ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳುಪೊಲೀಸ್ ವಶಕ್ಕೆ

ರಾಮನಗರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಚಿದಾನಂದ, ಶೇಖರ್ ಹಾಜರು
Last Updated 20 ಜುಲೈ 2013, 8:30 IST
ಅಕ್ಷರ ಗಾತ್ರ

ರಾಮನಗರ: ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ 9.90 ಕೋಟಿ ರೂಪಾಯಿ ದುರುಪಯೋಗ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯಾದ ಪ್ರಾಧಿಕಾರದ ಆಯುಕ್ತ ಎನ್. ಚಿದಾನಂದ (ಆರೋಪಿ-1) ಅವರನ್ನು ಎಂಟು ದಿನ ಹಾಗೂ ಮತ್ತೊಬ್ಬ ಆರೋಪಿ ಬಿ.ಎಸ್.ಶೇಖರ್ (ಆರೋಪಿ-2) ಅವರನ್ನು ಐದು ದಿನ ಪೊಲೀಸ್ ವಶಕ್ಕೆ ಒಪ್ಪಿಸಿ ರಾಮನಗರದ ನ್ಯಾಯಾಲಯ ಆದೇಶಿಸಿದೆ.

ಕೋಟ್ಯಂತರ ರೂಪಾಯಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಗುರುವಾರ ಶರಣಾಗಿದ್ದ ಚಿದಾನಂದ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ ಮತ್ತೊಬ್ಬ ಆರೋಪಿ ಶೇಖರ್‌ನನ್ನು ಬಂಧಿಸಿದ್ದ ಪೊಲೀಸರು ಇಬ್ಬರೂ ಆರೋಪಿಗಳನ್ನು ಶುಕ್ರವಾರ ಮಧ್ಯಾಹ್ನ 1.30 ಗಂಟೆಗೆ ರಾಮನಗರದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಪ್ರಕರಣದ ತನಿಖಾಧಿಕಾರಿಯು ಆರೋಪಿ ಚಿದಾನಂದ ಮತ್ತು ಶೇಖರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಸರ್ಕಾರಿ ವಕೀಲ ಕೆ. ಮೋಹನ್ ಕುಮಾರ್ ಅವರು ವಾದ ಮಂಡಿಸಿ, ಗುರುತರ ಆರೋಪಗಳಿರುವ ಕಾರಣ ಆರೋಪಿ ಚಿದಾನಂದ ಅವರನ್ನು 14 ದಿನದ ಮಟ್ಟಿಗೆ ಹಾಗೂ ಶೇಖರ್ ಅವರನ್ನು ಏಳು ದಿನದ ಮಟ್ಟಿಗೆ ಪೊಲೀಸ್ ವಶಕ್ಕೆ ಒಪ್ಪಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು.

ಈ ಹಗರಣ ಪ್ರಾಧಿಕಾರದ 9.90 ಕೋಟಿ ರೂಪಾಯಿಗಳ ಹಗರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಹಣ ದುರುಪಯೋಗದ ಮೊತ್ತ 15 ಕೋಟಿ ರೂಪಾಯಿ ಮೀರುವ ಸಾಧ್ಯತೆ ಇದೆ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಬ್ಯಾಂಕಿನಲ್ಲಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ದುರುಪಯೋಗ ಆಗಿರುವ ಕಾರಣ ಹೆಚ್ಚಿನ ವಿಚಾರಣೆ ಮತ್ತು ಸಮಗ್ರ ತನಿಖೆ ನಡೆಯಬೇಕಿದೆ. ಇದಕ್ಕಾಗಿ ಈ ಇಬ್ಬರು ಆರೋಪಿಗಳನ್ನು ಹೆಚ್ಚು ದಿನಗಳ ಮಟ್ಟಿಗೆ ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂದು ಸರ್ಕಾರಿ ವಕೀಲರು ವಾದಿಸಿದರು.

ಹಣ ದುರುಪಯೋಗವು ರಾಮನಗರ, ಮಂಡ್ಯದ ಹಲವು ಬ್ಯಾಂಕ್‌ಗಳಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಆರೋಪಿಗಳನ್ನು ವಶಕ್ಕೆ ಪಡೆಯಬೇಕಿದೆ. ಈ ಕುರಿತು ಬೇರೆ ಬೇರೆ ಸ್ಥಳಗಳಿಗೆ ಹೋಗಿ ವಿಚಾರಣೆ ನಡೆಸಿ, ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಬೇಕಿದೆ. ಆದ್ದರಿಂದ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿದರು.

ಆರೋಪಿ ಚಿದಾನಂದ ಕಡೆಯ ವಕೀಲರಾದ ದಿವಾಕರ್ ಅವರು ಸರ್ಕಾರಿ ವಕೀಲರ ವಾದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ನನ್ನ ಕಕ್ಷಿದಾರರು ಸರ್ಕಾರಿ ಸಿಬ್ಬಂದಿಯಾಗಿದ್ದು, ಪೊಲೀಸರ ತನಿಖೆಗೆ ಎಲ್ಲ ರೀತಿಯ ಸಹಕಾರ ಕೊಡುತ್ತಾರೆ. ಅಲ್ಲದೆ ಪೊಲೀಸರಿಗೆ ಬೇಕಿರುವ ಬ್ಯಾಂಕಿನ ಕಡತ, ದಾಖಲೆಗಳೆಲ್ಲ ಆಯಾ ಬ್ಯಾಂಕ್‌ಗಳಲ್ಲಿ ಲಭ್ಯವಿರುತ್ತವೆ. ಆದ್ದರಿಂದ 14 ದಿನಗಳ ಮಟ್ಟಿಗೆ ಪೊಲೀಸ್ ವಶಕ್ಕೆ ಒಪ್ಪಿಸುವುದು ಸೂಕ್ತವಲ್ಲ ಎಂದು ವಾದಿಸಿದರು.

ಎರಡೂ ಕಡೆಯ ವಾದ ಮತ್ತು ಪ್ರತಿವಾದವನ್ನು ಆಲಿಸಿದ  ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗಶ್ರೀ ಅವರು ಆರೋಪಿ ಎನ್. ಚಿದಾನಂದ ಅವರಿಗೆ ಎಂಟು ದಿನ ಹಾಗೂ ಬಿ.ಎಸ್.ಶೇಖರ್ ಅರೋಪಿ ಶೇಖರ್ ಅವರನ್ನು ಐದು ದಿನ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸರ್ಕಾರಿ ವಕೀಲ ಮೋಹನ್ ಕುಮಾರ್ ಅವರು, ಪ್ರಾಧಿಕಾರ ಆಯುಕ್ತ ಚಿದಾನಂದ ಮೇಲೆ ಐಜೂರು ಠಾಣೆಯಲ್ಲಿ 9.90 ಕೋಟಿ ರೂಪಾಯಿ ಹಣ ದುರುಪಯೋಗದ ಪ್ರಕರಣ ದಾಖಲಾಗಿದೆ.  ಅವರ ಮೇಲೆ ಐಪಿಸಿ 409, 420, 468 ಹಾಗೂ 471ರ ಕಲಂಗಳ ಅನುಸಾರ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT