ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯುವೇದದಲ್ಲಿ ಲಿಂಗ ತಾರತಮ್ಯ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಲಿಂಗಾನುಪಾತದದಲ್ಲಿ ಬಹಳ ಅಂತರ ಏರ್ಪಟ್ಟಿರುವದು ಕಳವಳಕಾರಿ ಸಂಗತಿ. ಇದಕ್ಕೆ ಅನೇಕ ಕಾರಣಗಳನ್ನು ಕೊಡಬಹುದು. ಪುರುಷಾಧಿಪತ್ಯದ ಸಮಾಜ, ಪುರುಷ ಶ್ರೇಷ್ಠತೆಯ ಸಾಂಪ್ರದಾಯಿಕತೆ ಮತ್ತು ಭ್ರೂಣ ಹತ್ಯೆಗಳಂತಹ ಆಧುನಿಕ ವಿಧಾನಗಳು ಲಿಂಗಾನುಪಾತದ ಅಂತರಕ್ಕೆ ಕಾರಣಗಳೆನ್ನಬಹುದು. ಆದರೆ ಅನೇಕ ಆರ್ಯುವೇದ ವೈದ್ಯರು ಗಂಡು ಮಗು ಹುಟ್ಟಲು ಔಷಧಿ ಕೊಡುವ ಮೂಲಕ ಲಿಂಗಸಮಾನತೆಯ ಮೌಲ್ಯಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ.

ಹಾಗೆ ನೋಡಿದರೆ ಗಂಡು ಮಗು ಪಡೆಯುವ ಚಿಕಿತ್ಸಾ ಪದ್ಧತಿಯನ್ನು ಸುಶ್ರುತನೆ ಹೇಳಿದ್ದಾನಂತೆ. ಸುಶ್ರುತ ಸಂಹಿತೆಯ ಶುಕ್ರ ಶೋಣಿತ ಶುದ್ಧಿ ಶಾರೀರಂ ಎಂಬ 2ನೇ ಅಧ್ಯಾಯದಲ್ಲಿ 32ನೇ ಶ್ಲೋಕವು ಗಂಡು ಮಗುವನ್ನು ಪಡೆಯುವ ವಿಧಾನವನ್ನು ತಿಳಿಸುತ್ತದೆಯಂತೆ. 

ಲಕ್ಷ್ಮಣ ವಾತಶೃಂಗ, ಸಹದೇವ ಮತ್ತು ವಿಶ್ವದೇವ ಎಂಬ ನಾಲ್ಕು ವಿಧದ ಮೂಲಿಕೆಗಳಲ್ಲಿ ಯಾವದಾದರೂ ಒಂದನ್ನು ಹಾಲಿನೊಡನೆ ಬೆರೆಸಿ ಮಹಿಳೆಯ ಮೂಗಿನ ಬಲ ಭಾಗದ ಹೊರಳಿನಲ್ಲಿ ಹಾಕಬೇಕಂತೆ.
 
ಹೀಗೆ ಹಾಕಿದ ರಸವು ಬಾಯಿ ಹಾಗೂ ಮೂಗಿನ ಮೂಲಕ ಹೊರ ಚೆಲ್ಲದೆ ನೇರವಾಗಿ ಹೊಟ್ಟೆಯನ್ನು ಸೇರಬೇಕು. ಹೀಗೆ ಹಾಕುತ್ತ ದಂಪತಿಗಳು ಕೂಡಿದಾಗ ಗಂಡು ಮಗುವಾಗುತ್ತದೆಯಂತೆ. ಈ ಪ್ರಯೋಗಕ್ಕೆ  ಪುಂಸವನ  ಎಂಬ ಪದ ಪ್ರಯೋಗವೂ ಬಳಕೆಯಲ್ಲಿದೆ.

ಈ ಸುಶ್ರುತ ಪ್ರಯೋಗವನ್ನು ಇಂದಿಗೂ ಮಾಡುವವರಿದ್ದಾರೆ. ಕೆಲವು ಆರ್ಯುವೇದ ವೈದ್ಯರು ಈ ಮೂಲಿಕೆಗಳನ್ನು ಬೆಳೆಯುತ್ತಾರೆ. ಅಲ್ಲದೇ ಗಂಡು ಮಗುವನ್ನು ಬಯಸುವ ಮಹಿಳೆಯರ ಮೂಗಿನಲ್ಲಿಯೂ ಹಾಕುತ್ತಾರೆ.
 
ಸಾವಿರಾರು ಮಹಿಳೆಯರು ಈ ಪ್ರಯೋಗಕ್ಕೆ ಒಳಗಾಗುತ್ತಲೇ ಇದ್ದಾರೆ. ವೈದ್ಯರಿಗೂ ಇದರಿಂದ ದೊಡ್ಡ ಆದಾಯ ಬರುತ್ತದೆ. ಹೀಗಾಗಿ ಆಸ್ಪತ್ರೆಯಲ್ಲಿ ಹಾಕದೇ ಮನೆಯಲ್ಲಿ ಗುಟ್ಟಾಗಿ ಹಾಕುವ ಕಾರ್ಯ ನಡೆಯುತ್ತಿದೆ. 

ಒಂದೆಡೆ ಲಿಂಗಾನುಪಾತವನ್ನು ಸರಿದೂಗಿಸಲು ಹೆಣ್ಣು ಭ್ರೂಣಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಗಂಡು ಅಥವಾ ಹೆಣ್ಣು ಎಂಬ ಭ್ರೂಣವನ್ನು ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಉಗ್ರಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಗಂಡು ಮಗುವನ್ನೇ ಪಡೆಯಲು ಅನುವಾಗುವಂತೆ ಚಿಕಿತ್ಸೆ ಕೊಡುವ ಹಲವು ಆರ್ಯುವೇದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಯಾವ ಕಾನೂನು ಇಲ್ಲದಿರುವುದು ಆಶ್ಚರ್ಯ.

ಹೆಣ್ಣು ಮಗುವನ್ನು ತಿರಸ್ಕರಿಸುವ ಮತ್ತು ಗಂಡು ಮಗುವನ್ನು ಬಯಸುವ ಅನಿಷ್ಟ ಪದ್ಧತಿ ತಪ್ಪಿಸಬೇಕು. ಸುಶ್ರುತ ಪ್ರಯೋಗವನ್ನು ಕೈಬಿಡುವುದು ಒಳಿತು. ಮಹಿಳಾ ಅನುಪಾತವನ್ನು ತುಂಬಲು ಆರ್ಯುವೇದ ವೈದ್ಯರೂ ಸಹಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT