ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆರ್ಥಿಕ ಪುನಶ್ಚೇತನಕ್ಕೆ ಕಠಿಣ ಕ್ರಮ'

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ದೇಶದ ಅರ್ಥ ವ್ಯವಸ್ಥೆಯ ಆರೋಗ್ಯ ಸುಧಾರಣೆಗೆ ಕಹಿ ಔಷಧಿಯ ಅಗತ್ಯವಿದೆ ಎಂದು ಹೇಳುವ ಮೂಲಕ ಹಣಕಾಸು ಸಚಿವ ಪಿ. ಚಿದಂಬರಂ ಅವರು ಮುಂಬರುವ ದಿನಗಳಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಕಠಿಣ ಕ್ರಮ ಅನುಸರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಸ್ಥಿತಿಯ ಸುಧಾರಣೆಗೆ ಕಠಿಣ ಕ್ರಮ ಅನುಸರಿಸದೆ ಅನ್ಯ ಮಾರ್ಗವಿಲ್ಲ. ಮುಂದಿನ ವರ್ಷ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸಬೇಕಾದರೆ ಈಗ ಕಟ್ಟು ನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಅವರು ಲೋಕಸಭೆಯಲ್ಲಿ ಪೂರಕ ಅನುದಾನದ ಮೇಲಿನ ಚರ್ಚೆಯನ್ನು ಸಮಾಪ್ತಿಗೊಳಿಸುತ್ತ ತಿಳಿಸಿದರು.

2011-12ನೇ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿಯು ಶೇಕಡಾ 9ಕ್ಕೆ ಏರಿತ್ತು. ನಂತರದ ದಿನಗಳಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇಕಡಾ 6.5ಕ್ಕೆ ಇಳಿಯುವ ಮೂಲಕ 9 ವರ್ಷಗಳ ದೇಶ ಅನುಭವಿಸಿದ ಸ್ಥಿತಿಗೆ ತಲುಪಿತು. ಆರ್‌ಬಿಐ ಲೆಕ್ಕಾಚಾರದ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಜಿಡಿಪಿ ಶೇಕಡಾ 5.8ಕ್ಕೆ ಏರುವ ನಿರೀಕ್ಷೆ ಇದೆ.

ಕಳೆದ 8-9 ತಿಂಗಳಿಂದ ತೀವ್ರ ಆತಂಕ್ಕೆ ಕಾರಣವಾಗಿದ್ದ ಹಣದುಬ್ಬರ ಪ್ರಮಾಣವು ಮುಂದಿನ ಎರಡು ಮೂರು ತಿಂಗಳುಗಳಲ್ಲಿ ಸಹಜ ಸ್ಥಿತಿಯತ್ತ ಮರಳುವ ಸಾಧ್ಯತೆಗಳಿವೆ ಎಂದು ಹಣಕಾಸು ಸಚಿವರು ತಿಳಿಸಿದರು. ಗ್ರಾಹಕರ ಬೆಲೆ ಸೂಚ್ಯಂಕವು ಏರಿಕೆ ಪ್ರಮಾಣದಲ್ಲಿಯೇ ಇದೆ. ಆದರೆ ಸಗಟು ಬೆಲೆ ಸೂಚ್ಯಂಕ ಇಳಿಮುಖವಾಗುತ್ತಿರುವುದು ಸಮಾಧಾನಕರ ಸಂಗತಿ ಎಂದು ಹೇಳಿದರು.

ನಂತರ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರ ಸಭಾತ್ಯಗದ ಮಧ್ಯೆ ಲೋಕಸಭೆಯು ಪೂರಕ ಬೇಡಿಕೆಗಳ ಅನುದಾನಕ್ಕೆ ಒಪ್ಪಿಗೆ ನೀಡಿತು. 2012-13ನೇ ಸಾಲಿನಲ್ಲಿ ಹೆಚ್ಚುವರಿ 32, 120 ಕೋಟಿ ವ್ಯಯ ಮಾಡಲು ಒಪ್ಪಿಗೆ ದೊರಕಿತು.

ಪೂರಕ ಅನುದಾನದಲ್ಲಿ ತೈಲ ಸಬ್ಸಿಡಿಗೆ 30,804 ಕೋಟಿ ಮತ್ತು ಏರ್ ಇಂಡಿಯಾ ಪುನಶ್ಚೇತನಕ್ಕೆ 2,000 ಕೋಟಿ ರೂಪಾಯಿಗಳನ್ನು ಬಳಸಲು ನಿರ್ಧರಿಸಲಾಗಿದೆ.

ಇನ್ನಷ್ಟು ಸುಧಾರಣೆ
ನವದೆಹಲಿ (ಪಿಟಿಐ):
ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ಹೂಡಿಕೆ ಆಕರ್ಷಿಸಲು ಮುಂದಿನ ಕೆಲವು ವಾರಗಳಲ್ಲಿ ಸರ್ಕಾರ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಶುಕ್ರವಾರ ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಎಫ್‌ಐಸಿಸಿಐ) ಸಭೆಯಲ್ಲಿ ಹೇಳಿದರು.

ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಸೇರಿದಂತೆ ಕೇಂದ್ರ ಇತ್ತೀಚೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ರೂ1 ಸಾವಿರ ಕೋಟಿಗಿಂತ ಹೆಚ್ಚಿನ ಹೂಡಿಕೆ ಯೋಜನೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ರಚಿಸಲಾದ `ರಾಷ್ಟ್ರೀಯ ಹೂಡಿಕೆ ಮಂಡಳಿ'ಗೆ ಸಂಸದೀಯ ಸಮಿತಿ ಗುರುವಾರ ಒಪ್ಪಿಗೆ ನೀಡಿದೆ. ಇವೆಲ್ಲದರ ಫಲಗಳು ಇನ್ನು ನಾಲ್ಕೈದು ತಿಂಗಳಲ್ಲಿ ಕಾಣಿಸಿಕೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ಈಗಿರುವ ಪರಿಸ್ಥಿತಿ 2008-09ರ ಆರ್ಥಿಕ ಹಿಂಜರಿತಕ್ಕಿಂತಲೂ ಭಿನ್ನವಾಗಿದೆ. ಆಗ ತೈಲ ಬೆಲೆ ಹೆಚ್ಚಿದ್ದರಿಂದ ಕಚ್ಚಾ ತೈಲದ ಆಮದು ಕಡಿಮೆ ಮಾಡಲಾಗಿತ್ತು. ಈಗ ರಫ್ತು ವಹಿವಾಟು ಕುಸಿದಿದೆ, ತೈಲ ಮತ್ತು ಚಿನ್ನದ ಆಮದು ಹೆಚ್ಚಿದೆ. ಇದರಿಂದ ವಿತ್ತೀಯ ಕೊರತೆ ಅಂತರ ಹೆಚ್ಚಿದೆ ಎಂದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ `ಜಿಡಿಪಿ' ಶೇ 5.4ಕ್ಕೆ ಕುಸಿದಿದೆ. ಚಿಲ್ಲರೆ ಹಣದುಬ್ಬರ ಹೆಚ್ಚಿದೆ. ಈಗಿನ ಪರಿಸ್ಥಿತಿಯಲ್ಲಿ `ಜಿಡಿಪಿ' ಚೇತರಿಕೆಗೆ ಕೆಲವು ಕಠಿಣ ಕ್ರಮಗಳ ಅಗತ್ಯ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT