ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಬಲೀಕರಣ: ಕೌಶಲ್ಯದ ನೆರವು

Last Updated 9 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

`ಮಹಿಳಾ ಸಬಲೀಕರಣ~ ಆಶಯದೊಂದಿಗೆ ಆರಂಭಗೊಂಡಿರುವ ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಶಿಕ್ಷಣದ ಜೊತೆಗೆ ಸ್ವಯಂ ಉದ್ಯೋಗ ತರಬೇತಿ ನೀಡುವ ವಿನೂತನ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ರಂಗದಲ್ಲಿ ವಿಭಿನ್ನ ಛಾಪು ಮೂಡಿಸುತ್ತಿದೆ.

ಮಹಿಳಾ ವಿಶ್ವವಿದ್ಯಾಲಯವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭಿಸಿರುವ `ಕೌಶಲ್ಯ ಮಹಿಳಾ ತಂತ್ರಜ್ಞಾನ ಪಾರ್ಕ್~ಗೆ ಈಗ ಅಂತರರಾಷ್ಟ್ರೀಯ ಮನ್ನಣೆ ದೊರೆತಿದೆ.ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ `ಎಚ್.ಪಿ. ಲೈಫ್~ ಗುರುತಿಸಿರುವ ಜಗತ್ತಿನ 40 ಹಾಗೂ ದೇಶದ ಐದು ವೃತ್ತಿಪರ ತರಬೇತಿ ಕೇಂದ್ರಗಳಲ್ಲಿ ವಿಜಾಪುರ ಮಹಿಳಾ ವಿವಿಯ ಈ `ಕೌಶಲ್ಯ~ ಪಾರ್ಕ್ ಸಹ ಒಂದಾಗಿದೆ!

ಈ ಮಹೋನ್ನತ ಕಾರ್ಯಕ್ಕೆ ಪ್ರೇರಣೆ ನೀಡಲು `ಎಚ್‌ಪಿ ಲೈಫ್~ ನವರು ಮಹಿಳಾ ವಿವಿಯ ಈ ಪಾರ್ಕ್‌ಗೆ 60 ಸಾವಿರ ಡಾಲರ್ (ರೂ 27 ಲಕ್ಷ)  ಅನುದಾನವನ್ನೂ ನೀಡಿದ್ದಾರೆ.

ತೊರವಿಯ ಜ್ಞಾನಶಕ್ತಿ ಆವರಣದಲ್ಲಿ `ಕೌಶಲ್ಯ~ ತಲೆ ಎತ್ತಿದೆ. ಮಹಿಳೆಯರಿಗೆ ಅಗತ್ಯ ತರಬೇತಿ ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ, ಕೌಶಲ  ಉತ್ತೇಜಿಸುವ ಕಾರ್ಯ ನಡೆಯುತ್ತಿದೆ.

`ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್, ಆಹಾರ ಸಂಸ್ಕರಣೆ ತರಬೇತಿ ಕೇಂದ್ರ, ಎರೆ ಹುಳು ಗೊಬ್ಬರ ತಯಾರಿಕೆ ಘಟಕ, ಬಯೊ-ಡೀಸೆಲ್ ತಯಾರಿಕೆಯ ತರಬೇತಿ ಮತ್ತು ಉತ್ಪಾದನಾ ಘಟಕ, ಮೀಡಿಯಾ ಸೆಂಟರ್, ಫ್ಯಾಷನ್ ಡಿಸೈನಿಂಗ್ ಕೇಂದ್ರ, ಪೇಪರ್ ಪುನರ್ ಉತ್ಪಾದನೆ ಮತ್ತು ತರಬೇತಿ ಕೇಂದ್ರಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಟಿಶ್ಯು ಪೇಪರ್ ತಯಾರಿಕೆ ಘಟಕ ಇನ್ನಷ್ಟೇ ಆರಂಭಗೊಳ್ಳಲಿದೆ~ ಎಂದು ಕುಲಪತಿ ಡಾ.ಗೀತಾ ಬಾಲಿ ಹೇಳುತ್ತಾರೆ.

`ಅನನ್ಯ~ ಇದು ಈ ಮಹಿಳಾ ತಂತ್ರಜ್ಞಾನ ಪಾರ್ಕ್‌ನ ಮತ್ತೊಂದು ವಿಶೇಷತೆ. `ಅವೆಕ್~ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿರುವ ಈ ಕೇಂದ್ರದಲ್ಲಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ, ವಿವಿಧ ಉತ್ಪನ್ನಗಳ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ.

ಅಂದಾಜು ರೂ 25 ಲಕ್ಷ  ವೆಚ್ಚದ ಅಗತ್ಯ ಯಂತ್ರೋಪಕರಣ ಹೊಂದಿರುವ `ತರಬೇತಿ, ಕೌಶಲ ವೃದ್ಧಿ ಹಾಗೂ ಉತ್ತೇಜನ~ ಕೇಂದ್ರ ಇದಾಗಿದೆ.`ಮಹಿಳಾ ವಿವಿಯ ವಿದ್ಯಾರ್ಥಿನಿಯರ ಜೊತೆಗೆ ಸ್ಥಳೀಯ ಮಹಿಳೆಯರಿಗೂ ತರಬೇತಿ ನೀಡುವುದು. ಅವರನ್ನು ಸ್ವಯಂ ಉದ್ಯೋಗದಲ್ಲಿ ತೊಡಗಿಸುವ ಮೂಲಕ ಅವರಿಗೆ ಆರ್ಥಿಕ ಸಬಲತೆ ತಂದುಕೊಡುವುದು ಈ ಕೇಂದ್ರದ ಮುಖ್ಯ ಉದ್ದೇಶ.

ಇಲ್ಲಿ ಆಹಾರ ಸಂಸ್ಕರಣೆ, ಸ್ಥಳೀಯವಾಗಿ ದೊರೆಯುವ ಹಣ್ಣುಗಳಿಂದ ಜಾಮ್, ಜೆಲ್ಲಿ, ಜ್ಯೂಸ್ ಹಾಗೂ ಹಪ್ಪಳ, ಸಂಡಿಗೆ, ಶಾವಿಗೆ, ಉಪ್ಪಿನಕಾಯಿ, ಶೇಂಗಾ ಚಟ್ನಿ, ಶೇಂಗಾ ಚಕ್ಕಿ ಮತ್ತಿತರ ಖಾದ್ಯ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ.

ಇಲ್ಲಿ ಉತ್ಪಾದನೆಯಾಗುವ ಬ್ರಾಂಡೆಡ್ ಉಪಕರಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶವಿದೆ. ಮೆಣಸಿನಕಾಯಿ ಪುಡಿ (ಖಾರ)ಯನ್ನು ಖರೀದಿಸಲು ಎಂ.ಟಿ.ಆರ್. ಸಂಸ್ಥೆ  ಈಗಾಗಲೇ ಆಸಕ್ತಿ ತೋರಿದ್ದಾರೆ~ ಎಂದು ಡಾ.ಗೀತಾ ಬಾಲಿ ಹೆಮ್ಮೆ ಪಡುತ್ತಾರೆ.

ವಿಜಾಪುರ ಜಿಲ್ಲೆ ಲಿಂಬೆಯ ಕಣಜ. ಇಲ್ಲಿ ಬೆಳೆಯುವ ಲಿಂಬೆಯನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಅದೇ ಲಿಂಬೆಯಿಂದ ಉಪ್ಪಿನಕಾಯಿ ತಯಾರಿಸಿದರೆ ನಮ್ಮವರಿಗೆ ಉದ್ಯೋಗದ ಜೊತೆಗೆ ಆದಾಯವೂ ಲಭಿಸುತ್ತದೆ.

ಸ್ಥಳೀಯ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆಯ ಜೊತೆ ಜೊತೆಗೆ ಮಹಿಳೆಯರಿಗೆ ಆರ್ಥಿಕ ಲಾಭ ದೊರಕಿಸಿಕೊಡುವುದು ಈ ಪಾರ್ಕ್‌ನ ಗುರಿ.

`ನಮ್ಮವರಿಗೆ ಸ್ವಯಂ ಉದ್ಯೋಗ ಮಾಡುವ ಮನಸ್ಸಿದೆ. ಅವರ ಬಳಿ ಸಾಮರ್ಥ್ಯವೂ ಇದೆ. ಆದರೆ, ಸರಿಯಾದ ಮಾರ್ಗದರ್ಶನ ಇಲ್ಲ. ಲಕ್ಷಗಟ್ಟಲೆ ದುಡ್ಡು ಹೂಡಿ ಉದ್ದಿಮೆ ಆರಂಭಿಸಿದರೆ ಅದು ಮುಂದೆ ಹೇಗೆ ನಡೆಯುತ್ತದೆಯೋ ಎಂಬ ಭೀತಿ ಅವರಿಗೆ. ಅದಕ್ಕೂ ಮಹಿಳಾ ವಿವಿ ಪರಿಹಾರ ಕಂಡುಕೊಂಡಿದೆ.

ಯಾವುದೇ ವಸ್ತು ಅಥವಾ ಖಾದ್ಯವನ್ನು ತಯಾರಿಸಲು ಬರುವ ಅಸಕ್ತ ಮಹಿಳೆಯರು ನಮ್ಮ ಈ ಕೇಂದ್ರಕ್ಕೆ ಬಂದು ಇಲ್ಲಿಯೇ ಅದನ್ನು ತಯಾರಿಸಬಹುದು. ಹೌದು, ನಾನು ತಯಾರಿಸಬಲ್ಲೆ. ನನ್ನಲ್ಲಿ ಆ ಸಾಮರ್ಥ್ಯ ಇದೆ. ನಾನು ಮಾರುಕಟ್ಟೆಯಲ್ಲಿ ಸ್ಪರ್ಧಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದ ನಂತರ ಅವರು ಸ್ವಂತ ಗುಡಿ ಕೈಗಾರಿಕೆ ಆರಂಭಿಸಬಹುದು~ ಎಂದು ಬಾಲಿ ಹೇಳುತ್ತಾರೆ.

`ಅಲ್ಪಾವಧಿಯ ತರಬೇತಿ ಶಿಬಿರ ಆಯೋಜಿಸುತ್ತಿದ್ದೇವೆ. ಕನಿಷ್ಠ ಎಸ್.ಎಸ್.ಎಲ್.ಸಿ. ಪಾಸಾಗಿರುವ ಯಾವುದೇ ಮಹಿಳೆ ಇಲ್ಲಿ ತರಬೇತಿ ಪಡೆಯಬಹುದು. ಮಹಿಳಾ ಸ್ವ-ಸಹಾಯ ಸಂಘಗಳವರಿಗೂ ತರಬೇತಿ ಆಯೋಜಿಸುವ ಉದ್ದೇಶವಿದೆ.
 
ಜೊತೆಗೆ `ಆಹಾರ ಪರೀಕ್ಷೆ ಪ್ರಯೋಗಾಲಯ~ (ಫುಡ್ ಟೆಸ್ಟಿಂಗ್ ಲ್ಯಾಬ್) ಆರಂಭಿಸಲು ನಿರ್ಧರಿಸಿದ್ದೇವೆ~ ಎನ್ನುತ್ತಾರೆ ಅವರು. ಮುಂಬರುವ ವರ್ಷಗಳಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಲ್ಯಾಬ್ ಇದಾಗಬೇಕು ಎಂಬುದು ವಿವಿಯ ಆಶಯ.
 
ಈ ಭಾಗದಲ್ಲಿ ತಯಾರಾಗುವ ಎಲ್ಲ ಆಹಾರ ಉತ್ಪನ್ನಗಳ ಪರೀಕ್ಷೆಗೆ ಇದು ನೆರವಾಗಬೇಕು. ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಇಲಾಖೆ ನೀಡಿದ ಧನ ಸಹಾಯದಲ್ಲಿ ಆಹಾರ ಸಂಸ್ಕರಣೆಯಲ್ಲಿ ಎಂ.ಎಸ್ಸಿ. ಕೋರ್ಸ್ ಆರಂಭಿಸಲು ವಿವಿ ನಿರ್ಧರಿಸಿದೆ.

ಪೇಪರ್ ಮರು ಉತ್ಪತ್ತಿ
ಇದೇ ಆವರಣದಲ್ಲಿ ಸುಮಾರು ರೂ 10.50 ಲಕ್ಷ ವೆಚ್ಚದಲ್ಲಿ `ಪೇಪರ್ ಪುನರ್ ಉತ್ಪಾದನೆ ಮತ್ತು ತರಬೇತಿ ಕೇಂದ್ರ~ ಆರಂಭಿಸಲಾಗಿದೆ. ರದ್ದಿ ಪೇಪರ್‌ನಿಂದ ಫೈಲ್, ವಿಸಿಟಿಂಗ್ ಕಾರ್ಡ್, ಆಮಂತ್ರಣ ಪತ್ರಿಕೆ, ಕ್ಯಾರಿ ಬ್ಯಾಗ್ ಮತ್ತಿತರ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಹೀಗೆ ಪುನರ್ ಉತ್ಪಾದನೆಯಾಗುವ ಈ ವಸ್ತುಗಳು ಆಕರ್ಷಕವಾಗಿದ್ದು, ಹೊರಗಿನವರಿಂದಲೂ ಬೇಡಿಕೆ ಪಡೆಯುತ್ತಿವೆ.

`ನಮಗೆ ಅಗತ್ಯವಿರುವ ಫೈಲ್ ಮತ್ತಿತರ ವಸ್ತುಗಳನ್ನು ನಾವು ಇಲ್ಲಿ ಪುನರ್ ಉತ್ಪಾದನೆ ಮಾಡುತ್ತಿದ್ದೇವೆ. ವಿವಿಯಲ್ಲಿ ದೊರೆಯುವ ರದ್ದಿಯನ್ನೇ ಉಪಯೋಗಿಸುವುದರಿಂದ ಕಚ್ಚಾ ವಸ್ತುವಿಗೆ ಹಣ ಸಂದಾಯ ಮಾಡಬೇಕಿಲ್ಲ. ವಿಶ್ವವಿದ್ಯಾಲಯದ ಏಳು ಜನರಿಗೆ ತರಬೇತಿ ಕೊಡಿಸಿ ಅವರನ್ನೇ ಇಲ್ಲಿ  ಬಳಸಿಕೊಳ್ಳಲಾಗುತ್ತಿದೆ~ ಎಂದು ಕುಲಪತಿ ಹೇಳುತ್ತಾರೆ.

ಖಾದ್ಯ, ದಿನಬಳಕೆಯ ವಸ್ತುಗಳು ಹಾಗೂ ಕಚೇರಿಗೆ ಅಗತ್ಯವಿರುವ ವಸ್ತುಗಳನ್ನು ಇಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ, ಕ್ಯಾಂಪಸ್‌ನಲ್ಲಿಯೇ ಒಂದು ಮಾರಾಟ ಕೇಂದ್ರ ಆರಂಭಿಸುವ ಉದ್ದೇಶವಿದೆ. ಮಹಿಳಾ ವಿಶ್ವವಿದ್ಯಾಲನಿಯದ ಸ್ಥಾಪನೆಯ ಉದ್ದೇಶವೇ ಮಹಿಳಾ ಸಬಲೀಕರಣವಾಗಿದೆ.
 
ಹೀಗಾಗಿ ಶಿಕ್ಷಣದ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಮಹಿಳೆಯರಿಗೆ ಉತ್ತೇಜನ ನೀಡಲಿಕ್ಕಾಗಿ ಈ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಬಾಲಿ ಹೇಳುತ್ತಾರೆ.         


ವಿಜಾಪುರ ಮಹಿಳಾ ವಿಶ್ವವಿದ್ಯಾಲಯವು  ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭಿಸಿರುವ `ಕೌಶಲ್ಯ ಮಹಿಳಾ ತಂತ್ರಜ್ಞಾನಪಾರ್ಕ್~ಗೆ ಈಗ ಅಂತರರಾಷ್ಟ್ರೀಯ ಮನ್ನಣೆ ದೊರೆತಿದೆ.

ಮಹಿಳೆಯರಿಗೆ ಅಗತ್ಯ ತರಬೇತಿ ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ, ಉತ್ತೇಜಿಸುವ ಕಾರ್ಯ ತೊರವಿಯ ಜ್ಞಾನಶಕ್ತಿ ಆವರಣದಲ್ಲಿನ `ಕೌಶಲ್ಯ~ದಲ್ಲಿ ನಡೆಯುತ್ತಿದೆ.

ಅಂತರರಾಷ್ಟ್ರೀಯ ಅನುದಾನ
ಮಹಿಳಾ ವಿವಿಯ `ಕೌಶಲ್ಯ~ ಕೇಂದ್ರಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ. ವಿಶ್ವವಿದ್ಯಾಲಯಕ್ಕೆ ಇದು ಅತ್ಯಂತ ಪ್ರತಿಷ್ಠೆಯ ವಿಷಯ ಎಂದು ಕುಲಪತಿ ಡಾ.ಗೀತಾ ಬಾಲಿ ಹೇಳುತ್ತಾರೆ.

ಅಂತರರಾಷ್ಟ್ರೀಯ ಮಟ್ಟದ ಎಚ್.ಪಿ. ಫೌಂಡೇಷನ್  (LIFE asia-pacific & japan HP Learning Initiative For Enterpreneurs) ದೇಶದ ಐದರಲ್ಲಿ ನಮ್ಮದೂ ಒಂದು ಒಳ್ಳೆಯ ವೃತ್ತಿಪರ ತರಬೇತಿ ಸಂಸ್ಥೆ ಎಂದು ಗುರುತಿಸಿ 60 ಸಾವಿರ ಡಾಲರ್ ನೆರವು ನೀಡಿದ್ದಾರೆ.

 ಈ ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಂಡು ಮುಂದಿನ ವರ್ಷವೂ ನೆರವು ಕೋರುತ್ತೇವೆ. ಯುಜಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ  ನೆರವಿನಿಂದ `ಕೌಶಲ್ಯ~ವನ್ನು ರಾಜ್ಯದಲ್ಲಿಯೇ ಮಾದರಿ ಕೇಂದ್ರವನ್ನಾಗಿಸುವುದು ನಮ್ಮ ಗುರಿ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT