ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತದ ನಡುವೆಯೂ ಸಾಧನೆ

Last Updated 10 ಜುಲೈ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಆರ್ಥಿಕ ಹಿಂಜರಿತಕ್ಕಿಂತ ಹೆಚ್ಚು ಅಪಾಯಕಾರಿ ಆಗಿರುವ ಐರೋಪ್ಯ ಒಕ್ಕೂಟದ ಸಾಲ ಬಿಕ್ಕಟ್ಟಿನ ನಡುವೆಯೂ ಭಾರತದ ಒಟ್ಟು ಆಂತರಿತ ಉತ್ಪನ್ನದ (ಜಿಡಿಪಿ ವೃದ್ಧಿ ದರ) ದರ ಶೇಕಡ 6.5ರಷ್ಟಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಪ್ರತಿಪಾದಿಸಿದರು.

ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಜೊತೆ ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದ ಅವರು, `ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಐರೋಪ್ಯ ಒಕ್ಕೂಟದ ಸಾಲ ಬಿಕ್ಕಟ್ಟಿನ ಕಾರಣ ಕೆಲವು ದೇಶಗಳ ಜಿಡಿಪಿ ಶೂನ್ಯಕ್ಕೆ ಕುಸಿದಿದೆ. ಆದರೆ ಯುಪಿಎ ಸರ್ಕಾರದ ಎರಡನೆಯ ಅವಧಿಯ ಮೊದಲ ಎರಡು ವರ್ಷಗಳಲ್ಲಿ ಶೇ 8ಕ್ಕಿಂತ ಹೆಚ್ಚಿನ ಜಿಡಿಪಿ ದಾಖಲಾಗಿತ್ತು~ ಎಂದು ಹೇಳಿದರು.

ಆಹಾರ ಧಾನ್ಯ ಬೆಳೆಯುವ ರೈತರಿಗೆ ದೊರೆಯುವ ಕನಿಷ್ಠ ಬೆಲೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಆಹಾರ ಧಾನ್ಯಗಳ ಬೆಲೆ ತುಟ್ಟಿಯಾಗಿದೆ ಎಂಬ ಭಾವನೆ ಗ್ರಾಹಕರಲ್ಲಿ ಮೂಡಿದೆ. ಆದರೆ ಈ ಕ್ರಮದ ಕಾರಣ ರೈತ ಸಮುದಾಯಕ್ಕೆ ಹೆಚ್ಚಿನ ಲಾಭವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾರಣ ದೇಶದಲ್ಲಿ ಕಡು ಬಡತನ ಇಲ್ಲವಾಗಿದೆ. ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಅಗತ್ಯ ವಸ್ತುಗಳ ಬೆಲೆಯೂ ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದೆ ಎಂದರು.

ಬರ ಪರಿಹಾರ: ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿ ನಿಭಾಯಿಸಲು 2,600 ಕೋಟಿ ರೂಪಾಯಿ ನೆರವು ಕೋರಲಾಗಿತ್ತು. ಆದರೆ ಕೇಂದ್ರ ಸರ್ಕಾರ ತೀರಾ ಕಡಿಮೆ ಮೊತ್ತ ಬಿಡುಗಡೆ ಮಾಡಿದೆ ಎಂಬ ಆರೋಪ ಕುರಿತು ಉತ್ತರಿಸಿದ ಚಿದಂಬರಂ, `ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ನಿಧಿ ಹೊಂದಿವೆ.

ರಾಜ್ಯದ ಬಳಿ ಇರುವ ನಿಧಿಯಲ್ಲಿ ಶೇ 75ಕ್ಕಿಂತ ಹೆಚ್ಚಿನ ಮೊತ್ತ ಖರ್ಚಾದಾಗ ಮಾತ್ರ ಕೇಂದ್ರದ ಸಹಾಯಕ್ಕೆ ಮನವಿ ಸಲ್ಲಿಸಬಹುದು. ಕೇಂದ್ರ ಸರ್ಕಾರ ತನ್ನದೇ ಆದ ನಿಯಮಗಳ ಅನ್ವಯ ಪರಿಹಾರ ಬಿಡುಗಡೆ ಮಾಡುತ್ತದೆ~ ಎಂದರು.

ನಕ್ಸಲ್ ಪಿಡುಗು:
ಮಾವೋವಾದಿ ನಕ್ಸಲೀಯರ ಹಿಡಿತ ಸಡಿಲವಾಗುತ್ತಿದೆ. ದೇಶದ ನಕ್ಸಲೀಯರಲ್ಲೇ ಗುಂಪುಗಳು ಸೃಷ್ಟಿಯಾಗಿವೆ. ಕೆಲವು ಗುಂಪುಗಳು ಎಸಗುತ್ತಿರುವ ದುಷ್ಟ ಕಾರ್ಯಗಳೂ ಹೆಚ್ಚಿವೆ. ಕೆಲವೆಡೆ ನಕ್ಸಲೀಯರು, ಸ್ಥಳೀಯ ಹೆಣ್ಣು ಮಕ್ಕಳನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡು, ಅವರ ಶೋಷಣೆ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಮೆರಿಕದ ಸಂಸ್ಥೆಯೊಂದು ನೀಡಿರುವ ವರದಿ ಅನ್ವಯ, ಚಿಕ್ಕ ಮಕ್ಕಳನ್ನೂ ಈ ಗುಂಪುಗಳು ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಎನ್‌ಸಿಟಿಸಿ
: ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ಕೆಲವೇ ರಾಜ್ಯಗಳು ಎರಡು ಅಂಶಗಳ ಆಧಾರದಲ್ಲಿ ವಿರೋಧಿಸಿವೆ. ಆ ಅಂಶಗಳ ಬಗ್ಗೆ ರಾಜ್ಯಗಳಿಗೆ ಇರುವ ಆತಂಕವನ್ನು ನಿವಾರಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಯುಪಿಎ ಸರ್ಕಾರ ಎರಡನೆಯ ಅವಧಿಯಲ್ಲಿ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಚಿವರು, ಸರ್ಕಾರದ ಸಾಧನೆ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT