ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಸ್ಥಿರತೆ: ಭಾರತ ಕಳವಳ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ : `ಜಾಗತಿಕ ಆರ್ಥಿಕ ಅಸ್ಥಿರತೆ~ಯನ್ನು ನಿಭಾಯಿಸಿಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಶೀಘ್ರ ಸುಧಾರಣೆ ತರಬೇಕು ಎಂದು ಭಾರತವು ಅಂತರರಾಷ್ಟ್ರೀಯ ಸಮುದಾಯಕ್ಕೆ ಸಲಹೆ ನೀಡಿದೆ.

ಮಂದಗತಿಯಲ್ಲಿ ಸಾಗುತ್ತಿರುವ  ಜಾಗತಿಕ ಆರ್ಥಿಕತೆಯು, ರಕ್ಷಣಾತ್ಮಕತೆ ಅಥವಾ ಜನರ ಸಂಚಾರ, ಸೇವೆ ಮತ್ತು ಬಂಡವಾಳ ಹರಿವಿಗೆ  ತಡೆಯನ್ನುಂಟು ಮಾಡದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿಯು ಅಂತರರಾಷ್ಟ್ರೀಯ ಸಮುದಾಯದ ಮೇಲಿದೆ ಎಂದು ಭಾರತದ ಪ್ರಧಾನಿ  ಮನಮೋಹನ್ ಸಿಂಗ್ ಹೇಳಿದರು.

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 66ನೇ ಮಹಾ ಅಧಿವೇಶನವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ, ಆರ್ಥಿಕ ತಜ್ಞರೂ ಆದ ಮನಮೋಹನ್ ಸಿಂಗ್,  `ಜಾಗತಿಕ ಆರ್ಥಿಕ ಸ್ಥಿತಿಗತಿ ಸಂಕಷ್ಟದಲ್ಲಿದೆ. ಆರ್ಥಿಕ ಸ್ಥಿತಿ ಚೇತರಿಕೆಗೆ ಭಾರತ ನೆರವು ನೀಡಬಲ್ಲದು~ ಎಂದರು.

`ಕುಸಿಯುತ್ತಿರುವ ಆರ್ಥಿಕತೆಯು ಹಣಕಾಸು ರಕ್ಷಣಾತ್ಮಕತೆ ಮೂಲಕ ನಮ್ಮ ನಮ್ಮ ನಡುವೆಯೇ ಗೋಡೆಗಳನ್ನು ನಿರ್ಮಿಸುತ್ತದೆ. ಅಥವಾ ಜಾಗತಿಕವಾಗಿ ಜನರ ಸುಗಮ ಸಂಚಾರಕ್ಕೆ ಸಂಚಕಾರ ತರಬಹುದು. ಸೇವಾ ವಲಯ ಮತ್ತು ಬಂಡವಾಳ ಕ್ಷೇತ್ರದ ಮೇಲೆ ಕಟ್ಟ ಪರಿಣಾಮ ಬೀರಬಹುದು~ ಎಂದರು.
`ಇದನ್ನು ನಿಯಂತ್ರಣಕ್ಕೆ ತರಬೇಕಿದ್ದರೆ ಪರಿಣಾಮಕಾರಿ ಮಾರ್ಗೋಪಾಯಗಳನ್ನು ಅನುಸರಿಸಬೇಕು.

ಸಹಕಾರ ತತ್ವವಿರುವಂತಹ ಬೃಹತ್ ಆರ್ಥಿಕ ನೀತಿಗಳನ್ನು ಉತ್ತೇಜಿಸಬೇಕು~ ಎಂದು ಸಲಹೆ ನೀಡಿದರು.
`ಅಮೆರಿಕ, ಯೂರೋಪ್ ಮತ್ತು ಜಪಾನ್‌ಗಳಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದ ಪರಿಣಾಮವು ಇಡೀ ವಿಶ್ವದ ಆರ್ಥಿಕ ಮತ್ತು ಷೇರು ಮಾರುಕಟ್ಟೆಯ ಮೇಲೆ ವಿಶ್ವಾಸಕ್ಕೆ ಗಾಸಿ ತಂದಿದೆ~ ಎಂದರು.

ಕಾಯಂ ಸ್ಥಾನ ಪ್ರತಿಪಾದನೆ: `ಸಮಕಾಲೀನ ವಾಸ್ತವವನ್ನು ಸಾದೃಶಗೊಳಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು (ಯುಎನ್‌ಎಸ್‌ಸಿ) ಶೀಘ್ರ ವಿಸ್ತರಿಸಿ, ಸುಧಾರಣೆ ತರಬೇಕು~ ಎಂದು ಮನಮೋಹನ್ ಸಿಂಗ್ ಪ್ರಬಲವಾಗಿ ಒತ್ತಾಯಿಸಿದರು.

ಜಿ-4 ರಾಷ್ಟ್ರಗಳ (ಭಾರತ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್) ಸಭೆಯಲ್ಲಿ ಕೈಗೊಂಡ ಯುಎನ್‌ಎಸ್‌ಸಿ ಶೀಘ್ರ ವಿಸ್ತರಣೆ ಮತ್ತು ಸುಧಾರಣೆಯನ್ನು ಪುನರುಚ್ಚರಿಸಿದ ಅವರು, `ಸದೃಢ ಮತ್ತು ಹೆಚ್ಚು ಕ್ರಿಯಾಶೀಲವಾದ ವಿಶ್ವಸಂಸ್ಥೆಯು ಇಂದು ಜಗತ್ತಿನ ಅಗತ್ಯವಾಗಿದೆ~ ಎಂದರು.

`ಯಾವುದೇ ದೇಶ ದೊಡ್ಡದಿರಲಿ, ಸಣ್ಣದಿರಲಿ, ಶ್ರೀಮಂತವಾಗಿರಲಿ, ಬಡದೇಶವಾಗಿರಲಿ ಎಲ್ಲಾ ದೇಶಗಳ ಆಶೋತ್ತರಗಳಿಗೆ ಸ್ಪಂದಿಸಲು ವಿಶ್ವಸಂಸ್ಥೆ ಸಂವೇದನಾಶೀಲವಾಗಿರಬೇಕು ಎಂದು ನಾವು ಬಯಸುತ್ತೇವೆ. ಈ ಕಾರಣಕ್ಕಾಗಿ ವಿಶ್ವಸಂಸ್ಥೆ ಹಾಗೂ ಅದರ ಪ್ರಧಾನ ಅಂಗವಾದ ಮಹಾ ಅಧಿವೇಶನ, ಭದ್ರತಾ ಮಂಡಳಿಗೆ ಚೈತನ್ಯ ತುಂಬಬೇಕಿದೆ. ಇದಕ್ಕಾಗಿ ಸುಧಾರಣೆಗಳು ಆಗಲೇ ಬೇಕು~ ಎಂದರು.

`ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸಲು ಭದ್ರತಾ ಮಂಡಳಿ ವಿಸ್ತರಣೆ ಅತ್ಯಗತ್ಯ. ಇದರಿಂದ ಜಾಗತಿಕವಾಗಿ ಮಹತ್ವದ ವಿಷಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಆ ಮೂಲಕ ಮಂಡಳಿಯ ವಿಶ್ವಾಸಾರ್ಹತೆ ಮತ್ತು ಕ್ರಿಯಾಶೀಲತೆ ಮತ್ತಷ್ಟು ಪ್ರವರ್ಧಮಾನಕ್ಕೆ ಬರುತ್ತದೆ. ಆದ್ದರಿಂದ ಭದ್ರತಾ ಮಂಡಳಿ ವಿಸ್ತರಿಸುವ ಕ್ರಿಯೆಯು ತುರ್ತಾಗಿ ಆಗಬೇಕು~ ಎಂದು ಭಾರತದ ಪ್ರಧಾನಿ ಹೇಳಿದರು.

 `ಭಯೋತ್ಪಾದನೆ: ಒಗ್ಗಟ್ಟಿನಿಂದ ಬಗ್ಗು ಬಡಿಯಬೇಕು~
`ಭಯೋತ್ಪಾದನೆ ವಿರುದ್ಧ ಹೋರಾಟವು ಆಯ್ಕೆ ಆಗಬಾರದು, ಉಗ್ರಗಾಮಿತನವನ್ನು ಎಲ್ಲೆಡೆಯಿಂದಲೂ ಒಗ್ಗಟ್ಟಿನಿಂದ ಬಗ್ಗುಬಡಿಯಬೇಕು~ ಎಂದು   ಸಿಂಗ್ ಹೇಳಿದರು.

`ಇಂತಹ ಸಹಕಾರ ಸಾಧ್ಯವಾಗಬೇಕಿದ್ದರೆ ವಿಶ್ವಸಂಸ್ಥೆ ಸ್ಥಾಪನೆಗೆ ಕಾರಣವಾದ ಘನ ಉದ್ದೇಶಗಳಾದ ಅಂತರರಾಷ್ಟ್ರೀಯತೆಯ ತತ್ವಾದರ್ಶಗಳನ್ನು ಹಾಗೂ ಬಹುಪಕ್ಷೀಯ ಒಪ್ಪಂದಗಳನ್ನು ಒಪ್ಪಿಕೊಳ್ಳದೆ ಅನ್ಯ ಮಾರ್ಗವಿಲ್ಲ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT