ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳ ಬಂಧನ: ಹುಣಸೂರು ನಿಟ್ಟುಸಿರು

Last Updated 23 ಜೂನ್ 2011, 5:40 IST
ಅಕ್ಷರ ಗಾತ್ರ

ಹುಣಸೂರು: ಸುಧೀಂದ್ರ ಹಾಗೂ ವಿಘ್ನೇಶ್ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಸುದ್ದಿ  ತಿಳಿಯುತ್ತಿದ್ದಂತೆ ಬುಧವಾರ ಪಟ್ಟಣದ ಜನತೆ ನಿಟ್ಟುಸಿರು ಬಿಟ್ಟರು.

ಮಧ್ಯಾಹ್ನದ ಹೊತ್ತಿಗೆ ಡಿವೈಎಸ್‌ಪಿ ಕಚೇರಿ ಎದುರು ಜನರು ಗುಂಪು ಗುಂಪಾಗಿ ಸೇರತೊಡಗಿದ್ದರು. `ನಮ್ಮೂರ ಮಕ್ಕಳನ್ನು ಕೊಲೆ ಮಾಡಿದ ಕಟುಕರಿಗೆ ಕಠಿಣ ಶಿಕ್ಷೆಯನ್ನೇ ವಿಧಿಸಬೇಕು~ ಎಂದು ಆಕ್ರೋಶ ವ್ಯಕ್ತಪಡಿಸಿದರು. `ಕೊಲೆಗಡುಗರು ಎಷ್ಟೊತ್ತಿಗಾದರೂ ಬರಲಿ, ನಾನು ಅವರನ್ನು ನೋಡಿ, ಛೀಮಾರಿ ಹಾಕಿಯೇ ಹೋಗುತ್ತೇನೆ~ ಎಂದು ತಾಲ್ಲೂಕಿನ ನಿಲುವಾಗಿಲು ಗ್ರಾಮದ ವ್ಯಕ್ತಿಯೊಬ್ಬ ಕಾಯುತ್ತಾ ಕುಳಿತ್ತಿದ್ದರು.

ಭಾರೀ ಬಂದೋಬಸ್ತ್
ಆರೋಪಿಗಳನ್ನು ಪಟ್ಟಣದ ನ್ಯಾಯಾಲಯದಲ್ಲಿ ಹಾಜರು ಪಡಿಸುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಹೀಗಾಗಿ ಡಿವೈಎಸ್‌ಪಿ ಕಚೇರಿ ಮುಂದೆ ಸಾರ್ವಜನಿರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು. ಹೀಗಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಡಿವೈಎಸ್‌ಪಿ, 6  ಸರ್ಕಲ್ ಇನ್ಸ್‌ಪೆಕ್ಟರ್‌ಗಳು, 8 ಸಬ್ ಇನ್ಸ್‌ಪೆಕ್ಟರ್‌ಗಳು ಹಾಗೂ 100 ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು.

ವಿದ್ಯುತ್ ಕಡಿತ
ಬೆಂಗಳೂರಿನಲ್ಲಿ ಗೃಹ ಸಚಿವ ಆರ್.ಅಶೋಕ್ ಮಧ್ಯಾಹ್ನ 12 ಗಂಟೆಗೆ ಆರೋಪಿಗಳ ಬಂಧನ ಸುದ್ದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಈ ಸುದ್ದಿಯನ್ನು ದೃಶ್ಯ ಮಾಧ್ಯಮಗಳು ನೇರ ಪ್ರಸಾರ ಮಾಡುತ್ತಿದ್ದವು. ಬೆಳಿಗ್ಗೆ 11.45 ರಿಂದ 12.30 ರ ವರೆಗೆ ಪಟ್ಟಣದಲ್ಲಿ ಪೂರ್ಣವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು.

ವಕಾಲತ್ತಿಗೆ ನಕಾರ
ಸುಧೀಂದ್ರ ಮತ್ತು ವಿಘ್ನೇಶ್ ಕೊಲೆ ಪ್ರಕರಣದ ಆರೋಪಿಗಳ ಪರವಾಗಿ ವಕಾಲತ್ತು ವಹಿಸದಿರಲು ತಾಲ್ಲೂಕು ವಕೀಲರ ಸಂಘದ ಸದಸ್ಯರು  ಬುಧವಾರ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.  ನೊಂದ ಎರಡೂ ಕುಟುಂಬದವರ ಪರವಾಗಿ ವಕಾಲತ್ತು ವಹಿಸಲು ಸಂಘವು ಸಿದ್ಧವಿದೆ ಎಂದು ಸಂಘದ ಅಧ್ಯಕ್ಷ ಯೋಗಾನಂದಕುಮಾರ್ ತಿಳಿಸಿದ್ದಾರೆ.

ಕೆಎಫ್‌ಡಿ ಸಕ್ರಿಯ ಸದಸ್ಯರು!
ಹುಣಸೂರಿನ ವಿದ್ಯಾರ್ಥಿಗಳಾದ ಸುಧೀಂದ್ರ ಮತ್ತು ವಿಘ್ನೇಶ್ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು.

ಹುಣಸೂರಿನ ಅತಾವುಲ್ಲಾ ಖಾನ್ ಮತ್ತು ಆದಿಲ್ ಪಾಷ 2009, ಜುಲೈ 9 ರಂದು ನಗರದಲ್ಲಿ ಜೈಲ್ ಭರೋ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು.

ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2009, ಜುಲೈ 2 ರಂದು ಕೋಮು ಗಲಭೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಎನ್.ಆರ್, ಮಂಡಿ, ಉದಯಗಿರಿ  ಮತ್ತು ಲಷ್ಕರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಕೆಎಫ್‌ಡಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳಿಗೆ ಸೇರಿದ ನೂರಾರು ಕಾರ್ಯಕರ್ತರು ಫೌಂಟೇನ್ ವೃತ್ತದಲ್ಲಿ ಜಮಾಯಿಸಿ ಜೈಲ್ ಭರೋ  ಚಳವಳಿ ನಡೆಸಿದ್ದರು. ನಿಷೇಧಾಜ್ಞೆ ಸಂದರ್ಭದಲ್ಲಿ ಗುಂಪು ಸೇರಿ ಜೈಲ್ ಭರೋ ಚಳವಳಿ ನಡೆಸಿದ್ದರಿಂದ ಪೊಲೀಸರು 159 ಮಂದಿಯನ್ನು ಬಂಧಿಸಿ ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಲಾಗಿತ್ತು. ಬಂಧಿತರಲ್ಲಿ ಅತಾವುಲ್ಲಾ ಖಾನ್ ಮತ್ತು ಆದಿಲ್ ಪಾಷ ಸಹ ಸೇರಿದ್ದರು. ಕೆಎಫ್‌ಡಿ ಸದಸ್ಯರಾಗಿದ್ದ ಇವರು ಜೈಲ್ ಭರೋ,  ಪ್ರತಿಭಟನೆ ಸೇರಿದಂತೆ ಸಂಘಟನೆ ಹಮ್ಮಿಕೊಳ್ಳುತ್ತಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಶಫೀರ್ ವಿರುದ್ಧ ಪ್ರಕರಣ

ಆರೋಪಿಗಳಾದ ಮಹಮ್ಮದ್ ಕೌಸರ್, ಶಬ್ಬೀರ್ ಉಲ್ಲಾ ರೆಹಮಾನ್, ಹಮೀನ್ ಮತ್ತು ಷಫೀರ್ ಅಹಮ್ಮದ್ ರಾಜೀವನಗರದವರು. ಇವರು ಸಹ  ಕೆಎಫ್‌ಡಿ ಸದಸ್ಯರು. ಆದರೆ ಜೈಲ್ ಭರೋದಲ್ಲಿ ಇವರು ಭಾಗಿಯಾಗಿರಲಿಲ್ಲ. ಕೋಮು ಗಲಭೆಗೆ ಸಂಬಂಧಿಸಿದಂತೆ ಶಫೀರ್ ಅಹಮ್ಮದ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದೆ.

ಉದ್ದೇಶ ಒಂದೇ, ಹೆಸರು ಹಲವು
ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ) ದಕ್ಷಿಣ ಭಾರತದಲ್ಲಿ ವಿವಿಧ ಹೆಸರಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೇರಳದಲ್ಲಿ ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (ಎನ್‌ಡಿಎಫ್), ತಮಿಳುನಾಡಿನಲ್ಲಿ ಮನಿದ ನೀದಿ ಪಾಸರೈ (ಎಂಎನ್‌ಪಿ) ಹೆಸರಿನಲ್ಲಿವೆ.

ಕೆಎಫ್‌ಡಿ, ಎನ್‌ಡಿಎಫ್ ಮತ್ತು ಎಂಎನ್‌ಪಿ ಸಂಘಟನೆಗಳು 2006ರಲ್ಲಿ ಸಭೆ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಹುಟ್ಟುಹಾಕಿದವು. ಬಳಿಕ ಕೆಎಫ್‌ಡಿಯನ್ನು ಪಿಎಫ್‌ಐಗೆ ವಿಲೀಲಗೊಳಿಸಿತು. ಇದೀಗ ಕೆಎಫ್‌ಡಿ ಚಾಲನೆಯಲ್ಲಿಲ್ಲ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ರಾಜಸ್ತಾನ, ಮಣಿಪುರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗೋವಾ ಮತ್ತು ಇತರೆ ರಾಜ್ಯಗಳಲ್ಲಿ ಪಿಎಫ್‌ಐ ಶಾಖೆಗಳು ಇವೆ.

ಬೆಂಗಳೂರಿನಲ್ಲಿ ಪಿಎಫ್‌ಐ ಮುಖ್ಯ ಕಚೇರಿ ಇದೆ. ವಿವಿಧ ಚಟುವಟಿಕೆಗಳನ್ನು ನಡೆಸುತ್ತಿರುವ ಪಿಎಫ್‌ಐ ಸಂಘಟನೆ ವೆಬ್‌ಸೈಟ್ ಹೊಂದಿದೆ. ಸಂಘಟನೆಯ ಧ್ಯೇಯೋದ್ದೇಶ, ಕಾರ್ಯಚಟುವಟಿಕೆಗಳು, ಶಿಕ್ಷಣ ಸಂಸ್ಥೆಗಳ ವಿವರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡುತ್ತಿದೆ. ಪಿಎಫ್‌ಐ ವೆಬ್‌ಸೈಟ್ ಹೀಗಿದೆ- ಡಿಡಿಡಿ. ಟಟ್ಠ್ಝಚ್ಟ್ಛ್ಟಟ್ಞಠಿಜ್ಞಿಜಿ.ಟ್ಟಜ
ವಿದ್ಯಾರ್ಥಿಗಳ ಕೊಲೆ: ಪಿಎಫ್‌ಐ ಖಂಡನೆ

ಹುಣಸೂರಿನ ವಿದ್ಯಾರ್ಥಿಗಳನ್ನು ಕೊಲೆ ಮಾಡಿರುವ ಘಟನೆಯನ್ನು ಪಿಎಫ್‌ಐ ಸಂಘಟನೆ ಖಂಡಿಸಿದ್ದು, ಈ ಕುರಿತು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕೆಎಫ್‌ಡಿಗೆ ಹಣ ಸಂಗ್ರಹ ಮಾಡುವ ಸಲುವಾಗಿ ಕೃತ್ಯ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದು. 2006 ರಲ್ಲಿ ಕೆಎಫ್‌ಡಿ ಸಂಘಟನೆಯನ್ನು ಪಿಎಫ್‌ಐಗೆ ವಿಲೀನ ಮಾಡಲಾಯಿತು. ಕೆಎಫ್‌ಡಿ ಹೆಸರಿನಲ್ಲಿ ಯಾವುದೇ ಸಂಘಟನೆ ಕಾರ್ಯನಿರ್ವಹಿಸುತ್ತಿಲ್ಲ. ಪಿಎಫ್‌ಐ ಸದಸ್ಯರು ನೀಡುವ ಮಾಸಿಕ ವಂತಿಗೆ ಮತ್ತು ಸಾರ್ವಜನಿಕ ದೇಣಿಗೆ ಸಂಘಟನೆಯ ಆರ್ಥಿಕ ಮೂಲವಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರು ಯಾವುದೇ ಸಮುದಾಯ, ಸಂಘಟನೆಗೆ ಸೇರಿರಲಿ ಅಂತಹವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ತಿಳಿಸಿದೆ.

ನಿನ್ನೆಯೇ ಮನೆ ಖಾಲಿ
ಶಬ್ಬೀರ್‌ನಗರದ ನಿವಾಸಿ ಆದಿಲ್ ಪಾಷನ ಪೋಷಕರು ಮಂಗಳವಾರವೇ ಮನೆಗೆ ಬೀಗ ಹಾಕಿ ಎಲ್ಲಿಗೋ ಹೋಗಿದ್ದಾರೆ. ಅಕ್ಕಪಕ್ಕದವರಿಗೆ ವಿಚಾರ ತಿಳಿಯುವ ಮುನ್ನವೇ ಪೋಷಕರು ಹೊರಟು ಹೋಗಿದ್ದಾರೆ. `ಆದಿಲ್ ಪಾಷನ ತಂದೆ ಪಾಷಜಾನ್ ಶಬ್ಬೀರ್‌ನಗರದಲ್ಲಿ ಮಾಂಸ ಮಾರಾಟ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪಾಷಜಾನ್‌ಗೆ ಐವರು ಪುತ್ರರು ಹಾಗೂ ಒಬ್ಬಳು ಪುತ್ರಿ ಇದ್ದು, ಆಕೆಗೆ ವಿವಾಹ ಮಾಡಲಾಗಿದೆ. ಮೊದಲ ಮಗನಿಗೆ ಮದುವೆ ಮಾಡಿದ್ದಾರೆ. ಆದಿಲ್ ಪಾಷ ಮೂರನೇ ಮಗ ಎಂದು ನೆರೆಯವರು ತಿಳಿಸಿದರು.

`ಬಂದ್~ನಲ್ಲಿ ಆರೋಪಿಗಳು?
ಸುಧೀಂದ್ರ ಮತ್ತು ವಿಘ್ನೇಶ್ ಅವರ ಅಂತ್ಯಸಂಸ್ಕಾರದ ದಿನ ಕರೆ ನೀಡಲಾಗಿದ್ದ ಹುಣಸೂರು ಬಂದ್ ಸಂದರ್ಭದಲ್ಲಿ ಅಪಹರಣ ಮತ್ತು ಕೊಲೆಯ ಪ್ರಮುಖ ಆರೋಪಿಗಳು ಸಕ್ರಿಯವಾಗಿದ್ದರು!

ವಿದ್ಯಾರ್ಥಿಗಳ ಕೊಲೆಯನ್ನು ಹಾಗೂ ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿ ಜೂನ್ 13 ರಂದು ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು ಬಂದ್‌ಗೆ ಕರೆ ಕೊಟ್ಟಿದ್ದವು.

ಬಂದ್‌ಗೆ ನಾಗರಿಕರು ಅಭೂತ ಪೂರ್ವ ಎನ್ನುವಂತೆ ಸ್ಪಂದಿಸಿದ್ದರು. ಈ ಬಂದ್ ಯಶಸ್ವಿಯಲ್ಲಿ ಈ ಪ್ರಕರಣದ ಪ್ರಮುಖ ಆರೋಪಿಗಳಾದ ಅದಿಲ್‌ಪಾಷ ಮತ್ತು ಅತವುಲ್ಲಾ ಖಾನ್ ಸಹಕರಿಸಿದ್ದರು ಎನ್ನಲಾಗಿದೆ.

ಸಂಕಟ ಯಾರಿಗೆ ಹೇಳಲಿ?
ಒಂದು ಕಡೆ ದುಃಖ, ಮತ್ತೊಂದು ಕಡೆ ಸಂತೋಷವಾಗುತ್ತಿದೆ ಎಂದು ವಿಘ್ನೇಶ್ ತಂದೆ ಶ್ರೀನಾಥ್ ಬುಧವಾರ ಪ್ರತಿಕ್ರಿಯಿಸಿದರು.
`ಒಂದು ಕಡೆ ಅಪರಾಧಿಗಳನ್ನು ಬಂಧಿಸಿದ ಸಂತೋಷವಿದ್ದರೂ, ಮಗನನ್ನು ಕಳೆದುಕೊಂಡ ಸಂಕಟವನ್ನು ಹೇಳಿಕೊಳ್ಳಲಾಗದು. ಈಗಷ್ಟೆ ಮಗನ 11ನೇ ದಿನದ ಧಾರ್ಮಿಕ ಕಾರ್ಯ ಮುಗಿಸಿದ್ದೇನೆ~ ಎಂದು ಗದ್ಗದಿತರಾದರು.

`ನನ್ನ ಕುಟುಂಬ ಎರಡು ಜೀವಗಳು ಯಾವುದೇ ತಪ್ಪು ಮಾಡದೆ ಕೊಲೆಯಾಗಿವು. 15 ವರ್ಷದ ಹಿಂದೆ ಸಹೋದರ ಅಮರ್‌ನಾಥ್ ಕೊಲೆಯಾಗಿದ್ದ, ಆ ಪ್ರಕರಣಕ್ಕೆ ಸಂಬಂಧಿದಂತೆ ಕಾನೂನು ಹೋರಾಟ ಮಾಡಿದರೂ ಹಣದ ಬಲದ ಮುಂದೆ ಎಲ್ಲವೂ ವ್ಯರ್ಥವಾಗಿ ನ್ಯಾಯ ದೊರಕಲಿಲ್ಲ. ಈಗ ಮಗ ವಿಘ್ನೇಶ್‌ನನ್ನು ಕಳೆದುಕೊಂಡಿದ್ದೇನೆ. ಈ ಪ್ರಕರಣದಲ್ಲಿಯಾದರೂ ಅಪರಾಧಿಗಳಿಗೆ ಶಿಕ್ಷೆ ಆಗಬೇಕು.ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಗಟ್ಟಿಯಾಗಿದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಮೊಬೈಲ್ ಅಂಗಡಿ ತೆರೆದೇ ಇತ್ತು..
ಹುಣಸೂರು: ಪಟ್ಟಣದ ಕಾರ್ಖಾನೆ ರಸ್ತೆಯಲ್ಲಿರುವ ಸುಫಿ ಮೊಬೈಲ್ ಅಂಗಡಿ ಎಲ್ಲರ ಕೇಂದ್ರಬಿಂದುವಾಗಿದೆ. ಈ ಅಂಗಡಿ ಆರೋಪಿ ಅತಾವುಲ್ಲ ಖಾನ್‌ಗೆ ಸೇರಿದೆ. ಈ ಅಂಗಡಿ ಬುಧವಾರವೂ ತೆರೆದಿತ್ತು. ಆದರೆ ಅಂಗಡಿಯಲ್ಲಿ ಯಾರೂ ಇರಲಿಲ್ಲ. ಒಳಗೆ ಕಂಪ್ಯೂಟರ್ ಮತ್ತು ಕೆಲವು ಹೊಸ, ಹಳೆ ಮೊಬೈಲ್ ಸೆಟ್ ಸೇರಿದಂತೆ  ರಿಪೇರಿಗೆ ಅಗತ್ಯವಿರುವ ಸಾಮಾನುಗಳು ಇದ್ದವು. ಮಳಿಗೆ ಖಾಲಿದ್ ಪಾಷಗೆ ಸೇರಿದೆ.

`ಆರು ತಿಂಗಳ ಹಿಂದೆಯಷ್ಟೇ ಅತಾವುಲ್ಲ ಖಾನ್ ಮಳಿಗೆಯನ್ನು ಬಾಡಿಗೆಗೆ ಪಡೆದುಕೊಂಡು ವ್ಯವಹಾರ ನಡೆಸುತ್ತಿದ್ದ, ಯಾರ ಬಳಿಯೂ ಹೆಚ್ಚು ಮಾತನಾಡುತ್ತಿರಲಿಲ್ಲ. ಈತ ಮುಸ್ಲಿಂ ಬ್ಲಾಕ್‌ನಲ್ಲಿ ವಾಸ ಮಾಡುತ್ತಿದ್ದ. ತಂದೆ ಇಲ್ಲ ಮತ್ತು ಅವಿವಾಹಿತ ~ ಎಂದು ಖಾಲಿದ್ ಪಾಷ ಮಾಹಿತಿ  ನೀಡಿದರು.

`ಅತಾವುಲ್ಲ ಖಾನ್‌ನ ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲ. ಈ ವ್ಯಕ್ತಿ ಇಷ್ಟೊಂದು ಕ್ರೂರ ಹೃದಯ ಹೊಂದಿದ್ದ ಎಂದು ಮೊದಲೇ ತಿಳಿದಿದ್ದರೆ ಅಂಗಡಿ ಖಾಲಿ ಮಾಡಿಸುತ್ತಿದ್ದೆ~ ಎಂದು ಸಿಟ್ಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT