ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ; ರಾಷ್ಟ್ರೀಯ ಸ್ವತ್ತು ಮಾರಾಟಕ್ಕಿಟ್ಟ ಗ್ರೀಸ್

Last Updated 29 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ತೀವ್ರ ಆರ್ಥಿಕ ಸಂಕಷ್ಟ ಮತ್ತು ಸಾಲಬಾಧೆಯನ್ನು ಎದುರಿಸುತ್ತಿರುವ ಗ್ರೀಸ್, ತನ್ನ ವಿಮಾನ ನಿಲ್ದಾಣ, ರೈಲ್ವೆ, ರಸ್ತೆ, ಬಂದರು, ಇಂಧನ ಕಂಪೆನಿಗಳೂ ಸೇರಿದಂತೆ ಹಲವು ಆಸ್ತಿಗಳನ್ನು ಮಾರಾಟಕ್ಕೆ ಇಟ್ಟಿದೆ.

ಗ್ರೀಸ್‌ನ ಮೇಲೆ ಒಟ್ಟು 15,700 ಕೋಟಿ ಡಾಲರ್ ಸಾಲದ ಹೊರೆಯಿದ್ದು,  ಆರ್ಥಿಕ ಹಿಂಜರಿತ, ಸಾಲದ ಬಿಕ್ಕಟ್ಟಿನಿಂದ ಪಾರಾಗಲು ಚೀನಾವು ಹೂಡುವ ಬಂಡವಾಳ ನೆರವಾಗಲಿದೆ ಎಂಬ ವಿಶ್ವಾಸದಲ್ಲಿದೆ.

ಗ್ರೀಸ್ ಸರ್ಕಾರಕ್ಕೆ ಸೇರಿದ ಆಸ್ತಿಯನ್ನು ಕೊಳ್ಳುವ ಸಾಮರ್ಥ್ಯವಿರುವ ಖಾಸಗಿ ಸಂಸ್ಥೆಗಳು ಗ್ರೀಸ್ ಅಥವಾ ಯುರೋಪ್ ಒಕ್ಕೂಟದಲ್ಲಿ ತುಂಬಾ ಕಡಿಮೆ ಇರುವುದರಿಂದ ಅದು, ಚೀನಾ ಸೇರಿದಂತೆ ಇತರ ವಿದೇಶಿ ಬಂಡವಾಳ ಹೂಡಿಕೆದಾರರ ನೀರಿಕ್ಷೆಯಲ್ಲಿದೆ.

39 ವಿಮಾನ ನಿಲ್ದಾಣಗಳು, 850 ಬಂದರುಗಳು, ರೈಲ್ವೆ ಇಲಾಖೆ, ರಸ್ತೆಗಳು, ತ್ಯಾಜ್ಯ ಶುದ್ಧೀಕರಣ ಕೇಂದ್ರಗಳು, ಎರಡು ವಿದ್ಯುತ್ ಕಂಪೆನಿ, ಬ್ಯಾಂಕ್‌ಗಳು, ಸಾವಿರಾರು ಎಕರೆ ಭೂ ಪ್ರದೇಶ, ವಿನೋದ ಮಂದಿರಗಳು (ಕ್ಯಾಸಿನೊ), ರಾಷ್ಟ್ರೀಯ ಲಾಟರಿ  ಮಾರಾಟಕ್ಕಿರುವ ಸ್ವತ್ತುಗಳಲ್ಲಿ ಸೇರಿವೆ.

`ಮಾರಾಟ ಮಾಡಲು ಉದ್ದೇಶಿಸಿರುವ ಆಸ್ತಿಗಳಿಂದ 7100 ಕೋಟಿ ಡಾಲರ್ ಹಣ ಸಂಗ್ರಹವಾಗಲಿದೆ. ಈ ಮೊತ್ತವು ವಿದೇಶಗಳಿಂದ ಪಡೆದ ಸಾಲದ ಮರುಪಾವತಿಗೆ ನೆರವಾಗಲಿದೆ~ ಎಂದು ಗ್ರೀಸ್‌ನ ಆಸ್ತಿ, ಪುನರ್‌ರಚನೆ, ಖಾಸಗೀಕರಣಗಳ ವಿಶೇಷ  ಕಾರ್ಯದರ್ಶಿ ಜಾರ್ಜ್ ಕ್ರಿಸ್ಟೊಡೌಲಕಿಸ್ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಗ್ರೀಸ್ ಸರ್ಕಾರವು ತೆಗೆದುಕೊಂಡಿರುವ ಕಟ್ಟು ನಿಟ್ಟಿನ ಕ್ರಮಗಳು ಈಗಾಗಲೇ ರಾಷ್ಟ್ರದಲ್ಲಿ ಮುಷ್ಕರ, ಹಿಂಸಾಚಾರ, ಘರ್ಷಣೆಗಳನ್ನು  ಹುಟ್ಟುಹಾಕಿವೆ.

ಕಳೆದ ವರ್ಷ ಚೀನಾದ ಸರ್ಕಾರಿ ಸ್ವಾಮ್ಯದ ಹಡಗುಗಳ ಕಂಪೆನಿ ಕೋಸ್ಕೊ, ಅಥೆನ್ಸ್ ಬಂದರಿನ ಬಹುಪಾಲು ನಿಯಂತ್ರಣವನ್ನು ತನ್ನದಾಗಿಸಿಕೊಂಡಿತ್ತು. ಆ ಬಂದರನ್ನು ಈಗ ಚೀನಾದ ಪಟ್ಟಣ ಎಂದೇ ಕರೆಯಲಾಗುತ್ತಿದೆ.

`ನಾವೀಗ ಚೀನಿ ಭಾಷೆಯನ್ನು ಕಲಿಯಲು ಯತ್ನಿಸುತ್ತಿದ್ದೇವೆ. ನಾವು ಅದನ್ನು ಕಲಿಯಲೇಬೇಕು. ಯುರೋಪ್‌ನ ಎಲ್ಲಾ ನಾಗರಿಕರೂ ಕಲಿಯಬೇಕು~ ಎಂದು ಒಕ್ಕೂಟದ ಮುಖಂಡ ಸೊಟಿರಿಸ್ ಪೌಲಿಕೊಯಿನ್ನಿಸ್ ಬಿಬಿಸಿಗೆ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಯತ್ನವಾಗಿ ಗ್ರೀಕ್‌ನ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಈ ವರ್ಷದ ಆರಂಭದಲ್ಲಿ  ಯುರೋಪ್ ಒಕ್ಕೂಟ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT