ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿಯಲ್ಲಿ ಅಚ್ಚರಿ...

Last Updated 29 ಜುಲೈ 2012, 19:30 IST
ಅಕ್ಷರ ಗಾತ್ರ

ಪ್ರತಿ ದೇಶಗಳು ಒಂದೊಂದು ಕ್ರೀಡೆಯಲ್ಲಿ ಪ್ರಬಲ ಶಕ್ತಿ ಎನಿಸಿಕೊಳ್ಳುತ್ತವೆ. ಆದರೆ ಇದು ಅಲ್ಪ ಅವಧಿಗೆ ಮಾತ್ರ. ಕಾಲ ಕಳೆದಂತೆ ಆ ಕ್ರೀಡೆಯಲ್ಲಿ ಹೊಸ ಶಕ್ತಿಯೊಂದು ಉದಯಿಸುತ್ತದೆ. ಕ್ರೀಡಾ ಜಗತ್ತಿನಲ್ಲಿರುವ ಅಲಿಖಿತ ನಿಯಮ ಇದು.

ಒಂದು ಕಾಲದಲ್ಲಿ ಭಾರತವು ಹಾಕಿ ಕ್ರೀಡೆಯಲ್ಲಿ ಬಲಿಷ್ಠ ಎನಿಸಿಕೊಂಡಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇತರ ದೇಶಗಳು ಭಾರತದ ಅಧಿಪತ್ಯವನ್ನು ಮುರಿದಿದೆ. ಫುಟ್‌ಬಾಲ್‌ನ `ದೊರೆ~ ಎಂಬ ಗೌರವ ಬ್ರೆಜಿಲ್‌ಗೆ ಒಲಿದಿತ್ತು. ಈಗ ಆ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಸ್ಪೇನ್ ಒಳಗೊಂಡಂತೆ ಇತರ ದೇಶಗಳ ನಡುವೆ ಪೈಪೋಟಿ ಏರ್ಪಟ್ಟಿವೆ.

ಅದೇ ರೀತಿ ಬಿಲ್ಲುಗಾರಿಕೆ (ಆರ್ಚರಿ) ಕ್ರೀಡೆಯಲ್ಲಿ ದಕ್ಷಿಣ ಕೊರಿಯಾ ಇದೀಗ `ದೊಡ್ಡಣ್ಣ~ ಎನಿಸಿಕೊಂಡಿದೆ. ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಪದಕಗಳು ಈ ದೇಶದ ಸ್ಪರ್ಧಿಗಳಿಗೇ ಮೀಸಲು. ಕೊರಿಯಾ ಸ್ಪರ್ಧಿಗಳು ಕಟ್ಟಿರುವ ಬಲಿಷ್ಠ ಕೋಟೆಯೊಳಗೆ ನುಗ್ಗಲು ಇತರ ದೇಶಗಳ ಬಿಲ್ಲುಗಾರರು ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಭಾರತದ ಸ್ಪರ್ಧಿಗಳೂ ಇದ್ದಾರೆ.

ತನ್ನ ಸಾಂಪ್ರದಾಯಿಕ ರೀತಿಯ ತರಬೇತಿ ಶೈಲಿಗೆ `ಗುಡ್ ಬೈ~ ಹೇಳಿ ಹೊಸ ಹಾದಿ ಹಿಡಿದಿರುವ ಭಾರತದ ಆರ್ಚರಿ ಸ್ಪರ್ಧಿಗಳು ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಆರ್ಚರಿಯಲ್ಲಿ ಭಾರತ ಪದಕದ ಅತಿಯಾದ ಭರವಸೆ ಇಟ್ಟುಕೊಂಡು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು. ತರಬೇತಿ ಶೈಲಿಯಲ್ಲಿ ಬದಲಾವಣೆಯ ಜೊತೆಗೆ  ತಾಂತ್ರಿಕವಾಗಿ ಪಳಗಿರುವುದು ಕೂಡಾ ಭಾರತದ ಬಿಲ್ಲುಗಾರರ ಯಶಸ್ಸಿಗೆ ಕಾರಣ.

ಲಂಡನ್ ಒಲಿಂಪಿಕ್ಸ್‌ನ ಆರ್ಚರಿಯ ತಂಡ ವಿಭಾಗದ ಸ್ಪರ್ಧೆಗಳು ಈಗಾಗಲೇ ಕೊನೆಗೊಂಡಿವೆ. ವೈಯಕ್ತಿಕ ವಿಭಾಗದ ಹೋರಾಟ ಇಂದಿನಿಂದ ಆರಂಭವಾಗಲಿದೆ. ಕ್ರಿಕೆಟ್‌ನಿಂದಾಗಿ ಹೆಸರು ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬಿಲ್ಲು- ಬಾಣ ಹೊತ್ತುಕೊಂಡ ಭಾರತದ ಸ್ಪರ್ಧಿಗಳು ವೈಯಕ್ತಿಕ ವಿಭಾಗದಲ್ಲಿ ಪದಕದೆಡೆಗೆ ಗುರಿಯಿಡಲು ಸಜ್ಜಾಗಿ ನಿಂತಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ. ತಾಂತ್ರಿಕವಾಗಿ ಸಾಕಷ್ಟು ಪಳಗಿರುವ 18ರ ಹರೆಯದ ಈ ಹುಡುಗಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಆರ್ಚರಿ ಕ್ರೀಡೆಯಲ್ಲಿ ಶ್ರೇಷ್ಠ ಸ್ಪರ್ಧಿ ಎಂಬ ಗೌರವವನ್ನು ದೀಪಿಕಾ ತಮ್ಮದಾಗಿಸಿಕೊಳ್ಳುವರೇ? ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು. ಏನೇ ಆಗಲಿ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಮಹಿಳಾ ಸ್ಪರ್ಧಿಗಳಲ್ಲಿ ಅತ್ಯಂತ ಪ್ರತಿಭಾನ್ವಿತ ಹಾಗೂ ಯುವ ಸ್ಪರ್ಧಿ ಎನಿಸಿಕೊಂಡಿರುವುದು ದೀಪಿಕಾ.

ದೀಪಿಕಾ ಕುಮಾರಿಗೆ ಸವಾಲಾಗಿ ನಿಂತಿರುವುದು ದಕ್ಷಿಣ ಕೊರಿಯಾದ ಸ್ಪರ್ಧಿಗಳು. ವಿಶ್ವ ರ‌್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಕಿ ಬೊ ಬಾಯೆ ಮತ್ತು ಲೀ ಸುಂಗ್ ಜಿನ್ ಭಾರತದ ಸ್ಪರ್ಧಿಗೆ ಪೈಪೋಟಿ ಒಡ್ಡಲಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಆರ್ಚರಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಒಂದು ರೀತಿಯಲ್ಲಿ ಅದಕ್ಕೆ ರಾಷ್ಟ್ರೀಯ ಕ್ರೀಡೆಯಷ್ಟೇ ಗೌರವ ದೊರೆತಿದೆ.

ಆ ದೇಶದಲ್ಲಿ ಪ್ರಾಥಮಿಕ ಶಾಲೆಯಲ್ಲೇ ಆರ್ಚರಿಯ ಅಭ್ಯಾಸ ಆರಂಭವಾಗುತ್ತದೆ. ಎಳೆಯದರಲ್ಲೇ ಪ್ರತಿಭೆ ತೋರಿಸುವವರು ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಅಭ್ಯಾಸದಲ್ಲಿ ಪಾಲ್ಗೊಳ್ಳುವರು. ಹೈಸ್ಕೂಲ್ ಮತ್ತು ಕಾಲೇಜು ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವವರನ್ನು ಕಂಪೆನಿ ತಂಡಗಳು ತಮ್ಮದಾಗಿಸಿಕೊಳ್ಳುತ್ತದೆ. ಆ ಬಳಿಕ ಅವರು ವೃತ್ತಿಪರ ಬಿಲ್ಲುಗಾರರಾಗಿ ಬದಲಾಗುವರು. ಒಟ್ಟಿನಲ್ಲಿ ಅಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ.

ಕೊರಿಯಾದಲ್ಲಿ ಸುಮಾರು 33 ಕಂಪೆನಿ ತಂಡಗಳು ಇವೆ. ಸ್ಪರ್ಧಿಗಳಿಗೆ ಎಲ್ಲ ರೀತಿಯ ನೆರವನ್ನು ಈ ಕಂಪೆನಿಗಳು ನೀಡುತ್ತವೆ. ಇದರಿಂದ ಬಿಲ್ಲುಗಾರರಿಗೆ ಆರ್ಥಿಕ ಒಳಗೊಂಡಂತೆ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಸ್ಪರ್ಧೆಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ಕೊರಿಯಾ ಸ್ಪರ್ಧಿಗಳ ಯಶಸ್ಸಿನ ಗುಟ್ಟು ಇದು. ಇದೀಗ ಭಾರತದಲ್ಲೂ ಆರ್ಚರಿ ಕ್ರೀಡೆ ಹೊಸ    ದಿಕ್ಕಿನತ್ತ ಮುಖಮಾಡಿದೆ. ದೀಪಿಕಾ ಕುಮಾರಿ ಅತಿ ಕಡಿಮೆ ಅವಧಿಯಲ್ಲಿ ಇಷ್ಟು ಎತ್ತರ ಏರಿದ್ದು ಇದಕ್ಕೆ ಉತ್ತಮ ಉದಾಹರಣೆ. ಕೊರಿಯಾ ಮತ್ತು ಇಟಲಿಯಲ್ಲಿ ಅನುಸರಿಸುವ ಕೋಚಿಂಗ್ ಶೈಲಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತದೆ. ತಂತ್ರಗಾರಿಕೆಯಲ್ಲಿ ಬದಲಾವಣೆ ತರಲಾಗಿದೆ. 

ಈ ಬಾರಿಯ ಒಲಿಂಪಿಕ್ಸ್‌ನ ಮಹಿಳೆಯರ ವೈಯಕ್ತಿಕ ಸ್ಪರ್ಧೆಯಲ್ಲಿ ಹಿಂದೆಂದೂ ಕಾಣದಂತಹ ಪೈಪೋಟಿ ನಿರೀಕ್ಷಿಸಬಹುದು. ದೀಪಿಕಾ ಮತ್ತು ಕೊರಿಯಾ ಸ್ಪರ್ಧಿಗಳ ಜೊತೆಗೆ ಪದಕದ ಮೇಲೆ ಕಣ್ಣಿಟ್ಟಿರುವ ಹಲವರಿದ್ದಾರೆ. ಇಬ್ಬರು ಅನುಭವಿಗಳಾದ ಇಂಗ್ಲೆಂಡ್‌ನ ಅಲಿಸನ್ ವಿಲಿಯಮ್ಸನ್ ಮತ್ತು ಇಟಲಿಯ ನತಾಲಿಯಾ ವಲೀವಾ ಅವರಲ್ಲಿ ಪ್ರಮುಖರು. ಇವರಿಬ್ಬರಿಗೆ ಇದು ಸತತ ಆರನೇ ಒಲಿಂಪಿಕ್ಸ್.

ಇದರ ಜೊತೆಗೆ ಚೀನಾ ಮತ್ತು ರಷ್ಯಾದ ಸ್ಪರ್ಧಿಗಳೂ ಇದ್ದಾರೆ. ಚೈನೀಸ್ ತೈಪೆಯ ತಾನ್ ಯಾ ತಿಂಗ್ ಹಾಗೂ ಲಿ ಚೀ ಯಿಂಗ್, ಅಮೆರಿಕದ ಮಿರಾಂಡಾ ಲೀಕ್, ಮೆಕ್ಸಿಕೊದ ಅಲೆಕ್ಸಾಂಡ್ರಾ ವಲೆನ್ಸಿಯಾ ಮತ್ತು 2011ರ ವಿಶ್ವಚಾಂಪಿಯನ್ ಚಿಲಿಯ ಡೆನಿಸ್ ವಾನ್ ಲಮೋನ್...

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬಿಲ್ಲಿಗೆ ಬಾಣ ಹೂಡಿ ನಿಂತಿರುವ ಪ್ರಮುಖರ ಪಟ್ಟಿ ಹೀಗೆಯೇ ಮುಂದುವರಿಯುತ್ತದೆ. ದೀಪಿಕಾ ಚಿನ್ನದ ಪದಕಕ್ಕೆ ಗುರಿಯಿಟ್ಟು ಕೊರಿಯಾದ ಪ್ರಾಬಲ್ಯಕ್ಕೆ ವಿರಾಮ ಹಾಕುವರೇ ಎಂಬುದನ್ನು ನೋಡಬೇಕು. 

ಇಂದಿನಿಂದ ವೈಯಕ್ತಿಕ ಸ್ಪರ್ಧೆಗಳು
ಲಂಡನ್ ಒಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಇಂದು (ಜುಲೈ 30) ಆರಂಭವಾಗಲಿವೆ. ಮಹಿಳೆಯರ ವಿಭಾಗದ ಫೈನಲ್ ಆಗಸ್ಟ್ 2 ಹಾಗೂ ಪುರುಷರ ವಿಭಾಗದ ಫೈನಲ್ ಆಗಸ್ಟ್ 3 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT