ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯವೈಶ್ಯ ಸಮಾಜ ಸೇವೆ ಶ್ಲಾಘನೀಯ

Last Updated 1 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಂದಿಗೂ ಸಂಘರ್ಷಕ್ಕಿಳಿಯದೆ ಸೌಹಾರ್ದತೆ, ಸಹಬಾಳ್ವೆಯಿಂದ ಬದುಕುವ ಆರ್ಯವೈಶ್ಯ ಸಮಾಜ ದಾನ ಮಾಡುವ ಕೈಂಕರ್ಯದಲ್ಲಿ ಎತ್ತಿದ ಕೈ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಶ್ಲಾಘಿಸಿದರು.

ಭಾನುವಾರ ಕರ್ನಾಟಕ ಆರ್ಯವೈಶ್ಯ ಮಹಾಸಭೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂಗವಿಕಲರ ಮಾಸಾಶನ `ವಾಸವಿ ಚೇತನ~ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರ್ಯವೈಶ್ಯ ಸಮಾಜದವರು ಸರ್ಕಾರದ ಯೋಜನೆಗಳಿಗೆ ಅಂಗಲಾಚದೆ ಸಮಾಜದಲ್ಲಿನ ಅಂಗವಿಕಲರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ ಮಾಸಾಶನ ನೀಡುವ ಕಾರ್ಯಕ್ರಮ ಅತ್ಯಂತ ಆದರ್ಶಪ್ರಾಯವಾಗಿದೆ. ಇದೇ ರೀತಿ ಇತರೆ ಸಮುದಾಯಗಳು ಸಮಾಜಮುಖಿಯಾಗಿ ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.

ಆಧುನಿಕ ತಂತ್ರಜ್ಞಾನದ ಸಂಪರ್ಕಜಾಲದಲ್ಲಿ ಎಲ್ಲರೂ ಹತ್ತಿರವಾಗತ್ತಿದ್ದೇವೆ. ಆದರೆ, ಸಂಬಂಧಗಳು ದೂರವಾಗುತ್ತಿವೆ. ಇಂದು ಸಮಾಜ ಯಾಂತ್ರೀಕೃತಗೊಳ್ಳುತ್ತಿದೆ. ಟಿ.ವಿ. ಮಾಧ್ಯಮಗಳಲ್ಲಿ ಬರುವ ಪಾತ್ರಧಾರಿ ನಾಯಕ, ನಾಯಕಿಯರ ಸಂಕಷ್ಟಗಳಿಗೆ ಕಣ್ಣೀರು ಇಡುವ ನಮ್ಮವರು ನಮ್ಮ ಮನೆಯವರ ಸಂಕಷ್ಟಗಳಿಗೆ ಒಮ್ಮೆಯೂ ಕಣ್ಣೀರು ಇಡುವುದಿಲ್ಲ. ಇದರಿಂದ ದೂರದವರು ಹತ್ತಿರವಾಗುತ್ತಾರೆ ಹತ್ತಿರದವರು ದೂರವಾಗುತ್ತಿರುವುದು ವಿಷಾದದ ಸಂಗತಿ ಎಂದರು.

ಎಷ್ಟು ದಾನ ಮಾಡಿದರೂ ಖಾಲಿಯಾಗದೆ ಆಸ್ತಿ ಎಂದರೆ ವಿದ್ಯೆ ಮಾತ್ರ. ಇದನ್ನು ದಾನ ಪಡೆದವನಿಗೂ ಕೊಟ್ಟವನಿಗೂ ಏನು ತೊಂದರೆಯಾಗುವುದಿಲ್ಲ. ಆದರೆ, ಎಷ್ಟೇ ಹಣವಿದ್ದು, ದಾನ ಮಾಡಿದರೆ ಖಾಲಿಯಾಗಲಿದೆ ಎನ್ನುವುದನ್ನು ಮರೆಯಬಾರದೆಂದು ಎಂದರು.

ಬಲಾಢ್ಯರಾಗಿರುವ ಯಾರೇ ಆಗಲಿ ಸಮಾಜದ ಖಳನಾಯಕರೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಬದಲಾಗಿ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅದೇ ರೀತಿ ಅವರೆಲ್ಲ ಪ್ರತಿಭಾವಂತರೊಂದಿಗೆ ಗುರುತಿಸಿಕೊಳ್ಳಲು ಹಾತೊರೆಯುತ್ತಾರೆ ಎಂದರು.

ಅಂಗವಿಕಲರ ಮಾಸಾಶನ `ವಾಸವಿ ಚೇತನ~ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಆರ್ಯವೈಶ್ಯ ಸಮಾಜ ಅಂಗವಿಕಲರಿಗೆ ಪ್ರತಿ ತಿಂಗಳು ಮಾಸಾಶನ ನೀಡುವ ನಿರ್ಧಾರ ಅತ್ಯಂತ ಶ್ಲಾಘನೀಯ. ಇದು ಇತರ ಸಮಾಜಗಳಿಗೆ ಮಾದರಿಯಾಗಿದೆ. ನಮ್ಮ ಸಮಾಜದ ವಿಕಲಚೇತನರು ಸರ್ಕಾರದ ಕಡೆ ಮುಖ ಮಾಡಬಾರದೆಂದು ತಿಳಿದು ಸಮಾಜವೇ ಅವರಿಗೆ ಮಾಶಾಸನ ೀಡುವ ಕೆಲಸ ಮಾಡುತ್ತಿರುವುದು ಇದೊಂದು ಮೌನಕ್ರಾಂತಿ ಎಂದು ಅವರು ಬಣ್ಣಿಸಿದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆರ್ಯ ಸಮಾಜ ಕೇವಲ ಲಕ್ಷ್ಮೀ ಪುತ್ರರಷ್ಟೇ ಅಲ್ಲ. ಇಂದು ಸರಸ್ಪತಿ ಪುತ್ರರಾಗಿಯೂ ಪರಿವರ್ತನೆಗೊಂಡಿದ್ದಾರೆ. ರಾಜ್ಯಾದ್ಯಂತ 635 ಮಕ್ಕಳು ಶೇ 90ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಇವರ್ಲ್ಲಲಿ  298 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕಗಳಿಸಿದ್ದರೆ 211 ವಿದ್ಯಾರ್ಥಿಗಳು ಶೇ 98ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ. 10 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆಂದು ತಿಳಿಸಿದರು. ಇದರಲ್ಲಿ ಸಿಇಟಿಯಲ್ಲಿ ಮೊದಲ ರ‌್ಯಾಂಕ್ ಪಡೆದ ರಕ್ಷಾ ನಮ್ಮ ಸಮಾಜದವರೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆನೆ, ಕುದುರೆ ಮೇಲೆ ಮೆರವಣಿಗೆ ಮಾಡಿ ವೇದಿಕೆ ಕರೆತರಲಾಯಿತು. 635 ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾಜದವರು ಇಂದು ಅಂಗಡಿ ಮುಗ್ಗಟ್ಟುಗಳಿಗೆ ರಜೆ ಘೋಷಣೆ ಮಾಡಿ ಸಮಾರಂಭದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಆರ್ಯವೈಶ್ಯ ಸಂಘದ ಜಿಲ್ಲಾಧ್ಯಕ್ಷ ಎಸ್.ಎನ್. ಕಾಶೀವಿಶ್ವನಾಥಶೆಟ್ಟಿ, ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಎನ್. ಶೆಟ್ಟರ್, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT