ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯ ದ್ರಾವಿಡ ಹೊಸ ರಂಗಗಲ್ಲು!

ರಂಗ ಬಿನ್ನಹ
Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾರತದ ಐದು ಸಾವಿರ ವರ್ಷಗಳ ಇತಿಹಾಸವನ್ನು ಹತ್ತು ಗಂಟೆಗಳಲ್ಲಿ ಹೇಳುವುದು ಹೇಗೆ? ಇಂಥದೊಂದು ಸಾಹಸಕ್ಕೆ ಮುಖಾಮುಖಿ ಆದುದು `ಆರ್ಯ ದ್ರಾವಿಡ' ನಾಟಕ. ದೇಶದಲ್ಲಿಯೇ ದೊಡ್ಡದೆನಿಸಿಕೊಂಡ, ನಾಲ್ಕು ಎಕರೆ ಬಯಲಿನಲ್ಲಿ ಹಾಕಲಾಗಿದ್ದ ರಂಗ ವೇದಿಕೆಯಲ್ಲಿ ಇತಿಹಾಸವನ್ನು ಪಾತ್ರಗಳ ಮೂಲಕ ಬಿಚ್ಚಿಡುವ ಮಹತ್ವಾಕಾಂಕ್ಷೆಯ ಪ್ರಯತ್ನ ಈ ನಾಟಕದ್ದು. ಯುವ ರಂಗಕರ್ಮಿ ಗಿರೀಶ್ ಮಾಚಳ್ಳಿ ಈ ವಿಭಿನ್ನ ನಾಟಕದ ರೂವಾರಿ.

ಮಂಡ್ಯ ತಾಲ್ಲೂಕಿನ ಮಾಚಳ್ಳಿ ಬಳಿಯ ಕಾಗೆಮಂಟಿಯಲ್ಲಿ `ಸೋಶಿಯಲ್ ಅಂಡ್ ಕಲ್ಚರಲ್ ಟ್ರಸ್ಟ್'ನ `ಚಾರ್ವಾಕ ತಂಡ'ದ 120ಕ್ಕೂ ಹೆಚ್ಚು ಕಲಾವಿದರು ಇತ್ತೀಚೆಗೆ `ಆರ್ಯ ದ್ರಾವಿಡ' ನಾಟಕದ ಪ್ರದರ್ಶನ ನೀಡಿದರು. ಒಂದು ಸಾವಿರಕ್ಕೂ ಹೆಚ್ಚು ಪಾತ್ರಗಳಿರುವ ಈ ನಾಟಕ ಪ್ರದರ್ಶನದ ಮೂಲಕ ವಿಶ್ವ ರಂಗಭೂಮಿಯಲ್ಲಿ ಕನ್ನಡದ ಸಾಹಸದ ಪುಟವೊಂದು ಸೇರ್ಪಡೆಯಾಯಿತು.

ಮಾನವನ ವಿಕಾಸದ ಹಾದಿ, ಜಾತಿ ಸಂಘರ್ಷ, ರಾಜರುಗಳ ಆಳ್ವಿಕೆ, ವಿವಾಹ ಪದ್ಧತಿ, ಸತಿ ಸಹಗಮನ, ಸ್ಥಾವರ ಹಾಗೂ ನಗರ ಸಮಾಜ ನಡೆದು ಬಂದ ಹಾದಿ, ಆ ಹಾದಿಯಲ್ಲಿ ಶೋಷಿತರು ಎದುರಿಸಿದ ಕಲ್ಲುಮುಳ್ಳುಗಳ ಚಿತ್ರಣವನ್ನು ಪಾತ್ರಧಾರಿಗಳು ಸಮರ್ಥವಾಗಿ ಬಿಂಬಿಸಿದರು. ನಾಲ್ಕು ಎಕರೆ ಬಯಲು ಪ್ರದೇಶದಲ್ಲಿನ ಗುಡ್ಡದ ಏರಿಳಿತಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ನಾಟಕಕ್ಕಾಗಿ ಮೂರು ರಂಗ ವೇದಿಕೆಗಳನ್ನು ಸಜ್ಜುಗೊಳಿಸಲಾಗಿತ್ತು. ವೇದಿಕೆಯ ಮೇಲೆ ಕೃತಕ ನದಿ, ಕೆರೆ, ಯಜ್ಞ ಕುಂಡ, ಬೆಟ್ಟಗುಡ್ಡಗಳನ್ನು ನಿರ್ಮಾಣ ಮಾಡಲಾಗಿತ್ತು. ಜೀವಂತ ಆಕಳು, ಆಡು, ಕುದುರೆಗಳು ನಾಟಕ ಪ್ರದರ್ಶನದ ಭಾಗವಾಗಿದ್ದವು.

ಮೊದಲ ರಂಗ ವೇದಿಕೆಗೆ `ಹೆತ್ತವರ ಅಂಗಳ' ಎಂದು ಕರೆಯಲಾಗಿತ್ತು. ಅಲ್ಲಿ ಮಾನವನ ಜನ್ಮವೃತ್ತಾಂತ ಹಾಗೂ ಮಾನವನ ವಿಕಾಸದ ಸಂಘರ್ಷಗಳ ಚಿತ್ರಣವಿತ್ತು. ಎರಡನೇ ವೇದಿಕೆಗೆ `ನಾಗನೆಲ' ಎಂದು ಹೆಸರು. ಅಲ್ಲಿ ಪ್ರಕೃತಿ ಮತ್ತು ಮಾನವನ ಸಂಬಂಧ, ಧಾರ್ಮಿಕ ಚರ್ಯೆಗಳು ಅಭಿವ್ಯಕ್ತಗೊಂಡವು. ಮೂರನೇ ವೇದಿಕೆಗೆ `ದ್ರಾವಿಡಧರೆ' ಎನ್ನುವ ಹೆಸರು. ಅಲ್ಲಿ ಸಮಾನತೆಯನ್ನು ಮರಳಿ ಮೂಡಿಸಲು ಉದಯವಾದ ಬೌದ್ಧಧರ್ಮ, ಅದರ ಉನ್ನತ ಸ್ಥಿತಿ, ಭಕ್ತಿಪಂಥ ಚಳವಳಿ, ಆಚಾರ್ಯತ್ರಯರ ಸಂಘರ್ಷದ ಜೊತೆಗೆ ಕಲಿಯುಗದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಹಿಂದಿನ ಕಾರಣಗಳನ್ನು ಸಮೀಕರಿಸುವ ಪ್ರಯತ್ನವಿತ್ತು.

ಜಾತಿ ವ್ಯವಸ್ಥೆಯನ್ನು ಬಲವಂತವಾಗಿ ಮತ್ತು ವ್ಯವಸ್ಥಿತವಾಗಿ ಇತರರ ಮೇಲೆ ಹೇಗೆ ಹೇರಲಾಯಿತು ಎನ್ನುವುದನ್ನು ನಾಟಕ ಪ್ರಮುಖವಾಗಿ ಧ್ವನಿಸಿತು. ಬಡತನ, ನಿರುದ್ಯೋಗ, ಭ್ರಷ್ಟಾಚಾರ ನಮ್ಮ ಜನ್ಮಕ್ಕಂಟಿದ ರೋಗಗಳಲ್ಲ, ಹಣೆಬರಹವೂ ಅಲ್ಲ. ಇವೆಲ್ಲವನ್ನೂ ಕಾಲಕಾಲಕ್ಕೆ ಬಲವಂತವಾಗಿ ಹೇರಿಕೊಂಡು ಬರಲಾಗುತ್ತಿದೆ ಎನ್ನುವ ಧ್ವನಿಯೂ ನಾಟಕದಲ್ಲಿತ್ತು. ಈ ಸಾಮಾಜಿಕ ಜಾಡ್ಯಗಳನ್ನು ತೊಡೆದು, ಸಮಾನತೆ, ಸತ್ಯ, ವಿಜ್ಞಾನ ಹಾಗೂ ಮಾನವೀಯತೆಯ ಆಧಾರದ ಮೇಲೆ ಪ್ರಬುದ್ಧ ಭಾರತವನ್ನು ಕಟ್ಟಬೇಕು ಎನ್ನುವುದು `ಆರ್ಯ ದ್ರಾವಿಡ'ದ ಆಶಯ.

ಪ್ರದರ್ಶನದಲ್ಲಿನ ಬೆಳಕಿನ ಸಂಯೋಜನೆ ಉತ್ತಮವಾಗಿತ್ತು. ಕಾಲದ ಬದಲಾವಣೆಗೆ ತಕ್ಕಂತೆ ಸಂಗೀತದ ಸಂಯೋಜನೆಯನ್ನೂ ಮಾಡಲಾಗಿತ್ತು. ರವಿಕಿರಣ ಬೆಳ್ಳಗೆರೆ, ಅಣಸೋಗಿ ಸೋಮಶೇಖರ್ ಹಾಗೂ ಗಿರೀಶ್ ಮಾಚಳ್ಳಿ ರಚಿಸಿದ 60ಕ್ಕೂ ಹೆಚ್ಚು ಹಾಡುಗಳು ಪ್ರದರ್ಶನದಲ್ಲಿದ್ದವು. ಸಂಗೀತ ಸಂಯೋಜನೆಯನ್ನು ನಿರ್ದೇಶಕರಾದ ಗಿರೀಶ್ ಮಾಚಳ್ಳಿ ಅವರೇ ಮಾಡಿದ್ದಾರೆ. ಹಿನ್ನಲೆ ಸಂಗೀತ ದೇವೇಂದ್ರ ಬಡಿಗೇರ ಅವರದು. ರಾಮಚಂದ್ರು, ಅಣಸೋಗಿ ಸೋಮಶೇಖರ್, ಲಕ್ಷ್ಮರಾಮ್, ಲೋಕೇಶ್ ಗೀತೆಗಳಿಗೆ ಜೀವ ತುಂಬಿದರು.

ಕೆಲವೆಡೆ ಪಾತ್ರಧಾರಿಗಳು ಪ್ರೇಕ್ಷಕರಿಂದ ಸಾಕಷ್ಟು ಅಂತರದಲ್ಲಿ ಇದ್ದುದರಿಂದ ಅವರ ಮುಖದಲ್ಲಿನ ಭಾವನೆಗಳು ಪ್ರೇಕ್ಷಕರನ್ನು ಮುಟ್ಟಲಿಲ್ಲ. ಬಹುತೇಕ ಕಲಾವಿದರು ಮೈಸೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು. ಅವರುಗಳ ಜೊತೆಗೆ, ರಾಜ್ಯದ ವಿವಿಧ ಭಾಗಗಳ ಕಲಾವಿದರೂ ಪ್ರದರ್ಶನದ ಭಾಗವಾಗಿದ್ದರು. ಹೊಸದಾಗಿಯೇ ನಾಟಕ ಮಾಡಿದವರ ಸಂಖ್ಯೆ ಹೆಚ್ಚಾಗಿತ್ತು. ಹಾಗಾಗಿ ಕೆಲವು ಪಾತ್ರಗಳ ವ್ಯಕ್ತಿತ್ವ, ಅಭಿನಯ ಹಾಗೂ ಧ್ವನಿಯ ಏರಿಳಿತಗಳಲ್ಲಿ ಕೊರತೆ ಕಾಣಿಸಿತು.

ಪಾರ್ವತಿಯಾಗಿ ದಿವ್ಯಶ್ರೀ, ಅಂಗೀರಸ ಋಷಿ ಪಾತ್ರದಲ್ಲಿ ಸತೀಶ್, ವಿವೇಕಾನಂದ, ಅಂಬೇಡ್ಕರ್, ಜ್ಯೋತಿಬಾ ಪುಲೆ ಪಾತ್ರಗಳಲ್ಲಿ ರವಿಕಿರಣ ಬೆಳ್ಳಗೆರೆ, ಪ್ರಜಾಪತಿಯಾಗಿ ನಂದೀಶ್, ವಸಿಷ್ಠ ಋಷಿಯ ಪಾತ್ರದಲ್ಲಿ ವಸಂತ್ ರಾವಣ, ಪೆರಿಯಾರ್ ಪಾತ್ರದಲ್ಲಿ ರಘು ಔರತಾನ ಗಮನಸೆಳೆದರು.

ನಾಟಕದ ರಂಗ ವೇದಿಕೆ ಪ್ರವೇಶದ ದ್ವಾರವನ್ನು ಪಾರ್ಲಿಮೆಂಟ್ ಪ್ರತಿರೂಪದಂತೆ ನಿರ್ಮಿಸಲಾಗಿತ್ತು. ಆ ಮೂಲಕ ರಂಗವೇದಿಕೆಯತ್ತ ಹೋದಂತೆಯೇ ಪ್ರಜಾಪ್ರಭುತ್ವದಿಂದ ರಾಜರ ಆಡಳಿತ ಬಿಂಬಿಸುವ ಅರಮನೆ, ಹೆಂಚಿನ ಮನೆ, ಗುಡಿಸಲುಗಳ ಮೂಲಕ ಹಂತಹಂತವಾಗಿ ಇತಿಹಾಸವನ್ನು ಪರಿಚಯಿಸುವ ಪ್ರಯೋಗ ಇದಾಗಿತ್ತು.
ಚಿತ್ರಗಳು: ಪ್ರಶಾಂತ್ ಎಚ್.ಜಿ.

ಕೋಟಿ ರೂಪಾಯಿ ವೇದಿಕೆ!

ಐದು ಸಾವಿರ ವರ್ಷಗಳ ಬಾರತದ ಇತಿಹಾಸವನ್ನು ಎಲ್ಲರಿಗೂ ಓದಲು ಸಾಧ್ಯವಾಗುವುದಿಲ್ಲ. ಅದನ್ನು ತೆರೆದಿಡುವ ಸಣ್ಣ ಪ್ರಯತ್ನ ನಮ್ಮ `ಆರ್ಯ ದ್ರಾವಿಡ' ಪ್ರಯೋಗ. ಇತಿಹಾಸದ ಹಲವು ಮಜಲುಗಳನ್ನು ವಸ್ತುನಿಷ್ಠವಾಗಿ ತೋರಿಸುವ ಪ್ರಯತ್ನ ಮಾಡಿರುವೆ. ಇಂದಿನ ಎಲ್ಲ ಸಮಸ್ಯೆಗಳಿಗೆ ಇತಿಹಾಸದಲ್ಲಿ ನಡೆದ ಘಟನೆಗಳೇ ಕಾರಣವಾಗಿವೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸದೃಢ ಸಮಾಜ ನಿರ್ಮಾಣ ಮಾಡುವ ಉದ್ದೇಶ ನಾಟಕದ್ದು.

ಒಂದೂವರೆ ವರ್ಷಗಳ ಕಾಲ 40 ಕಲಾವಿದರು ಹಾಗೂ ಇನ್ನಿತರ ಕೆಲಸಗಾರರನ್ನು ಸೇರಿಸಿಕೊಂಡು ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 10 ಲಕ್ಷ ರೂಪಾಯಿ ಅನುದಾನ ನೀಡಿದೆ. ನಾಟಕದ ಒಂದು ಪ್ರದರ್ಶನಕ್ಕೆ ಮೂರು ಲಕ್ಷ ರೂಪಾಯಿ ಖರ್ಚಾಗುತ್ತದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಪ್ರದರ್ಶನ ಮಾಡಿದ್ದೇವೆ.
-ಗಿರೀಶ್ ಮಾಚಳ್ಳಿ, ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT