೀ ಇಲಾಖೆ ಸಾರಥ್ಯ ಸಿಕ್ಕಂತಾಗಿದೆ.

ತನಿಖಾ ತಂಡಕ್ಕೆ ದೂರು: ಮುನಿ­ರಾಜು ಅವರಿಗೆ ನಿರ್ದೇಶಕರ ಹುದ್ದೆಯ ಪ್ರಭಾರ ಒಪ್ಪಿಸಿರುವುದಕ್ಕೆ ಇಲಾಖೆಯ ಒಳಗೇ ಅಸಮಾಧಾನ ವ್ಯಕ್ತ­ವಾಗಿದ್ದು, ಕೆಲವರು ಲೋಕಾ­ಯುಕ್ತಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಮಹತ್ವದ ಘಟ್ಟದಲ್ಲಿ ತನಿಖೆ: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಕೆಲವರು ಈವರೆಗೂ ಪ್ರಶಸ್ತಿಯನ್ನೇ ಪಡೆದಿಲ್ಲ. ಅವರಿಗೆ ನೀಡಬೇಕಾದ ಚಿನ್ನದ ಪದಕ, ನಗದು ಮತ್ತು ಪ್ರಶಸ್ತಿ ಫಲಕಗಳು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸುಪರ್ದಿಯಲ್ಲೇ ಇವೆ. ಅದರಲ್ಲಿ ಕೆಲ    ಪದಕಗಳೇ ಕಣ್ಮರೆ ಆಗಿವೆ.

ಇಲಾಖೆಯಲ್ಲಿ ಕಲಾವಿದರು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಅನು­ದಾನ ಬಿಡುಗಡೆಯಲ್ಲಿ ಅಕ್ರಮ ನಡೆದಿದೆ, ಚೆಕ್‌ ಮೂಲಕ ವ್ಯವಹ­ರಿಸದೇ ಕೋಟ್ಯಂತರ ರೂಪಾಯಿ ದುರ್ಬಳಕೆ ನಡೆದಿದೆ ಎಂಬ ದೂರುಗಳಿವೆ. ಈ ಬಗ್ಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಜೂನ್‌ 24ರಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಮೇಲೆ ದಾಳಿ ಮಾಡಿ, ಶೋಧ ನಡೆಸಿದ್ದರು. 200ಕ್ಕೂ ಹೆಚ್ಚು ಕಡತಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

‘ಪರಿಶೀಲಿಸಿ ಕ್ರಮ‘
‘ಪ್ರಜಾ­ವಾಣಿ’ಗೆ ಪ್ರತಿಕ್ರಿಯೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ‘ಮುನಿರಾಜು ಅವರು ನಿರ್ದೇಶಕರ ಹುದ್ದೆಯ ಪ್ರಭಾರ­ವನ್ನು ಮಾತ್ರ ಹೊಂದಿದ್ದಾರೆ. ಇಲಾಖೆಯ ಆಯು­ಕ್ತ­ರಾಗಿದ್ದ ಕೆ.­ಆರ್‌.­ರಾಮಕೃಷ್ಣ ಅವರು ನಿವೃತ್ತ­ರಾಗುವ ಸಂದರ್ಭ­ದಲ್ಲಿ ಹಿರಿತನದ ಆಧಾರದಲ್ಲಿ ಮುನಿ­ರಾಜು ಅವರಿಗೆ ಪ್ರಭಾರ ಒಪ್ಪಿಸಿ­ದ್ದರು. ಈ ಬಗ್ಗೆ ನಾನು ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ತಿಳಿಸಿದರು. ‘ಮುನಿರಾಜು ಲೋಕಾ­ಯುಕ್ತ ತನಿಖೆ ಎದುರಿ­ಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಸೋಮ­ವಾರ ಈ ಕುರಿತು ಇಲಾಖೆ ಕಾರ್ಯದರ್ಶಿ ಜೊತೆ ಚರ್ಚಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT