ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸುಧಾರಣೆಗೆ ಪ್ರತಿಸ್ಪಂದನೆ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪ್ರಧಾನಿ ಮನಮೋಹನ್ ಸಿಂಗ್ ಸೆಪ್ಟೆಂಬರ್‌ನಲ್ಲಿ ಕೈಗೊಂಡ ಕಠಿಣ ಸ್ವರೂಪದ ಆರ್ಥಿಕ ಕ್ರಮಗಳ ಕುರಿತು ಎರಡು ತದ್ವಿರುದ್ಧ ನೆಲೆಯ ಅಭಿಪ್ರಾಯಗಳು ಭಾರಿ ಸದ್ದು ಮಾಡುತ್ತಿವೆ.

ಬಹುಬ್ರಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ 51ರಷ್ಟು ವಿದೇಶಿ ನೇರ ಹೂಡಿಕೆ(ಎಫ್‌ಡಿಐ), ಡೀಸೆಲ್ ಸಬ್ಸಿಡಿ ಕಡಿತ, ವಿಮೆ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿ ಶೇ 49ಕ್ಕೆ ಏರಿಕೆ, ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಪೂರೈಕೆ 6ಕ್ಕೆ ಮಿತಿ, ವಿಮಾನಯಾನ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ನೀಡುವ ಕ್ರಮಗಳು ಕೇಂದ್ರಕ್ಕೆ ಅನಿವಾರ್ಯವಾಗಿತ್ತೇ ಎಂಬ ಶಂಕೆಯೂ ಹಲವರನ್ನು ಕಾಡುತ್ತಿದೆ.

ಅದಕ್ಕೆ ಕಾರಣಗಳೂ ಇವೆ. ಮೊದಲನೆಯದಾಗಿ, ಹಲವು ದೈತ್ಯ ಹಗರಣಗಳ ದೂಷಣೆ ಸರ್ಕಾರಕ್ಕೆ ಅಂಟಿಕೊಂಡಿತ್ತು. ಕಾಮನ್‌ವೆಲ್ತ್  ಕ್ರೀಡಾಕೂಟ, 2 ಜಿ ಕರ್ಮಕಾಂಡದಲ್ಲಿ ಸಿಲುಕಿ ಸುಪ್ರೀಂ ಕೋರ್ಟ್ , ಮಹಾಲೇಖಪಾಲರಿಂದ (ಸಿಎಜಿ) ತರಾಟೆಗೆ ಒಳಗಾಗಿದ್ದ ಸರ್ಕಾರ, ನಂತರ ಅವೆರಡನ್ನೂ ಮೀರಿಸಿದ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಮತ್ತೊಂದು ಹಗರಣದಲ್ಲಿ ಸಿಲುಕಿತು.

ಇದೇ ವೇಳೆ, ಭಾರತದಲ್ಲಿ ತನ್ನ ಹೂಡಿಕೆಗೆ ಹಾತೊರೆಯುತ್ತಿರುವ ಅಮೆರಿಕದ ಮಾಧ್ಯಮಗಳಲ್ಲಿ ಮನಮೋಹನ್ ಸಿಂಗ್ ಅವರನ್ನು `ಅದಕ್ಷ ಪ್ರಧಾನಿ~ ಎಂದು ಬಿಂಬಿಸಿದ ಸುದ್ದಿಗಳು ದೊಡ್ಡದಾಗಿ ಪ್ರಕಟವಾದವು. ಇದಾದ ಕೆಲವೇ ದಿನಗಳಲ್ಲಿ ಸರ್ಕಾರದ ಕಠಿಣ ಕ್ರಮಗಳು ಪ್ರಕಟವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ತಜ್ಞರಾಗಿ ಕೆಲಸ ಮಾಡಿದ ಹಿನ್ನೆಲೆಯುಳ್ಳ ಸಿಂಗ್, ಜಾಗತಿಕ ವಿಶ್ಲೇಷಣೆ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಸಂವೇದನೆ ತೋರಿಯೇ ಆತುರಾತುರವಾಗಿ ಈ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಕೆಲವು ತಜ್ಞರ ಪ್ರಕಾರ, ಸಿಂಗ್ ಅವರಿಗೆ ಈ ಕ್ರಮಗಳನ್ನು ಜಾರಿಗೊಳಿಸಬೇಕೆಂಬ ಮನಸ್ಸು ಮುಂಚಿನಿಂದಲೂ ಇತ್ತು; ಆದರೆ, ಈವರೆಗೆ ಭಿನ್ನ ದೃಷ್ಟಿಕೋನದ ಪ್ರಣವ್ ಮುಖರ್ಜಿ ಹಣಕಾಸು ಸಚಿವರಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಪ್ರಣವ್ ರಾಷ್ಟ್ರಪತಿ ಭವನ ಸೇರಿ, ಆ ಜಾಗಕ್ಕೆ ಚಿದಂಬರಂ ಬಂದಿದ್ದರಿಂದ ಸಿಂಗ್ ಅವರಿಗೆ ಉತ್ತಮ ಸಾಥ್ ಸಿಕ್ಕು ಕಠಿಣ ಪರಿಸ್ಥಿತಿಯಲ್ಲೂ ದಿಟ್ಟ ನಿರ್ಧಾರ ಹೊರಹೊಮ್ಮಿದೆ.

ಈ ಕ್ರಮಗಳನ್ನು `ಆರ್ಥಿಕ ಸುಧಾರಣೆ~ ಎಂದು ಸರ್ಕಾರ ಹಾಗೂ ಜಾಗತಿಕ ಮಾಧ್ಯಮಗಳು ಬಣ್ಣಿಸಿದ್ದರೆ, ಅವನ್ನು `ಆತ್ಮಘಾತುಕ ನಿರ್ಧಾರ~ಗಳು ಎಂದು ವಿರೋಧಿಗಳು ಟೀಕಾಸ್ತ್ರ ಪ್ರಯೋಗಿಸಿದ್ದಾರೆ. `ಸರ್ಕಾರ ತನ್ನವರ ಹಿತ ಬಲಿಗೊಟ್ಟು ಬಂಡವಾಳಶಾಹಿಗಳಿಗೆ ಮಣೆ ಹಾಕಿದೆ~ ಎಂಬ ಕೆಲವರು ಜರಿದಿದ್ದಾರೆ. ಇದಕ್ಕೆ ಪ್ರತಿಯಾಗಿ, `ಈ ಕಠಿಣ ಕ್ರಮಗಳನ್ನು ಸಾಕಷ್ಟು ಹಿಂದೆಯೇ ಕೈಗೊಳ್ಳಬೇಕಿತ್ತು. ಜಾಗತಿಕ ಮಾರುಕಟ್ಟೆ ಯುಗದಲ್ಲಿ ನಾವು ಪಲಾಯನವಾದಕ್ಕೆ ಜೋತು ಬೀಳಲಾಗದು~ ಎಂಬುದು ಸರ್ಕಾರದ ಸಮರ್ಥನೆಯಾಗಿದೆ.

ಚಿಲ್ಲರೆ ಎಫ್‌ಡಿಐಗೆ ಸಂಬಂಧಪಟ್ಟಂತೆ ಗಮನಿಸಲೇಬೇಕಾದ ಮತ್ತೊಂದು ಸಂಗತಿಯೂ ಇದೆ. `ಈ ಕುರಿತು ಹೊರಡಿಸಿರುವ ಅಧಿಸೂಚನೆಯಲ್ಲಿ ಅದಕ್ಕಾಗಿ ಒತ್ತಾಯಿಸುತ್ತಿದ್ದ 10 ರಾಜ್ಯಗಳನ್ನು ಮಾತ್ರ ಹೆಸರಿಸಲಾಗಿದೆ. ಇದನ್ನು ಒಪ್ಪಿಕೊಳ್ಳಲೇಬೇಕೆಂದು ಉಳಿದ ರಾಜ್ಯಗಳ ಮೇಲೆ ಯಾವುದೇ ನಿಬಂಧನೆ ಹೇರಿಲ್ಲ. ಚಿಲ್ಲರೆ ಎಫ್‌ಡಿಐ ಒಪ್ಪಿಕೊಳ್ಳುವ ಅಥವಾ ಬಿಡುವ ವಿವೇಚನೆಯನ್ನು ರಾಜ್ಯಗಳಿಗೇ ಬಿಡಲಾಗಿದೆ. ಹೀಗಾಗಿ ತನ್ನ ಈ ನೀತಿ, ಅತ್ಯಂತ ನ್ಯಾಯಸಮ್ಮತ ಹಾಗೂ ಪ್ರಜಾಸತ್ತಾತ್ಮಕ~ ಎಂದೂ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.

ಕಠಿಣ ಸುಧಾರಣಾ ಕ್ರಮಗಳಿಗೆ ಸ್ವಾಗತ-ಪ್ರತಿರೋಧ-ಸಮರ್ಥನೆಗಳ ನಡುವೆಯೇ ಮಾರುಕಟ್ಟೆಯಲ್ಲಿ ತಕ್ಷಣವೇ ಸಕಾರಾತ್ಮಕ ಸ್ಪಂದನೆಯಂತೂ ಕಂಡುಬಂದಿದೆ. ಎರಡು ವರ್ಷಗಳಿಂದ 17,000 ಅಂಶಗಳ ಆಸುಪಾಸಿನಲ್ಲೇ ಸುಳಿದಾಡುತ್ತಿದ್ದ ಬಿಎಸ್‌ಇ ಷೇರುಪೇಟೆ ಸಂವೇದಿ ಸೂಚ್ಯಂಕ ದಿನೇ ದಿನೇ ಕುಪ್ಪಳಿಸುತ್ತ 19,000ಕ್ಕೆ ಏರಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದಲೂ ಬಂಡವಾಳ ಹರಿವು ಹೆಚ್ಚಿದೆ. ಮತ್ತೊಂದೆಡೆ ಚಿನ್ನವನ್ನೇ ಹೂಡಿಕೆ ಮೂಲ ಮಾಡಿಕೊಂಡಿದ್ದವರು ಇದೀಗ ತಮ್ಮ ಆಸಕ್ತಿಯನ್ನು ಷೇರುಪೇಟೆಯತ್ತ ಹರಿಬಿಟ್ಟಿದ್ದಾರೆ. ಇದರ ಫಲವಾಗಿ 10 ಗ್ರಾಂಗೆ 32,000 ರೂಪಾಯಿ ದಾಟಿದ್ದ ಬಂಗಾರದ ಬೆಲೆ ಇಳಿಕೆ ಹಾದಿಯಲ್ಲಿದ್ದು ರೂ 31,000 ಆಜೂಬಾಜಿಗೆ ಬಂದಿದೆ. ಹಣದುಬ್ಬರವೂ ಇಳಿದಿರುವುದರಿಂದ ಮುಂದಿನ ದಿನಗಳಲ್ಲಿ ಬ್ಯಾಂಕುಗಳು ಬಡ್ಡಿ ದರ ಇಳಿಸಿ ಸಾಲ ಲಭ್ಯತೆ ಹೆಚ್ಚಿಸುವ ಸುಳಿವು ಕಂಡುಬಂದಿದೆ.

ಶಕ್ತಿ ಪಡೆದ ರೂಪಾಯಿ
ಪ್ರತಿ ಡಾಲರ್‌ಗೆ 56 ರೂಪಾಯಿ ಮೌಲ್ಯಕ್ಕೆ ಕುಸಿದಿದ್ದ ಭಾರತದ ಕರೆನ್ಸಿ ಇದೀಗ ಸದೃಢವಾಗುತ್ತಾ 51.50 ರೂಪಾಯಿಗೆ ಬಂದು ನಿಂತಿದೆ. ಹೀಗಾಗಿ ಶೇ 80ರಷ್ಟು ತೈಲಕ್ಕಾಗಿ ಆಮದನ್ನೇ ಅವಲಂಬಿಸಿರುವ ಭಾರತ ಅದಕ್ಕಾಗಿ ಭರಿಸಬೇಕಾದ ವೆಚ್ಚ ತಗ್ಗಿದೆ. ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯೂ ಇಳಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಇಂಧನ ದರ ಕಡಿಮೆ ಆಗಿ ಸರಕು ಸಾಗಣೆ ಖರ್ಚು ಕಡಿಮೆಯಾಗುವ ಸಾಧ್ಯತೆ ಇದೆ.

ಸರ್ಕಾರ ಪ್ರಕಟಿಸಿದ ಕ್ರಮಗಳು ಮೊದಲ ಹಂತದವು ಮಾತ್ರ ಎಂಬುದು ಇಲ್ಲಿ ಪ್ರಸ್ತಾಪಿಸಬೇಕಾದ ಪ್ರಮುಖ ಅಂಶ. ಉದ್ಯಮ ಸ್ನೇಹಿ ಕಾರ್ಮಿಕ ಕಾಯಿದೆ, ಹಣಕಾಸು, ಉನ್ನತ ಶಿಕ್ಷಣ, ಮೂಲಸೌಕರ್ಯ, ಇಂಧನ, ಕಲ್ಲಿದ್ದಲು, ರೈಲ್ವೆ ವಲಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ನಿವಾರಣೆಗೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಾಗತಿಕ ಒತ್ತಡ ಇದ್ದೇ ಇದೆ. ಅದೇ ರೀತಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜತೆಗೆ ತೆರಿಗೆ ವಂಚನೆ ತಡೆಯಲು `ಜಿಎಎಆರ್~ ಕಾಯಿದೆ ಜಾರಿ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆದಿವೆ.

ಬಹಳ ಮುಖ್ಯವಾಗಿ, ಉದ್ದಿಮೆಗಳಿಗೆ ತೊಡಕಾಗಿರುವ ಈಗಿನ ಭೂಸ್ವಾಧೀನ ನಿಯಮಾವಳಿ ಬದಲಾಗಬೇಕು ಎಂಬ ಧ್ವನಿಯೂ ದೊಡ್ಡದಾಗಲಾರಂಭಿಸಿದೆ. ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. 2014ರಲ್ಲಿ ಸಾರ್ವತ್ರಿಕ ಚುನಾವಣೆಯೂ ಇದೆ. ಹಾಗಾಗಿ ಉಳಿದವುಗಳಲ್ಲಿ ಎಷ್ಟು ಕ್ರಮಗಳು, ಯಾವಾಗ ಜಾರಿಗೆ ಬರುತ್ತವೆ ಎಂಬುದು ಸ್ಪಷ್ಟವಿಲ್ಲ. ಆದರೂ, ಇಂದಲ್ಲಾ ನಾಳೆ ಅವನ್ನು ಅನುಷ್ಠಾನಗೊಳಿಸುವುದು ಅನಿವಾರ್ಯವಾಗುತ್ತದೆ.

ಇದೇ ಸಂದರ್ಭದಲ್ಲಿ ನಮ್ಮ ರಾಷ್ಟ್ರದ ಮಾನವ ಸಂಪನ್ಮೂಲದ ಸ್ಥಿತಿಯನ್ನೂ ಗಮನಕ್ಕೆ ತಂದುಕೊಳ್ಳೋಣ. ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಸರ್ವೇಯರ್ಸ್‌ ಸಮೀಕ್ಷೆ ಪ್ರಕಾರ, 2010ರಲ್ಲಿ ರಾಷ್ಟ್ರಕ್ಕೆ 40 ಲಕ್ಷ ಸಿವಿಲ್ ಎಂಜಿನಿಯರ್‌ಗಳ ಅಗತ್ಯವಿದ್ದರೆ, ಲಭ್ಯವಿದ್ದವರ ಸಂಖ್ಯೆ 5 ಲಕ್ಷ ಮಾತ್ರ. 3.66 ಲಕ್ಷ ವಾಸ್ತುಶಿಲ್ಪಿಗಳು ಬೇಕಿದ್ದಾಗ 45,000 ಮಂದಿ ಮಾತ್ರ ಇದ್ದರು. ಇದೇ ಸ್ಥಿತಿ ಮುಂದುವರಿದರೆ 2020ರ ವೇಳೆಗೆ ಈ ಪ್ರತಿಭೆಗಳ ಕೊರತೆ ಹತ್ತಾರು ಲಕ್ಷ ಮೀರಬಹುದು ಎಂದು ಸಂಸ್ಥೆ ಅಂದಾಜಿಸಿದೆ.

ನಮ್ಮಲ್ಲಿ ಸಾವಿರಾರು ಎಂಜಿನಿಯರಿಂಗ್ ಕಾಲೇಜುಗಳಿದ್ದರೂ ಸಮರ್ಥ ವೃತ್ತಿಪರರ ಕೊರತೆ ಕಳವಳಕಾರಿ ವಿಷಯವೇ ಆಗಿದೆ. ಅದೇ ರೀತಿ, ಪ್ಲಂಬರ್, ಬಡಗಿ, ಎಲೆಕ್ಟ್ರಿಷಿಯನ್ ಇತ್ಯಾದಿ ಕುಶಲಕರ್ಮಿಗಳ ಕೊರತೆಯೂ ವಿಪರೀತ ಎನ್ನುವಷ್ಟೇ ಇದೆ. ಯುವ ಜನಾಂಗವೇ ಅಧಿಕವಿರುವ, ಹಳ್ಳಿಗಳೆಲ್ಲಾ ಪೇಟೆಗಳಾಗುತ್ತಿರುವ (ನಗರೀಕರಣ) ನಮ್ಮ ರಾಷ್ಟ್ರಕ್ಕೆ ಇದು ಶುಭ ಸೂಚಕವಲ್ಲ. ರಾಷ್ಟ್ರದ ಆರ್ಥಿಕ ಬೆಳವಣಿಗೆ ಆರೋಗ್ಯಕರ ಮಟ್ಟ ತಲುಪಿ ಉದ್ಯೋಗ ಲಭ್ಯತೆ ಅಧಿಕವಾಗಲು ಈ ಕೊರತೆಗಳನ್ನು ತುಂಬಿಕೊಳ್ಳಬೇಕೆಂಬುದು ತಜ್ಞರ ಪ್ರತಿಪಾದನೆಯಾಗಿದೆ.

ಕಡೆಗೆ, ಹೀಗೆ ಊಹಿಸಿಕೊಳ್ಳೋಣ. ನಮ್ಮ ಮುಂದೆ ಆ ಬದಿ-ಈ ಬದಿ ಎರಡು ಬೆಟ್ಟಗಳಿವೆ, ನಡುವೆ ಆಳ ಕಣಿವೆ. ಆ ಬದಿಯಿಂದ ಈ ಬದಿಗೆ ತಂತಿ ಮೇಲೆಯೇ ಸಾಗಬೇಕು. ಸರಿಯಾಗಿ ತರಬೇತಿ ಪಡೆದು, ಸಮಚಿತ್ತತೆ ಕಾಯ್ದುಕೊಂಡು ಮುನ್ನಡಿ ಇಟ್ಟವರು ಯಶಸ್ವಿಯಾಗಿ ದಾಟುತ್ತಾರೆ. ಇಲ್ಲದವರು ಪಾತಾಳಕ್ಕೆ ಬೀಳುತ್ತಾರೆ. ನಮ್ಮ ಸ್ಥಿತಿಯೂ ಹಾಗೆಯೇ ಇದೆ.

ವಿದೇಶಿ ನೇರ ಹೂಡಿಕೆಗೆ ನಿರ್ಬಂಧಗಳು ಕಡಿಮೆ ಆಗುತ್ತಿವೆ. ಇದನ್ನು ಜನಸಾಮಾನ್ಯರು ಜಾಣ್ಮೆಯಿಂದ ಬಳಸಿಕೊಂಡರೆ ಸಂಪತ್ತು ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಉಳ್ಳವರು-ಇಲ್ಲದವರ ಅಂತರ ಇನ್ನಷ್ಟು ಹೆಚ್ಚಲಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಲಾಭ ಮಾಡಿಕೊಳ್ಳುವುದರಲ್ಲಿ ಪಳಗಿವೆಯಾದ್ದರಿಂದ ಇಲ್ಲಿನವರು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದು ಮುಖ್ಯವಾಗುತ್ತದೆ. ಪ್ರೇರಣೆ ಪಡೆಯಲು, ಚೀನಾದ ಕಂಪೆನಿಗಳು ಅಮೆರಿಕದ ವಾಲ್‌ಮಾರ್ಟ್‌ನಂತಹ  ಕಂಪೆನಿಯನ್ನು ಹತ್ತೇ ವರ್ಷಗಳಲ್ಲಿ ಹಿಮ್ಮೆಟ್ಟಿಸಿರುವ ಉದಾಹರಣೆ ಇದ್ದೇ ಇದೆಯಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT