ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆರ್.ಪಿ. ಶರ್ಮಾ ಅವರಿಂದ ಸೇಡಿನ ಸಂಚು'

Last Updated 1 ಏಪ್ರಿಲ್ 2013, 19:12 IST
ಅಕ್ಷರ ಗಾತ್ರ

 ಬೆಂಗಳೂರು: `ಪ್ರತೀಕಾರದ ಮನೋಭಾವದಿಂದ ಸಲ್ಲದ ಆರೋಪ ಹೊರಿಸಿ ಬಿಎಂಟಿಎಫ್ ಮುಖ್ಯಸ್ಥ ಆರ್.ಪಿ. ಶರ್ಮಾ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಆ ಪ್ರಕರಣಗಳನ್ನೆಲ್ಲ ಲೋಕಾಯುಕ್ತ ಇಲ್ಲವೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ವರ್ಗಾಯಿಸುವ ವ್ಯವಸ್ಥೆ ಮಾಡಬೇಕು' ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮುಖ್ಯ ಕಾರ್ಯದರ್ಶಿಗಳಿಗೆ ತಾವು ಬರೆದ ಪತ್ರದ ಪ್ರತಿಯನ್ನು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
`ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತನಾಗಿದ್ದ ಸಂದರ್ಭದಲ್ಲಿ ಶರ್ಮಾ ಇವರಿಗೆ ಸಂಬಂಧಿಸಿದ ನಿವೇಶನ ಹಂಚಿಕೆ ವಿಷಯದಲ್ಲಿ ನಾನು ಕೈಗೊಂಡ ತೀರ್ಮಾನ ಅವರ ಅಭಿಲಾಷೆಗೆ ವಿರುದ್ಧದ ತೀರ್ಮಾನವಾಗಿತ್ತು. ಈ ಕಾರಣದಿಂದ ನನ್ನ ವಿರುದ್ಧ ಇಂತಹ ಸಂಚನ್ನು ರೂಪಿಸಲು ಹೊರಟಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ' ಎಂದು ವಿವರಿಸಿದ್ದಾರೆ.

`ಬಿಎಂಟಿಎಫ್‌ನಲ್ಲಿ ಪ್ರಥಮ ವರ್ತಮಾನ ವರದಿ ದಾಖಲಾದ ವಿವರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನನ್ನ ಮೇಲಿನ ಆರೋಪ `ಪೀಬಲ್ ಬೇ' ಮತ್ತು `ಬ್ರಿಗೇಡ್ ಗೇಟ್‌ವೇ' ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ್ದಾಗಿವೆ. ಕಟ್ಟಡ ನಿರ್ಮಾಣಕ್ಕೆ ಬಳಸಿರುವ ಜಮೀನುಗಳಲ್ಲಿ ಹಾದುಹೋಗುತ್ತಿರುವ ರಾಜ ಕಾಲುವೆ ಮತ್ತು ಬಂಡಿದಾರಿ ಒತ್ತುವರಿ ಮಾಡಲು ಹಾಗೂ ಕಟ್ಟಡ ನಿರ್ಮಾಣದ ಬೈಲಾಗಳನ್ನು ತಪ್ಪಾಗಿ ಅರ್ಥೈಸಿ ನಿಯಮ ಮೀರಿದಂತಹ ವಿಸ್ತೀರ್ಣಕ್ಕೆ ಕಟ್ಟಡ ನಿರ್ಮಿಸಲು ಅನುಮತಿ ನೀಡಲಾಗಿದೆಯೆಂದು ತಿಳಿಸಲಾಗಿದೆ' ಎಂದು ಹೇಳಿದ್ದಾರೆ.

`ಪೀಬಲ್ ಬೇ' ಕಟ್ಟಡ ನಕ್ಷೆಯನ್ನು 2006ನೇ ಸಾಲಿನಲ್ಲಿ ನೀಡಲಾಗಿದ್ದು 2007ರಲ್ಲಿ ಪರಿಷ್ಕೃತ ನಕ್ಷೆಯನ್ನು ಕೊಡಲಾಗಿದೆ. ಈ ಅವಧಿಯಲ್ಲಿ ನಾನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಆಯುಕ್ತನಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ ಎಂಬುದನ್ನು ತಮಗೆ ತಿಳಿಸಬಯಸುತ್ತೇನೆ. ಆದರೆ, ಡಿಸೆಂಬರ್ 2010ರಲ್ಲಿ ನಾನು ಪರಿಷ್ಕೃತ ನಕ್ಷೆಯನ್ನು ಅನುಮೋದಿಸಿರುತ್ತೇನೆ. ಹಾಗೂ ಫೆಬ್ರುವರಿ 2011ರಲ್ಲಿ ಭಾಗಶಃ ಸ್ವಾಧೀನಾನುಭವ ಪ್ರಮಾಣಪತ್ರ ಮತ್ತು 2013ರ ಫೆಬ್ರುವರಿ 23ರಂದು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ನಿಯಮಾನುಸಾರ ಪರಿಶೀಲನೆಗೆ ಒಳಪಡಿಸಿ ನಗರ ಯೋಜನೆ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಹಿರಿಯ ಅಧಿಕಾರಿಗಳ ಸ್ಪಷ್ಟ ಶಿಫಾರಸುಗಳನ್ನು ಆಧರಿಸಿ ಅನುಮೋದನೆ ನೀಡಿರುತ್ತೇನೆ' ಎಂದು ವಿವರಿಸಿದ್ದಾರೆ.

`ಇನ್ನು ಬ್ರಿಗೇಡ್ ಗೇಟ್‌ವೇಗೆ ಸಂಬಂಧಿಸಿದ ವಿಷಯ. ಒಟ್ಟು 42 ಎಕರೆ ಜಮೀನನ್ನು ಬೆಸ್ಟ್ ಟ್ರೇಡಿಂಗ್ ಕಂಪೆನಿಗೆ ಅಂದಿನ ಸಿಐಟಿಬಿ 1953ರಲ್ಲಿ ಹಂಚಿಕೆ ಮಾಡಿದ್ದು, ಈ ಜಮೀನನ್ನು ಬ್ರಿಗೇಡ್ ಗೇಟ್‌ವೇ ಸಂಸ್ಥೆಯವರು 2005ನೇ ಸಾಲಿನಲ್ಲಿ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿರುತ್ತಾರೆ. 2005ರ ಏಪ್ರಿಲ್ 4ರಂದು ಭೂಉಪಯೋಗ ಬದಲಾವಣೆ ಪಡೆದುಕೊಂಡಿದ್ದು, ಅದೇ ವರ್ಷ ಜುಲೈ 15ರಂದು ನಕ್ಷೆ ಮಂಜೂರಾತಿ ಪಡೆದುಕೊಂಡಿರುತ್ತಾರೆ. ಪ್ರಾರಂಭ ಪ್ರಮಾಣ ಪತ್ರವನ್ನು 2007ರ ಮೇ 30ರಂದು ಹಾಗೂ ವಿವಿಧ ಬ್ಲಾಕ್‌ಗಳಿಗೆ ದಿನಾಂಕ 2008ರ ಮೇ 21ರಿಂದ 2012ರ ಫೆಬ್ರುವರಿ 21ರ ಅವಧಿಯಲ್ಲಿ ವಿವಿಧ ಬ್ಲಾಕ್‌ಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುತ್ತಾರೆ' ಎಂದು ತಿಳಿಸಿದ್ದಾರೆ.

`ನಾನು ಪಾಲಿಕೆಯ ಆಯುಕ್ತನಾಗಿರುವ ಅವಧಿಯಲ್ಲಿ ಶಾಲೆ ಕಟ್ಟಡ, ಕ್ಲಬ್ ಹೌಸ್ ಮತ್ತು ಕಚೇರಿ ಕಟ್ಟಡ ಹಾಗೂ ಹೋಟೆಲ್ ಕಟ್ಟಡಗಳ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ನೀಡಿರುತ್ತೇನೆ. ಕಟ್ಟಡ ಬೈಲಾಗಳ ಪರಿಶೀಲನೆ, ನಗರ ಯೋಜನಾ ಇಲಾಖೆಯಿಂದ ತಪಾಸಣೆ ಮತ್ತು ಇತರೆ ಹಿರಿಯ ಅಧಿಕಾರಿಗಳ ಶಿಫಾರಸುಗಳ ಆಧಾರದ ಮೇಲೆ ನಾನು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಅನುಮೋದಿಸಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

`ಬಿಬಿಎಂಪಿ ಆಯುಕ್ತನಾಗಿ ಅಥವಾ ಇತರೆ ಹುದ್ದೆಗಳಲ್ಲಿ ನಾನು ಕೆಲಸ ನಿರ್ವಹಿಸಿದ ಅವಧಿಯಲ್ಲಿ ಸಾರ್ವಜನಿಕರ ಹಿತಾಸಕ್ತಿಯನ್ನೇ ನನ್ನ ಪರಮೋಚ್ಛ ಉದ್ದೇಶವನ್ನಾಗಿಟ್ಟುಕೊಂಡು ಅತ್ಯಂತ ಪ್ರಾಮಾಣಿಕವಾಗಿ ದುಡಿದಿರುತ್ತೇನೆ ಎಂಬುದನ್ನು ಧೈರ್ಯವಾಗಿ ಹೇಳಬಲ್ಲೆ. ವಸ್ತುಸ್ಥಿತಿ ಹೀಗಿರುವಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಸೆ ಮೇರೆಗೆ ಅಥವಾ ಪೂರ್ವಗ್ರಹಪೀಡಿತ ಮನಃಸ್ಥಿತಿ ಹೊಂದಿರುವಂತೆ ಬಿಎಂಟಿಎಫ್ ಮುಖ್ಯಸ್ಥರಾಗಿ ಹಾಲಿ ಕೆಲಸ ನಿರ್ವಹಿಸುತ್ತಿರುವ  ಶರ್ಮಾ ಅವರು ವಿನಾಕಾರಣ ನನ್ನ ವಿರುದ್ಧ ಪಿತೂರಿ ನಡೆಸಿ ಮೇಲ್ಕಂಡ ಎರಡು ಪ್ರಕರಣಗಳಲ್ಲಿ ನನ್ನ ಮೇಲೆ ಆಧಾರರಹಿತ ಆರೋಪ ಹೊರಡಿಸಲು ಮಾಡಿರುವ ಪ್ರಯತ್ನ ಅತ್ಯಂತ ವಿಷಾದನೀಯ' ಎಂದು ತಿಳಿಸಿದ್ದಾರೆ.

`ಶರ್ಮಾರವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅವರಿಗೆ ಹಂಚಿಕೆಯಾಗಿದ್ದ ನಿವೇಶನ ಸಂಖ್ಯೆ ನಂ.1542/1, (12 ಮೀ. /24 ಮೀ.) ಇದರ ಸಂಬಂಧ ದಿನಾಂಕ 2003 ಆಗಸ್ಟ್ 19ರಂದು ಒಂದು ಸ್ವಪ್ರಮಾಣ ಪತ್ರವನ್ನು ಸಲ್ಲಿಸಿದ್ದು, ಈ ಪ್ರಮಾಣ ಪತ್ರದಲ್ಲಿ ಅವರು ಕೆಲವು ಪ್ರಮಾಣಗಳನ್ನು ಮಾಡಿದ್ದಾರೆ' ಎಂದು ಹೇಳಿದ್ದಾರೆ.

`ನಾನು ಸಾಮಾನ್ಯವಾಗಿ ಕಳೆದ 15 ವರ್ಷಗಳಿಂದ ಕರ್ನಾಟಕದ ನಿವಾಸಿಯಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದೇನೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಾನಾಗಲಿ ಅಥವಾ ನನ್ನ ಹೆಂಡತಿ ಅಥವಾ ನನ್ನ ಅವಲಂಬಿತ ಮಕ್ಕಳಾಗಲಿ ಯಾವುದೇ ನಿವೇಶನ ಅಥವಾ ಮನೆ ಮಾಲೀಕತ್ವ ಹೊಂದಿರುವುದಿಲ್ಲವೆಂದೂ ಹಾಗೂ ನಾನಾಗಲಿ ಅಥವಾ ಹೆಂಡತಿ ಅಥವಾ ಅವಲಂಬಿತ ಮಕ್ಕಳಾಗಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಾಗಲಿ ಅಥವಾ ಗೃಹ ನಿರ್ಮಾಣ ಸಂಘ - ಮಂಡಳಿಗಳಿಂದಾಗಲಿ ಮನೆ ಅಥವಾ ನಿವೇಶನ ಮಂಜೂರಾಗಿಲ್ಲವೆಂದು ಈ ಮೂಲಕ ಪ್ರಮಾಣಪೂರ್ವಕವಾಗಿ ದೃಢೀಕರಿಸುತ್ತೇನೆ.

`ಶರ್ಮಾ ಅವರ ನಿವೇಶನ ಹಂಚಿಕೆ ಪ್ರಕರಣವನ್ನು ಪರಿಶೀಲಿಸಲಾಗಿ, ಅವರ ಧರ್ಮಪತ್ನಿ ನಾಗಲಾಂಬಿಕಾದೇವಿ ಅವರಿಗೆ ಮೆಟ್ರೋಪಾಲಿಟನ್ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಹೆಚ್.ಎಸ್.ಆರ್. 4ನೇ ಸೆಕ್ಟರ್ ಬಡಾವಣೆಯಲ್ಲಿ 1998ನೇ ಇಸವಿಯಲ್ಲಿ ನಿವೇಶನ ಸಂಖ್ಯೆ 24 ಹಂಚಿಕೆಯಾಗಿದ್ದರಿಂದ, ಶರ್ಮಾ ನೀಡಿರುವ ಪ್ರಮಾಣ ಪತ್ರದ ಅಂಶಗಳು ಸುಳ್ಳೆಂದು ಘೋಷಿಸಿ ಅವರಿಗೆ ಹಂಚಿಕೆ ಮಾಡಿದ್ದ ನಿವೇಶನವನ್ನು ರದ್ದುಪಡಿಸಿ ಪ್ರಾಧಿಕಾರಕ್ಕೆ ಪಾವತಿಸಿರುವ ನಿವೇಶನ ಮೌಲ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು' ಎಂದು ವಿವರಿಸಿದ್ದಾರೆ.

`ಈ ಆದೇಶವನ್ನು ವಿನಯಪೂರ್ವಕವಾಗಿ ಸ್ವಾಗತಿಸುವ ಬದಲು ಅದನ್ನೇ ಆಧಾರವಾಗಿ ಇಟ್ಟುಕೊಂಡು ನನ್ನ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಹೊರಟಿರುವ ಶರ್ಮಾ ಅವರ ಮನೋಭಾವ ತೀರಾ ಖಂಡಿಸಲು ಅರ್ಹವಾದುದು. ಅದರಲ್ಲೂ ಅವರಿಗೆ 2013   ಮಾರ್ಚ್ 30ರಂದು ಮಧ್ಯಾಹ್ನ 3-30ಕ್ಕೆ ನೀಡಲಾಗಿದೆ ಎಂಬ ದೂರುಗಳನ್ನಾಧರಿಸಿ ಯಾವುದೇ ರೀತಿಯ ವಿಚಾರಣೆಯಿಲ್ಲದೆ ನನ್ನ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದು ಅತ್ಯಂತ ಅನುಮಾನಕ್ಕೆ ಆಸ್ಪದವಾಗಿರುತ್ತದೆ' ಎಂದಿದ್ದಾರೆ.

`ಶರ್ಮಾ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿರುವ ಸುಳ್ಳು ಪ್ರಮಾಣ ಪತ್ರದ ಮೇಲೆ ಕೂಡಲೇ ಅವರ ವಿರುದ್ಧ ಶಿಸ್ತಿನ ಕ್ರಮವನ್ನು ನಡೆಸುವಂತೆ ಹಾಗೂ ಐ.ಪಿ.ಸಿ. ಕಾಯ್ದೆಯನ್ವಯ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಆದೇಶಿಸುವಂತೆ ಕೋರುತ್ತೇನೆ' ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT