ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬರ ನೀಗಿಸಿದ ಇದ್ದಿಲು!

Last Updated 24 ಫೆಬ್ರುವರಿ 2012, 10:10 IST
ಅಕ್ಷರ ಗಾತ್ರ

ಅರಸೀಕೆರೆ: ಮಳೆಯ ಅಭಾವದಿಂದ ಸದಾ ಬರದ ಛಾಯೆಗೆ ಸಿಲುಕುವ ತಾಲ್ಲೂಕಿನಲ್ಲಿ ಇದ್ದಿಲು ಉದ್ಯಮ ಹಲವು ಜನರಿಗೆ ಉದ್ಯೋಗ ನೀಡಿದೆ. ಕೆಲಸವಿಲ್ಲದ ಕೂಲಿ ಕಾರ್ಮಿಕರಿಗೆ ಆಸರೆ ನೀಡಿ ವರದಾನವಾಗಿ ಪರಿಣಮಿಸಿದೆ.

ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಪಿ.ಹೊಸಹಳ್ಳಿ, ಮೇಳೇನ ಹಳ್ಳಿ. ಗೊಲ್ಲರಹಟ್ಟಿ, ರಂಗ ನಾಯಕನ ಕೊಪ್ಪಲು, ಕಸಬಾ ಹೋಬಳಿಯ ಬೊಮ್ಮೇನಹಳ್ಳಿ ಸಿದ್ದರ ಹಳ್ಳಿ ಮುಂತಾದ ಹಳ್ಳಿಗಳಲ್ಲಿ ಕೊಬ್ಬರಿ ಚಿಪ್ಪಿನಿಂದ ಇದ್ದಿಲು ತಯಾರಿಸುತ್ತಿದ್ದು, ಇದು ಲಾಭದಾಯಕ ಉದ್ಯಮ ವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಕೆಲಸವಿಲ್ಲದ ನಿರುದ್ಯೋಗಿ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರೆ ತಂತಾಗಿದ್ದು, ಬರ ಪೀಡಿತ ತಾಲ್ಲೂಕಿನ ಕೆಲವರು ನಗರ ಪ್ರದೇಶಗಳಿಗೆ ವಲಸೆ ಹೋಗದೆ ಇಲ್ಲಿಯೇ ಜೀವನ ರೂಪಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ತೆಂಗಿನ ಉತ್ಪನ್ನ ಯಾವುದೇ ಇರಲಿ ಜನ ಮೂಗು ಮುರಿಯುತ್ತಿದ್ದರು. ಆದರೆ ಈಗ ಅದರಿಂದ ಯಾವುದೇ ವಸ್ತು ಸಿಕ್ಕಿದರೂ ಲಾಭದಾಯಕವಾಗಿದೆ. ತೆಂಗಿನ ಮಟ್ಟೆಯಿಂದ ನಾರು ತೆಗೆದು ನೆಲ ಹಾಸು, ಹಗ್ಗ ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ಕೊಬ್ಬರಿ ಚಿಪ್ಪು ಕೆಲವರ ಜೀವನಕ್ಕೆ ಆಸರೆ ಯಾಗಿದೆ.

ರೈತರು ಕೊಬ್ಬರಿ ಸುಲಿಯುವುದನ್ನು ಕಾದು, ಕೊಬ್ಬರಿ ಒಡೆದ ಮೇಲೆ ಚಿಪ್ಪನ್ನು ಖರೀದಿಸಿ ಒಂದೆಡೆ ಸಂಗ್ರಹಿಸಿ ನಂತರ ಗುಂಡಿ ತೆಗೆದು ಅದರಲ್ಲಿ ಸುರಿದು ಸುಟ್ಟು ಇದ್ದಿಲು ಮಾಡಿ ನಗರ ಪ್ರದೇಶದಲ್ಲಿ ಮಾರಾಟ ಮಾಡುತ್ತಾರೆ.

`ಇದ್ದಿಲು ಮಾಡುವುದೂ ಒಂದು ಕಲೆ, ಸ್ವಲ್ಪ ಯಾಮಾರಿದರೂ ಚಿಪ್ಪು ಸಂಪೂರ್ಣ ಸುಟ್ಟು ಬೂದಿಯಾಗಿ ನಷ್ಟ ಉಂಟಾಗುತ್ತದೆ. ಗುಂಡಿ ಒಳಗೆ ಚಿಪ್ಪು ಸುರಿದು ಗೂಡನ್ನು ಮುಚ್ಚಬೇಕು. ಯಾವುದೇ ಕಾರಣಕ್ಕೂ ಹೊರಗಿನ ಗಾಳಿ ಒಳ ಹೋಗದಂತೆ ಎಚ್ಚರ ವಹಿಸಬೇಕು.

ಸ್ವಲ್ಪ ಗಾಳಿ ಒಳ ಪ್ರವೇಶಿಸಿದರೂ ಚಿಪ್ಪು ಉರಿದು ಬೂದಿಯಾಗುತ್ತದೆ. ಗುಂಡಿಗೆ ಚಿಪ್ಪು ಸುರಿದು ಬೆಂಕಿ ಹಾಕಿದ ಮೇಲೆ ಒಬ್ಬರು ಅಲ್ಲಿಯೇ ಇದ್ದು ಕಾದು ಅದನ್ನು ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಇದ್ದಿಲು ತಯಾರಿಸುವುದು ಬಹಳ ಕಷ್ಟ. ಆದರೆ ಬೇಸಿಗೆಯಲ್ಲಿ ಮಾತ್ರ ತಯಾರಿಕೆಗೆ ಹೆಚ್ಚು ಶ್ರಮವಿಲ್ಲ~ ಎಂದು ಹೊಸಹಳ್ಳಿ ಗ್ರಾಮದ ಫಾಲಾಕ್ಷ ಹೇಳುತ್ತಾರೆ.

ಇದ್ದಿಲು ತಯಾರಿಕೆ ಉದ್ಯಮ ಮಹಿಳೆ ಮತ್ತು ಪುರುಷ ಇಬ್ಬರಿಗೂ ಉದ್ಯೋಗ ಒದಗಿಸುತ್ತದೆ. ಕಾರ್ಮಿಕರು ಹಳ್ಳಿ ಹಳ್ಳಿ ತಿರುಗಿ ಚಿಪ್ಪು ತಂದು ಒಂದೆಡೆ ಸಂಗ್ರಹ ಮಾಡಿದರೆ ಮಹಿಳೆಯರು ಗುಂಡಿಗೆ ಚಿಪ್ಪು ಸುರಿದು ಗುಂಡಿ ಬಾಯನ್ನು ಮಣ್ಣಿನಿಂದ ಮೆತ್ತುತ್ತಾರೆ. ಬಳಿಕ ಇದ್ದಿಲಾಗಿ ಪರಿವರ್ತನೆಯಾದ ನಂತರ ಇದ್ದಿಲನ್ನು ಹೊರ ತೆಗೆದು ಜರಡಿ ಮಾಡಿ ಬೇರ್ಪಡಿಸಿ ಇದ್ದಿಲನ್ನು ಮೂಟೆ ಮಾಡುತ್ತಾರೆ.

`ಇದ್ದಲಿಗೆ ಭಾರಿ ಬೇಡಿಕೆ ಇದ್ದು, ತುಮಕೂರು, ಬೆಂಗಳೂರಿಗೆ ಮೂಟೆ ಮಾಡಿ ಕಳುಹಿಸಲಾಗುತ್ತದೆ. ಇದ್ದಿಲು ಮಾಡುವ ಸ್ಥಳಕ್ಕೆ ಆಗಮಿಸುವ ವರ್ತಕರು ಸ್ಥಳದಲ್ಲಿಯೇ ಹಣ ನೀಡಿ ತೆಗೆದುಕೊಂಡು ಹೋಗುತ್ತಾರೆ.

ಒಂದು ಟನ್ ಇದ್ದಲಿಗೆ 19 ಸಾವಿರದಿಂದ 20 ಸಾವಿರ ರೂಪಾಯಿ ಬೆಲೆಯಿದ್ದು, ಈ ವ್ಯವಹಾರದಲ್ಲಿ ಯಾವುದೇ ಮೋಸ ವಿಲ್ಲದೆ ಇರುವಲ್ಲಿಗೆ ಹಣ ದೊರೆಯು ತ್ತದೆ. ಸುಮ್ಮನೆ ಕೆಲಸವಿಲ್ಲದೆ ಅಲೆಯುವ ಬದಲು ಬದುಕಿಗೆ ಮಾರ್ಗೋಪಾಯ ಇದಾಗಿದ್ದು ನೆಮ್ಮದಿಯಿಂದ ಜೀವನ ಸಾಗಿಸಲು ಈ ಉದ್ಯಮ ತಮಗೆ ಆಸರೆಯಾಗಿದೆ~ ಎನ್ನುತ್ತಾರೆ ಫಾಲಾಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT