ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಭಿವೃದ್ಧಿ ಗುರಿ ಶೇ 8ಕ್ಕೆ ನಿಗದಿ

12ನೇ ಪಂಚವಾರ್ಷಿಕ ಯೋಜನೆ: ಬೆಳವಣಿಗೆ ಕುಸಿತ-ಯೋಜನಾ ಆಯೋಗ ಎಚ್ಚರಿಕೆ
Last Updated 28 ಡಿಸೆಂಬರ್ 2012, 4:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ 12ನೇ ಪಂಚವಾರ್ಷಿಕ ಯೋಜನೆಯ ಆರ್ಥಿಕ ಅಭಿವೃದ್ಧಿ ಗುರಿಯನ್ನು ಶೇ 8ಕ್ಕೆ ನಿಗದಿ ಮಾಡಿರುವ ಕೇಂದ್ರ ಯೋಜನಾ ಆಯೋಗವು, ಸರ್ಕಾರದ ತಟಸ್ಥ ನೀತಿಯು ಉದ್ದೇಶಿತ ಗುರಿಯನ್ನು ತಲುಪಲು ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಗುರುವಾರ ಎಚ್ಚರಿಕೆ ನೀಡಿದೆ. ಐದು ವರ್ಷಗಳ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 5ರಿಂದ 5.5ಕ್ಕೆ ಕುಸಿಯಬಹುದು ಎಂದೂ ಆಯೋಗ ತೀವ್ರ ಆತಂಕ ವ್ಯಕ್ತಪಡಿಸಿದೆ.

ಏಕಕಾಲಕ್ಕೆ ಆರ್ಥಿಕ ಅಭಿವೃದ್ಧಿ ಗುರಿಯನ್ನು ನಿಗದಿ ಮಾಡುವ ಹಿಂದಿನ ಸಂಪ್ರದಾಯವನ್ನು ಇದೇ ಮೊದಲ ಬಾರಿಗೆ ಕೈಬಿಟ್ಟಿರುವ ಆಯೋಗ, 12ನೇ ಪಂಚವಾರ್ಷಿಕ ಯೋಜನೆಯ (2012-2017) ಗುರಿಯನ್ನು ಮೂರು ಹಂತಗಳಲ್ಲಿ ತಲುಪಲು ನಿರ್ಧರಿಸಿದೆ.

ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ 57ನೇ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ವಿಷಯ ತಿಳಿಸಿದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, `ನಿರ್ಣಾಯಕ ಹಂತದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಪಂಚವಾರ್ಷಿಕ ಯೋಜನೆ ಒಟ್ಟಾರೆ ಅಭಿವೃದ್ಧಿ ಅವಲಂಬಿತವಾಗಿದೆ' ಎಂದರು.

`ಪಂಚವಾರ್ಷಿಕ ಯೋಜನೆಯ ಒಟ್ಟು ಮೂರು ಹಂತಗಳ ಪೈಕಿ ಮೂರನೇ ಹಂತದಲ್ಲಿಯೇ ತಟಸ್ಥ ನೀತಿಯ ದುಷ್ಪರಿಣಾಮವಾಗುವ ಸಾಧ್ಯತೆ. ಆಗ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳಲಿದ್ದು ಶೇ 5ರಿಂದ 5.5ಗೆ ಇಳಿಯುವ ಸಂಭವ ಇದೆ. ಮೊದಲ ಹಂತದಲ್ಲಿ ಗುರಿಗೆ ಪೂರಕವಾದ ಆಶಾದಾಯಕ ಬೆಳವಣಿಗೆ ಕಂಡುಬರಲಿದೆ. ಈ ಹಂತದಲ್ಲಿ ಪ್ರಗತಿ ಪ್ರಮಾಣ ಪ್ರತಿವರ್ಷ ಶೇ 8.2 ಎಂದು ಅಂದಾಜಿಸಲಾಗಿದೆ' ಎಂದು ಅವರು ತಿಳಿಸಿದರು.

ಜಯಾ ಬಹಿಷ್ಕಾರ: ಈ ನಡುವೆ ಮತ್ತೊಂದು ಬೆಳವಣಿಗೆಯಲ್ಲಿ, ಮುಖ್ಯಮಂತ್ರಿಗಳ ಭಾಷಣಕ್ಕೆ ಕೇವಲ ಹತ್ತು ನಿಮಿಷದ ಕಾಲಾವಧಿ ನೀಡಿದ ಕ್ರಮವನ್ನು ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಬಳಿಕ ಮಾತನಾಡಿದ ಜಯಾ, `ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳಿಗೆ ಮಾತನಾಡಲು ಕೇವಲ ಹತ್ತು ನಿಮಿಷಗಳ ಕಾಲಾವಕಾಶ ನೀಡುವ ಮೂಲಕ ಅವರ ಧ್ವನಿಯನ್ನು ದಮನಿಸಲು ಯತ್ನಿಸುತ್ತಿದೆ' ಎಂದು ಆರೋಪಿಸಿದರು.

`ಭಾಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡದೆ ಅರ್ಧಕ್ಕೆ ಮೊಟಕುಗೊಳಿಸುವಂತೆ ಸೂಚಿಸಿರುವುದು ಇರಿಸುಮುರಿಸಿನ ವಿಚಾರ. ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳ ಧ್ವನಿ ಅಡಗಿಸಲು ಈ ಹೊಸ ತಂತ್ರ ಕಂಡುಕೊಂಡಿದೆ. ಕೇವಲ ಹತ್ತು ನಿಮಿಷದಲ್ಲಿ ನಮ್ಮ ವಿಚಾರಗಳನ್ನು ಮಂಡಿಸಲು ಹೇಗೆ ಸಾಧ್ಯ' ಎಂದು ಅವರು ಹರಿಹಾಯ್ದರು.

ಜಯಾ ತಮ್ಮ 28 ಪುಟಗಳ ಸುದೀರ್ಘ ಲಿಖಿತ ಭಾಷಣ ಓದುತ್ತಿದ್ದರು. 10 ಪುಟಗಳನ್ನು ಓದಿ ಮುಗಿಸುವ ಹೊತ್ತಿಗೆ ಅವರಿಗೆ ನಿಗದಿಯಾಗಿದ್ದ ಹತ್ತು ನಿಮಿಷದ ಕಾಲಾವಧಿ ಮುಕ್ತಾಯವಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ಸಭೆಯಿಂದ ಹೊರನಡೆದು ಚೆನ್ನೈಗೆ ಮರಳಿದರು. `ಕೇಂದ್ರ ಸರ್ಕಾರವು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳನ್ನು ಶಾಲಾ ಮಕ್ಕಳಂತೆ ನಡೆಸಿಕೊಳ್ಳುತ್ತಿದೆ' ಎಂದು ಆರೋಪಿಸಿದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಜಯಾ ಆರೋಪಗಳನ್ನು ತಳ್ಳಿ ಹಾಕಿದೆ. ಇಂತಹ ಸಂದರ್ಭದಲ್ಲಾದರೂ ಹರಿಹಾಯುವ ತಮ್ಮ ಚಾಳಿಯನ್ನು ಜಯಾ ಬಿಡಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಪ್ರತಿ ಮುಖ್ಯಮಂತ್ರಿಗೂ ಕೇವಲ ಹತ್ತು ನಿಮಿಷಗಳ ಕಾಲಾವಕಾಶ ನಿಗದಿ ಮಾಡಿದ್ದನ್ನು ಮೊದಲೇ ತಿಳಿಸಲಾಗಿತ್ತು ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಚೆನ್ನೈನಲ್ಲಿ ಮಾತನಾಡಿದ ಜಯಾ ಅವರ ರಾಜಕೀಯ ಕಡುವೈರಿ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿ, ಎಲ್ಲ ಮುಖ್ಯಮಂತ್ರಿಗಳಿಗೂ ಮಾತನಾಡಲು ಕೇವಲ ಹತ್ತು ನಿಮಿಷಗಳ ಕಾಲಾವಕಾಶ ನೀಡುವುದು ವಾಡಿಕೆ. ಇದರ ಹೊರತಾಗಿ ಜಯಲಲಿತಾ ಅವರಿಗೆ ಏನಾದರೂ ಅಪಮಾನವಾಗಿದ್ದರೆ ಅದನ್ನು ಖಂಡಿಸುವುದಾಗಿ ಹೇಳಿದರು.

ಇಂಧನ ಕೊರತೆ: 3 ವಾರಗಳಲ್ಲಿ ವರದಿಗೆ ಸೂಚನೆ
ವಿದ್ಯುತ್ ಘಟಕಗಳು ಎದುರಿಸುತ್ತಿರುವ ಇಂಧನ ಕೊರತೆಗೆ ತಕ್ಷಣ ಪರಿಹಾರ ಕಂಡುಹಿಡಿಯಲು ತುರ್ತು ಪರಿಶೀಲನೆ ನಡೆಸಿ ಮೂರು ವಾರಗಳ ಒಳಗಾಗಿ ವರದಿ ಸಲ್ಲಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಯೋಜನಾ ಆಯೋಗಕ್ಕೆ ಸೂಚನೆ ನೀಡಿದರು.

ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖ್ಯಮಂತ್ರಿಗಳು ವಿದ್ಯುತ್ ಘಟಕಗಳು ಎದುರಿಸುತ್ತಿರುವ ಇಂಧನ ಕೊರತೆ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಪ್ರಧಾನಿ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಎಲ್ಲ ವಿವರಗಳನ್ನು ನೀಡಿ ಯೋಜನಾ ಆಯೋಗದ ಉಪಾಧ್ಯಕ್ಷರಿಗೆ ಪತ್ರ ಬರೆಯುವಂತೆ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.  

ರೈತರಿಗೆ ಬೇರೆ ಉದ್ಯೋಗ
ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ಕೃಷಿಯೇತರ ಕ್ಷೇತ್ರಗಳಲ್ಲಿ ಉದ್ಯೋಗ ನೀಡುವ ಅಗತ್ಯವಿದೆ ಎಂದೂ ಪ್ರಧಾನಿ ಸಿಂಗ್ ಅಭಿಪ್ರಾಯಪಟ್ಟರು.

ಸೀಮಿತ ಸಂಖ್ಯೆಯ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದಾಗ ಮಾತ್ರ ರೈತರ ತಲಾ ಆದಾಯ ಹೆಚ್ಚಲು ಸಾಧ್ಯ ಎಂದು ಅವರು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಭವಿಷ್ಯದಲ್ಲಿ ಹೆಚ್ಚುವ ಆಹಾರಧಾನ್ಯ ಬೇಡಿಕೆಯನ್ನು ಪೂರೈಸಲು ರೈತರ ಆದಾಯ ಮತ್ತು ಕೃಷಿ ಭೂಮಿ ಇಳುವರಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.

`ಕಠಿಣ ಕ್ರಮ ಅನಿವಾರ್ಯ'
`ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕೆಲವು ದೃಢ ನಿರ್ಧಾರ ಮತ್ತು ಕಠಿಣ ಕ್ರಮ ಸದ್ಯದ ಮಟ್ಟಿಗೆ ನೋವು ತರಬಹುದು. ಆದರೆ, ಭವಿಷ್ಯದಲ್ಲಿ ಸುಸ್ಥಿರ ಆರ್ಥಿಕ ಶಿಸ್ತು ರೂಪಿಸಲು ಇದು ಅನಿವಾರ್ಯ' ಎಂದು ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದರು.

ಸರ್ಕಾರದ ಈ ಕಠಿಣ ಕ್ರಮಗಳಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ವಿತ್ತೀಯ ಕೊರತೆ ಶೇ 3ಕ್ಕೆ ಇಳಿಯುತ್ತದೆ ಎಂದ ಅವರು, ವಿತ್ತೀಯ ಕೊರತೆಗೆ ಕಾರಣವಾಗುತ್ತಿರುವ ಚಿನ್ನದ ಆಮದಿಗೆ ಕಡಿವಾಣ ಹಾಕಬೇಕಿದೆ ಎಂದು ಸಲಹೆ ನೀಡಿದರು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ದೇಶದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತಿದೆ. ನಮ್ಮ ಆರ್ಥಿಕ ನೀತಿಯ ತಳಹದಿ ವಿಶಾಲ ಮತ್ತು ಗಟ್ಟಿಯಾಗಿದೆ ಎಂದರು.

ವೆಚ್ಚದಲ್ಲಿ ಹೆಚ್ಚಳ ಮತ್ತು ಆದಾಯದಲ್ಲಿ ಕೊರತೆ ಕಾರಣ ಪ್ರಸಕ್ತ ಆರ್ಥಿಕ ವರ್ಷದ ವಿತ್ತೀಯ ಕೊರತೆ ಪ್ರಮಾಣವನ್ನು ಶೇ 5.3ಯಿಂದ 5.1ಕ್ಕೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.

`ಆಧಾರ್' ಆಧಾರಿತ ಕಾರ್ಮಿಕರ ಖಾತೆಗಳಿಗೆ ನೇರ ಹಣ ಜಮಾ ಯೋಜನೆ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದು ಎಂದು ಚಿದಂಬರಂ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT